Naxal Encounter - ಛತ್ತೀಸ್​​ಗಡ ನಕ್ಸಲ್ ದಾಳಿ: ಭದ್ರತಾ ಪಡೆಯ 22 ಮಂದಿ ಬಲಿ – ಒಬ್ಬ ಯೋಧ ಇನ್ನೂ ನಾಪತ್ತೆ

ಛತ್ತೀಸ್ಗಡದ ಬಿಜಾಪುರ ಅರಣ್ಯ ಪ್ರದೇಶದಲ್ಲಿ ನಿನ್ನೆ ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ಭದ್ರತಾ ಪಡೆಯ ಐವರು ಯೋಧರು ಮೃತಪಟ್ಟಿದ್ದು ವರದಿಯಾಗಿತ್ತು. ಈಗ ಸಾವಿನ ಸಂಖ್ಯೆ 22 ಕ್ಕೆ ಏರಿದೆ. ನಕ್ಸಲರನ್ನು ಹಿಡಿಯಲು ಭದ್ರತಾ ಸಿಬ್ಬಂದಿ ಬಲೆಬೀಸಿದ್ದಾರೆ.

ಭದ್ರತಾ ಪಡೆ ಸೈನಿಕರು

ಭದ್ರತಾ ಪಡೆ ಸೈನಿಕರು

 • Share this:
  ರಾಯಪುರ್, ಛತ್ತೀಸಗಡ: ಮಾವೋಪೀಡಿತ ಬಸ್ತಾರ್ ಪ್ರದೇಶದ ಬಿಜಾಪುರ್ ಅರಣ್ಯ ಪ್ರದೇಶದಲ್ಲಿ ನಿನ್ನೆ ಭದ್ರತಾ ಪಡೆ ಮತ್ತು ನಕ್ಸಲರ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿದೆ. ಭದ್ರತಾ ಪಡೆಗಳಿಗೆ ಸೇರಿದ 22 ಮಂದಿ ಬಲಿಯಾದರೆ 12 ಮಂದಿ ಗಾಯಗೊಂಡಿದ್ಧಾರೆ. ಹಲವು ನಕ್ಸಲ್ ಹೋರಾಟಗಾರರೂ ಈ ಎನ್​ಕೌಂಟರ್​ನಲ್ಲಿ ಮೃತಪಟ್ಟಿರುವುದು ತಿಳಿದುಬಂದಿದೆ. ಆದರೆ, ಇನ್ನೂ ಕೆಲ ಯೋಧರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ 26ಕ್ಕೆ ಏರುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.

  ನಿನ್ನೆ ನಡೆದ ಎನ್​ಕೌಂಟರ್ ಘಟನೆಯಲ್ಲಿ ಐವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. ಅದಾದ ಬಳಿಕ ಸಿಆರ್​ಪಿಎಫ್​ನ 7 ಮಂದಿ ಯೋಧರು ಸೇರಿ 21 ಮಂದಿ ಕಾಣೆಯಾಗಿದ್ದರೆನ್ನಲಾಗಿದೆ. “ಇವರನ್ನು ಹುಡುಕಲು ವಿವಿಧ ತಂಡಗಳನ್ನ ಕಳುಹಿಸಲಾಗಿದೆ” ಎಂದು ಛತ್ತೀಸ್​ಗಡದ ಪೊಲೀಸ್ ಮಹಾನಿರ್ದೇಶಕ ಡಿಎಂ ಅವಾಸ್ತಿ ತಿಳಿಸಿದ್ದರು. ಸಿಎಆರ್​ಪಿಎಫ್​ನ ಮಹಾನಿರ್ದೇಶಕ ಕುಲದೀಪ್ ಸಿಂಗ್ ಕೂಡ ತಮ್ಮ ಪಡೆಯ ಏಳು ಮಂದಿ ಸೈನಿಕರು ನಾಪತ್ತೆಯಾಗಿರುವ ಸಂಗತಿಯನ್ನು ಖಚಿತಪಡಿಸಿದ್ದರು. ಏಳು ಸಿಆರ್​ಪಿಎಫ್ ಯೋಧರು ಬಿಟ್ಟರೆ ನಾಪತ್ತೆಯಾಗಿದ್ದ ಉಳಿದ 14 ಮಂದಿ ಸಿಬ್ಬಂದಿ ಛತ್ತೀಸಗಡ ರಾಜ್ಯದ ಮೀಸಲು ಪಡೆ ಮತ್ತು ವಿಶೇಷ ಕಾರ್ಯಪಡೆಗೆ ಸೇರಿದವರಾಗಿದ್ದಾರೆ. ಈಗ ಇವರಲ್ಲಿ ಬಹುತೇಕರು ಸಾವನ್ನಪ್ಪಿದ್ದಾರೆ.

  ಪೀಪಲ್ಸ್ ಲಿಬರೇಷನ್ ಗೆರಿಲಾ ಆರ್ಮಿ (PLGA) ಎಂಬ ಸಶಸ್ತ್ರ ಮಾವೋವಾದಿ ಗುಂಪಿನ ಕಮಾಂಡರ್ ಹಿದ್ಮಾ ಅವರ ನೇತೃತ್ವದಲ್ಲಿ ನಿನ್ನೆ ನಕ್ಸಲ್ ದಾಳಿ ನಡೆಸಲಾಗಿದೆ ಎಂಬ ಸಂಶಯ ಇದೆ. ಈ ಮಾವೋವಾದಿ ಉಗ್ರ ಸಂಘಟನೆಯ ಕಮಾಂಡರ್ ಆಗಿರುವ ಹಿದ್ಮಾ ಈ ಹಿಂದೆಯೂ ಹಲವು ಪ್ರಮುಖ ದಾಳಿಗಳಲ್ಲಿ ಕೈವಾಡ ಹೊಂದಿದ್ದಾರೆ. 2013ರಲ್ಲಿ ಈತನ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ 27 ಮಂದಿ ಬಲಿಯಾಗಿದ್ದರು.

  ಇದನ್ನೂ ಓದಿ: ಒಂದು ರೂಪಾಯಿಗೆ ಒಂದು ಇಡ್ಲಿ ಮಾರುತ್ತಿದ್ದ ಮಹಿಳೆಗೆ ಮನೆ ನಿರ್ಮಿಸಿಕೊಡುತ್ತಿರುವ ಆನಂದ್ ಮಹಿಂದ್ರಾ

  ಇನ್ನು, ಬಿಜಾಪುರದ ತಾರೆಮ್ ಅರಣ್ ಪ್ರದೇಶದ ಒಂದು ಹಳ್ಳಿಯಲ್ಲಿ ಮಾವೋವಾದಿಗಳು ಅಡಗಿಕೊಂಡಿದ್ದಾರೆ ಎಂಬ ಗುಪ್ತಚರ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಿಜಾಪುರ್-ಸುಕ್ಮಾ ಗಡಿಭಾಗದ ಅರಣ್ಯ ಪ್ರದೇಶದಲ್ಲಿ ಸುಮಾರು 400 ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ತಾರೆಮ್ ಪ್ರದೇಶವನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಾಗ ನಕ್ಸಲರು ದಾಳಿ ನಡೆಸಿದ್ದಾರೆ. ಆಗ ಎರಡೂ ಕಡೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಮೂರು ಗಂಟೆ ಕಾಲ ನಡೆದ ಗುಂಡಿನ ಕಾಳಗದಲ್ಲಿ ಭದ್ರತಾ ಪಡೆಯ ಐದು ಮಂದಿ ಸಾವನ್ನಪ್ಪಿದ್ದರು. ಅದಾದ ಬಳಿಕ 22 ಮಂದಿ ನಾಪತ್ತೆಯಾಗಿದ್ದರು. ನಕ್ಸಲರ ಕಡೆಯಲ್ಲೂ ಸಾಕಷ್ಟು ಸಾವು ನೋವು ಸಂಭವಿಸಿರುವ ಶಂಕೆ ಇದೆ. ನಿನ್ನೆ ನಾಪತ್ತೆಯಾಗಿದ್ದ ಭದ್ರತಾ ಸಿಬ್ಬಂದಿಯನ್ನ ನಕ್ಸಲರು ಕೊಂದು ಅವರ ಆಯುಧ, ಸಮವಸ್ತ್ರ ಮತ್ತಿತರ ವಸ್ತುಗಳನ್ನ ಕದ್ದೊಯ್ದಿರುವ ಸಾಧ್ಯತೆ ಇದೆ.

  ಮಾವೋವಾದಿ ಉಗ್ರರು ಸ್ಥಳದಿಂದ ತಪ್ಪಿಸಿಕೊಂಡು ಹೋಗುವ ಸಾಧ್ಯತೆ ಇರುವುದರಿಂದ ಅವರನ್ನ ಟ್ರ್ಯಾಕ್ ಮಾಡಲು ಸುತ್ತಮುತ್ತಲ ಪ್ರದೇಶದಲ್ಲಿ ಡ್ರೋನ್​ಗಳನ್ನ ಕಳುಹಿಸಲಾಗಿದೆ.

  ಇದೇ ವೇಳೆ, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಛತ್ತೀಸ್​ಗಡ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ಅವರು ಇಂದು ವಾಪಸ್ ಬರುವ ನಿರೀಕ್ಷೆ ಇದೆ. ಸದ್ಯದ ಪರಿಸ್ಥಿತಿಯನ್ನು ದೂರವಾಣಿ ಮೂಲಕವೇ ವಿಚಾರಿಸುತ್ತಿರುವ ಮುಖ್ಯಮಂತ್ರಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೂ ಸಂಪರ್ಕದಲ್ಲಿದ್ದಾರೆ.
  Published by:Vijayasarthy SN
  First published: