ಚೊಚ್ಚಲ ರಾಜಕೀಯ ಭಾಷಣದಲ್ಲಿ ಮೆಚ್ಚುಗೆ ಪಡೆದ ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಮಾಡಲಿದ್ದಾರಾ ಕಮಾಲ್​?

ರಾಹುಲ್​ಗಿಂತ ಪ್ರಿಯಾಂಕಾ ಅವರಿಗೆ ಜನರನ್ನು ಹೆಚ್ಚು ಸೆಳೆಯುವ ಶಕ್ತಿ ಇದೆ. ಆಕರ್ಷಣೆ, ಸುಂದರ ರೂಪ, ಮಾತುಗಾರಿಕೆಯಲ್ಲಿ ಅಜ್ಜಿ ಇಂದಿರಾ ಅವರನ್ನು ಹೋಲುತ್ತಾರೆ. ನಲವತ್ತರ ಆಸುಪಾಸಲ್ಲಿ ಇಂದಿರಾರನ್ನು ನೋಡಿದ ಜನರು ಪ್ರಿಯಾಂಕಾ ಅವರಲ್ಲಿ ಇಂದಿರಾ ಗಾಂಧಿಯನ್ನು ಕಾಣುತ್ತಿದ್ದಾರೆ. ಅಜ್ಜಿ ಮತ್ತು ಮೊಮ್ಮಗಳ ನಡುವೆ ಸಾಕಷ್ಟು ಹೋಲಿಕೆ, ಸಾಮ್ಯತೆ ಇದೆ ಎಂದು ಕಾಂಗ್ರೆಸ್​ನ ಹಿರಿಯರು ಬಣ್ಣಿಸುತ್ತಾರೆ.

HR Ramesh | news18
Updated:March 13, 2019, 2:26 PM IST
ಚೊಚ್ಚಲ ರಾಜಕೀಯ ಭಾಷಣದಲ್ಲಿ ಮೆಚ್ಚುಗೆ ಪಡೆದ ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಮಾಡಲಿದ್ದಾರಾ ಕಮಾಲ್​?
ಪ್ರಿಯಾಂಕಾ ಗಾಂಧಿ
  • News18
  • Last Updated: March 13, 2019, 2:26 PM IST
  • Share this:
ಎಐಸಿಸಿ ಪ್ರಧಾನಿ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶ ಪೂರ್ವದ 41 ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಹೊಣೆ ಹೊತ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಅಧಿಕೃತವಾಗಿ ರಾಜಕೀಯ ಪ್ರವೇಶ ಪಡೆಯುತ್ತಿದ್ದಂತೆ ಉತ್ತರಪ್ರದೇಶದ ರಾಜಕೀಯ ಚಿತ್ರಣ ಬದಲಾಗಿದೆ. ಇದೀಗ ನೆನ್ನೆ ಗುಜರಾಜ್​ನಲ್ಲಿ ನಡೆದ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸುವ ಮೂಲಕ ರಾಜಕೀಯವಾಗಿ ತಾವೆಷ್ಟು ಪ್ರಬುದ್ಧರು ಎಂಬುದರನ್ನು ಸಾಬೀತು ಮಾಡಿದ್ದಾರೆ.

ಹಾಗೆ ನೋಡಿದರೆ, ಈ ಹಿಂದೆ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್​ನಲ್ಲಿ ಅಧಿಕೃತವಾಗಿ ಯಾವುದೇ ಅಧಿಕಾರ ಹೊಂದಿಲ್ಲದಿದ್ದರೂ ತೆರೆಮರೆಯಲ್ಲಿ ರಾಜಕೀಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಉತ್ತರಪ್ರದೇಶದ ರಾಯ್​ಬರೇಲಿ ಮತ್ತು ಆಮೇಥಿಯ ಕ್ಷೇತ್ರದ ಜನರಿಗೆ ಆತ್ಮೀಯರಾಗಿರುವ ಪ್ರಿಯಾಂಕಾ, ಅಣ್ಣ ಮತ್ತು ಅಮ್ಮನ ಪರವಾಗಿ ಚುನಾವಣಾ ಪ್ರಚಾರ ಮಾಡಿ, ಅವರ ಗೆಲುವಿಗೆ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ರೂಪದಲ್ಲಿ ತಮ್ಮ ಅಜ್ಜಿ ಇಂದಿರಾ ಗಾಂಧಿ ಅವರನ್ನೇ ಹೋಲುವ ಪ್ರಿಯಾಂಕಾ ಇಂದಿನ ಕಾಂಗ್ರೆಸ್​ನ ಸ್ಟಾರ್​ ಪ್ರಚಾರಕಿಯಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಆರಂಭಿಸಿದ್ದಾರೆ.

80 ಲೋಕಸಭಾ ಸದಸ್ಯರನ್ನು ಸಂಸತ್ತಿಗೆ ಕಳುಹಿಸುವ ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ವಹಿಸಿಕೊಂಡಿರುವ ಭಾಗದ ಜವಾಬ್ದಾರಿ ಸುಲಭದ ಹಾದಿಯೇನಲ್ಲ. ಏಕೆಂದರೆ ಅವರು ಹೊಣೆಗಾರಿಕೆ ವಹಿಸಿಕೊಂಡಿರುವ ಭಾಗದಲ್ಲಿ ಬರುವ 30 ಲೋಕಸಭಾ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ ಸಾಧನೆ ಶೂನ್ಯ. ಈಗ ಪ್ರಿಯಾಂಕಾ ಅವರು ಇಲ್ಲಿ ಏನಾದರೂ ಕಮಾಲ್​ ಮಾಡಲಿದ್ದಾರಾ ಎಂಬುದು ಎಲ್ಲರ ಕುತೂಹಲದ ಪ್ರಶ್ನೆಯಾಗಿದೆ.

ಪ್ರಿಯಾಂಕಾ ಗಾಂಧಿ ಈ ಹಿಂದೆ ಅಧಿಕೃತವಾಗಿ ರಾಜಕೀಯ ರಂಗಕ್ಕೆ ಪ್ರವೇಶ ಪಡೆಯದಿದ್ದರೂ ಚುನಾವಣೆಯ ಪ್ರಮುಖ ಪ್ರಚಾರ ರ್ಯಾಲಿಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕಾಂಗ್ರೆಸ್​ನ ಸ್ಟಾರ್​ ಪ್ರಚಾರಕರಾಗಿದ್ದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್​ ಹೀನಾಯ ಸೋಲಿನ ಸುಳಿಗೆ ಸಿಲುಕಿತ್ತು. ಈ ವೇಳೆ ಕಾಂಗ್ರೆಸ್​ ಅಧ್ಯಕ್ಷ ಪಟ್ಟವನ್ನು ಯಾರಿಗೆ ನೀಡಬೇಕು ಎಂಬ ಜಿಜ್ಞಾಸೆ ಮೂಡಿತು. ರಾಹುಲ್ ಗಾಂಧಿ ಬದಲಾಗಿ ಪ್ರಿಯಾಂಕಾ ಗಾಂಧಿ ಅವರಿಗೆ ಕಾಂಗ್ರೆಸ್​ ಅಧ್ಯಕ್ಷ ಪಟ್ಟ ನೀಡಿ ಎಂಬ ಹಕ್ಕೊತ್ತಾಯ ಪಕ್ಷದ ಕಾರ್ಯಕರ್ತರು ಮತ್ತು ಹಿರಿಯ ನಾಯಕರಿಂದಲೂ ಕೇಳಿಬಂದಿತ್ತು. 'ಪ್ರಿಯಾಂಕಾ ಲಾವೋ ಕಾಂಗ್ರೆಸ್​ ಬಚಾವೋ' ಎಂಬ ಘೋಷಣೆ ಕೂಗಿ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಉಂಟು. ಆದರೆ, ಪ್ರಿಯಾಂಕಾ ಅವರಿಗೆ ರಾಜಕೀಯ ಸ್ಥಾನಮಾನ ನೀಡಿದರೆ, ರಾಹುಲ್ ಗಾಂಧಿ ರಾಜಕೀಯ ಭವಿಷ್ಯ ಹಾಳಾಗಲಿದೆ ಎಂಬುದನ್ನು ಅರಿತಿದ್ದ ಸೋನಿಯಾ ಗಾಂಧಿ ಅದಕ್ಕೆ ಅವಕಾಶ ನೀಡಲಿಲ್ಲ.

ಪಕ್ಷದ ಹಿರಿಯ ನಾಯಕರು ರಾಹುಲ್​ ಗಾಂಧಿ ಅವರಿಗಿಂತ ಪ್ರಿಯಾಂಕಾ ಮೇಲೆಯೇ ಹೆಚ್ಚಿನ ವಿಶ್ವಾಸ ಹೊಂದಿದ್ದರು. ಏಕೆಂದರೆ, 2004ರಿಂದ 2016ರವರೆಗೂ ರಾಹುಲ್​ ಗಾಂಧಿ ಪ್ರಬುದ್ಧ ರಾಜಕಾರಣಿ ಎಂದು ಅನಿಸಿಕೊಳ್ಳಲೇ ಇಲ್ಲ. 2004ರಲ್ಲಿ ಅಮೇಥಿಯಿಂದ ರಾಹುಲ್​ ಗೆದ್ದಾಗ ಮನಮೋಹನ್​ ಸಿಂಗ್​ ಸರ್ಕಾರದಲ್ಲಿ ಮಂತ್ರಿಯಾಗುವ ಅವಕಾಶ ಬಂದಾಗ ರಾಹುಲ್​ ಅದನ್ನು ತಿರಸ್ಕರಿಸುವ ಮೂಲಕ ತಮ್ಮ ಅಪ್ರಬುದ್ಧತೆ ತೋರಿದ್ದರು. ಮುಂದಿನ ದಿನಗಳಲ್ಲೂ ಪಕ್ಷವನ್ನು ಸಮರ್ಥವಾಗಿ ಕಟ್ಟುವಲ್ಲಿ ವಿಫಲರಾದರು. ಇದರ ಪರಿಣಾಮವೇ 2014ರಲ್ಲಿ ಕಾಂಗ್ರೆಸ್​ ಹೀನಾಯವಾಗಿ ಸೋಲುವಂತಾಯಿತು. ಇದಾದ ನಂತರ ಬಿಹಾರ, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ, ಗುಜರಾತ್ ಸೇರಿ ಹಲವು ರಾಜ್ಯಗಳು ಕಾಂಗ್ರೆಸ್​ ಕೈ ತಪ್ಪಿದವು. ಕಾಂಗ್ರೆಸ್​ ಮುಳುಗುವ ಹಡಗು ಎಂಬ ಅಪಖ್ಯಾತಿ ಪಡೆಯಿತು. ರಾಹುಲ್​ ಪಕ್ಷವನ್ನು ಮುನ್ನಡೆಸಲಾರರು, ಅವರ ಬದಲಿಗೆ ಪ್ರಿಯಾಂಕಾ ಅವರಿಗೆ ಪಟ್ಟ ಕಟ್ಟಬೇಕು ಎಂಬ ಇಂಗಿತ ಪಕ್ಷದ ಎಲ್ಲ ಮುಖಂಡರಲ್ಲೂ ಇತ್ತು. ಆದರೆ, ಈ ವಿಚಾರವನ್ನು ಮಗನ ಪರವಾಗಿ ನಿಂತಿದ್ದ ಸೋನಿಯಾ ಗಾಂಧಿ ಬಳಿ ಹೇಳುವ ಧೈರ್ಯವನ್ನು ಯಾವ ಮುಖಂಡರು ತೋರಲಿಲ್ಲ. ಕೊನೆಗೂ ರಾಹುಲ್ ಅವರಿಗೆ ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ನೀಡಲಾಯಿತು.

ರಾಹುಲ್​ಗಿಂತ ಪ್ರಿಯಾಂಕಾ ಅವರಿಗೆ ಜನರನ್ನು ಹೆಚ್ಚು ಸೆಳೆಯುವ ಶಕ್ತಿ ಇದೆ. ಆಕರ್ಷಣೆ, ಸುಂದರ ರೂಪ, ಮಾತುಗಾರಿಕೆಯಲ್ಲಿ ಅಜ್ಜಿ ಇಂದಿರಾ ಅವರನ್ನು ಹೋಲುತ್ತಾರೆ. ನಲವತ್ತರ ಆಸುಪಾಸಲ್ಲಿ ಇಂದಿರಾರನ್ನು ನೋಡಿದ ಜನರು ಪ್ರಿಯಾಂಕಾ ಅವರಲ್ಲಿ ಇಂದಿರಾ ಗಾಂಧಿಯನ್ನು ಕಾಣುತ್ತಿದ್ದಾರೆ. ಅಜ್ಜಿ ಮತ್ತು ಮೊಮ್ಮಗಳ ನಡುವೆ ಸಾಕಷ್ಟು ಹೋಲಿಕೆ, ಸಾಮ್ಯತೆ ಇದೆ ಎಂದು ಕಾಂಗ್ರೆಸ್​ನ ಹಿರಿಯರು ಬಣ್ಣಿಸುತ್ತಾರೆ.

ಪ್ರಿಯಾಂಕಾ ಅವರಲ್ಲಿನ ನಾಯಕತ್ವ ಗುಣವನ್ನು ಮೊದಲು ಗುರುತಿಸಿದವರು ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್​ ಯಾದವ್. 2004ರಲ್ಲಿ ಕಾಂಗ್ರೆಸ್​ ಮಿತ್ರಪಕ್ಷವಾಗಿದ್ದ ಆರ್​ಜೆಡಿಯ ಲಾಲೂ, ಪ್ರಿಯಾಂಕಾ ಅವರನ್ನು ಲಖನೌ ಕ್ಷೇತ್ರದಿಂದ ವಾಜಪೇಯಿ ವಿರುದ್ಧ ಕಣಕ್ಕಿಳಿಸುವಂತೆ ಸಲಹೆ ನೀಡಿದ್ದರು. ಆದರೆ, ಕಾಂಗ್ರೆಸ್​ ಇದನ್ನು ಪುರಸ್ಕರಿಸಲಿಲ್ಲ. ಕೊನೆಯದಾಗಿ ಪಾಟ್ನಾದಿಂದ ಪ್ರಿಯಾಂಕಾಗೆ ಟಿಕೆಟ್ ಕೊಟ್ಟರೆ, ಗೆಲ್ಲಿಸಿಕೊಂಡು ಬರುವ ಹೊಣೆ ತಮ್ಮದು ಎಂದು ಆಶ್ವಾಸನೆ ನೀಡಿದರೂ, ಸೋನಿಯಾ ಗಾಂಧಿ ಅಸ್ತು ಅನ್ನಲಿಲ್ಲ.2014ರ ನಂತರ ಪ್ರಿಯಾಂಕಾ ಅವರು ರಾಜಕೀಯ ಪ್ರವೇಶಿಸಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿಬಂದಿತು. ಆದರೆ, ಮಗಳಿಗೆ ಅಧಿಕಾರ ನೀಡಿದರೆ, ಮಗನ ರಾಜಕೀಯ ಭವಿಷ್ಯ ಹಾಳಾಗುತ್ತದೆ ಎಂಬುದನ್ನು ಅರಿತಿದ್ದ ಸೋನಿಯಾ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ಆದರೂ ತಾಯಿ ಮತ್ತು ಅಣ್ಣದ ಲೋಕಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ಪ್ರಿಯಾಂಕಾ ಅವರೇ ಇದುವರೆಗೂ ನೋಡಿಕೊಂಡಿದ್ದಾರೆ. ರಾಯ್​ಬರೇಲಿ ಮತ್ತು ಅಮೇಥಿ ಎರಡು ಕ್ಷೇತ್ರಗಳ ಜನರ ಜೊತೆ ಅವರಿಗೆ ನಿಕಟ ಸಂಪರ್ಕವಿದೆ. ಅವರು ಹೋದ ಕಡೆಗಳಲ್ಲಿ ಜನ ಮುಗಿ ಬೀಳುತ್ತಾರೆ. ಪ್ರಿಯಾಂಕಾ ವರ್ಚಸ್ಸಿಗೆ ಹೆದರಿದ್ದ ವಿರೋಧ ಪಕ್ಷಗಳು  "ಚುನಾವಣೆಯ ಕಡೆ ಗಳಿಕೆಯಲ್ಲಿ ಪ್ರಿಯಾಂಕಾ ಗಾಂಧಿ ಬಂದು ಇಲ್ಲಿನ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಎಮೋಷನಲ್​ ಬ್ಲಾಕ್​ ಮೇಲರ್,"​ ಎಂಬ ಪೋಸ್ಟರ್ ಗೋಡೆ ಮೇಲೆ ಅಂಟಿಸಿದ್ದವು.

ಇದನ್ನು ಓದಿ: 2 ಕೋಟಿ ಉದ್ಯೋಗ ಎಲ್ಲಿ? 15 ಲಕ್ಷ ರೂ ಎಲ್ಲಿ? ಚೊಚ್ಚಲ ರಾಜಕೀಯ ಭಾಷಣದಲ್ಲಿ ಪ್ರಿಯಾಂಕಾ ಗಾಂಧಿ ಆರ್ಭಟ

ಹಿಂದೊಮ್ಮೆ ಪ್ರಿಯಾಂಕಾ ಬಿಬಿಸಿಗೆ ಕೊಟ್ಟ ಸಂದರ್ಶನದಲ್ಲಿ ರಾಜಕೀಯಕ್ಕೆ ಬರುವ ಆಸಕ್ತಿ ಇಲ್ಲ. ಅಧಿಕಾರ ಇಲ್ಲದೇ ಜನ ಸೇವೆ ಮಾಡಬಹುದು ಎಂದು ಹೇಳಿದ್ದರು. ಪ್ರಿಯಾಂಕಾ ರಾಜಕೀಯ ಪ್ರವೇಶಕ್ಕೆ ಈವರೆಗೂ ಇಬ್ಬರು ಅಡ್ಡಿಯಾಗಿದ್ದರು. ಮೊದಲನೆಯವರು ರಾಹುಲ್​ ಎರಡನೆಯವರು ರಾಬರ್ಟ್​ ವಾದ್ರಾ. ಪ್ರಿಯಾಂಕಾ ರಾಜಕೀಯ ಪ್ರವೇಶಕ್ಕೆ ಕಾಂಗ್ರೆಸ್​ ಹಸಿರು ನಿಶಾನೆ ತೋರಿದ ತಕ್ಷಣದಲ್ಲೇ ವಾದ್ರಾ ಹಗರಣಗಳಿಗೆ ಮತ್ತೆ ಜೀವ ಬರುತ್ತಿತ್ತು. ಹೀಗಾಗಿ ಅವರ ರಾಜಕೀಯ ಪ್ರವೇಶ ಅಷ್ಟು ಸುಲಭವಾಗಿರಲಿಲ್ಲ. ಆದರೆ, ಈಗ ರಾಜಕೀಯ ಪರಿಸ್ಥಿತಿ ಬದಲಾಗಿದೆ. ರಾಹುಲ್​ ಗಾಂಧಿ ರಾಜಕೀಯ ಪ್ರಬುದ್ಧತೆ ಬದಲಾಗಿದೆ. ಕಾಂಗ್ರೆಸ್ ನಿಧಾನವಾಗಿ ತನ್ನ ಹಿಂದಿನ ಲಯ ಕಂಡುಕೊಳ್ಳುತ್ತಿದೆ. ಬಿಜೆಪಿ, ಮೋದಿ ಮೇಲೆ ಜನರಿಗೆ ಈ ಹಿಂದೆ ಇದ್ದಷ್ಟು ವಿಶ್ವಾಸ, ನಂಬಿಕೆ ಈಗ ಉಳಿದಿಲ್ಲ ಎಂಬುದಕ್ಕೆ ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಸಾಕ್ಷಿಯಾಗಿದೆ. ಅಲ್ಲದೇ, ಕಾಂಗ್ರೆಸ್​ ಒಳಗೊಂಡಂತೆ ಎಲ್ಲ ಪ್ರಾದೇಶಿಕ ಪಕ್ಷಗಳು ಬಿಜೆಪಿ ವಿರುದ್ಧವಾಗಿ ಮಹಾಘಟ್​ಬಂಧನ್​ ಮಾಡಿಕೊಳ್ಳುವ ಮೂಲಕ ಮುಂದಿನ ಲೋಕಸಭೆ ಚುನಾವಣೆಗೆ ಭಾರೀ ತಯಾರಿ ನಡೆಸಿವೆ.

ಈ ವೇಳೆಯಲ್ಲಿ ಪ್ರಿಯಾಂಕಾ ಅವರೂ ರಾಜಕೀಯ ಪ್ರವೇಶಿಸಿ, ಅಣ್ಣನಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಪ್ರಿಯಾಂಕಾ ಮಾಡಿರುವ ಮೋಡಿಯನ್ನು ಮುಂದಿನ ದಿನಗಳಲ್ಲಿ ಇಡೀ ಉತ್ತರಪ್ರದೇಶದಲ್ಲಿ ಮಾಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

First published:March 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ