ಆಂಧ್ರಪ್ರದೇಶ: ಮಕ್ಕಳು (Children) ಮನೆಯಲ್ಲಿದ್ದಾರೆ ಅಂದ್ರೆ ಅವರ ಮೇಲೆ ಎರಡೂ ಕಣ್ಣೂ ಇಟ್ಟಿರಬೇಕು. ಧಾರಾವಾಹಿ (Serial) ಬರ್ತಿದೆ, ಆನ್ಲೈನ್ನಲ್ಲಿ (Online) ಆಫೀಸ್ ಮೀಟಿಂಗ್ (Office Meeting) ಇದೆ ಅಂತ ನೀವು ಸ್ವಲ್ಪ ನಿರ್ಲಕ್ಷ್ಯ ತೋರಿದ್ರೋ ನಿಮ್ಮ ಮಕ್ಕಳು ನಿಮ್ಮ ಕಣ್ತಪ್ಪಿಸಿ, ಅಪಾಯ ಮೈಮೇಲೆ ಎಳೆದುಕೊಳ್ಳಬಹುದು. ಅದ್ಯಾಕೆ ಈ ರೀತಿ ಹೇಳ್ತೀವಿ ಅಂದ್ರೆ ಆಂಧ್ರ ಪ್ರದೇಶದಲ್ಲೂ (Andhra Pradesh) ಇಂಥದ್ದೇ ಒಂದು ಘಟನೆ ನಡೆದಿದೆ. ಹುಟ್ಟುಹಬ್ಬದ (Birthday) ಸಂಭ್ರಮದಲ್ಲಿದ್ದ ಮನೆಯಲ್ಲಿ ಸಾವಿನ ಸೂತಕ ಆವರಿಸಿದೆ. ಮನೆ ತುಂಬಾ ಜನ ಇದ್ದರೂ ಆ ಕಂದಮ್ಮನನ್ನು ಜವರಾಯ ಹೊತ್ತೊಯ್ದಿದ್ದಾನೆ. ಅಷ್ಟಕ್ಕೂ ಆ ಮನೆಯಲ್ಲಿ ನಡೆದಿದ್ದಾದರೂ ಏನು? ಇದು ಎಲ್ಲಾ ಪೋಷಕರೂ ಓದಿ, ಎಚ್ಚೆತ್ತುಕೊಳ್ಳಬೇಕಾದ ಸ್ಟೋರಿ....
ಈ ದುರ್ಘಟನೆ ನಡೆದಿದ್ದು ಎಲ್ಲಿ?
ಆಂಧ್ರಪ್ರದೇಶ ರಾಜ್ಯದ ಕೃಷ್ಣಾ ಜಿಲ್ಲೆಯ ಕಲಗಾರ ಎಂಬ ಊರಿನಲ್ಲಿ ಇಂಥದ್ದೊಂದು ದುರ್ಘಟನೆ ನಡೆದಿದೆ. ಶಿವ ಮತ್ತು ಭಾನುಮತಿ ಎಂಬ ದಂಪತಿಯ 2 ವರ್ಷದ ಮಗಳು ತೇಜಸ್ವಿ ಸಾವನ್ನಪ್ಪಿದ್ದಾಳೆ. ಆಘಾತಕಾರಿ ವಿಚಾರ ಅಂದ್ರೆ ಅಂದು ಪುಟ್ಟ ಕಂದಮ್ಮ ತೇಜಸ್ವಿಯ 2ನೇ ವರ್ಷದ ಹುಟ್ಟುಹಬ್ಬವಿತ್ತು. ಅದೇ ದಿನವೇ ಆ ಪುಟ್ಟ ಮಗು ಕಣ್ಮುಚ್ಚಿದೆ.
ಹುಟ್ಟು ಹಬ್ಬದಂದೇ ಕಣ್ಮುಚ್ಚಿದ ಕಂದಮ್ಮ
ಅಂದು ಶಿವ ಹಾಗೂ ಭಾನುಮತಿ ದಂಪತಿ ತಮ್ಮ ಮಗಳ 2ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು. ಬರ್ತ್ ಡೇ ಪ್ರಯುಕ್ತ ಮನೆಗೆ ಕುಟುಂಬಸ್ಥರು, ಸ್ನೇಹಿತರು, ಆಪ್ತರು, ಸಂಬಂಧಿಕರು, ಊರಿನವರೆಲ್ಲ ಬಂದಿದ್ದರು. ಬಾಲಕಿ ತೇಜಸ್ವಿಯ ಬರ್ತ್ ಡೇ ಆಚರಿಸಿ, ಕೇಕ್ ಕಟ್ ಮಾಡಿ ಎಲ್ಲಾ ಸಂಭ್ರಮಿಸಿದ್ರು. ಆದ್ರೆ ಹುಟ್ಟುಹಬ್ಬದ ದಿನವೇ ಇಂಥದ್ದೊಂದು ದುರಂತ ನಡೆಯುತ್ತೆ ಅಂತ ಯಾರೂ ಕನಸು ಮನಸಿನಲ್ಲಿಯೂ ಅಂದು ಕೊಂಡಿರಲಿಲ್ಲ.
ಇದನ್ನೂ ಓದಿ: Anjanadri Hill: ಮತ್ತೆ ಭುಗಿಲೆದ್ದ ಹನುಮ ಜನ್ಮಭೂಮಿ ವಿವಾದ: ಟಿಟಿಡಿ ಟ್ರಸ್ಟ್ನಿಂದ ಮುಂದುವರಿದ ಕ್ಯಾತೆ
ಅಡುಗೆ ಮನೆಯಲ್ಲೇ ಕುಳಿತಿದ್ದನಾ ಜವರಾಯ?
ಹೌದು, ಹುಟ್ಟುಹಬ್ಬದ ದಿನವೇ ಆ ಮನೆಯಲ್ಲಿ ದುರಂತವೊಂದು ನಡೆದು ಹೋಗಿದೆ. ಅದೂ ಅಡುಗೆ ಕೋಣೆಯಲ್ಲಿ! ಬಾಲಕಿ ತೇಜಸ್ವಿಯ ತಂದೆ ಹಾಗೂ ತಾಯಿ ಅತಿಥಿ ಸತ್ಕಾರದಲ್ಲಿ ತೊಡಗಿದ್ದಾರೆ. ಬಂದ ಜನರೆಲ್ಲ ಊಟ ಮಾಡುತ್ತಾ ಇದ್ದಾರೆ. ಆಗ ಪುಟ್ಟ ಬಾಲಕಿ ತೇಜಸ್ವಿ ಅಡುಗೆ ಕೋಣೆಗೆ ಹೋಗಿದ್ದಾಳೆ. ಅಲ್ಲಿ ಏನು ಕಾಣಿಸಿತೋ ಏನೋ, ಕೆಳಗೆ ಇಟ್ಟಿದ್ದ ಬಿಸಿ ಸಾಂಬಾರು ಪಾತ್ರೆಗೆ ಬಗ್ಗಿದ್ದಾಳೆ. ಅಷ್ಟೇ ನೋಡಿ, ಪುಟ್ಟ ಕಂದ ದೊಡ್ಡ ಸಾಂಬಾರು ಪಾತ್ರೆಯಲ್ಲಿ ಕಾಲು ಜಾರಿ ಬಿದ್ದಿದೆ.
ಆಸ್ಪತ್ರೆಗೆ ಕರೆದೊಯ್ದರೂ ಉಳಿಯಲಿಲ್ಲ ಪ್ರಾಣ
ಮಗು ಕಿರುಚಿಕೊಂಡಿದ್ದು ಕೇಳಿ ಎಲ್ಲರೂ ಓಡಿ ಬಂದಿದ್ದಾರೆ. ಅಷ್ಟರಲ್ಲಿ ಪುಟ್ಟ ಬಾಲಕಿ ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು ಒದ್ದಾಡುತ್ತಿದ್ದಳು. ಕೂಡಲೇ ಅವಳನ್ನು ರಕ್ಷಿಸಿದ ಜನ್ರು, ತಿರುವೂರು ಎಂಬಲ್ಲಿನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು, ವೈದ್ಯರ ಸಲಹೆಯಂತೆ ವಿಜಯವಾಡದ ಆಸ್ಪತ್ರೆಗೆ ದಾಖಲಿಸಿದ್ದಾರೆ.
2 ದಿನ ಚಿಕಿತ್ಸೆ ನೀಡಿದರೂ ಬದುಕಲಿಲ್ಲ ಕಂದಮ್ಮ
ಅಲ್ಲಿ ಬಾಲಕಿ ತೇಜಸ್ವಿಗೆ 2 ದಿನಗಳ ಕಾಲ ಚಿಕಿತ್ಸೆ ನೀಡಲಾಗಿದೆ. ವೈದ್ಯರು ಕಂದಮ್ಮನನ್ನು ಉಳಿಸಲು ಶತ ಪ್ರಯತ್ನ ಮಾಡಿದ್ದಾರೆ. ಆದರೆ ವಿಪರೀತ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಬಾಲಕಿ, ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಪರಿಣಾಮ ಸುಟ್ಟ ಗಾಯಗಳಿಂದ ನರಳಿ ನರಳಿ 2 ದಿನಗಳ ಬಳಿಕ ಪ್ರಾಣ ಬಿಟ್ಟಿದ್ದಾಳೆ.
ಇದನ್ನೂ ಓದಿ: ಚೀನಾ ಟೆಲಿಕಾಂ ಕಂಪನಿ Huawei ಮೇಲೆ ಐಟಿ ದಾಳಿ; ಬೆಂಗಳೂರು, ದೆಹಲಿ ಕಚೇರಿಯಲ್ಲಿ ಶೋಧ
ಸಂಭ್ರಮದ ಮನೆಯಲ್ಲಿ ಸೂತಕ
ಬಾಲಕಿ ಸಾವಿನಿಂದ ಹೆತ್ತವರು ಕಂಗಾಲಾಗಿದ್ದಾರೆ. ಹುಟ್ಟುಹಬ್ಬದ ಸಂಭ್ರಮವಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಮಕ್ಕಳಿದ್ದ ಮನೆಯಲ್ಲಿ ಎಷ್ಟು ಹುಷಾರಾಗಿದ್ದರೂ ಸಾಲದು ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ