ಟರ್ಕಿ: ಟರ್ಕಿ (Turkey) ಮತ್ತು ಸಿರಿಯಾದಲ್ಲಿ (Syria) ಎರಡು ದಿನಗಳ ಹಿಂದ ಸಂಭವಿಸಿದ ಭಯಾನಕ ಭೂಕಂಪ ಸುಮಾರು 16 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿದೆ. ನೂರಾರು ಬಹುಮಹಡಿ ಕಟ್ಟಡಗಳು ಕುಸಿದು, ಸಾವಿರಾರು ಸಾರ್ವಜನಿಕರು ಅದರ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಭಾರತ (India) ಸೇರಿದಂತೆ ಹತ್ತಾರು ದೇಶಗಳ ರಕ್ಷಣಾ ತಂಡ ದಾವಿಸಿ ರಕ್ಷಣೆಯಲ್ಲಿ ತೊಡಗಿದ್ದಾರೆ. ರಕ್ಷಣಾ ಕಾರ್ಯಾಚರಣೆ (Rescue Operation) ವೇಳೆ ಕೆಲವು ಅದ್ಭುತ ಸಂಭವಿಸುತ್ತಿವೆ. ಏಕೆಂದರೆ ನಿನ್ನೆಯಷ್ಟೇ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿ ಸಾವೀಗೀಡಾಗಿದ್ದರು. ಆದರೆ ಆದರೆ ನವಜಾತ ಶಿಶು ಪವಾಡ ಸದೃಶವಾಗಿ ಬದುಕುಳಿದಿತ್ತು. ಇದೀಗ ಅದೇ ರೀತಿ 2 ತಿಂಗಳ ಮಗು ಕೂಡ 48 ಗಂಟೆಗಳ ಬಳಿಕವೂ ಜೀವಂತವಾಗಿ ಪತ್ತೆಯಾಗಿದೆ.
ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪ ಸಂಭವಿಸಿತ್ತು. ಮೂರು ದಿನಗಳಿಂದಲೂ ಶೋಧ ಹಾಗೂ ರಕ್ಷಣಾ ಕಾರ್ಯ ನಡೆಯುತ್ತಿದೆ. ಈ ವೇಳೆ ಎರಡು ತಿಂಗಳ ಮಗುವೊಂದು ಪತ್ತೆಯಾಗಿದೆ. ಕಟ್ಟಡಗಳ ಅವಶೇಷದ ಅಡಿಯಲ್ಲಿ ಈ ಎರಡು ತಿಂಗಳ ಶಿಶು ಜೀವಂತವಾಗಿ ಪತ್ತೆಯಾಗಿದೆ.
ಬೆರಳು ಚೀಪುತ್ತಲೆ ಮಲಗಿದ್ದ ಕಂದಮ್ಮ
ಎರಡೂ ತಿಂಗಳ ಹಸುಳೆ ಭೂಕಂಪ ಸಂಭವಿಸಿ 48 ಗಂಟೆ ಕಳೆದ ಮೇಲೂ ಜೀವಂತವಾಗಿ ಬದುಕಿಳಿದಿರುವುದು ಪವಾಡವೇ ಸರಿ. ಈ ಮಗುವನ್ನು ಕಂಡ ರಕ್ಷಣಾ ತಂಡದವರು ಜೋರಾಗಿ ಕಿರುಚುತ್ತಲೇ ಎತ್ತುಕೊಂಡಿ ಬೆಡ್ಶೀಟ್ ಸುತ್ತಿ ವೈದ್ಯಕೀಯ ತಂಡಕ್ಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದವರೆಲ್ಲರೂ ದೇವರನ್ನು ಸ್ಮರಿಸುತ್ತಾ ಕಣ್ಣೀರಿಡುತ್ತಿರುವುದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ.
ತಾಯಿಯ ರಕ್ಷಣೆ
ಪವಾಡವೆಂದರೆ ಮಗು ಟರ್ಕಿಯ ಭೂಕಂಪದ ಕೇಂದ್ರವಾಗಿರುವ ದಕ್ಷಿಣ ಟರ್ಕಿಯ ಕಹ್ರಮನ್ಮರಸ್ ಪ್ರಾಂತ್ಯದ ಅವಶೇಷಗಳಲ್ಲಿ ಬುಧವಾರ ಜೀವಂತವಾಗಿ ಕಂಡು ಬಂದಿದೆ. ಎಲ್ಬಿಸ್ತಾನ್ ಜಿಲ್ಲೆಯಲ್ಲಿ ಭೂಕಂಪದ ಅವಶೇಷಗಳಡಿಯಿಂದ ರಕ್ಷಿಸಲ್ಪಟ್ಟ ಮಗುವಿನ ಹೆಸರು ಮುಹಮ್ಮದ್ ಡೋಗನ್ ಬೋಸ್ತಾನ್ ಎಂದು ಆಸ್ಪತ್ರೆಯ ದಾಖಲೆಯಿಂದ ತಿಳಿಬಂದಿದೆ. ಮಗುವಿನ ತಾಯಿ ಸೆರೆನ್ ಬೋಸ್ತಾನ್ ಅವರನ್ನೂ ಕೂಡ ಈ ಮಗುವನ್ನು ರಕ್ಷಿಸುವ ಸ್ವಲ್ಪ ಸಮಯದ ಹಿಂದೆಯಷ್ಟೇ ಅವಶೇಷಗಳಿಂದ ಹೊರತೆಗೆದು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
6 ತಿಂಗಳ ಮಗು ತಾಯಿ ರಕ್ಷಣೆ
ಟರ್ಕಿಯಲ್ಲಿ ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪದ ನಂತರ ಸುಮಾರು 30 ಗಂಟೆಗಳ ಕಾಲ ಸಿಲುಕಿಕೊಂಡಿದ್ದ ಆರು ತಿಂಗಳ ಮಗು ಮತ್ತು ಆಕೆಯ ತಾಯಿಯನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ. ಮಗುವಿನ ಅಳುವಿನ ಶಬ್ದ ಕೇಳಿ ರಕ್ಷಣಾ ತಂಡ ಮಗುವನ್ನು ಜೀವಂತವಾಗಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿತ್ತು. ತಾಯಿ, ಹುಲ್ಯಾರನ್ನು ಸ್ವಲ್ಪ ಸಮಯದ ನಂತರ ರಕ್ಷಣ ಮಾಡಲಾಗಿದೆ.
1.35 ಕೋಟಿ ಜನರಿಗೆ ತೊಂದರೆ
ಟರ್ಕಿ ದೇಶದಲ್ಲಿ ಸುಮಾರು 8.5 ಕೋಟಿ ಜನಸಂಖ್ಯೆ ಇದೆ, ಆ ಪೈಕಿ 1.35 ಕೋಟಿ ಜನರು ಭೂಕಂಪದಿಂದ ಬಾಧಿತರಾಗಿದ್ದಾರೆ. ಪಶ್ಚಿಮದಲ್ಲಿ ಅದಾನದಿಂದ ಪೂರ್ವದ ದಿಯಾರ್‌ಬಕಿರ್‌ವರೆಗೆ ಸರಿಸುಮಾರು 450 ಕಿಮೀ (280 ಮೈಲುಗಳು) ವ್ಯಾಪಿಸಿರುವ ಪ್ರದೇಶದ ಜನರು ಬಾಧಿತರಾಗಿದ್ದಾರೆ ಎಂದು ಟರ್ಕಿಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಿರಿಯಾದಲ್ಲಿ, ಭೂಕಂಪದ ಕೇಂದ್ರದಿಂದ 250 ಕಿಮೀ ದೂರದಲ್ಲಿರುವ ದಕ್ಷಿಣ ಹಮಾದಲ್ಲಿನ ಜನರು ಸಾವನ್ನಪ್ಪಿದ್ದಾರೆ. ಟರ್ಕಿಯ 10 ಪ್ರಾಂತ್ಯಗಳಲ್ಲಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಸದ್ಯ 3.8 ಲಕ್ಷ ಜನರು ಮಾತ್ರ ಸರ್ಕಾರಿ ನಿರಾಶ್ರಿತ ಕೇಂದ್ರ ಅಥವಾ ಹೋಟೆಲ್ ಗಳಲ್ಲಿ ಆಶ್ರಯ ಪಡೆದಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ