Drone Blast| ಜಮ್ಮು ಸೇನಾ ನೆಲೆಯಲ್ಲಿ ಮತ್ತೆರಡು ಡ್ರೋನ್ ಪತ್ತೆ; ಹೊಡೆದುರುಳಿಸಿದ ಸೈನಿಕರು, ಗಡಿಯುದ್ದ ಕಟ್ಟೆಚ್ಚರ!

ಯಾವ ಭಾಗದಿಂದ ಡ್ರೋಣ್‌ಗಳು ಹಾರಿ ಬಂದಿದ್ದವು ಎಂದು ಸೇನಾಪಡಗಳು ತನಿಖೆ ನಡೆಸುತ್ತಿದ್ದು, ರಾಷ್ಟ್ರೀಯ ತನಿಖಾ ದಳ (NIA) ದ ಅಧಿಕಾರಿಗಳು ಮತ್ತು ಬಾಂಬ್ ನಿಷ್ಕ್ರೀಯ ದಳದ ತಜ್ಞರು ಕೂಡ ಡ್ರೋಣ್‌ಗಳ ತನಿಖೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಜಮ್ಮು (ಜೂನ್ 28); ಭಾನುವಾರ ಮುಂಜಾನೆ 1.40ಕ್ಕೆ ಜಮ್ಮು ವಾಯುನೆಲೆಯ ಮೇಲೆ ಭಯೋತ್ಪಾದಕರು ಡ್ರೋನ್​ ದಾಳಿ ನಡೆಸಿದ್ದರು. 6 ನಿಮಿಷಗಳ ಅಂತರದಲ್ಲಿ ಎರಡು ಬಾಂಬ್ ಬ್ಲಾಸ್ಟ್​ ಆಗಿದ್ದು, ಇ್ಬಬರು ಸೈನಿಕರು ಗಾಯಕ್ಕೆ ಒಳಗಾಗಿದ್ದರು. ಈ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ಸ್ಪೋಟ 2016ರ ಪಠಾಣ್ ಕೋಟ್​ ವಾಯನೆಲೆ ದಾಳಿಯ ಮುಂದು ವರಿಕೆಯಾಗಿದ್ದು, ಇದರ ಹಿಂದೆ ಜೈಶ್​-ಎ-ಮೊಹಮ್ಮದ್​ ಉಗ್ರ ಸಂಘಟನೆಯ ಕೈವಾಡ ಇರುವ ಶಂಕೆ ಇದೆ ಎಂದು ಗುಪ್ತಚರ ಇಲಾಖೆ ಉನ್ನತ ಮೂಲಗಳು ತಿಳಿಸಿದ್ದವು. ಇದರ ಬೆನ್ನಿಗೆ ಪ್ರಕರಣದ ತನಿಖೆಯನ್ನು ಎನ್ಐಎ (NIA-National Investigation Agency) ಗೆ ವಹಿಸಲಾ ಗಿತ್ತು. ಆದರೆ, ಜಮ್ಮು ವಾಯುನೆಲೆ ಯಲ್ಲಿನ ಡ್ರೋನ್ ದಾಳಿ ನಡೆದು ಕೇವಲ 24 ಗಂಟೆಯಲ್ಲಿ ಜಮ್ಮು ಸೇನಾ ನೆಲೆಯ ಬಳಿ ಮತ್ತೆ ಎರಡು ಡ್ರೋನ್​ಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಈ ಡ್ರೋನ್​ಗಳನ್ನು ಸೈನಿಕರು ಹೊಡೆದು ಉರುಳಿಸಿದ್ದು, ಇಡೀ ಗಡಿಯುದ್ಧಕ್ಕೂ ಕಟ್ಟೆಚ್ಚರ ವಹಿಸಲಾಗಿದೆ ಎನ್ನಲಾಗುತ್ತಿದೆ.

    ಭಾನುವಾರ ಬೆಳಗ್ಗೆ ಜಮ್ಮು ವಾಯುನೆಲೆ ಮೇಲಿನ ದಾಳಿಯಾಗಿ 24 ಗಂಟೆ ಕಳೆಯುವ ಮುನ್ನ ಜಮ್ಮುವಿನ ಭಾರತೀಯ ಭೂಸೇನೆಯ ನೆಲೆಯ ಸಮೀಪ ಮತ್ತೊಮ್ಮೆ ಡ್ರೋಣ್‌ಗಳನ್ನು ಹಾರಿಬಿಡಲಾಗಿದೆ. ಭಾನುವಾರದ ದಾಳಿಯ ನಂತರ ತೀವ್ರ ಕಟ್ಟೆಚ್ಚರವಹಿಸಿದ್ದ ಸೇನಾ ಪಡೆಗಳು ಸಂಭವನೀಯ ದಾಳಿಯನ್ನು ಸೋಮವಾರ ಬೆಳಗಿನ ಜಾವ ತಡೆದಿದ್ದಾರೆ. ಆದರೆ, ಇಂದು ಕಾಣಿಸಿಕೊಂಡ ಡ್ರೋಣ್‌ಗಳು ಸ್ಫೋಟಕಗಳನ್ನು ಹೊತ್ತಿದ್ದವೇ ಎಂದು ಇದುವರೆಗೆ ಸ್ಪಷ್ಟವಾಗಿಲ್ಲ.

    ಯಾವ ಭಾಗದಿಂದ ಡ್ರೋಣ್‌ಗಳು ಹಾರಿ ಬಂದಿದ್ದವು ಎಂದು ಸೇನಾಪಡಗಳು ತನಿಖೆ ನಡೆಸುತ್ತಿದ್ದು, ರಾಷ್ಟ್ರೀಯ ತನಿಖಾ ದಳ (NIA) ದ ಅಧಿಕಾರಿಗಳು ಮತ್ತು ಬಾಂಬ್ ನಿಷ್ಕ್ರೀಯ ದಳದ ತಜ್ಞರು ಕೂಡ ಡ್ರೋಣ್‌ಗಳ ತನಿಖೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಜಮ್ಮು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ದಿಲ್ಬಾಗ್ ಸಿಂಗ್, "ಮತ್ತೊಮ್ಮೆ ಡ್ರೋನ್ ದಾಳಿಗೆ ಮುಂದಾಗಿದ್ದ ಉಗ್ರರ ಸಂಚನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಈ ಬಾರಿ ಉಗ್ರರು ಸೇನಾ ಶಿಬಿರವನ್ನ ಗುರಿಯಾಗಿಸಿಕೊಂಡಿದ್ದರು. ಜಮ್ಮು ಏರ್ ಫೋರ್ಸ್ ಸ್ಟೇಶನ್ ಮೇಲಿನ ಡ್ರೋನ್ ದಾಳಿ ಬಳಿಕ ಇಂದು ಮಿಲಿಟರಿ ಸ್ಟೇಶನ್ ಗುರಿ ಮಾಡಿಕೊಂಡಿದ್ದರು. ಕಡಿಮೆ ತೂಕದ ಸ್ಪೋಟಕಗಳನ್ನು ಹೊತ್ತಿದ್ದ ಡ್ರೋಣ್‌ಗಳಿವು ಎಂದು ಶಂಕಿಸಲಾಗಿದೆ. ಭಾರಿ ಪ್ರಮಾಣದ ಭಯೋತ್ಪಾದಕ ದಾಳಿಯನ್ನು ಕೂದಲೆಳೆಯ ಅಂತರದಲ್ಲಿ ತಡೆಯಲಾಗಿದೆ" ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: Drone Attack in Jammu| ಜಮ್ಮು ವಾಯುನೆಲೆ ಡ್ರೋನ್ ದಾಳಿ ಹಿಂದಿದೆಯೇ ಜೈಶ್​-ಎ-ಮೊಹಮ್ಮದ್ ಉಗ್ರರ ಕೈವಾಡ?; ಎನ್​ಐಎ ತನಿಖೆ

    ಬೆಳಗಿನ ಜಾವ ಮೂರು ಗಂಟೆಗೆ ಕಾಲೂಚಕ್ ಮಿಲಿಟರಿ ಸ್ಟೇಶನ್ ಬಳಿ ಡ್ರೋನ್ ಕಾಣಿಸಿಕೊಳ್ಳುತ್ತಿದ್ದಂತೆ ಅಲರ್ಟ್ ಆಗಿದ್ದ ಸೇನೆ, 20 ರಿಂದ 25 ಸುತ್ತು ಗುಂಡಿನ ದಾಳಿ ನಡೆಸಿದೆ. ಗುಂಡಿನ ದಾಳಿ ಬಳಿಕ ಡ್ರೋನ್ ಮಾಯವಾಗಿದ್ದು ಸ್ಥಳೀಯ ನಿವಾಸಿಗಳು ಆತಂಕ ಪಡಬೇಕಾಗಿಲ್ಲ ಎಂದು ಸೇನಾಪಡೆಯ ಮೂಲಗಳು ತಿಳಿಸಿವೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:MAshok Kumar
    First published: