ನ್ಯೂಯಾರ್ಕ್(ಸೆ. 19): ಅಮೆರಿಕದ ನ್ಯೂಯಾರ್ಕ್ ರಾಜ್ಯದ ರೋಚೆಸ್ಟರ್ ನಗರದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಪಾರ್ಟಿಯಲ್ಲಿ ಹಿಂಸಾಚಾರಗಳಾಗಿದೆ. ಈ ದುರ್ಘಟನೆಯಲ್ಲಿ ಗುಂಡಿನ ದಾಳಿಯಾಗಿದ್ದು ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದು 14 ಮಂದಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರಲ್ಲಿ 18 ವರ್ಷದ ಯುವಕ ಹಾಗೂ 22 ವರ್ಷದ ಯುವತಿ ಸೇರಿದ್ದಾರೆ. ಗಾಯಗೊಂಡ 14 ಮಂದಿಯನ್ನು ಎರಡು ಬೇರೆ ಬೇರೆ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಗಾಯಾಳುಗಳ ಪೈಕಿ ಒಬ್ಬರಿಗೆ ಗಂಭೀರ ಗಾಯವಾಗಿದ್ದು ಜೀವನ್ಮರಣ ಹೋರಾಟದಲ್ಲಿದ್ದಾರೆ. ಆದರೆ, ಶೂಟೌಟ್ಗೆ ಏನು ಕಾರಣ ಎಂಬುದು ಗೊತ್ತಿಲ್ಲ. ಯಾವ ಶಂಕಿತರನ್ನೂ ಪೊಲೀಸರು ಸೆರೆ ಹಿಡಿದಿಲ್ಲ. ಗುಂಡು ಹಾರಿಸಿದ್ದು ಒಬ್ಬ ವ್ಯಕ್ತಿಯಾ ಅಥವಾ ಬಹುಮಂದಿಯ ಎಂಬುದೂ ತಿಳಿದಿಲ್ಲ. ಪೊಲೀಸರಿಗೆ ಶೂಟೌಟ್ ವಿಚಾರ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿ ಬಂದಾಗ ಸುಮಾರು 100 ಜನರು ಚೆಲ್ಲಾಪಿಲ್ಲಿಯಾಗಿ ಓಡಿಹೋಗುತ್ತಿದ್ದುದು ಕಂಡುಬಂತು.
ಇದನ್ನೂ ಓದಿ: Video: ತೆಂಗಿನ ಮರವೇರಿ ಸುದ್ದಿಗೋಷ್ಠಿ ನಡೆಸಿದ ಶ್ರೀಲಂಕಾ ತೆಂಗು ಸಚಿವ!
“ಈ ಜಾಗಗಳಲ್ಲಿ ಪಾರ್ಟಿ ಮಾಡಲು ನಿರ್ಬಂಧಿಸಲಾಗಿದ್ದರೂ ಜನರು ಅಕ್ರಮವಾಗಿ ಸಮಾರಂಭ ಮಾಡುತ್ತಾರೆ. ಕೋವಿಡ್ ಭೀತಿಯ ಜೊತೆಗೆ ಅಲ್ಕೋಹಾಲ್ ಮತ್ತು ಹಿಂಸಾಚಾರ ಸೇರಿದರೆ ಅನಾಹುತಕ್ಕೆ ಎಡೆ ಮಾಡಿಕೊಟ್ಟಂತೆಯೇ” ಎಂದು ರೋಚೆಸ್ಟರ್ ನಗರದ ಪೊಲೀಸ್ ಮುಖ್ಯಸ್ಥ ಸಿಮೋನ್ಸ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಸಂಭವಿಸಿದ ಡೇನಿಯಲ್ ಪ್ರೂಡ್ ಎಂಬ ವ್ಯಕ್ತಿಯ ಸಾವಿನ ಪ್ರಕರಣ ರೋಚೆಸ್ಟರ್ ಸಿಟಿ ಪೊಲೀಸರಿಗೆ ಕಪ್ಪು ಚುಕ್ಕೆ ಆಗಿದೆ. ಸೆಪ್ಟೆಂಬರ್ 4ರಂದು ಡೇನಿಯಲ್ ಪ್ರೂಡ್ ಎಂಬುವವರನ್ನು ಇಬ್ಬರು ಪೊಲೀಸರು ಅಮಾನುಷವಾಗಿ ನಡೆಸಿಕೊಂಡು ಹಲ್ಲೆ ಎಸಗಿದ್ದರು. ಎರಡು ನಿಮಿಷ ಕಾಲ ನೆಲಕ್ಕೆ ಆತನನ್ನು ಒತ್ತಿಹಿಡಿದು ಉಸಿರುಗಟ್ಟಿಸಿದ್ದರು. ಅತ ಪ್ರಜ್ಞೆ ತಪ್ಪಿದಾಗ ಆಸ್ಪತ್ರೆ ಸೇರಿಸಿದರೂ ಒಂದು ವಾದ ಬಳಿಕ ಆತ ಮೃತಪಟ್ಟಿದ್ದ. ಈ ಘಟನೆ ನಂತರ ರೋಚೆಸ್ಟರ್ ಪೊಲೀಸ್ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದವು. ಇದರ ಬೆನ್ನಲ್ಲೇ ಈಗ ಹೌಸ್ ಪಾರ್ಟಿಯಲ್ಲಿ ಶೂಟೌಟ್ ಘಟನೆ ಸಂಭವಿಸಿರುವುದು ಇಲ್ಲಿನ ಪೊಲೀಸರಿಗೆ ಒತ್ತಡ ತಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ