ಪೊಲೀಸರು ಬರುವ ಸುಳಿವನ್ನು ಗ್ಯಾಂಗ್ಸ್ಟರ್ ವಿಕಾಸ್ ದುಬೇಗೆ ನೀಡಿದ ಆರೋಪ: ಇಬ್ಬರ ಬಂಧನ
ಶರ್ಮಾ ಮತ್ತು ತಿವಾರಿ ಅವರನ್ನ ಭಾನುವಾರವೇ ಅಮಾನತು ಮಾಡಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಎರಡು ದಿನ ವಿಚಾರಣೆ ನಡೆಸಿ ಪ್ರಬಲ ಸಾಕ್ಷ್ಯಾಧಾರದ ಮೇಲೆ ಇದೀಗ ಅವರನ್ನ ಬಂಧನಕ್ಕೆ ಒಳಪಡಿಸಲಾಗಿದೆ.
ಕಾನಪುರ್(ಜುಲೈ 08): ಕಳೆದ ವಾರ ಕಾನಪುರ್ನ ಗ್ಯಾಂಗ್ಸ್ಟರ್ ವಿಕಾಸ್ ದುಬೇ ಸಹಚರರು 8 ಮಂದಿ ಪೊಲೀಸರನ್ನು ಗುಂಡಿಟ್ಟು ಬಲಿತೆಗೆದುಕೊಂಡ ಘಟನೆ ಸಂಬಂಧ ಇವತ್ತು ಬುಧವಾರ ಇಬ್ಬರು ವ್ಯಕ್ತಿಗಳನ್ನ ಬಂಧಿಸಲಾಗಿದೆ. ಪೊಲೀಸರು ಮನೆಗೆ ರೇಡ್ ಮಾಡಲು ಬರುವ ಮಾಹಿತಿಯನ್ನ ವಿಕಾಸ್ ದುಬೇಗೆ ನೀಡಿದ ಆರೋಪದ ಮೇಲೆ ಇಬ್ಬರು ಪೊಲೀಸರನ್ನ ಅರೆಸ್ಟ್ ಮಾಡಲಾಗಿದೆ. ಚೌಬೇಪುರ್ನ ಮಾಜಿ ಠಾಣಾಧಿಕಾರಿ ವಿನಯ್ ತಿವಾರಿ ಹಾಗೂ ಬೀಟ್ ಇನ್-ಚಾರ್ಜ್ ಕೆಕೆ ಶರ್ಮಾ ಅವರು ಬಂಧಿತ ಪೊಲೀಸ್ ಅಧಿಕಾರಿಗಳಾಗಿದ್ದಾರೆ.
ಈ ಇಬ್ಬರು ವ್ಯಕ್ತಿಗಳು ಕಾನ್ಪುರ್ ಎನ್ಕೌಂಟರ್ ವೇಳೆ ಇದ್ದರಾದರೂ ನಂತರದಲ್ಲಿ ಅಲ್ಲಿಂದ ನಾಪತ್ತೆಯಾಗಿಬಿಟ್ಟಿದ್ದರು ಎಂದು ಕಾನ್ಪುರ್ನ ರೇಂಜ್ ಇನ್ಸ್ಪೆಕ್ಟರ್ ಜನರಲ್ ಮೋಹಿತ್ ಅಗರ್ವಾಲ್ ತಿಳಿಸಿದ್ಧಾರೆ.
ಈ ಇಬ್ಬರು ಆರೋಪಿಗಳಾದ ಶರ್ಮಾ ಮತ್ತು ತಿವಾರಿ ಅವರನ್ನ ಭಾನುವಾರವೇ ಪೊಲೀಸ್ ಸೇವೆಯಿಂದ ಅಮಾನತು ಮಾಡಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಎರಡು ದಿನ ವಿಚಾರಣೆ ನಡೆಸಿ ಇದೀಗ ಅವರನ್ನ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಕಾನ್ಪುರ್ ಎಸ್ಎಸ್ಪಿ ದಿನೇಶ್ ಪ್ರಭು ಹೇಳಿದ್ದಾರೆ.
“ವಿನಯ್ ತಿವಾರಿ ಮತ್ತು ಕೆಕೆ ಶರ್ಮಾ ಅವರು ಪೊಲೀಸ್ ರೇಡ್ ವಿಚಾರವನ್ನು ವಿಕಾಸ್ ದುಬೇಗೆ ಮುಂಚಿತವಾಗಿ ನೀಡಿರುವುದಕ್ಕೆ ಸಾಕ್ಷ್ಯಾಧಾರಗಳಿವೆ. ಪೊಲೀಸರು ಬರುವ ಮುನ್ನವೇ ವಿಕಾಸ್ ದುಬೇ ಎಚ್ಚೆತ್ತು ದಾಳಿ ಮಾಡಿದ್ದರಿಂದ 8 ಮಂದಿ ಪೊಲೀಸರು ಬಲಿಯಾಗಬೇಕಾಯಿತು” ಎಂದು ಪೊಲೀಸ್ ಅಧಿಕಾರಿ ದಿನೇಶ್ ಪ್ರಭು ಸ್ಪಷ್ಟಪಡಿಸಿದ್ದಾರೆ.
ಕಳೆದ ವಾರದಂದು ಹಮೀರ್ಪುರ್ನಲ್ಲಿ ಗ್ಯಾಂಗ್ಸ್ಟರ್ ವಿಕಾಸ್ ದುಬೇ ಮನೆಯನ್ನು ರೇಡ್ ಮಾಡಲು ಪೊಲೀಸರ ತಂಡವೊಂದು ಹೋದಾಗ ಅನಿರೀಕ್ಷಿತ ಆಘಾತ ಎದುರುಗೊಂಡಿತ್ತು. ವಿಕಾಸ್ ದುಬೇನ ಸಹಚರರು ಮನೆಯ ಮೇಲಿಂದಲೇ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದರು. ಇದರಿಂದ 8 ಮಂದಿ ಪೊಲೀಸರು ಬಲಿಯಾಗಿ ಹೋಗಿದ್ದರು. ಇಬ್ಬರು ಗಾಯಗೊಂಡಿದ್ದರು.
ಆ ಘಟನೆ ನಂತರ ವಿಕಾಸ್ ದುಬೇ ಪರಾರಿಯಾಗಿದ್ದಾನೆ. ಇವತ್ತು ಇಬ್ಬರು ಪೊಲೀಸರ ಬಂಧನಕ್ಕೆ ಮುನ್ನ ಉತ್ತರ ಪ್ರದೇಶದ ಎಸ್ಟಿಎಫ್ ಪಡೆ ಬೆಳ್ಳಂಬೆಳಗ್ಗೆಯೇ ಹಮೀರ್ಪುರ್ನಲ್ಲಿ ದುಬೇ ಬಂಟ ಅಮರ್ ದುಬೇನನ್ನು ಕೊಂದುಹಾಕಿದ್ಧಾರೆ. ಕಾನಪುರ್ ಮತ್ತು ಫರೀದಾಬಾದ್ನಲ್ಲಿ ನಡೆದ ಇತರ ಎರಡು ಪ್ರತ್ಯೇಕ ದಾಳಿಯಲ್ಲಿ ಪೊಲೀಸರು ಆರು ಮಂದಿ ಸಹಚರರನ್ನ ಬಂಧಿಸಿದ್ಧಾರೆ.
ಇವತ್ತಿನ ಒಬ್ಬನ ಸಾವು ಸೇರಿದಂತೆ ಪೊಲೀಸರು ಈವರೆಗೆ ವಿಕಾಸ್ ದುಬೇ ಗ್ಯಾಂಗ್ನ ಮೂವರು ರೌಡಿಗಳನ್ನ ಕೊಂದಿದ್ದಾರೆ. ಹಲವು ಮಂದಿ ಬಂಧಿತರಾಗಿದ್ಧಾರೆ. ಆದರೆ, ವಿಕಾಸ್ ದುಬೇ ಇನ್ನೂ ಕೈಗೆ ಸಿಕ್ಕಿಲ್ಲ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ