ಪಕ್ಷಾಂತರಿಗಳಿಗೆ ಟಿಕೆಟ್, ಬಂಗಾಳ ಬಿಜೆಪಿಯಲ್ಲಿ ಭುಗಿಲೆದ್ದ ಆಕ್ರೋಶ; ನಾಯಕರನ್ನು ಕೂಡಿ ಹಾಕಿದ ಕಾರ್ಯಕರ್ತರು!

West Bengal Assembly Election 2021: ಇಬ್ಬರು ನಾಯಕರನ್ನು ಕೂಡಿ ಹಾಕಿದ ಕಾರ್ಯಕರ್ತರು ಬಿಜೆಪಿ ಟಿಕೆಟ್ ನೀಡಿರುವ ರವೀಂದ್ರನಾಥ್ ಭಟ್ಟಾಚಾರ್ಯ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದ್ದರು. ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಅತಿ ಹೆಚ್ಚು ಮಹಿಳಾ ಕಾರ್ಯಕರ್ತರು ಇದ್ದದ್ದು ಮತ್ತೊಂದು ವಿಷೇಶವಾಗಿತ್ತು.

ಪ್ರತಿಭಟಿಸುತ್ತಿರುವ ಬಿಜೆಪಿ ಕಾರ್ಯರ್ತರು.

ಪ್ರತಿಭಟಿಸುತ್ತಿರುವ ಬಿಜೆಪಿ ಕಾರ್ಯರ್ತರು.

 • Share this:
  ಕೋಲ್ಕತ್ತಾ (ಮಾರ್ಚ್​ 15); ಪಶ್ಚಿಮ ಬಂಗಾಳದಲ್ಲಿ ಚುನಾವಣಾ ದಿನಾಂಕ ಪ್ರಕಟವಾಗುವುದಕ್ಕೆ ಮುಂಚಿನಿಂದಲೂ ಬಿಜೆಪಿ ನಾಯಕರು ಪಕ್ಷಾಂತರದಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ವರೆಗೆ ಒಂದು ಡಜನ್​ಗೂ ಅಧಿಕ ಟಿಎಂಸಿ ಶಾಸಕರು ಮತ್ತು ಸಚಿವರು ಬಿಜೆಪಿ ಪಾಲಾಗಿದ್ದಾರೆ. ಇದಲ್ಲದೆ ಟಿಎಂಸಿ ಪಕ್ಷದ ಅನೇಕ ಕಾರ್ಯಕರ್ತರು ಮತ್ತು ಸೀಟು ವಂಚಿತರೂ ಸಹ ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಹೀಗಾಗಿ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ ಟಿಎಂಸಿ ಪಕ್ಷದಿಂದ ಪಕ್ಷಾಂತರ ಮಾಡಿದ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರಿಗೆ ಟಿಕೆಟ್​ ನೀಡುತ್ತಿದೆ. ಪರಿಣಾಮ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು ಸೀಟು ವಂಚಿತರಾಗುತ್ತಿದ್ದಾರೆ. ಹೀಗಾಗಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶಗೊಂಡ ಕಾರ್ಯಕರ್ತರು ಇಬ್ಬರು ನಾಯಕರನ್ನು ಕೊಠಡಿಯಲ್ಲಿ ಕೂಡಿ ಬೀಗ ಹಾಕಿದ ಘಟನೆ ಪಶ್ಚಿಮ ಬಂಗಾಳದ ಸಿಂಗೂರ್‌ನಲ್ಲಿ ಇಂದು ನಡೆದಿದೆ.

  ಮಧ್ಯಪ್ರದೇಶದ ಆರೋಗ್ಯ ಮತ್ತು ಶಿಕ್ಷಣ ಸಚಿವ ಬಿಸ್ವಾಸ್ ಸರಂಜೆ ಮತ್ತು ಉತ್ತರ ಪ್ರದೇಶದ ಹಿರಿಯ ಬಿಜೆಪಿ ಮುಖಂಡರನ್ನು ಪಶ್ಚಿಮ ಬಂಗಾಳದ ಬಿಜೆಪಿ ಕಾರ್ಯಕರ್ತರು ಸಿಂಗೂರಿನ ಅಪೂರ್‍ಬಾಪುರದ ಕೊಠಡಿಯೊಂದರಲ್ಲಿ ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ಕೂಡಿ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.

  ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದ ರವೀಂದ್ರನಾಥ್ ಭಟ್ಟಾಚಾರ್ಯ ಅವರಿಗೆ ಟಿಕೆಟ್ ನೀಡಿರುವುದು ಪಕ್ಷದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಭಟ್ಟಾಚಾರ್ಯ ಬದಲು ಬಿಜೆಪಿ ಪಕ್ಷದ ಮೂಲ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

  ಇಬ್ಬರು ನಾಯಕರನ್ನು ಕೂಡಿ ಹಾಕಿದ ಕಾರ್ಯಕರ್ತರು ಬಿಜೆಪಿ ಟಿಕೆಟ್ ನೀಡಿರುವ ರವೀಂದ್ರನಾಥ್ ಭಟ್ಟಾಚಾರ್ಯ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದ್ದರು. ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಅತಿ ಹೆಚ್ಚು ಮಹಿಳಾ ಕಾರ್ಯಕರ್ತರು ಇದ್ದದ್ದು ಮತ್ತೊಂದು ವಿಷೇಶವಾಗಿತ್ತು.

  ರವೀಂದ್ರ ಭಟ್ಟಾಚಾರ್ಯ ಅವರನ್ನು ಬದಲಿಸಿ ಬೇರೆ ಮೂಲ ಅಭ್ಯರ್ಥಿಗೆ ಟಿಕೆಟ್ ನೀಡದಿದ್ದರೇ, ಇಲ್ಲಿ ಸ್ವತಂತ್ರ ಅಭ್ಯರ್ಥಿಯನ್ನು ನಿಲ್ಲಿಸಿ, ಭಟ್ಟಾಚಾರ್ಯರನ್ನು ಸೋಲಿಸಲಾಗುವುದು ಎಂದು ಪ್ರತಿಭಟನಾ ನಿರತ ಕಾರ್ಯಕರ್ತರು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ಕೊಠಡಿಯಲ್ಲಿ ಬಂಧಿಸಲ್ಪಟ್ಟಿದ್ದ ಇಬ್ಬರು ಬಿಜೆಪಿ ನಾಯಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೂಗ್ಲಿ (ಗ್ರಾಮೀಣ) ಪೊಲೀಸ್ ಮುಖ್ಯಸ್ಥ ಅಮಂದೀಪ್ ಮಾಹಿತಿ ನೀಡಿದ್ದಾರೆ.

  ಇದನ್ನೂ ಓದಿ: Kamal Hassan Car Attack: ಪ್ರಚಾರದ ವೇಳೆ ಮಕ್ಕಳ್ ನೀಧಿ ಮಯ್ಯಂ ಮುಖ್ಯಸ್ಥ-ನಟ ಕಮಲಹಾಸನ್ ಮೇಲೆ ದಾಳಿ

  ಕಳೆದ ಚುನಾವಣೆಯಲ್ಲಿ ಸಿಂಗೂರ್‌ನಿಂದ ಗೆದ್ದಿದ್ದ 89 ವರ್ಷದ ಭಟ್ಟಾಚಾರ್ಯ ಅವರು, ಈ ಬಾರಿ ಟಿಕೆಟ್ ನಿರಾಕರಿಸಿದ ಕಾರಣಕ್ಕೆ ತೃಣಮೂಲ ಕಾಂಗ್ರೆಸ್ ತೊರೆದು, ಬಿಜೆಪಿ ಸೇರ್ಪಡೆಗೊಂಡಿದ್ದರು. 2006 ರಿಂದ 2008 ರವರೆಗೆ ಸಿಂಗೂರಿನಲ್ಲಿರುವ ಟಾಟಾ ಮೋಟಾರ್ಸ್ ಪ್ಲಾಂಟ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದ ಭಟ್ಟಾಚಾರ್ಯ, ತೃಣಮೂಲ ಕಾಂಗ್ರೆಸ್ ತನ್ನ ಮಗನಿಗೆ ಟಿಕೆಟ್ ನೀಡಬೇಕೆಂದು ಬಯಸಿದ್ದರು. ಆದರೆ ಟಿಕೆಟ್ ನಿರಾಕರಣೆ ಹಿನ್ನೆಲೆ ಅವರು ಅಸಮಾಧಾನಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

  ಸಿಂಗೂರ್‌ನಿಂದ ಸಿಪಿಐ (ಎಂ) ಯುವ ವಿದ್ಯಾರ್ಥಿ ಒಕ್ಕೂಟದ ಮುಖಂಡರಾದ ಶ್ರೀಜನ್ ಭಟ್ಟಾಚಾರ್ಯ ಸ್ಫರ್ಧಿಸುತ್ತಿದ್ದಾರೆ. ಸಿಂಗೂರ್‌ನಲ್ಲಿ ಉತ್ಪಾದನಾ ಚಟುವಟಿಕೆಯನ್ನು ಮರಳಿ ತರಲು ಕೆಲಸ ಮಾಡುವುದಾಗಿ ವಿದ್ಯಾರ್ಥಿ ಮುಖಂಡ ಭಟ್ಟಾಚಾರ್ಯ ಹೇಳಿದ್ದಾರೆ. ಸದ್ಯ ಪಶ್ಚಿಮ ಬಂಗಾಳದಾದ್ಯಂತ, ಈ ಘಟನೆಯಿಂದ ಮೂಲ ಬಿಜೆಪಿಗರು ಮತ್ತು ಹೊಸಬರ ನಡುವಿನ ಬಿರುಕು ಬಹಿರಂಗವಾಗಿ ಹೊರಬಂದಿದೆ. ಈಗಾಗಲೇ ಪಕ್ಷದ ಹಲವಾರು ಸದಸ್ಯರು ಚುನಾವಣಾ ಟಿಕೆಟ್ ನಿರಾಕರಿಸಿದ್ದಕ್ಕಾಗಿ ನಿರಾಶೆ ವ್ಯಕ್ತಪಡಿಸಿದ್ದಾರೆ.
  Published by:MAshok Kumar
  First published: