ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಬುಧವಾರ ಸಂಜೆ ಮತ್ತೆ ಭೂಮಿ ಕಂಪಿಸಿದೆ. ಮಂಗಳವಾರ ರಾತ್ರಿ 10:20ರ ಸಮಯದಲ್ಲಿ ಭೂಕಂಪಿಸಿತ್ತು (Earthquake) ಇದೀಗ ಇಂದು ಸಂಜೆ 4:42 ರ ಸುಮಾರಿಗೆ ಮತ್ತೆ ಭೂಕಂಪನದ ಅನುಭವವಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ( National Center for Seismology)ಪ್ರಕಾರ, ರಿಕ್ಟರ್ ಮಾಪಕದಲ್ಲಿ 2.7ರ ತೀವ್ರತೆಯ ಭೂಕಂಪ 5 ಕಿಮೀ ಆಳದಲ್ಲಿ ಸಂಭವಿಸಿದೆ. ಮಂಗಳವಾರ ರಾತ್ರಿ ದೆಹಲಿ-ಎನ್‌ಸಿಆರ್‌ನ ಬಹುತೇಕ ಎಲ್ಲಾ ಭಾಗಗಳಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ನೂರಾರು ಜನ ನೆಟ್ಟಿಗರು ಭೂಕಂಪದ ಸಮಯದಲ್ಲಿ ತಮ್ಮ ಮನೆಯ ಸೀಲಿಂಗ್ ಫ್ಯಾನ್‌ಗಳು ಮತ್ತು ಲೈಟ್ ಫಿಕ್ಚರ್‌ಗಳು ಅಲುಗಾಡುತ್ತಿರುವ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಮಂಗಳವಾರ ರಾತ್ರಿ ಹಲವೆಡೆ ಕಂಪನ
ಕೆಲವು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವ ಆಗಿದ್ದು, ಜನರು ಭಯದಲ್ಲಿ ತಮ್ಮ ಮನೆ ಮತ್ತು ಕಚೇರಿಗಳಿಂದ ಹೊರಬಂದಿದ್ದಾರೆ. ನಿನ್ನೆ ರಾತ್ರಿ ಸಂಭವಿಸಿದ 6.6 ತೀವ್ರತೆಯ ಭೂಕಂಪವು ದೆಹಲಿ ಸೇರಿದಂತೆ ಭಾರತದ ಹಲವಾರು ನಗರಗಳ ನಿವಾಸಿಗಳು ಉಟ್ಟ ಬಟ್ಟೆಯಲ್ಲೇ ತಮ್ಮ ಮನೆಯನ್ನು ಬಿಟ್ಟು ಹೊರಬರುವಂತೆ ಮಾಡಿದೆ. ದೆಹಲಿ, ನೋಯ್ಡಾ, ಗಾಜಿಯಾಬಾದ್ ಸೇರಿದಂತೆ ವಿವಿಧ ಭಾಗಗಳಲ್ಲಿ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆಗೆ ಭೀತಿಗೊಳಗಾದ ಜನರು ತಮ್ಮ ಪುಟ್ಟ ಪುಟ್ಟ ಮಕ್ಕಳನ್ನು ಕಂಬಳಿಯಲ್ಲಿ ಹೊದ್ದು, ಮನೆ ಬಿಟ್ಟು ಬೀದಿಗೆ ಬಂದು ನಿಂತ ದೃಶ್ಯಗಳು ಮನಕಲಕುವಂತಿತ್ತು.
ಈ ಭೂಕಂಪನದ ಕೇಂದ್ರ ಬಿಂದುವನ್ನು ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಗುರುತಿಸಲಾಗಿದ್ದು, ಇದು ಪಾಕಿಸ್ತಾನ ಮತ್ತು ತಜಕಿಸ್ತಾನ್ ಗಡಿಯ ಸಮೀಪ ಇರುವ ಅಫ್ಘಾನಿಸ್ತಾನದ ಜುರ್ಮ್ ಪಟ್ಟಣದ ದಕ್ಷಿಣ-ಆಗ್ನೇಯಕ್ಕೆ 40 ಕಿಲೋಮೀಟರ್ ದೂರದಲ್ಲಿದೆ. ಮಂಗಳವಾರ ಪಾಕಿಸ್ತಾನ ಮತ್ತು ಭಾರತವಲ್ಲದೆ, ತುರ್ಕಮೆನಿಸ್ತಾನ್, ಕಜಕಿಸ್ತಾನ್, ತಜಿಕಿಸ್ತಾನ್, ಉಜ್ಬೇಕಿಸ್ತಾನ್, ಚೀನಾ ಮತ್ತು ಕಿರ್ಗಿಸ್ತಾನ್‌ನಲ್ಲಿ ಕಂಪನದ ಅನುಭವವಾಗಿತ್ತು.
ಇದನ್ನೂ ಓದಿ: Earthquake: ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಪ್ರಬಲ ಭೂಕಂಪ, ಜನರಲ್ಲಿ ಆತಂಕದ ಛಾಯೆ
ಪಾಕಿಸ್ತಾನದಲ್ಲಿ ಭೂಕಂಪ
ಭಾರತ, ಅಫ್ಘಾನಿಸ್ತಾನದ ಬೆನ್ನಲ್ಲೇ ಪಾಕಿಸ್ತಾನದಲ್ಲೂ ಪ್ರಬಲ ಭೂಕಂಪವಾಗಿ 9 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. 6.8 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ್ದು, ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶವು ಭೂಕಂಪನದ ಕೇಂದ್ರಬಿಂದುವಾಗಿದ್ದು, 180 ಕಿ.ಮೀ ಆಳದಲ್ಲಿ ಭೂಕಂಪ ಆಗಿದೆ ಎಂದು ಪಾಕಿಸ್ತಾನದ ಹವಾಮಾನ ಇಲಾಖೆ ತಿಳಿಸಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪದಿಂದಾಗಿ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಪಾಕ್ ಪ್ರಮುಖ ನಗರಗಳಾದ ಇಸ್ಲಾಮಾಬಾದ್, ಪೇಶಾವರ, ಚಾರ್ಸದ್ದಾ, ಲಾಹೋರ್ ಮತ್ತು ರಾವಲ್ಪಿಂಡಿ ಸೇರಿದಂತೆ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಗುಜ್ರಾನ್‌ವಾಲಾ, ಗುಜರಾತ್, ಸಿಯಾಲ್‌ಕೋಟ್, ಕೋಟ್ ಮೊಮಿನ್, ಮಧ್ ರಂಝಾ, ಚಕ್ವಾಲ್, ಕೊಹತ್ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶಗಳಲ್ಲಿಯೂ ಪ್ರಬಲ ಕಂಪನಗಳು ಸಂಭವಿಸಿವೆ ಎಂದು ತಿಳಿದುಬಂದಿದೆ.
ಭೂಕಂಪ ಎಲ್ಲಿ ಆಗುತ್ತದೆ?
ಭೂಕಂಪಗಳು ಭೂಮಿಯ ಒಳಭಾಗದಲ್ಲಿ ಎಲ್ಲಿ ಬೇಕಾದರೂ ಸಂಭವಿಸುತ್ತವೆ. ಭೂಮಿಯ ಮೇಲೆ ಅತಿದೊಡ್ಡ ದೋಷದ ಮೇಲ್ಮೈಗಳನ್ನು ರೂಪಿಸುವ, ರೂಪಾಂತರದ ಅಥವಾ ಒಮ್ಮುಖವಾಗಿರುವ ಮಾದರಿಯ ಪದರದ ಗಡಿಯ ಸಂದರ್ಭದಲ್ಲಿ ಅವು ಪರಸ್ಪರ ಮೃದುವಾಗಿ ಭೂಕಂಪವುಂಟುಮಾಡದೆಯೇ ಹಾದುಹೋಗುತ್ತವೆ.
ಭೂಕಂಪ ಸಂಭವಿಸಲು ಕಾರಣವೇನು?
ಭೂಕಂಪಗಳಿಗೆ ಅಲೆಗಳು ಮುಖ್ಯ ಕಾರಣ. ಈ ಪೈಕಿ ಪ್ರಾಥಮಿಕ ಅಲೆಯು– ಹಾನಿಯನ್ನುಂಟುಮಾಡದ ಭೂಕಂಪದ ಆರಂಭಿಕ ಹಂತವಾಗಿದೆ. ಇದು ಸಾಮಾನ್ಯವಾಗಿ ಶೂನ್ಯದಿಂದ ಮೂರು ರಿಯಾಕ್ಟರ್‌ಗಳಿಗೆ ಭೂಮಿಯ ಮೇಲೆ ಕಂಪನಗಳನ್ನು ಉಂಟುಮಾಡುತ್ತದೆ. ಬಳಿಕ ಸ್ವಲ್ಪ ಪ್ರಮಾಣದ ದ್ವಿತೀಯ ತರಂಗವು ತುಸು ಹಾನಿ ಮಾಡಬಹುದು. ಮೇಲ್ಮೈ ತರಂಗವು ಭೂಕಂಪದ ಅತ್ಯಂತ ಅಪಾಯಕಾರಿ ಅಲೆಯಾಗಿದೆ. ಇದು ದೊಡ್ಡ ವಿನಾಶಕ್ಕೆ ಕಾರಣವಾಗುತ್ತದೆ ಮತ್ತು ಎಲ್ಲವನ್ನೂ ನಾಶಪಡಿಸುತ್ತದೆ. ಕೆಲವೊಮ್ಮೆ ಅವರ ರೂಪವು ತುಂಬಾ ಭಯಾನಕವಾಗಿರುತ್ತದೆ.
ಭೂಕಂಪದ ಸೂಚನೆ ಸಿಕ್ಕಾಗ ಏನು ಮಾಡಬೇಕು?
ಸಾಧ್ಯವಾದರೆ ನಿಮ್ಮ ಬಳಿಯಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಅನ್ನು ಸಿದ್ಧವಾಗಿಡಿ. ನಿಮ್ಮ ಭದ್ರತೆಗಾಗಿ ಭೂಕಂಪ ಸುರಕ್ಷತಾ ಕಿಟ್‌ಗಳನ್ನು ಖರೀದಿಸಿ. ನೀವು ಗ್ಯಾಲನ್‌ಗಟ್ಟಲೆ ನೀರು, ಪೂರ್ವಸಿದ್ಧ ಆಹಾರ, ಧೂಳಿನ ಮಾಸ್ಕ್, ಟಾರ್ಚ್, ರೇಡಿಯೋ, ಪ್ರಥಮ ಚಿಕಿತ್ಸಾ ಕಿಟ್ ಇತ್ಯಾದಿಗಳನ್ನು ಇರಿಸಬಹುದಾದ ಆಶ್ರಯವನ್ನು ಪತ್ತೆ ಮಾಡಿ. ಭೂಕಂಪ ಪೀಡಿತ ಪ್ರದೇಶಗಳಲ್ಲಿ ಮನೆಯನ್ನು ಖರೀದಿಸುವುದು ಅಥವಾ ನಿರ್ಮಿಸುವುದನ್ನು ತಪ್ಪಿಸಿ. ಮನೆ ಕಟ್ಟುವ ಮುನ್ನ ನಿಮ್ಮ ಮನೆಯನ್ನು ಭೂಕಂಪ-ನಿರೋಧಕವಾಗಿ ಹೇಗೆ ಮಾಡಬಹುದು ಎಂಬುದನ್ನು ತಜ್ಞರಿಂದ ತಿಳಿದುಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ