ನಮ್ಮಲ್ಲಿ ಯಾರಿಗಾದರೂ ದೊಡ್ಡ ಕಾಯಿಲೆ (Disease) ಇದೆ, ಅವರು ಬಡವರು (Poor People). ಚಿಕಿತ್ಸೆಗೆ ಲಕ್ಷಾಂತರ ಖರ್ಚಾಗುತ್ತೆ. ಅಷ್ಟೆಲ್ಲ ಖರ್ಚು ಮಾಡೋಕೆ ಹಣ (Money) ಇಲ್ಲ ಎಂದಾಕ್ಷ. ಎಂಥವರಾದರೂ ಹೋಗಲಿ ಪಾಪ ಅಂತ ತಮ್ಮ ಕೈಲಾದಷ್ಟು ಸಹಾಯ ಮಾಡ್ತಾರೆ. ಈಗಂತೂ ಸಾಕಷ್ಟು ಮಾಧ್ಯಮಗಳಲ್ಲಿ (Media) ಇಂಥ ವಿಡಿಯೋಗಳು ಹರಿದಾಡ್ತಾನೆ ಇರುತ್ತವೆ. ಇದನ್ನು ನೋಡಿ ಅದೆಷ್ಟೋ ಜನರು ಅವರ ಬ್ಯಾಂಕ್ ಖಾತೆಗೆ (Bank Account) ಹಣ ಹಾಕಿ ಸಹಾಯ ಮಾಡ್ತಾರೆ. ಆದರೆ ಇಲ್ಲೊಬ್ಬ ಹುಡುಗಿ ತನಗೆ ಕ್ಯಾನ್ಸರ್ ಇದೆ ಎಂದು ವಿಡಿಯೋ ಹಾಕಿ ಜನರನ್ನು ಯಾಮಾರಿಸಿದ್ದಾಳೆ.
ಸೋಷಿಯಲ್ ಮೀಡಿಯಾದಲ್ಲಿ ಕ್ಯಾನ್ಸರ್ ರೋಗಿಯಂತೆ ನಟನೆ
ಅಮೆರಿಕದ 19 ವರ್ಷ ವಯಸ್ಸಿನ ಮ್ಯಾಡಿಸನ್ ಮೇರಿ ರುಸ್ಸೋ ಎಂಬ ಹುಡುಗಿಯೇ ಕ್ಯಾನ್ಸರ್ ರೋಗಿಯಂತೆ ನಟಿಸಿದ್ದಾಳೆ. ಕ್ಯಾನ್ಸರ್‌ನಿಂದಾಗಿ ಕೀಮೋಥೆರಪಿ ಮಾಡಬೇಕಾಗಿದೆ ಎಂದು ಬಾಲಕಿ ತನ್ನ ವಿಡಿಯೋದಲ್ಲಿ ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ವೈದ್ಯರು ತನಗೆ 5 ವರ್ಷಗಳ ಕಾಲಾವಕಾಶ ನೀಡಿದ್ದಾರೆ ಎಂದು ಹೇಳಿಕೊಂದ್ದಾಳೆ.
ತಾನು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನ 2ನೇ ಹಂತದಲ್ಲಿದ್ದೇನೆ ಎಂದು ಹೇಳಿಕೊಂಡಿರುವ ಅವಳು ತನ್ನ ದೇಹದ ಹಿಂಭಾಗದಲ್ಲಿ ದೊಡ್ಡ ಗಾತ್ರದ ಗಡ್ಡೆ ಇದೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. ಅಲ್ಲದೇ ಆಕೆ ತನ್ನ ಟಿಕ್‌ಟಾಕ್ ಖಾತೆಯಲ್ಲಿ ಸಾಕಷ್ಟು ಫಾಲೋವರ್ಸ್ ಅನ್ನು ಹೊಂದಿದ್ದು ಸಾಮಾಜಿಕ ಮಾದ್ಯಮದಲ್ಲಿ ತಪ್ಪು ಪ್ರಚಾರ ಮಾಡಿ ಜನರನ್ನು ಮೋಸಗೊಳಿಸಿದ್ದಾಳೆ.
400 ಕ್ಕೂ ಹೆಚ್ಚು ಜನರಿಗೆ ವಂಚನೆ
ಮ್ಯಾಡಿಸನ್ ತನ್ನ ಅನಾರೋಗ್ಯದ ಬಗ್ಗೆ ಹಲವಾರು ಬಾರಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳನ್ನು ಹಂಚಿಕೊಂಡಿದ್ದಾಳೆ. ಅಲ್ಲದೇ ಮ್ಯಾಡಿಸನ್ ಮೇರಿ ಅನೇಕ ಕ್ಯಾನ್ಸರ್ ರೋಗಿಗಳ ಫೋಟೋಗಳನ್ನು ಕದ್ದು, ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತಮ್ಮದು ಎಂದು ಪೋಸ್ಟ್ ಮಾಡಿದ್ದಾರೆ.
ಹೀಗಾಗಿ ಜನರು ಅದನ್ನು ನಂಬಿದ್ದಾರೆ. ಆಕೆ ತನ್ನ ಅನಾರೋಗ್ಯದ ಹೆಸರಿನಲ್ಲಿ 493 ಜನರಿಂದ ದೇಣಿಗೆ ತೆಗೆದುಕೊಂದ್ದಾಳೆ. ಅಚ್ಚರಿಯ ವಿಷಯವೆಂದರೆ ಸ್ಥಳೀಯ ಪತ್ರಿಕೆಯೊಂದು ಮ್ಯಾಡಿಸನ್ ಅವರ ನಕಲಿ ಅನಾರೋಗ್ಯದ ಬಗ್ಗೆ ಸಂದರ್ಶನ ಕೂಡ ಮಾಡಿದೆ.
ನಾಟಕ ಬಯಲು ಮಾಡಿದ ಪೊಲೀಸರು !
ಸುದ್ದಿ ಮಾಧ್ಯಮವೊಂದರ ಪ್ರಕಾರ, ಮ್ಯಾಡಿಸನ್ ಮೇರಿ ರುಸ್ಸೋ ಕ್ಯಾನ್ಸರ್‌ಗೆ ಸಂಬಂಧಿಸಿದ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಆಕೆ ಕ್ಯಾನ್ಸರ್ ಪೀಡಿತೆ ಅಲ್ಲ. ಆಕೆ ಸುಳ್ಳು ಹೇಳಿಕೆ ನೀಡುತ್ತಿದ್ದಾಳೆ ಎಂದು ಕೆಲ ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಸತ್ಯ ಹೊರಬಿದ್ದಿದೆ.
ಪೊಲೀಸರು ಮ್ಯಾಡಿಸನ್ ಅವರ ಮನೆಯನ್ನು ಶೋಧಿಸಿದ್ದಾಗ ಅಮೆರಿಕದ ಅಯೋವಾದಲ್ಲಿರುವ ಅಪಾರ್ಟ್‌ಮೆಂಟ್ ಅನ್ನು ಮ್ಯಾಡಿಸನ್ ಮೇರಿ ನಕಲಿ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು ತಿಳಿದು ಬಂದಿದೆ. ಪೊಲೀಸರು ಬಾಲಕಿಯ ಮನೆಯನ್ನು ಪರಿಶೀಲಿಸಿದಾಗ ಹಲವು ವೈದ್ಯಕೀಯ ಉಪಕರಣಗಳು ಪತ್ತೆಯಾಗಿವೆ.
ಆರೋಪ ಸಾಬೀತಾದರೆ 10 ವರ್ಷ ಜೈಲು
ಮ್ಯಾಡಿಸನ್ ಮೇರಿ ಮೇಲಿನ ಆರೋಪಗಳು ನಿಜವೆಂದು ಸಾಬೀತಾದರೆ, ಆಕೆಗೆ 10 ವರ್ಷ ಜೈಲು ಶಿಕ್ಷೆಯಾಗಲಿದೆ ಎಂದು ಹೇಳಲಾಗಿದೆ. ಸದ್ಯ ಆಕೆಯನ್ನು 8 ಲಕ್ಷ ರೂಪಾಯಿ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ. ಮಾರ್ಚ್ 2 ರಂದು ಆಕೆ ಮತ್ತೆ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.
ಇನ್ನು, ಪೊಲೀಸ್ ತನಿಖೆಯಲ್ಲಿ ಆಕೆಯ ಎಲ್ಲಾ ಹೇಳಿಕೆಗಳು ಸುಳ್ಳಾಗಿದ್ದು, ಆಕೆ ಐಷಾರಾಮಿ ಜೀವನ ನಡೆಸುತ್ತಿದ್ದಾಳೆ ಎಂದು ತಿಳಿದುಬಂದಿದೆ. ಅಲ್ಲದೇ ಅರೆಕಾಲಿಕ ಕೆಲಸ ಮಾಡುತ್ತಿದ್ದು, ಗಾಲ್ಫ್ ಕೂಡ ಆಡುತ್ತಿದ್ದಾಳೆ ಎನ್ನಲಾಗಿದೆ. ಈ ಮಧ್ಯೆ ಆಕೆಗೆ ಕ್ಯಾನ್ಸರ್‌ನಂತಹ ಯಾವುದೇ ಕಾಯಿಲೆ ಇಲ್ಲ ಎಂದು ಆಕೆಯ ವೈದ್ಯಕೀಯ ದಾಖಲೆಗಳಲ್ಲಿ ಬಹಿರಂಗಗೊಂಡಿದೆ.
ಒಟ್ಟಾರೆ, ಅತಿಯಾಸೆ ಗತಿಕೇಡು ಅನ್ನೋ ಹಾಗಾಯ್ತು ಈ ಹುಡುಗಿ ಪರಿಸ್ಥಿತಿ. ಹೆಚ್ಚಿನ ಹಣ ಮಾಡಿ ಐಷಾರಾಮಿ ಜೀವನ ನಡೆಸುವ ಆಸೆಯಿಂದ ಸುಳ್ಳು ಹೇಳಿದ್ದಕ್ಕೆ ಇದೀಗ ಆರೋಪ ಸಾಬೀತಾದರೆ ಜೈಲು ಶಿಕ್ಷೆ ಅನುಭವಿಸುವಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ