Crime News| ಕಳೆದ 20 ವರ್ಷದಲ್ಲಿ ದೇಶದಲ್ಲಿ 1888 ಲಾಕಪ್​ ಡೆತ್​; ಕೇವಲ 26 ಜನ ಪೊಲೀಸರಿಗೆ ಮಾತ್ರ ಶಿಕ್ಷೆ!

ಎನ್‌ಸಿಆರ್‌ಬಿ 2017 ರಿಂದ ಲಾಕಪ್ ಡೆತ್ ಪ್ರಕರಣಗಳಲ್ಲಿ ಬಂಧಿತ ಪೊಲೀಸರ ಡೇಟಾವನ್ನು ಬಿಡುಗಡೆ ಮಾಡುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ‌ಈ ಸಾವುಗಳಿಗೆ ಸಂಬಂಧಿಸಿದಂತೆ 96 ಪೊಲೀಸರನ್ನು ಬಂಧಿಸಲಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ದೆಹಲಿ (ನವೆಂಬರ್​ 16); ಭಾರತದಲ್ಲಿ ಲಾಕಪ್​ ಡೆತ್​ (Custodial Deaths) ಬಗೆಗಿನ ಸುದ್ದಿ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತದೆ. ಆದರೆ, ತಮಿಳಿನಲ್ಲಿ ನಟ ಸೂರ್ಯ (Actor Surya) ಅಭಿನಯದ ಜೈ ಭೀಮ್ (Jai Bhim) ಚಿತ್ರ ಬಿಡುಗಡೆಯಾದ ಬೆನ್ನಿಗೆ ಈ ಬಗೆಗಿನ ಚರ್ಚೆಗಳು ಅಧಿಕವಾಗುತ್ತಿದೆ. ಪೊಲೀಸ್​ ಠಾಣೆಯಲ್ಲಿ ಆಪಾದಿತರ ಮೇಲಿನ ಕ್ರೌರ್ಯದ ಬಗೆಗಿನ ವಿವಾದಗಳು ಮತ್ತೆ ಮುನ್ನೆಲೆಗೆ ಬಂದಿದೆ. ಈ ನಡುವೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National Crime Records Bureau) ಲಾಕಪ್ ಡೆತ್​ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದು, ಕಳೆದ 20 ವರ್ಷಗಳಲ್ಲಿ ದೇಶಾದ್ಯಂತ 1,888 ಲಾಕಪ್ ಡೆತ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಪೊಲೀಸ್ ಸಿಬ್ಬಂದಿ ವಿರುದ್ಧ 893 ಪ್ರಕರಣಗಳನ್ನು ದಾಖಲಿಸಲಾಗಿದೆ. 358 ಸಿಬ್ಬಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಆದರೆ ಈ ಅವಧಿಯಲ್ಲಿ ಕೇವಲ 26 ಪೊಲೀಸರಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ಸ್ಪಷ್ಟಪಡಿಸಿದೆ.

  2001-2020 ರವರೆಗಿನ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ(National Crime Records Bureau) ವಾರ್ಷಿಕ ಅಪರಾಧದ (CII) ವರದಿಗಳು ಈ ನಿರಾಶದಾಯಕ ಸತ್ಯವನ್ನು ಹೊರಗೆಡವಿದೆ. 1,888 ಜನರ ಲಾಕಪ್‌ ಡೆತ್‌ ಆಗಿದ್ದರೂ ಕೂಡ ಶಿಕ್ಷೆ ಕೇವಲ 26 ಪೊಲೀಸರಿಗೆ ಎನ್ನುವುದನ್ನು ಈ ದಾಖಲೆಗಳು ಬಿಚ್ಚಿಟ್ಟಿವೆ.

  ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಕಳೆದ ಮಂಗಳವಾರ 22 ವರ್ಷದ ಅಲ್ತಾಫ್‌ನ ಕಸ್ಟಡಿ ಸಾವಿನ ಹಿನ್ನೆಲೆಯಲ್ಲಿ ಈ ವರದಿ ಮಹತ್ವ ಪಡೆದುಕೊಂಡಿದೆ. ಹಿಂದೂ ಸಮುದಾಯದ ಅಪ್ರಾಪ್ತ ಬಾಲಕಿ ನಾಪತ್ತೆಯಾದ ಪ್ರಕರಣದಲ್ಲಿ ಮುಸ್ಲಿಂ ಸಮುದಾಯದ ಅಪ್ತಾಫ್‌ನನ್ನು ಬಂಧಿಸಲಾಗಿತ್ತು. ಕಾಸ್‌ಗಂಜ್‌ ಲಾಕಪ್ ಡೆತ್ ನಂತರ, ಕಾಸ್‌ಗಂಜ್‌ನ ಕೊಟ್ವಾಲಿ ಪೊಲೀಸ್ ಠಾಣೆಯ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

  ನೆಲದಿಂದ ಕೇವಲ ಒಂದೆರಡು ಅಡಿ ಎತ್ತರದಲ್ಲಿರುವ ಶೌಚಾಲಯದ ನೀರಿನ ಪೈಪ್‌ಗೆ ಅಲ್ತಾಫ್ ತನ್ನ ಜಾಕೆಟ್‌ನ ಹುಡ್‌ನಿಂದ ನೇಣು ಬಿಗಿದುಕೊಂಡಿದ್ದರು ಎಂದು ಪೊಲೀಸರು ಹೇಳಿದ್ದರು. ಕಸ್ಟಡಿ ಸಾವಿನ ಬಗ್ಗೆ ಇಲಾಖಾ ವಿಚಾರಣೆ ಮತ್ತು ಮ್ಯಾಜಿಸ್ಟ್ರೇಟ್ ತನಿಖೆಯನ್ನು ಏಕಕಾಲದಲ್ಲಿ ನಡೆಸಲಾಗುತ್ತಿದೆ ಎಂದು ಯುಪಿ ಅಧಿಕಾರಿಗಳು ತಿಳಿಸಿದ್ದಾರೆ.

  ಇತ್ತೀಚಿನ ಮಾಹಿತಿಯ ಪ್ರಕಾರ, 2020 ರಲ್ಲಿ 76 ಲಾಕಪ್ ಡೆತ್ ವರದಿಯಾಗಿವೆ. ಗುಜರಾತ್‌ನಲ್ಲಿ ಅತಿ ಹೆಚ್ಚು ಅಂದರೆ, 15 ಸಾವುಗಳು ವರದಿಯಾಗಿವೆ. ಉಳಿದಂತೆ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಉತ್ತರ ಪ್ರದೇಶ, ಹರಿಯಾಣ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಸೇರಿವೆ.

  ಇದನ್ನೂ ಓದಿ: ಮದ್ವೆಯಾದ ಒಂದೂವರೆ ತಿಂಗಳಿಗೆ Triple Talaq ನೀಡಲು ಮುಂದಾದ ಪತಿಗೆ ಥಳಿತ

  ಎನ್‌ಸಿಆರ್‌ಬಿ 2017 ರಿಂದ ಲಾಕಪ್ ಡೆತ್ ಪ್ರಕರಣಗಳಲ್ಲಿ ಬಂಧಿತ ಪೊಲೀಸರ ಡೇಟಾವನ್ನು ಬಿಡುಗಡೆ ಮಾಡುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ‌ಈ ಸಾವುಗಳಿಗೆ ಸಂಬಂಧಿಸಿದಂತೆ 96 ಪೊಲೀಸರನ್ನು ಬಂಧಿಸಲಾಗಿದೆ.

  ಎನ್‌ಸಿಆರ್‌ಬಿ ಪೊಲೀಸ್ ಕಸ್ಟಡಿ/ಲಾಕಪ್‌ ಡೆತ್‌‌ಗಳನ್ನು ರಿಮಾಂಡ್‌ನಲ್ಲಿ ಇಲ್ಲದ ವ್ಯಕ್ತಿಗಳು ಮತ್ತು ರಿಮಾಂಡ್‌ನಲ್ಲಿರುವ ವ್ಯಕ್ತಿಗಳು ಎಂದು ಎರಡು ವಿಭಾಗಗಳ ಅಡಿಯಲ್ಲಿ ವರ್ಗೀಕರಿಸಿದೆ. ರಿಮಾಂಡ್‌ನಲ್ಲಿ ಇಲ್ಲದ ವ್ಯಕ್ತಿಗಳು ಎಂದರೆ, ಬಂಧಿಸಲ್ಪಟ್ಟವರನ್ನು ಇನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾದವರು. ರಿಮಾಂಡ್‌ನಲ್ಲಿರುವ ವ್ಯಕ್ತಿಗಳು ಎಂದರೆ ಪೊಲೀಸ್ ಅಥವಾ ನ್ಯಾಯಾಂಗ ಬಂಧನದಲ್ಲಿರುವವರು.

  ಇದನ್ನೂ ಓದಿ: Jamnagar: ಗುಜರಾತ್​ನ ಜಾಮ್​ನಗರದಲ್ಲಿನ ನಾಥೂರಾಂ ಗೋಡ್ಸೆ ಪ್ರತಿಮೆ ಧ್ವಂಸಗೊಳಿಸಿದ ಕಾಂಗ್ರೆಸ್ಸಿಗರು

  2006 ರಲ್ಲಿ ಉತ್ತರ ಪ್ರದೇಶದಲ್ಲಿ ಏಳು ಮತ್ತು ಮಧ್ಯಪ್ರದೇಶದಲ್ಲಿ ನಾಲ್ವರು ಪೊಲೀಸರು ಲಾಕಪ್ ಡೆತ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ವರದಿಯಾಗಿತ್ತು. ಈ 11 ಮಂದಿ ಪೊಲೀಸರಿಗೂ ಶಿಕ್ಷೆಯಾಗಿದ್ದು, 20 ವರ್ಷಗಳಲ್ಲಿ ಒಂದೇ ಬಾರಿಗೆ ಶಿಕ್ಷೆಗೆ ಗುರಿಯಾದ ಅತ್ಯಧಿಕ ಪೊಲೀಸರು ಇವರು ಎಂಬುದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ದತ್ತಾಂಶದಲ್ಲಿ ಕಾಣಸಿಗುತ್ತದೆ. ಆದರೆ, ಇವರೆಲ್ಲಾ ಅದೇ ವರ್ಷ ಮಾಡಿದ ಅಪರಾಧಕ್ಕೆ ಶಿಕ್ಷೆ ಅನುಭವಿಸಿದ್ದಾರೆಯೇ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ.
  Published by:MAshok Kumar
  First published: