ಪಾಟ್ನಾ: ಪ್ರಸ್ತುತ ದಿನಗಳಲ್ಲಿ ಸಂಬಂಧಗಳಿಗೆ (Relationship)ಬೆಲೆ ಇಲ್ಲದಂತಾಗಿದೆ. ಅಲ್ಲದೆ ಯುವ ಪೀಳಿಗೆ ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಪ್ರೇಮ (Love) ಎಂದು ಹೋಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಕೆಲವೊಂದು ತಪ್ಪುಗಳನ್ನು ಮುಚ್ಚಿಡಲು ಕೊಲೆ ಮಾಡುವ ಮಟ್ಟಕ್ಕೆ ಹದಿಹರೆಯದವರು ಮುಂದಾಗುತ್ತಿದ್ದಾರೆ. ಇದಕ್ಕೆಲ್ಲಾ ನಿದರ್ಶನ ಎಂಬಂತೆ ಇಲ್ಲೊಬ್ಬ 13 ವರ್ಷದ ಬಾಲಕಿ ತನ್ನ ಪ್ರಿಯತಮನ ಸಹಾಯದಿಂದ ತನ್ನ ಸ್ವಂತ ತಂಗಿಯನ್ನೇ ಬರ್ಬರವಾಗಿ ಕೊಂದು, ಪೀಸ್ ಪೀಸ್ ಮಾಡಿ, ಆ್ಯಸಿಡ್ನಿಂದ ಸುಟ್ಟು ಹಾಕಿದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಜಂದಹ ಬ್ಲಾಕ್ನಲ್ಲಿ ಈ ದಾರುಣ ಘಟನೆ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಂದ ನಂತರ ಮನೆಯಲ್ಲೇ ದೇಹ ಬಚ್ಚಿಟ್ಟಿದ್ದ ಆರೋಪಿಗಳು
9 ವರ್ಷದ ತನ್ನ ಸಹೋದರಿಯನ್ನು ಪ್ರಿಯತಮನ ಸಹಾಯದಿಂದ ಕೊಂದ 13 ವರ್ಷದ ಬಾಲಕಿ, ಬಾಕ್ಸ್ ಒಂದರಲ್ಲಿ ಹಾಕಿ ಮನೆಯಲ್ಲೇ ಬಚ್ಚಿಟ್ಟಿದ್ದಾಳೆ. ಮೃತದೇಹ ವಾಸನೆ ಬರಲು ಶುರುವಾಗುತ್ತಿದ್ದಂತೆ, ಆರೋಪಿಗಳು ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ನಂತರ ಅದನ್ನು ಆ್ಯಸಿಡ್ ಬಳಸಿ ಸುಟ್ಟುಹಾಕಿದ್ದಾರೆ. ದೇಹದ ಭಾಗಗಳನ್ನು ಮನೆಯ ಹಿತ್ತಲಿಗೆ ಎಸೆದಿದ್ದಾರೆ.
ಈ ಪ್ರೇಮಿಗಳಿಬ್ಬರು ಬಾಲಕಿಯ ದೇಹವನ್ನು ಆ್ಯಸಿಡ್ನಿಂದ ಸುಟ್ಟ ನಂತರ ಉಳಿದ ಭಾಗಗಳನ್ನು ಮನೆಯ ಹಿತ್ತಲಿನಲ್ಲಿ ಹೋಗಿ ಬಿಸಾಡಿದ್ದಾರೆ. ಇವು ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದಾವಿಸಿದ ಪೊಲೀಸರು ಅವಶೇಷಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದಾರೆ. ನಂತರ ಅದು ಅಪ್ರಾಪ್ತ ಬಾಲಕಿಗೆ ಸೇರಿದ ಭಾಗಗಳು ಎಂಬುದಾಗಿ ತಿಳಿದುಬಂದಿದೆ.
ಕಾಣೆಯಾದ ಮಕ್ಕಳ ಬಗ್ಗೆ ತನಿಖೆ
ಗ್ರಾಮಸ್ಥರ ಮಾಹಿತಿ ಮೇರೆಗೆ ಶ್ವಾನದಳ ಮತ್ತು ಎಫ್ಎಸ್ಎಲ್ ತಂಡವನ್ನು ಅಪರಾಧ ನಡೆದ ಸ್ಥಳಕ್ಕೆ ಕಳುಹಿಸಿದೆವು. ತಂಡವು ಅವಶೇಷಗಳನ್ನು ಸಂಗ್ರಹಿಸಿದೆ. ಅದು ಅಪ್ರಾಪ್ತರಿಗೆ ಸೇರಿದ್ದು ಎಂಬುದು ತಿಳಿದುಬಂದಿದೆ. ಈ ಮಾಹಿತಿಯ ಮೇರೆಗೆ ನಾವು ಆ ಭಾಗದಲ್ಲಿ ಕಾಣೆಯಾದ ಮಕ್ಕಳ ಬಗ್ಗೆ ತನಿಖೆಯ ನಡೆಸಿದೆವು. ಆಗ 9 ವರ್ಷದ ಬಾಲಕಿ ಮೇ 16ರಿಂದ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ವೈಶಾಲಿ ಎಸ್ಪಿ ರವಿ ರಂಜನ್ ಕುಮಾರ್ ಹೇಳಿದ್ದಾರೆ.
ನಂತರ ಮೃತದೇಹದ ಅವಶೇಷಗಳನ್ನು ಮೇ 19ರಂದು ವಶಪಡಿಸಿಕೊಂಡು, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶವ ಪರೀಕ್ಷೆ ನಡೆಸಿದ ನಂತರ ಸಾಕಷ್ಟು ಪುರಾವೆ ಸಿಕ್ಕಿದ್ದು, ಮಂಗಳವಾರ ಸಂಜೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ.
ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದಿದ್ದಕ್ಕೆ ಕೊಲೆ
ಸಂತ್ರಸ್ತೆಯ ಅಕ್ಕನನ್ನು ಪೊಲೀಸರು ಈ ಬಗ್ಗೆ ತೀವ್ರ ವಿಚಾರಣೆ ನಡೆಸಿದಾಗ ಆಕೆ ಘಟನೆಯನ್ನು ವಿವರಿಸಿದ್ದಾಳೆ. ಆರೋಪಿ ಮತ್ತು ಆಕೆಯ ಗೆಳೆಯ ಕೆಲವು ದಿನಗಳ ಹಿಂದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದಾಗ ಆಕೆಯ 9 ವರ್ಷದ ತಂಗಿ ನೋಡಿದ್ದಾಳೆ. ಇದರಿಂದ ಭಯಗೊಂಡ ಆಕೆ ಈ ವಿಚಾರವನ್ನು ತಂಗಿ ಮನೆಯವರಿಗೆ ಹೇಳಬಹುದೆಂದು ಕೊಲೆ ಮಾಡಲು ನಿರ್ಧರಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ಪೊಲೀಸರ ಮಾಹಿತಿಯ ಪ್ರಕಾರ ಆಕೆ ತಂದೆ ದಿನಗೂಲಿ ನೌಕರ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ