• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Crime News: 11 ಬುಡಕಟ್ಟು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: 13 ಪೊಲೀಸರನ್ನು ಖುಲಾಸೆಗೊಳಿಸಿದ ಕೋರ್ಟ್‌!

Crime News: 11 ಬುಡಕಟ್ಟು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: 13 ಪೊಲೀಸರನ್ನು ಖುಲಾಸೆಗೊಳಿಸಿದ ಕೋರ್ಟ್‌!

ನ್ಯಾಯಾಲಯ (ಸಾಂದರ್ಭಿಕ ಚಿತ್ರ)

ನ್ಯಾಯಾಲಯ (ಸಾಂದರ್ಭಿಕ ಚಿತ್ರ)

11 ಬುಡಕಟ್ಟು ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ವಿಶೇಷ ನ್ಯಾಯಾಲಯ ’ಅಸಮರ್ಪಕ ತನಿಖೆ’ ಕಾರಣ ನೀಡಿ 13 ಆರೋಪಿ ಪೊಲೀಸರನ್ನು ಖುಲಾಸೆಗೊಳಿಸಿದೆ.

  • Share this:

ವಿಶಾಖಪಟ್ಟಣಂ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಆಂಧ್ರಪ್ರದೇಶದ (Andhra Pradesh) ವಾಕಪಲ್ಲಿಯಲ್ಲಿ ನಡೆದ 11 ಬುಡಕಟ್ಟು ಮಹಿಳೆಯರ (Schedule Tribles) ಮೇಲಿನ ಸಾಮೂಹಿಕ ಅತ್ಯಾಚಾರ (Gang Rape Case) ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ವಿಶೇಷ ನ್ಯಾಯಾಲಯ ’ಅಸಮರ್ಪಕ ತನಿಖೆ’ ಕಾರಣ ನೀಡಿ 13 ಆರೋಪಿ ಪೊಲೀಸರನ್ನು ಖುಲಾಸೆಗೊಳಿಸಿದೆ.


2007ರ ಆಗಸ್ಟ್ 30ರಂದು ನಸುಕಿನಲ್ಲಿ ಇಲ್ಲಿನ ಸಣ್ಣ ಹಳ್ಳಿಯೊಂದರಲ್ಲಿ 11 ಆದಿವಾಸಿ ಮಹಿಳೆಯರನ್ನು ಬಂದೂಕು ತೋರಿಸಿ ಬೆದರಿಸಿ ನಕ್ಸಲ್ ನಿಗ್ರಹ ವಿಶೇಷ ಪೊಲೀಸ್ ಪಡೆಯ ತಂಡದ 13 ಮಂದಿ ಪೊಲೀಸರು ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪ ಕೇಳಿಬಂದಿತ್ತು. ಇದೀಗ 15 ವರ್ಷಗಳ ಬಳಿಕ ಈ ಪೊಲೀಸರನ್ನು ನ್ಯಾಯಾಲಯ ಆರೋಪಮುಕ್ತಗೊಳಿಸಿದೆ.


ಈ ಪ್ರಕರಣದಲ್ಲಿ 15 ವರ್ಷ ಕಾನೂನು ಹೋರಾಟ ನಡೆಸಿದ ಸಂತ್ರಸ್ತೆಯರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಸಮರ್ಪಕ ಪರಿಹಾರ ಪಾವತಿಸುವಂತೆ ವಿಶೇಷ ನ್ಯಾಯಾಧೀಶ ಎಲ್ ಶ್ರೀಧರ್ ಆದೇಶಿಸಿದ್ದಾರೆ. ಅಲ್ಲದೇ ತಮ್ಮ ಕರ್ತವ್ಯವನ್ನು ಕಳಪೆಯಾಗಿ ನಿರ್ವಹಿಸಿದ್ದಾರೆ ಎಂದು ತನಿಖಾಧಿಕಾರಿ ವಿರುದ್ಧ ಕಿಡಿಕಾರಿದ ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಗಾಗಿ ಇರುವ ವಿಶೇಷ ನ್ಯಾಯಾಲಯ ಹಾಗೂ XI ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಅವರನ್ನು ರಾಜ್ಯ ಸರ್ಕಾರ ಶಿಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಿದರು.


ಇದನ್ನೂ ಓದಿ: Rajasthan Horror: ದಲಿತ ಮಹಿಳೆಯ ಭೀಕರ ಅತ್ಯಾಚಾರ! ಕೃತ್ಯ ಎಸಗಿ ಸಂತ್ರಸ್ತೆಗೆ ಬೆಂಕಿ ಹಚ್ಚಿದ ರಾಕ್ಷಸ!


2007ರಲ್ಲಿ ನಡೆದಿದ್ದ ಪ್ರಕರಣ


ಅವಿಭಜಿತ ವಿಶಾಖಪಟ್ಟಣ ಜಿಲ್ಲೆಯ ಹಳ್ಳಿಯೊಂದರಲ್ಲಿ ವಿಶೇಷ ದಳದ ಪೊಲೀಸರ 30 ಸದಸ್ಯರ ತಂಡವು 2007ರ ಆಗಸ್ಟ್ 30ರಂದು ನಸುಕಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ 13 ಮಂದಿ ಪೊಲೀಸರು ತಮ್ಮ ಮೇಲೆ ಅತ್ಯಾಚಾರ ಎಸಗಿ, ಹಲ್ಲೆ ನಡೆಸಿದ್ದರು ಎಂದು ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಸಮೂಹಕ್ಕೆ (ಪಿವಿಟಿಜಿ) ಸೇರಿದ 11 ಮಹಿಳೆಯರು ಆರೋಪ ಮಾಡಿದ್ದರು. ಪುರುಷರು ಕೆಲಸಕ್ಕೆಂದು ಹೊಲಗಳಿಗೆ ತೆರಳಿದ ಕೆಲವೇ ಸಮಯದಲ್ಲಿ ಹಳ್ಳಿಯೊಂದಕ್ಕೆ ನುಗ್ಗಿದ ಪೊಲೀಸರ ತಂಡವು ಮಹಿಳೆಯರನ್ನು ಗುಡಿಸಿಲಿನ ಒಳಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದರು ಎಂದು ದೂರಿದ್ದರು.


ಮಧ್ಯಾಹ್ನ ಮನೆಗೆ ಮರಳಿದ ಗಂಡಂದಿರ ಬಳಿ ಮಹಿಳೆಯರು ಈ ಬಗ್ಗೆ ತಿಳಿಸಿದ್ದರು. ಅವರು ತಮ್ಮ ಗ್ರಾಮದ ಮುಖ್ಯಸ್ಥರನ್ನು ಸಂಪರ್ಕಿಸಿ, ಅವರ ಮೂಲಕ ಆಗಿನ ಬಿಎಸ್‌ಪಿ ಶಾಸಕ ಎಲ್ ರಾಜಾ ರಾವ್ ಅವರನ್ನು ಭೇಟಿ ಮಾಡಿದ್ದರು. ಬಳಿಕ ಶಾಸಕರು ಹಾಗೂ ಬುಡಕಟ್ಟು ಜನರು ಮಹಿಳೆಯರನ್ನು ಜಿಲ್ಲಾಧಿಕಾರಿ ಬಳಿ ಕರೆದೊಯ್ದಿದ್ದು ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದ್ದರು. ಈ ಹಿನ್ನೆಲೆ ಐಪಿಸಿ ಸೆಕ್ಷನ್ 376 (2) (g) ಹಾಗೂ ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ 1989ರ ಸೆಕ್ಷನ್ 3 (2) (v) ಅಡಿ ಪ್ರಕರಣ ದಾಖಲಿಸಲಾಗಿತ್ತು.


ಇದನ್ನೂ ಓದಿ: Crime News: ಬಿಹಾರದಲ್ಲಿ ಪೈಶಾಚಿಕ ಕೃತ್ಯ! ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದು ದುಪ್ಪಟ್ಟಾದಿಂದ ಕೊಲೆಗೆ ಯತ್ನ!


ಆಗಿನ ರಾಜ್ಯ ಸರ್ಕಾರವು ಈ ಆರೋಪಗಳ ಬಗ್ಗೆ ತನಿಖೆ ನಡೆಸಲು ಆರಂಭದಲ್ಲಿ ವಿಶಾಖಪಟ್ಟಣಂ ಗ್ರಾಮೀಣ ಭಾಗದ ಉಪ ಎಸ್‌ಪಿ ಬಿ ಆನಂದ ರಾವ್ ಅವರನ್ನು ನೇಮಿಸಿತ್ತು. ಆಗ ಬಳಿಕ ಸಿಐಡಿ ಎಸ್‌ಪಿ ಆಗಿದ್ದ ಎಂ ಶಿವಾನಂದ ರೆಡ್ಡಿ ಅವರನ್ನು ನೇಮಿಸಿತ್ತು. ರೆಡ್ಡಿ ಅವರು ಸ್ವಯಂ ನಿವೃತ್ತಿ ಪಡೆದು ಟಿಡಿಪಿ ಸೇರಿ 2019ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.


ಅತ್ಯಾಚಾರವೇ ನಡೆದಿಲ್ಲ ಎಂದು ವಾದ


ಪೊಲೀಸರ ಪರ ವಾದ ಮಂಡಿಸಿದ್ದ ವಕೀಲರು, ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು ತಡೆಯಲು ಪೊಲೀಸರ ವಿರುದ್ಧ ಸುಳ್ಳು ಅತ್ಯಾಚಾರ ಆರೋಪಗಳನ್ನು ಮಾಡುವಂತೆ ಮಾವೋವಾದಿಗಳು ಮಹಿಳೆಯರನ್ನು ಬಲವಂತ ಮಾಡಿದ್ದಾರೆ. ಅತ್ಯಾಚಾರ ಎಸಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿಲ್ಲ ಎಂದು ವಾದಿಸಿದ್ದರು.


ಬುಡಕಟ್ಟು, ಎಸ್‌ಸಿ ಮತ್ತು ಎಸ್‌ಟಿ ಸಂಘಟನೆಗಳ ಬೆಂಬಲದೊಂದಿಗೆ ಮಹಿಳೆಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಕೂಡ ವೈದ್ಯಕೀಯ ಪರೀಕ್ಷೆ ಪುರಾವೆಗಳು ಅತ್ಯಾಚಾರವನ್ನು ಸಾಬೀತುಪಡಿಸಿಲ್ಲ ಎಂದು ಹೇಳಿತ್ತು. ನಂತರ ಸಂಘಟನೆಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು. ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಲು 2017ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿತ್ತು.


ಸದ್ಯ ಆರೋಪ ಮಾಡಿದ 11 ಆದಿವಾಸಿ ಮಹಿಳೆಯರಲ್ಲಿ ಇಬ್ಬರು ವಿವಿಧ ಕಾರಣಗಳಿಗಾಗಿ ಮೃತಪಟ್ಟಿದ್ದಾರೆ.

top videos
    First published: