Parliament Session: ಗದ್ದಲದ ನಡುವೆಯೂ ಈ ಬಾರಿ ಉಭಯ ಸದನಗಳಲ್ಲಿ 11 ಮಸೂದೆಗಳು ಪಾಸ್​

ಈ ಬಾರಿಯ ಸಂಸತ್ ಅಧಿವೇಶನ ಸರಿಯಾದ ರೀತಿಯಲ್ಲಿ ನಡೆಯಲಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಪ್ರತಿಪಕ್ಷಗಳತ್ತ ಬೊಟ್ಟು ಮಾಡಿದರು. 

ಸಂಸತ್

ಸಂಸತ್

  • Share this:
    ನವದೆಹಲಿ, ಡಿ. 22: ಈ ಬಾರಿಯ ಚಳಿಗಾಲದ ಸಂಸತ್ತಿನ ಅಧಿವೇಶನದಲ್ಲಿ (Winter Session of Parliment) ಚುನಾವಣಾ ಸುಧಾರಣಾ ತಿದ್ದುಪಡಿ ಮಸೂದೆ ಸೇರಿದಂತೆ ಒಟ್ಟು 13 ಮಸೂದೆಗಳನ್ನು ಮಂಡನೆ ಮಾಡಲಾಗಿದೆ. ಆ ಪೈಕಿ ಎರಡೂ ಸದನಗಳಲ್ಲಿ 11 ಮಸೂದೆಗಳು ಅನುಮೋದನೆಗೊಂಡಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Union Parliment Affairs Minister Prahald Joshi) ಎಂದು ತಿಳಿಸಿದರು. ಅಲ್ಲದೆ ವಿರೋಧ ಪಕ್ಷದವರು ಪ್ರಮುಖ ವಿಷಯಗಳ ಚರ್ಚೆಯಿಂದ ಓಡಿಹೋದರು ಎಂದು ಆಪಾದಿಸಿದರು.

    ಈ ಬಾರಿಯ ಸಂಸತ್ ಅಧಿವೇಶನ ಸರಿಯಾದ ರೀತಿಯಲ್ಲಿ ನಡೆಯಲಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಪ್ರತಿಪಕ್ಷಗಳತ್ತ ಬೊಟ್ಟು ಮಾಡಿದರು. ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭಾಧ್ಯಕ್ಣರು ಪ್ರತಿಪಕ್ಷಗಳಿಗೆ ಚರ್ಚೆಗೆ ಅವಕಾಶವನ್ನು ನೀಡಿದ್ದರು. ಆದರೂ ಚುನಾವಣಾ ಸುಧಾರಣಾ ತಿದ್ದುಪಡಿ ಮಸೂದೆ ವಿಷಯದಲ್ಲಿ ಅನಗತ್ಯ ತಗಾದೆ ತೆಗೆದು ಗಲಾಟೆ ಮಾಡಿದರು. ಅತ್ಯಂತ ಕೆಟ್ಟದಾಗಿ ವರ್ತನೆಮಾಡಿ, ರೂಲ್ ಬುಕನ್ನು ಹರಿದು ಅವಮಾನ ಮಾಡಿದರು. ಅವರು ಕೇಳಿದ ವಿಷಯಗಳಿಗೆಲ್ಲಾ ಚರ್ಚೆಗೂ ಅವಕಾಶ ನೀಡಿದರೂ ಅವರು ಚರ್ಚೆಗೆ ಬರಲೇ ಇಲ್ಲ. ಮಹಿಳೆಯರ ವಿವಾಹ ವಯೋಮಿತಿ ಮಸೂದೆಯನ್ನು ಸ್ಟ್ಯಾಂಡಿಂಗ್ ಕಮಿಟಿಗೆ ಕಳುಹಿಸಿದ್ದೆವೆ ಎಂದು ಹೇಳಿದರು.

    ಮುಂದಿನ ಅಧಿವೇಶನದಲ್ಲಿ ಕ್ರಿಪ್ಟೋ ಮಸೂದೆ ಮಂಡನೆ ಸಾಧ್ಯತೆ

    ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಕ್ರೀಫ್ಟೊ ಕರೆನ್ಸಿ ನಿಷೇಧ ಮಾಡುವ ಮಸೂದೆಯನ್ನು ಮಂಡಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಕ್ರೀಫ್ಟೊ ಕರೆನ್ಸಿ ನಿಷೇಧ ಮಸೂದೆ ಪ್ರಸಕ್ತ ಆದಿವೇಶದಲ್ಲಿ ಬರುವ ನಿರೀಕ್ಷೆ ಇತ್ತು. ಆದರೆ ಮಸೂದೆ ಇಲಾಖೆ ಹಂತದಲ್ಲಿ ಇನ್ನು ಚರ್ಚೆಯಲ್ಲಿದೆ. ಸಾಧಕ ಬಾಧಕಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ.‌ ಮುಂದಿನ ಅಧಿವೇಶನದ ವೇಳೆಗೆ ಮಸೂದೆ ಬರುವ ಸಾಧ್ಯತೆ ಇದೆ ಎಂದು ಹೇಳಿದರು.

    ಇದನ್ನೂ ಓದಿ: ನಿಮಗೆ ಕೆಟ್ಟ ದಿನಗಳು ಬೇಗ ಬರಲಿವೆ: ರಾಜ್ಯಸಭೆಯಲ್ಲಿ ಜಯಾ ಬಚ್ಚನ್ ಹಿಡಿಶಾಪ

    ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಸ್ತಾಪ ಇಲ್ಲ

    ರಾಜ್ಯದಲ್ಲಿ ಇತ್ತಿಚೆಗೆ ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ವಿಚಾರ ವ್ಯಾಪಕವಾಗಿ ಚರ್ಚೆ ಆಗುತ್ತಿದ್ದು ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಹ್ಲಾದ್ ಜೋಶಿ 'ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಸ್ತಾಪ ಇಲ್ಲ. 2023ರವರೆಗೂ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿರಲಿದ್ದಾರೆ' ಎಂದು ಹೇಳಿದರು. ಇತ್ತೀಚೆಗೆ ಬಸವರಾಜ ಬೊಮ್ಮಾಯಿ 'ಅಧಿಕಾರ ಶಾಶ್ವತವಲ್ಲ' ಎಂದು ಹೇಳಿದ ಬಗ್ಗೆ ಪ್ರತಿಕ್ರಿಯಿಸಿದ ಜೋಷಿ 'ಅವರು ಫಿಲಾಸಫಿಕಲ್ ಆಗಿ ಮಾತನಾಡಿದ್ದಾರೆ. ಅವರು ಈ ರೀತಿ ಹತ್ತು ಸಲ ಮಾತನಾಡಿದ್ದು ನಾನು ಕೇಳಿದ್ದೇನೆ. ಸಿಎಂ ಬದಲಾವಣೆ ಪ್ರಸ್ತಾಪ ಹೈಕಮಾಂಡ್ ಮಟ್ಟದಲ್ಲಿ ಇಲ್ಲ' ಎಂದರು. ಬಸವರಾಜ ಬೊಮ್ಮಾಯಿ ವಿದೇಶಕ್ಕೆ ಹೋಗುತ್ತಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.

    ರಾಯಣ್ಣ, ಶಿವಾಜಿ ಪ್ರತಿಮೆ ವಿರೂಪಕ್ಕೆ ವಿರೋಧ

    ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಗಲಭೆ ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಸಂಗೊಳ್ಳಿ ರಾಯಣ್ಣನ ಪ್ರತಿಮೆ ಧ್ವಂಸಗೊಳಿಸಿರುವುದು ಖಂಡನೀಯ. ಕೃತ್ಯ ಎಸಗಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಇನ್ನೊಮ್ಮೆ ಈ ರೀತಿ ಮಾಡದಂತೆ ಕ್ರಮ ತೆಗೆದುಕೊಳ್ಳಬೇಕು. ಶಿವಾಜಿ ಪ್ರತಿಮೆಗೆ ಮಸಿ ಬಳೆದಿದ್ದು ಕೂಡ ಖಂಡನೀಯ. ಶಿವಾಜಿ ಕೂಡಾ ಮೊಘಲರ ವಿರುದ್ಧ ಹೋರಾಡಿದ ವ್ಯಕ್ತಿ. ಹಾಗಾಗಿ ಮಹಾನ್ ನಾಯಕರ ವಿರುದ್ಧ ಈ ರೀತಿಯ ಕೃತ್ಯ ಎಸಗಬಾರದು. ಇದರ ಹಿಂದೆ ಕಾಂಗ್ರೆಸ್ ಬಿಜೆಪಿ ಇದೆ ಎಂದು ಹೇಳಲು ಸಾಧ್ಯವಿಲ್ಲ. ಇದರ ಹಿಂದೆ ಕೆಲವು ಪುಂಡ ಪೋಕರಿಗಳಿದ್ದಾರೆ. ಕೆಲವರು ರಾಜಕೀಯ ಉದ್ದೇಶಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದು ವಿವರಿಸಿದರು.

    ಎಂಇಎಸ್ ಬ್ಯಾನ್ ಮಾಡುವ ವಿಚಾರವಾಗಿ ಮಾತನಾಡಿದ ಅವರು ಎಂಇಎಸ್ ರಾಜಕೀಯ ಪಕ್ಷವಾಗಿ ನೊಂದಣಿಯಾಗಿದೆ. ಅದನ್ನು ಕಾನೂನಾತ್ಮಕವಾಗಿ ನಿಷೇಧ ಮಾಡುವ ಬಗ್ಗೆ ಪರಿಶೀಲನೆ ಮಾಡಬೇಕಿದೆ. ನಂತರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
    Published by:Kavya V
    First published: