ಕರ್ನಾಟಕ ಸೇರಿ 12 ರಾಜ್ಯಗಳ ಸ್ತಬ್ಧಚಿತ್ರಗಳು ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆ; ಸತತ 2ನೇ ಬಾರಿಗೆ ಕೇರಳ ಟ್ಯಾಬ್ಲೋ ತಿರಸ್ಕೃತ

ಐದು ಸುತ್ತುಗಳ ಸಭೆ ಬಳಿಕ ತಜ್ಞರ ಸಮಿತಿ ನೀಡಿರುವ ವರದಿ ಆಧರಿಸಿ ಪಥಸಂಚಲನದಲ್ಲಿ ಭಾಗವಹಿಸಲಿರುವ 22 ಸ್ತಬ್ಧಚಿತ್ರಗಳ ಸಂಭವನೀಯ ಪಟ್ಟಿಯನ್ನು ರಕ್ಷಣಾ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದೆ.

HR Ramesh | news18-kannada
Updated:January 4, 2020, 7:29 AM IST
ಕರ್ನಾಟಕ ಸೇರಿ 12 ರಾಜ್ಯಗಳ ಸ್ತಬ್ಧಚಿತ್ರಗಳು ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆ; ಸತತ 2ನೇ ಬಾರಿಗೆ ಕೇರಳ ಟ್ಯಾಬ್ಲೋ ತಿರಸ್ಕೃತ
ದೆಹಲಿಯಲ್ಲಿ ಗಮನ ಸೆಳೆದ ಕರ್ನಾಟಕದ ವನ್ಯಜೀವಿ ಸ್ತಬ್ಧಚಿತ್ರ. (ಸಂಗ್ರಹ ಚಿತ್ರ)
  • Share this:
ನವದೆಹಲಿ: ಜನವರಿ 26ರ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆಯುವ ಪೆರೇಡ್​ನಲ್ಲಿ ಕರ್ನಾಟಕ ಸೇರಿ 12 ರಾಜ್ಯಗಳ ಸ್ತಬ್ಧಚಿತ್ರಗಳು ಆಯ್ಕೆಯಾಗಿವೆ. ಆದರೆ, ಕೇರಳ, ಪಶ್ಚಿಮಬಂಗಾಳ ಹಾಗೂ ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳ ಸ್ತಬ್ಧಚಿತ್ರವನ್ನು ರಕ್ಷಣಾ ಇಲಾಖೆ ತಿರಸ್ಕರಿಸಿದೆ.

ಈ ಬಾರಿ ಪಥಸಂಚಲನದಲ್ಲಿ ಕರ್ನಾಟಕದಿಂದ ಜಗಜ್ಯೋತಿ ಬಸವೇಶ್ವರ ಅನುಭವ ಮಂಟಪ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ. ಭಾರತದ ಸಂವಿಧಾನಕ್ಕೆ 70 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ 12ನೇ ಶತಮಾನದ ಅನುಭವ ಮಂಟಪದ ಮಾದರಿಯೇ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಎಂಬಂತೆ ಈ ಬಾರಿ ಸ್ತಬ್ಧಚಿತ್ರದಲ್ಲಿ ಮೂಡಿ ಬರುತ್ತಿದೆ. ಸತತ 12ನೇ ಬಾರಿಗೆ ಕರ್ನಾಟಕ ಸ್ತಬ್ಧಚಿತ್ರಕ್ಕೆ ಪೆರೇಡ್​ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ.

ಕೇರಳದ ಸ್ತಬ್ಧಚಿತ್ರ ಸತತ ಎರಡನೇ ಬಾರಿಗೆ ತಿರಸ್ಕಾರಗೊಂಡಿದೆ. ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡುವ ತಜ್ಞರ ಸಮಿತಿಯು ಮೂರನೇ ಸುತ್ತಿನ ಸಭೆಯಲ್ಲಿ ಕೇರಳದ ಸ್ತಬ್ಧಚಿತ್ರ ಪ್ರಸ್ತಾವವನ್ನು ತಿರಸ್ಕರಿಸಿದೆ. ಥೆಯ್ಯಮ್​ ಹಾಗೂ ಕಲಾಮಂಡಲ ಸಾಂಸ್ಕೃತಿಕ ಕಲೆಗಳನ್ನು ಆಧರಿಸಿದ ಸ್ತಬ್ಧಚಿತ್ರ ಪ್ರಸ್ತಾವವನ್ನು ಕೇರಳ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಕೇಂದ್ರ ಈ ನಡೆಯನ್ನು ಟೀಕಿಸಿರುವ ಕೇರಳ ರಾಜ್ಯದ ಕಾನೂನು ಸಚಿವ ಎ.ಕೆ.ಬಾಲನ್ ಅವರು ಇದೊಂದು ರಾಜಕೀಯ ಪ್ರೇರಿತ ನಿರ್ಧಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐದು ಸುತ್ತುಗಳ ಸಭೆ ಬಳಿಕ ತಜ್ಞರ ಸಮಿತಿ ನೀಡಿರುವ ವರದಿ ಆಧರಿಸಿ ಪಥಸಂಚಲನದಲ್ಲಿ ಭಾಗವಹಿಸಲಿರುವ 22 ಸ್ತಬ್ಧಚಿತ್ರಗಳ ಸಂಭವನೀಯ ಪಟ್ಟಿಯನ್ನು ರಕ್ಷಣಾ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದೆ.

ಇದನ್ನು ಓದಿ: ಸಿಎಎ ವಿರೋಧಿಸಿದ್ದಕ್ಕೆ ಪಶ್ಚಿಮಬಂಗಾಳದ ಗಣರಾಜ್ಯೋತ್ಸವ ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರ ಸರ್ಕಾರ; ಟಿಎಂಸಿ ಆರೋಪ

ಆಂಧ್ರಪ್ರದೇಶ, ಅಸ್ಸಾಂ. ಛತ್ತೀಸ್​ಗಢ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮೇಘಾಲಯ, ಒಡಿಶಾ, ಪಂಜಾಬ್, ರಾಜಸ್ಥಾನ್, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ ಇದರ ಜೊತೆಗೆ ಕೇಂದ್ರ ಸರ್ಕಾರದ ಹಡಗು ಮತ್ತು ಬಂದರು ಸಚಿವಾಲಯ, ಗೃಹ ನಿರ್ಮಾಣ  ಮತ್ತು ನಗರಾಭಿವೃದ್ಧಿ ಸಚಿವಾಲಯ, ರಾಷ್ಟ್ರೀಯ ನೈಸರ್ಗಿಕ ವಿಪತ್ತು ನಿರ್ವಹಣಾ ಪಡೆ (ಗೃಹ ಸಚಿವಾಲಯ), ಹಣಕಾಸು ಸೇವೆಗಳ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆ, ಕೈಗಾರಿಕೆ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆಗಳ ಸ್ತಬ್ಧಚಿತ್ರಗಳು ಈ ಬಾರಿಗೆ ಪಥಸಂಚಲನಕ್ಕೆ ಆಯ್ಕೆಯಾಗಿವೆ.
First published:January 4, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ