ಹೈದರಾಬಾದ್: ಗ್ರಾಮದಲ್ಲಿ ಒಂದಾದ ಮೇಲೊಂದರಂತೆ ಜನ ಪ್ರಾಣ ಕಳೆದುಕೊಳ್ಳುತ್ತಿದ್ದರೆ ಯಾರಿಗಾದರೂ ಭಯ ಉಂಟಾಗದೇ ಇರದು. ಯಾವ ಕಾರಣಕ್ಕೆ ಈ ಸಾವುಗಳು ಸಂಭವಿಸುತ್ತಿವೆ ಎನ್ನವುದೇ ತಿಳಿಯದಿದ್ದರೆ ನಿಜಕ್ಕೂ ಎಂತಹವರ ಮನದಲ್ಲೂ ಭಯ ದುಪ್ಪಟ್ಟಾಗುತ್ತದೆ. ತೆಲಂಗಾಣ (Telangana) ರಾಜ್ಯದ ನಲ್ಗೊಂಡ (Nalgonda) ಜಿಲ್ಲೆಯ ಹಳ್ಳಿಯೊಂದರ ಜನರಿಗೆ ಈಗ ಅಂತಹ ಪರಿಸ್ಥಿತಿ ಎದುರಾಗಿದೆ. ಸತತ ಸಂಭವಿಸುತ್ತಿರುವ ಸಾವುಗಳು ಸಹಜ ಸಾವೇ..? ಅನಾರೋಗ್ಯದ ಕಾರಣದಿಂದ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆಯೇ? ಅಥವಾ ಯಾವುದಾದರೂ ದುಷ್ಟಶಕ್ತಿಯಿಂದ ಜನರ ಹೃದಯ ಬಡಿತ ನಿಲ್ಲುತ್ತದೆಯೇ? ಎಂಬುದು ತಿಳಿಯದೇ ತಲೆಕೆಡಿಸಿಕೊಂಡಿದ್ದಾರೆ.
ಇದೀಗ ಏನೂ ಮಾಡಲಾಗದೆ ಕೊನೆಗೆ ಗ್ರಾಮಸ್ಥರೆಲ್ಲರೂ ಸೇರಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ನಕಿರೇಕಲ್ (Nakrekal) ಮಂಡಲದ ಚಂದುಪಟ್ಲ ಗ್ರಾಮದ ಎಲ್ಲಾ ಜನರು ಕೆಲವು ದಿನ ಊರು ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಾರೆ.
12 ದಿನಗಳಿಂದ ಊರಿನಲ್ಲಿ ಪ್ರತಿದಿನ ಸಾವು
ಪೂರ್ವಿಕರ ಹೇಳುವ ಪ್ರಕಾರ, ಒಂದು ಗ್ರಾಮವು ದುರಾದೃಷ್ಟದಿಂದ ಬಳಲುತ್ತಿದ್ದರೆ ಅಥವಾ ಅದು ದುಷ್ಟಶಕ್ತಿಗಳಿಂದ ಅಪಾಯ ಎದುರಿಸುತ್ತಿದ್ದರೆ, ಆ ಗ್ರಾಮದ ಜನರು ಬರ, ಬಡತನ ಅಥವಾ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ನಲ್ಗೊಂಡ ಜಿಲ್ಲೆಯ ನಗಿರೇಕಲ್ ಮಂಡಲದ ಚಂದುಪಟ್ಲ ಗ್ರಾಮದ ಸ್ಥಿತಿ ನೋಡಿದರೆ ಸದ್ಯಕ್ಕೆ ಬಹುತೇಕ ಇದೇ ಸ್ಥಿತಿ ನಿರ್ಮಾಣವಾಗಿದೆ. ಕಳೆದ 12 ದಿನಗಳಿಂದ ಗ್ರಾಮದಲ್ಲಿ ಪ್ರತಿದಿನ ಒಬ್ಬರು ಸಾಯುತ್ತಿದ್ದಾರೆ. ಜನವರಿ 21ರಂದು ಆರಂಭವಾದ ಮರಣಮೃದಂಗ ಫೆಬ್ರವರಿ ತಿಂಗಳಿಗೆ ಕಾಲಿಟ್ಟರೂ ನಿಂತಿಲ್ಲ. ಒಂದಲ್ಲ ಎರಡಲ್ಲ 12 ದಿನಗಳಲ್ಲಿ ಗ್ರಾಮದ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: 108 Variety Dishes: ಮೊದಲ ಸಲ ಮನೆಗೆ ಬಂದ ಅಳಿಯನಿಗೆ 108 ಬಗೆಯ ಖಾದ್ಯ ತಯಾರಿಸಿ ಬಡಿಸಿದ ಅತ್ತೆ!
ದೈವಶಕ್ತಿ, ದುಷ್ಟಶಕ್ತಿ ವಿಚಾರದಲ್ಲಿ ಒಬ್ಬೊಬ್ಬರಿಗೆ ಅವರದೇ ಆದ ನಂಬಿಕೆಗಳಿವೆ. ಇದೀಗ ಹಳ್ಳಿಯಲ್ಲಿ ಗ್ರಾಮಸ್ಥರು ತಮ್ಮೂರಿಗೆ ಏನಾದರೂ ಕೆಟ್ಟದ್ದು ಹಿಡಿದಿದೆ ಎಂದು ಭಾವಿಸಿದ್ದಾರೆ. ಹಾಗಾಗಿ ಗ್ರಾಮದ ಮುಖಂಡರ ಮಾರ್ಗದರ್ಶನದಂತೆ ಕೆಲವು ಸಮಯ ಊರು ಬಿಡುವ ನಿರ್ಧಾರ ತೆಗೆದಕೊಂಡಿದ್ದಾರೆ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಿಗೆ ಬೀಗ ಹಾಕಿ ಗ್ರಾಮದ ಹೊರವಲಯದಲ್ಲಿರುವ ವನವಾಸ ಮಾಡುತ್ತಿದ್ದಾರೆ.
ಸಂಜೆತನಕ ವನವಾಸ
ಗ್ರಾಮಸ್ಥರು ಮನೆಯಿಂದ ಹೊರಬಂದ ನಂತರ ಬೆಳಿಗ್ಗೆ 6 ರಿಂದ ಸಂಜೆ 5 ರವರೆಗೆ ಯಾರೂ ಗ್ರಾಮಕ್ಕೆ ಪ್ರವೇಶಿಸದಂತೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗ್ರಾಮಸ್ಥರಲ್ಲಿ ಒಬ್ಬರಾದ ಪಿ ಸೈದುಲು ತಿಳಿಸಿದ್ದಾರೆ. ಗ್ರಾಮಸ್ಥರಿಗೆ ಧೈರ್ಯ ತುಂಬುವುದು ಮತ್ತು ಅವರ ಮನಸ್ಸಿನಲ್ಲಿರುವ ಭಯವನ್ನು ಹೋಗಲಾಡಿಸುವುದು ಗ್ರಾಮದ ಹಿರಿಯರ ಆಶಯ ಎಂದು ಹೇಳಿದ್ದಾರೆ.
ಶಾಂತಿಗಾಗಿ ಪ್ರಾಣಿಬಲಿ
ಊರಿಗೆ ಹಿಡಿದಿರುವ ಪೀಡೆಯನ್ನು ಹೋಗಲಾಡಿಸುವ ಸಲುವಾಗಿ ಕೋಳಿ, ಮೇಕೆ ಬಲಿ ನೀಡಿ ಗ್ರಾಮ ದೇವತೆಗಳಿಗೆ ಶಾಂತಿ ಕೋರಿದ್ದಾರೆ. ಈ ಮೂಲಕ ತಮ್ಮ ಹಳ್ಳಿಗೆ ಹಿಡಿದಿರುವ ಪಿಡುಗು ದೂರಾಗಲಿ ಎಂದು ಬೇಡಿಕೊಳ್ಳುತ್ತೊದ್ದಾರೆ. ಇನ್ನು ಚಂದುಪಟ್ಲ ಗ್ರಾಮದ ಜನರು ಎದುರಿಸುತ್ತಿರುವ ಸಮಸ್ಯೆ ಮೇಲುನೋಟಕ್ಕೆ ಮೂಢನಂಬಿಕೆಗಳೆಂದು ಕಂಡು ಬಂದರೂ ಸಾವಿನ ಸಂಖ್ಯೆ ತಗ್ಗಿಸಲು ಅವರು ತೆಗೆದುಕೊಂಡಿರುವ ನಿರ್ಧಾರ ಗೌರವಿಸುವಂತದ್ದೆ.
ಇನ್ನು ಊರಿನಲ್ಲಿ ಇಂತಹ ಘಟನೆ ನಡೆದಿದ್ದರೂ ಇಲ್ಲಿಯವರೆಗೆ ಯಾವುದೇ ಸರ್ಕಾರಿ ಅಧಿಕಾರಿಗಳು ಭೇಟಿ ನೀಡಿರುವ ಬಗ್ಗೆ, ಅಥವಾ ಜನರ ಭಯವನ್ನು ಹೋಗಲಾಡಿಸುವ ಕುರಿತು ಜಾಗೃತಿ ಮೂಡಿಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ