ಮಹರಾಷ್ಟ್ರ: ವಿಧಾನಸಭೆಯಲ್ಲಿ ಸ್ಪೀಕರ್ ಭಾಸ್ಕರ್ ಜಾಧವ್ ಅವರೊಂದಿಗೆ ಅನುಚಿತವಾಗಿ ಹಾಗೂ ಕೆಟ್ಟದಾಗಿ ವರ್ತಿಸಿದ 12 ಬಿಜೆಪಿ ಶಾಸಕರನ್ನು ಸೋಮವಾರ (ಜುಲೈ 5)ರಂದು 1 ವರ್ಷಗಳ ಕಾಲ ಅಮಾನತು ಮಾಡಲಾಗಿದೆ ಎನ್ನುವ ನಿರ್ಣಯವನ್ನು ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಅನಿಲ್ ಪರಬ್ ಅವರು ಧ್ವನಿ ಮತದ ಮೂಲಕ ಸೋಮವಾರ ವಿಧಾನಸಭೆಯಲ್ಲಿ ಅಂಗೀಕರಿಸಿದರು.
ಅಮಾನತುಗೊಂಡ 12 ಸದಸ್ಯರು- ಸಂಜಯ್ ಕುಟೆ, ಆಶಿಶ್ ಶೆಲಾರ್, ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅತುಲ್ ಭಟ್ಖಾಲ್ಕರ್, ಪರಾಗ್ ಅಲವಾನಿ, ಹರೀಶ್ ಪಿಂಪಾಲೆ, ಯೋಗೇಶ್ ಸಾಗರ್, ಜೇ ಕುಮಾರ್ ರಾವತ್, ನಾರಾಯಣ್ ಕುಚೆ, ರಾಮ್ ಸತ್ಪುಟೆ ಮತ್ತು ಬಂಟಿ ಭಂಗ್ಡಿಯಾ. ಈ ಅಮಾನತು ನಿರ್ಧಾರವನ್ನು ವಿರೋಧಿಸಿ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸದಸ್ಯರು, ಪ್ರತಿಪಕ್ಷಗಳು ಸದನದ ವಿಚಾರಣೆಯನ್ನು ಬಹಿಷ್ಕರಿಸಲಿವೆ ಎಂದು ಹೇಳಿದರು.
ಇದು ನಮ್ಮ ಮೇಲೆ ಮಾಡಿರುವ ಸುಳ್ಳು ಆಪಾದನೆ ಹಾಗೂ ಬಿಜೆಪಿ ಶಾಸಕರ ಸಂಖ್ಯಾಬಲವನ್ನು ವಿಧಾನಸಭೆಯಲ್ಲಿ ಕುಗ್ಗಿಸುವ ಕೆಲಸ. ಪ್ರಮುಖ ವಿರೋಧ ಪಕ್ಷವಾದ ನಾವು ಸರ್ಕಾರದ ಹುಳುಕು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಓಬಿಸಿ ಕೋಟಾವನ್ನು ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಎಲ್ಲಿ ಧ್ವನಿ ಎತ್ತುತ್ತೇವೊ ಎಮದು ಹೆದರಿ ಈ ಕೆಲಸಕ್ಕೆ ಕೈ ಹಾಕಿದೆ ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಅಲ್ಲದೆ ಬಿಜೆಪಿ ಶಾಸಕರು ವಿಧಾನಸಭಾ ಅಧ್ಯಕ್ಷರ ಜೊತೆ ಅನುಚಿತವಾಗಿ ವರ್ತಿಸಲಿಲ್ಲ ಎಂದು ತಿಳಿಸಿದ್ದಾರೆ.
“ಶಿವಸೇನೆ ಶಾಸಕರು ನಿಂದನೀಯ ಪದಗಳನ್ನು ಬಳಸಿದ್ದಾರೆ. ನಾನು ನಮ್ಮ ಶಾಸಕರನ್ನು ಸ್ಪೀಕರ್ ಕೊಠಡಿಯಿಂದ ಹೊರಗೆ ಕರೆತಂದೆ "ಅಲ್ಲದೆ ಸದನದ ವಿರೋಧ ಪಕ್ಷದ ನಾಯಕ ಆಶಿಶ್ ಶೆಲಾರ್ ಕ್ಷಮೆಯಾಚಿಸಿದರು ಮತ್ತು ವಿಷಯ ಕೊನೆಗೊಂಡಿತ್ತು. ಮಾಜಿ ಮುಖ್ಯಮಂತ್ರಿ, ಜಾಧವ್ ಈ ನಿರ್ಧಾರವನ್ನು" ಏಕಪಕ್ಷೀಯವಾದುದು "ಎಂದು ಖಂಡಿಸಿದ್ದಾರೆ.
ಈ ವಿಷಯದ ಕುರಿತು ಮಾತನಾಡಿದ ಅಮಾನತುಗೊಂಡ ಬಿಜೆಪಿ ಶಾಸಕ ಅತುಲ್ ಭಟ್ಖಾಲ್ಕರ್, “ನಾನು ಕೂಡ ಅಲ್ಲಿ ಇರಲಿಲ್ಲ ಆದರೆ ನಾನು ಸರ್ಕಾರವನ್ನು ಯಾವಾಗಲೂ ಟೀಕಿಸುವ ಕಾರಣ ನನ್ನ ಹೆಸರನ್ನು ಸೇರಿಸಲಾಗಿದೆ. ಇದು ಕಪ್ಪು ದಿನ, ಪ್ರಜಾಪ್ರಭುತ್ವದ ನಾಚಿಕೆಗೇಡಿನ ದಿನ. ಇದು ನಮ್ಮ ಧ್ವನಿಯನ್ನು ಮೊಟಕುಗೊಳಿಸುವ ಪ್ರಯತ್ನ. ಆಡಳಿತ ಪಕ್ಷದವರು ನಮಗೆ ಹೆದೆರಿದ್ದಾರೆ".
ನಂತರ, ಅಮಾನತುಗೊಂಡ ಶಾಸಕರು ಸಂಜೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ರಾಜ ಭವನದಲ್ಲಿ ಭೇಟಿಯಾದರು, ಸರ್ಕಾರದ ಈ ನಿರ್ಧಾರದಲ್ಲಿ ತಾವು ಹಸ್ತಕ್ಷೇಪ ಮಾಡಬೇಕು ಎಂದು ಮನವಿ ಮಾಡಿದರು. "ಶಿವಸೇನೆಯವರು ಪ್ರಜಾಪ್ರಭುತ್ವವನ್ನು ಮಟ್ಟ ಹಾಕಲು ಹೊರಟಿದ್ದಾರೆ" ಎಂದು ದೂರಿದರು.
ರಾಜ್ಯ ವಿಧಾನಸಭೆ ಬಿಜೆಪಿಯ ಮುಖ್ಯ ಸಚೇತಕ ಆಶಿಶ್ ಶೆಲಾರ್ ನೇತೃತ್ವದಲ್ಲಿ ಶಾಸಕರು ನಾವು ಅನುಚಿತವಾಗಿ ವರ್ತಿಸಿಲ್ಲ ಎಂದು ಜ್ಞಾಪನಾ ಪತ್ರವನ್ನು ಸಲ್ಲಿಸಿದರು.
ಇದನ್ನೂ ಓದಿ: Mekedatu Project: ತಮಿಳುನಾಡು ಸಿಎಂ ವಿರುದ್ಧ ಬಿಎಸ್ವೈ ಕಿಡಿ; ಶೀಘ್ರದಲ್ಲೇ ಮೇಕೆದಾಟು ಯೋಜನೆ ಆರಂಭ
"ಅಸೆಂಬ್ಲಿಯಲ್ಲಿ ಮಂಡಿಸಲಾದ ನೂತನ ಒಬಿಸಿ ನಿರ್ಣಯದಲ್ಲಿನ ಹಲವಾರು ಸಮಸ್ಯೆಗಳು ಇವೆ. ಓಬಿಸಿಗಳ ರಾಜಕೀಯ ಕೋಟಾವನ್ನು ಮರುಸ್ಥಾಪಿಸಲು ಇದು ಸಹಾಯ ಮಾಡುವುದಿಲ್ಲ. ನಾವು ಈ ವಿಷಯದ ಬಗ್ಗೆ ಮಾತನಾಡಲು ಬಯಸಿದ್ದೇವೆ ಆದರೆ ನಮಗೆ ಅನುಮತಿ ಇಲ್ಲ "ಎಂದು ಬಿಜೆಪಿ ಆರೋಪಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ