ಒಂದು ಹಣ್ಣಲ್ಲಿ ಹುಳು ಇದ್ದರೆ ಕ್ರಮೇಣ ಆ ಹಣ್ಣು ಹಾಳಾಗುತ್ತಾ ಬರುತ್ತದೆ, ಹಾಗೆಯೇ ಹೂವು, ಬೆಳೆಗಳಿಗೆ ಹುಳ ಹಿಡಿದರೆ ಅವು ಕೂಡ ನಶಿಸುತ್ತಾ ಬರುತ್ತವೆ. ಇದೇ ರೀತಿ ಮಾನವರಲ್ಲೂ ಕೆಲ ನರಭಕ್ಷಕ ಹುಳ ಅಥವಾ ಬ್ಯಾಕ್ಟೀರಿಯಾದ ಸೋಂಕುಗಳಿದ್ದು, ಇವುಗಳು ಮನುಷ್ಯನಂತ ಮನುಷ್ಯನನ್ನೇ ಬಲಿ ಪಡೆದು ಬಿಡುತ್ತವೆ. ಹೌದು, ಮನುಷ್ಯರ ಮಾಂಸ ಭಕ್ಷಣೆ ಮಾಡುವ ಬ್ಯಾಕ್ಟೀರಿಯಾ (Bacteria) ವೈದ್ಯ ಲೋಕಕ್ಕೆ ಒಂದು ಸವಾಲಾಗಿದ್ದು, ಇಂತಹ ಹಲವು ಪ್ರಕರಣಗಳು ಸಾವಿನಿಂದ ಅಂತ್ಯ ಕಂಡಿವೆ. ಅಮೆರಿಕಾದಲ್ಲೂ ಈ ಕೆಟ್ಟ ಬ್ಯಾಕ್ಟೀರಿಯಾ 11 ವರ್ಷದ ಬಾಲಕನೊಬ್ಬನನ್ನು ಬಲಿ ಪಡೆದಿದೆ. ಯುಎಸ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿರುವಾಗ ಜೆಸ್ಸಿ ಬ್ರೌನ್ ಎಂಬ ಬಾಲಕ ಆಯತಪ್ಪಿ ಬಿದ್ದು ಗಂಭೀರ ಗಾಯಕ್ಕೆ ಒಳಗಾಗಿದ್ದನು. ಟ್ರೆಡ್‌ಮಿಲ್‌ನಿಂದ ಬಿದ್ದಿದ ರಭಸಕ್ಕೆ ಅವನ ಪಾದವೇ ತಿರುಚಿ ಹೋಗಿತ್ತು. ಇದೇ ಆಗಿದ್ದು, ಅಲ್ಲಿಂದ ಶುರುವಾದ ಬ್ಯಾಕ್ಟೀರಿಯಾದ ಸೋಂಕು ಪುಟ್ಟ ಹುಡಗನನ್ನೇ ಬಲಿ ಪಡೆದಿದೆ.
ಈ ಬಗ್ಗೆ ಮೃತ ಜೆಸ್ಸಿ ಬ್ರೌನ್ ಕುಟುಂಬವು ಫಾಕ್ಸ್ ನ್ಯೂಸ್‌ಗೆ ತಿಳಿಸಿದ್ದು, ಘಟನೆ ಬಗ್ಗೆ ವಿವರಿಸಿದ್ದಾರೆ. ಜೆಸ್ಸಿ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದ ನಂತರ ಹೇಗೋ ಅಲ್ಲೇ ಬಿದ್ದು, ಅವನ ಪಾದವೇ ತಿರುಗಿ ಹೋಗಿ ಗಂಭೀರ ಗಾಯವಾಗಿತ್ತು. ಈ ಗಾಯದ ನಡುವೆ ಮಾಂಸ ತಿನ್ನುವ ಸೋಂಕು ತಗುಲಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಮನುಷ್ಯನ ಮಾಂಸವನ್ನೇ ತಿನ್ನುವ ಹಲವು ಬ್ಯಾಕ್ಟೀರಿಯಾಗಳಿದ್ದು, ಇವುಗಳ ಸೋಂಕು ತಗುಲಿದರೆ ಪ್ರಾಣಾಪಾಯ ಖಂಡಿತ, ತಕ್ಷಣ ರೋಗವನ್ನು ಗುರುತಿಸಿ ಚಿಕಿತ್ಸೆ ನೀಡಿದರೆ ಉತ್ತಮ. ಇಲ್ಲದಿದ್ದರೆ ಈ ಸೋಂಕು ಚರ್ಮದ ಒಳಗೆ ಮಾಂಸವನ್ನು ಹಾನಿಗೊಳಿಸುತ್ತಾ ಬಂದು ನಂತರ ಸಾವಿಗೆ ಕಾರಣವಾಗುತ್ತದೆ.
ಜೆಸ್ಸಿ ಬ್ರೌನ್‌ನಲ್ಲಿ ಕಂಡು ಬಂದಿತ್ತು ಗ್ರೂಪ್ ಎ ಸ್ಟ್ರೆಪ್ ಸೋಂಕು
ಜೆಸ್ಸಿ ಬ್ರೌನ್ ವಿಷಯದಲ್ಲೂ ಹೀಗೆ ಆಗಿದ್ದು, ಕಾಲಿನ ಗಾಯದಿಂದ ಬಳಲುತ್ತಿದ್ದ ಜೆಸ್ಸಿಗೆ ಕೆಲವು ದಿನಗಳ ನಂತರ ಕಾಲು ಬಿರುಕು ಬಂದಿರುವುದು ಮತ್ತು ನೇರಳೆ, ಕೆಂಪು ಕಲೆಗಳು ಕಂಡು ಬಂದಿತ್ತು. ನಂತರ ವೈದ್ಯರನ್ನು ಭೇಟಿ ಮಾಡಿದಾಗ ಜೆಸ್ಸಿಗೆ ಎ ಗುಂಪಿನ ಸ್ಟ್ರೆಪ್ ಸೋಂಕು ತಗಲಿದ್ದು ತಿಳಿದು ಬಂದಿದೆ.
ಇದನ್ನೂ ಓದಿ: ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡುವುದರಲ್ಲೂ ಕಳ್ಳಾಟ, ಟರ್ಕಿ ನೀಡಿದ್ದ ಸಾಮಗ್ರಿಯನ್ನೇ ರೀಪ್ಯಾಕ್ ಮಾಡಿ ಕಳಿಸಿದ ಪಾಕ್!
ಇದೊಂದು ಮಾಂಸವನ್ನು ತಿನ್ನುವ ಬ್ಯಾಕ್ಟೀರಿಯಾವಾಗಿದೆ ಎಂದ ತಿಳಿಸಿದ ವೈದ್ಯರು ಜೆಸ್ಸಿಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಮೆರಿಕಾದಲ್ಲಿ 11 ವರ್ಷದ ಬಾಲಕ ಜೆಸ್ಸಿ ಬ್ರೌನ್ ಸಾವನ್ನಪ್ಪಿದ್ದಾನೆ.
ಏನಿದು ಗ್ರೂಪ್ ಎ ಸ್ಟ್ರೆಪ್ಟೋಕೊಕಸ್ (ಗ್ರೂಪ್ ಎ ಸ್ಟ್ರೆಪ್) ಬ್ಯಾಕ್ಟೀರಿಯಾ?
ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಂಡಾಗ. ಮಾನವ ದೇಹವು ಹಲವಾರು ರೀತಿಯ ಸ್ಟ್ರೆಪ್ಟೋಕೊಕಿಯಿಂದ ಸೋಂಕಿಗೆ ಒಳಗಾಗಬಹುದು. ಅವುಗಳಲ್ಲಿ ಈ ಗ್ರೂಪ್ ಎ ಸ್ಟ್ರೆಪ್ ಕೂಡ ಒಂದು.
ಸ್ಟ್ರೆಪ್ಟೋಕೊಕಸ್ ಎಂಬುದು ನಮ್ಮ ದೇಹದ ಮೇಲೆ ದಾಳಿ ಮಾಡುವ ಬ್ಯಾಕ್ಟೀರಿಯಾ. ಈ ಬ್ಯಾಕ್ಟೀರಿಯಂ ಸಾಮಾನ್ಯವಾಗಿ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶ ಮತ್ತು ಚರ್ಮದ ಲೋಳೆಯ ಪೊರೆಗಳ ಹೊರಹೊಮ್ಮುವ ಸೋಂಕುಗಳಿಗೆ ಕಾರಣವಾಗಿದೆ.
ಈ ಬ್ಯಾಕ್ಟೀರಿಯಾ, ಸೋಂಕಿತ ಜೀವಿಗಳ ಅಂಗಾಂಶಗಳನ್ನು ಭೇದಿಸುವ, ಗುಣಿಸುವ ಮತ್ತು ಹಾನಿ ಮಾಡುವ ಮತ್ತು ಅವರ ಮಾಂಸ ತಿನ್ನುವ ಭಕ್ಷಕಗಳಾಗಿವೆ. ಚಿಕಿತ್ಸೆಯನ್ನು ತ್ವರಿತವಾಗಿ ನೀಡದಿದ್ದರೆ, ಸ್ಟ್ರೆಪ್ಟೋಕೊಕಲ್ ಸೋಂಕು ಗಂಭೀರವಾದ ಸ್ವಯಂ ನಿರೋಧಕ ತೊಡಕುಗಳಿಗೆ ಮತ್ತು ಪ್ರಾಣಹಾನಿಗೆ ಕಾರಣವಾಗಬಹುದು.
ರೋಗ ಲಕ್ಷಣಗಳು
ದೇಹದ ಊತ
ಕೆಂಪಾಗುವಿಕೆ
ಗಂಟಲು ನೋವು
ಜ್ವರ
ಮೂತ್ರದ ಸೋಂಕು
ಈ ಬಗ್ಗೆ ಮಾತನಾಡಿದ ಅಮೆರಿಕಾದ ಮಕ್ಕಳ ವೈದ್ಯ ಡಾ. ಜೋನ್ಸ್ "ಬಹಳ ಅಪರೂಪದ ಸಂದರ್ಭಗಳಲ್ಲಿ, ಮಾಂಸ ತಿನ್ನುವ ಕಾಯಿಲೆಯಂತಹ ದ್ವಿತೀಯಕ ಸೋಂಕು ಉಂಟಾಗಬಹುದು.
ಈ ಸೋಂಕು ಈಗ ಯುಎಸ್‌ನಲ್ಲಿ ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ಬ್ಯಾಕ್ಟೀರಿಯಾವು ವಿವಿಧ ಸೋಂಕುಗಳಿಗೆ ಕಾರಣವಾಗಬಹುದು. ಈ ಸೋಂಕುಗಳು ಸಣ್ಣ ಕಾಯಿಲೆಗಳಿಂದ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಗಳವರೆಗೆ ಇರುತ್ತದೆ" ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ