ಕೋಲ್ಕತ್ತಾ (ಏಪ್ರಿಲ್ 20); ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಫುಲಿಯಾದಲ್ಲಿ ಸೋಮವಾರ ಮಧ್ಯಾಹ್ನ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಲು ನಿರಾಕರಿಸಿದ್ದಕ್ಕಾಗಿ 10 ವರ್ಷದ ಬಾಲಕನನ್ನು ಬಿಜೆಪಿ ಕಾರ್ಯಕರ್ತರೊಬ್ಬರು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಟೆಲೆಗ್ರಾಫ್ ಇಂಡಿಯಾ ವರದಿ ಮಾಡಿದೆ. ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡ 4 ನೇ ತರಗತಿ ವಿದ್ಯಾರ್ಥಿ ಮಹಾದೇವ್ ಶರ್ಮಾಗೆ ಅನೇಕ ಗಾಯಗಳಾಗಿದ್ದು, ರಣಘಾಟ್ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಆರೋಪಿ ಫುಲಿಯಾಪರಾದ ಚಹಾ ಅಂಗಡಿಯ ಮಾಲೀಕ ಮಹಾದೇಬ್ ಪ್ರಮಣಿಕ್ ಅವರನ್ನು ಥಳಿಸಿದ್ದಾರೆ. ಪ್ರತಿಭಟನಾಕಾರರು ಪ್ರಮಣಿಕ್ ಬಂಧನಕ್ಕೆ ಒತ್ತಾಯಿಸಿ ಎನ್‌ಎಚ್-12 ಹೆದ್ದಾರಿಯನ್ನು ಬಂದ್ ಮಾಡಿದ್ದರು.
ಸು-ಮೋಟು ಆಧಾರದ ಮೇಲೆ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಯನ್ನು ಬಂಧಿಸುವುದಾಗಿ ಪೊಲೀಸರು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು. ಬಿಜೆಪಿಯ ಮಹಿಳಾ ವಿಭಾಗದ ಸ್ಥಳೀಯ ಮುಖ್ಯಸ್ಥೆ ಮಿಥು ಪ್ರಮಣಿಕ್ ಅವರ ಪತಿ ಮಹಾದೇವ್ ಪ್ರಮಣಿಕ್ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾಲಕ ತೃಣಮೂಲ ಕಾಂಗ್ರೆಸ್ ಬೆಂಬಲಿಗನಾಗಿರುವ ಬಡಗಿಯೊಬ್ಬರ ಮಗ ಎಂದು ಪೊಲೀಸರು ಹೇಳಿದ್ದಾರೆ. “ಹುಡುಗ ಪ್ರಮಣಿಕ್ ಚಹಾ ಅಂಗಡಿ ಎದುರು ಹಾದುಹೋಗುತ್ತಿದ್ದ. ಹುಡುಗನ್ನು ಕರೆದ ಪ್ರಮಣಿಕ್, ಹುಡುಗನ ತಂದೆ ಟಿಎಂಸಿ ಬೆಂಬಲಿಸುತ್ತಿರುವುದನ್ನು ಉಲ್ಲೇಖಿಸಿ ನಿಂದಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಏಪ್ರಿಲ್ 17 ರಂದು ಇಲ್ಲಿ ನಡೆದ ಮತದಾನದ ಸಂದರ್ಭದಲ್ಲಿ ಬಾಲಕನ ತಂದೆ ಟಿಎಂಸಿ ಪರ ಕೆಲಸ ಮಾಡಿದ್ದಕ್ಕೆ ಪ್ರಮಣಿಕ್ ಕೆರಳಿದ್ದ ಎನ್ನಲಾಗಿದೆ.
ಆರೋಪಿ ಹುಡುಗನಿಗೆ ಬೆದರಿಕೆ ಹಾಕಿ ಜೈಶ್ರೀರಾಮ್ ಎಂದು ಜಪಿಸಲು ಒತ್ತಾಯ ಮಾಡಿದ. ಹುಡುಗ ಅದನ್ನು ನಿರಾಕರಿಸಿದನು” ಎಂದು ಆ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ ಎಂದು ಟೆಲೆಗ್ರಾಫ್ ಇಂಡಿಯಾ ವರದಿಯಲ್ಲಿ ಹೇಳಲಾಗಿದೆ.
ನಂತರ ಪ್ರಮಣಿಕ್ ಬಾಲಕನ ಮೇಲೆ ವಿಪರೀತವಾಗಿ ಹಲ್ಲೆ ನಡೆಸಿದ್ದಾನೆ. ಕೆಲವು ಗ್ರಾಮಸ್ಥರು ಸಹಾಯಕ್ಕಾಗಿ ಧಾವಿಸುವವರೆಗೂ ಬಾಲಕನಿಗೆ ಪ್ರಮಣಿಕ್ ಹೊಡೆದ ಎಂದು ವರದಿಯಾಗಿದೆ.
ಆಘಾತಕ್ಕೊಳಗಾಗಿದ್ದ ಬಾಲಕ ಆಸ್ಪತ್ರೆಯ ಹಾಸಿಗೆಯಿಂದ ಹೀಗೆ ಹೇಳಿದ್ದಾನೆ: “ಅವನು (ಪ್ರಮಣಿಕ್) ನಾನು‘ ಜೈ ಶ್ರೀ ರಾಮ್ ’ಎಂದು ಜಪಿಸಲು ಒತ್ತಾಯಿಸಿ ನನ್ನ ತಂದೆಯನ್ನು ನಿಂದಿಸುತ್ತಿದ್ದ. ನಾನು ನಿರಾಕರಿಸಿದಾಗ, ಅವನು ನನ್ನನ್ನು ಹೊಡೆಯಲು ಶುರು ಮಾಡಿದ ತದನಂತರ ನನ್ನನ್ನು ಒದೆಯತೊಡಗಿದ.. ಅದೃಷ್ಟವಶಾತ್, ಕೆಲವು ಸ್ಥಳೀಯರು ಸಹಾಯ ಮಾಡಲು ಧಾವಿಸಿದರು.
ಬಾಲಕನ ಮುಖ, ತಲೆ ಮತ್ತು ಬೆನ್ನಿಗೆ ಗಾಯಗಳಾಗಿವೆ ಮತ್ತು ಸಿ.ಟಿ ಸ್ಕ್ಯಾನ್‌ಗೆ ಸೂಚಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. "ಹುಡುಗ ಆಘಾತದಲ್ಲಿದ್ದಾನೆ, ಆದರೆ ವೈದ್ಯಕೀಯವಾಗಿ ಆರೋಗ್ಯ ಸ್ಥಿರವಾಗಿದೆ" ಎಂದು ವೈದ್ಯರೊಬ್ಬರು ಹೇಳಿದ್ದಾರೆ.
ಸ್ಥಳೀಯ ತೃಣಮೂಲ ಯುವ ವಿಭಾಗದ ನಾಯಕ ಪೀಟರ್ ಮುಖರ್ಜಿ, "ಕೆಲವು ಗ್ರಾಮಸ್ಥರು ಹುಡುಗನನ್ನು ಅರೆ ಪ್ರಜ್ಞೆಯ ಸ್ಥಿತಿಯಲ್ಲಿ ರಕ್ಷಿಸಿ ನನಗೆ ಮಾಹಿತಿ ನೀಡಿದರು. ನಾನು ತಕ್ಷಣ ಸ್ಥಳಕ್ಕೆ ಧಾವಿಸಿ ಆಸ್ಪತ್ರೆಗೆ ಕರೆದೊಯ್ದೆ. ಬಿಜೆಪಿ ಎಷ್ಟು ಕ್ರೂರವಾಗಬಹುದು ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿತು. ತಾಯಿಯನ್ನು ಕಳೆದುಕೊಂಡ 10 ವರ್ಷದ ಬಾಲಕನ್ನು ಅವರು ಬಿಡಲಿಲ್ಲ ಎಂದು ಊಹಿಸಲಾಗದು" ಎಂದಿದ್ದಾರೆ.
ಆರೋಪಿ ಪತ್ನಿ ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಮಿಥು ಪ್ರಮಣಿಕ್, ಈ ದಾಳಿಯನ್ನು ಒಪ್ಪಿಕೊಂಡಿದ್ದಾರೆ, ಆದರೆ ಹುಡುಗ ಪ್ರಚೋದನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
“ನನ್ನ ಪತಿ ಹುಡುಗನಿಗೆ ‘ಜೈ ಶ್ರೀ ರಾಮ್’ ಎಂದು ಜಪಿಸುವಂತೆ ಕೇಳಿದ್ದು ನಿಜ. ಆದರೆ ಹುಡುಗನು ಅವನಿಗೆ ತಿಳಿದಿರುವ ಕಾರಣ ಹಾಗೆ ಕೇಳಿದ್ದಾನೆ. ವಾಸ್ತವವಾಗಿ, ಅಂಗಡಿಯಲ್ಲಿದ್ದ ಕೆಲವು ಗ್ರಾಹಕರು, ಹುಡುಗ ನನ್ನ ಗಂಡ ‘ಜೈ ಬಾಂಗ್ಲಾ’ ಎಂದು ಜಪಿಸುವಂತೆ ಕೇಳಬೇಕು ಎಂದು ತಮಾಷೆ ಮಾಡಿದರು. ಆದರೆ ಆ ಹುಡುಗ ಕಲ್ಲು ಎತ್ತಿಕೊಂಡು ಅಂಗಡಿಯ ಮೇಲೆ ಎಸೆದು ಗಾಜಿನ ಪಾತ್ರೆಗಳನ್ನು ಒಡೆದ. ಇದು ನನ್ನ ಪತಿಗೆ ಕೋಪ ತರಿಸಿದ್ದರಿಂದ ಹೊಡೆದಿದ್ದಾನೆ’ ಎಂದು ಸಮರ್ಥಸಿಕೊಂಡಿದ್ದಾರೆ.
ಹುಡುಗನ ತಂದೆ, ಶ್ಯಾಮ್‌ಚಂದ್ ಶರ್ಮಾ, ತನ್ನ 10 ವರ್ಷದ ಮಗನನ್ನು ತನ್ನ ರಾಜಕೀಯ ಒಲವುಗಳಿಗಾಗಿ ಹಿಂಸಾಚಾರಕ್ಕೆ ಒಳಪಡಿಸಬಹುದೆಂದು ಊಹಿಸಿರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದ ಐದು ನಗರಗಳಲ್ಲಿ ಲಾಕ್ಡೌನ್ ಇಲ್ಲ; ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
"ಚುನಾವಣೆಯ ದಿನದಂದು ಬಿಜೆಪಿ ಕಾರ್ಯಕರ್ತರು ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರು, ಅದನ್ನು ನಾನು ಪ್ರತಿಭಟಿಸಿದೆ. ಆದ್ದರಿಂದ, ಅವರು ನನ್ನ ಮಗನ ಮೇಲೆ ಹಲ್ಲೆ ಮಾಡುವ ಮೂಲಕ ಸೇಡು ತೀರಿಸಿಕೊಂಡರು ಎಂದು ತೋರುತ್ತದೆ" ಎಂದು ಅವರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ