ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪದ ಮೇಲೆ 35 ವರ್ಷದ ವ್ಯಕ್ತಿಯನ್ನು ಗುರುವಾರ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಾಬಂಧನಕ್ಕಾಗಿ ಆರೋಪಿ ತನ್ನ ಸಹೋದರಿಯರನ್ನು ರಕ್ಷಾ ಬಂಧನದ ದಿನ ಭೇಟಿ ಮಾಡಲು ತೆರಳಿದ್ದ, ನಂತರ ಸೋಮವಾರ ಮುಂಜಾನೆ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ.
ಸಂತ್ರಸ್ತೆಯ ಬಗ್ಗೆ ಬಹಳ ದಿನಗಳಿಂದ ಆರೋಪಿ ತಿಳಿದಿದ್ದ. ಆಕೆಯ ಊರಿನಲ್ಲಿ ವಾಸವಿದ್ದ ಮದುವೆಯಾಗಿದ್ದ ತನ್ನ ಇಬ್ಬರು ಸಹೋದರಿಯರನ್ನು ಭೇಟಿ ಮಾಡಲು ಪದೇ ಪದೇ ತೆರಳುತ್ತಿದ್ದ ಕಾರಣ ಆರೋಪಿಯು ಹುಡುಗಿಗೆ ಪರಿಚಯವಿದ್ದ. ಅಲ್ಲದೇ ಆತ ಸುಮಾರು ಆರು ತಿಂಗಳು ಆ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂದು ಜೈಸ್ವಾಲ್ ಹೇಳಿದ್ದಾರೆ.
ಘಟನೆ ನಡೆದ ದಿನ ಆತ ಕುಡಿದ ಮತ್ತಿನಲ್ಲಿ ಬಾಲಕಿಯನ್ನು ತನ್ನೊಂದಿಗೆ ಬರುವಂತೆ ಆಮಿಷವೊಡ್ಡಿದ್ದ, ಆದರೆ ಬಾಲಕಿ ನಿರಾಕರಿಸಿದ್ದಳು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ ಬಾಲಕಿಯ ಮೃತದೇಹ ಕಾಲುವೆಯ ಬಳಿ ಪತ್ತೆಯಾಗಿದ್ದು, ಆಕೆಯ ಕುಟುಂಬದವರ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇನ್ನು ಬಾಲಕಿಯ ಶವ ಪರೀಕ್ಷೆ ವಿವರವಾಗಿ ನಡೆಯುತ್ತಿದ್ದು, ಪರೀಕ್ಷಾ ವರದಿಗಾಗಿ ಕಾಯುತ್ತಿದ್ದೇವೆ. ವರದಿಯ ನಂತರ ಮುಂದಿನ ನಿರ್ಧಾರ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಇನ್ನು ವರದಿಯ ನಂತರ ಅತ್ಯಾಚಾರವಾಗಿರುವುದನ್ನ ದೃಢಿಪಡಿಸಲಾಗುವುದು ಎಂದು ಹೇಳಿದರು. ಆರೋಪಿ ಸ್ಥಳೀಯ ನಿವಾಸಿಯಾಗಿದ್ದು, ಕ್ರಿಮಿನಲ್ ಇತಿಹಾಸ ಹೊಂದಿದ್ದಾನೆ. ಆತನ ವಿರುದ್ಧ ಹತ್ರಾಸ್ ಮತ್ತು ಪಶ್ಚಿಮ ಯುಪಿಯ ಇತರ ಭಾಗಗಳಲ್ಲಿ ಕನಿಷ್ಠ 11 ಎಫ್ಐಆರ್ ದಾಖಲಾಗಿದೆ. ಆತನ ಮೇಲೆ ಕಳ್ಳತನ, ಮದ್ಯ ಮತ್ತು ಮಾದಕವಸ್ತು ಮಾರಾಟ ಇತ್ಯಾದಿ ಪ್ರಕರಣಗಳಲ್ಲಿ ಆರೋಪಿ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 90ಕ್ಕೆ ಏರಿಕೆ; ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್
ಇನ್ನು ಈ ಪ್ರಕರಣದ ಎಫ್ಐಆರ್ ಅನ್ನು ಹತ್ರಾಸ್ ಜಂಕ್ಷನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಹಾಗೂ ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷವಷ್ಟೇ ಹತ್ರಾಸ್ ನಲ್ಲಿ ನಡೆದ ಅತ್ಯಾಚಾರ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿತ್ತು. ಸೆಪ್ಟೆಂಬರ್ 14, 2021ರಂದು ಹತ್ರಾಸ್ ಗ್ರಾಮದ ಯುವತಿಯು ತನ್ನ ಜಮೀನಿನಲ್ಲಿ ತಾಯಿಯೊಂದಿಗೆ ಮೇವು ತರಲು ಹೋಗಿದ್ದಾಗ ನಾಲ್ವರು ಆರೋಪಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಗಂಭೀರ ಗಾಯಗೊಂಡಿದ್ದ ಯುವತಿಯನ್ನು ದೆಹಲಿಯ ಸಫ್ದಾರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಯುವತಿ ಮೃತಪಟ್ಟಿದ್ದಳು. ನಂತರ ರಾತ್ರೋರಾತ್ರಿ ಪೊಲೀಸರು ಯುವತಿಯ ಅಂತ್ಯ ಸಂಸ್ಕಾರವನ್ನು ಕುಟುಂಬದವರ ಒಪ್ಪಿಗೆಯಿಲ್ಲದೇ ನಡೆಸಿದ್ದು ಭಾರೀ ಅನುಮಾನಗಳನ್ನು ಸೃಷ್ಟಿಸಿತ್ತು.
ಅಲ್ಲದೇ, ಈ ಪ್ರಕರಣ ದೇಶದಲ್ಲಿ ಸಂಚಲನ ಮೂಡಿಸಿ, ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿತ್ತು. ಅಲ್ಲದೇ ಈ ಪ್ರಕರಣದಿಂದ ಉತ್ತರ ಪ್ರದೇಶ ಸರ್ಕಾರ ಮುಜುಗರವನ್ನು ಅನುಭವಿಸುವಂತೆ ಆಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ