ಲಕ್ನೋ: ಮೂಢನಂಬಿಕೆಯಿಂದ (Superstition) ಅನಾರೋಗ್ಯಕ್ಕೆ ಒಳಗಾಗಿದ್ದ ತನ್ನ ಮಗನನ್ನು ಗುಣಪಡಿಸಿಕೊಳ್ಳಲು ವ್ಯಕ್ತಿಯೊಬ್ಬ ತನ್ನ ಸೋದರ ಸಂಬಂಧಿಯನ್ನೇ ನರಬಲಿ ಕೊಟ್ಟಿರುವ (Human Sacrifice) ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಬಹ್ರೀಚ್‌ನಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಾಲಕನ ಚಿಕ್ಕಪ್ಪ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಹ್ರೀಚ್‌ನ ಪರ್ಸಾ ಗ್ರಾಮದ ನಿವಾಸಿ ಕೃಷ್ಣ ವರ್ಮಾ ಎಂಬುವವರ 10 ವರ್ಷದ ಮಗ ವಿವೇಕ್ ಗುರುವಾರ ರಾತ್ರಿ ಕಾಣೆಯಾಗಿದ್ದ. ಹುಡುಕಾಡಿದಾಗ ಅದೇ ರಾತ್ರಿ ಹೊಲದಲ್ಲಿ ಬಾಲಕನ ಶವ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ವರ್ಮಾ ತಿಳಿಸಿದ್ದಾರೆ.
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಗು
ಮೃತ ಬಾಲಕನ ಸೋದರ ಸಂಬಂಧಿ ಅನೂಪ್ ಎಂಬಾತನಿಗೆ ಎರಡೂವರೆ ವರ್ಷದ ಮಗನಿದ್ದು, ಆ ಮಗು ಮಾನಸಿಕ ಅಸ್ವಸ್ಥತೆ ಹಾಗೂ ಆನಾರೋಗ್ಯದಿಂದ ಬಳಲುತ್ತಿತ್ತು. ಅನೂಪ್ ಮಗುವನ್ನು ಹಲವು ಆಸ್ಪತ್ರೆಗಳಲ್ಲಿ ತೋರಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ವೈದ್ಯಕೀಯ ಚಿಕಿತ್ಸೆಯಿಂದ ಯಾವುದೇ ಪ್ರಯೋಜನವಾಗದ ಕಾರಣ ಅನೂಪ್ ತಮ್ಮ ಊರಿನ ಪಕ್ಕದಲ್ಲಿದ್ದ ಮಂತ್ರವಾದಿಯನ್ನು ಭೇಟಿ ಮಾಡಿ ಪರಿಹಾರ ಕೇಳಿದ್ದಾನೆ.
ಚಿಕ್ಕಪ್ಪನ ನೆರವಿನಿಂದ ಬಲಿ
ಮಗು ಗುಣಮುಖವಾಗಬೇಕೇಂದರೆ ಆರೋಗ್ಯವಂತ ಬಾಲಕನನ್ನು ಬಲಿ ಕೊಡಬೇಕೆಂದು ಮಂತ್ರವಾದಿ ಅನೂಪ್ಗೆ ಹೇಳಿದ್ದಾನೆ. ನಂತರ ಅನೂಪ್, ಚಿಂತಾರಾಮ್ ಎಂಬುವವನ ಸಹಾಯ ಪಡೆದು ವಿವೇಕ್ನನ್ನು ಕಿಡ್ನಾಪ್ ಮಾಡಿದ್ದಾನೆ. ಈ ಚಿಂತಾರಾಮ್ ಬಾಲಕ ವಿವೇಕ್ನ ಸ್ವಂತ ಚಿಕ್ಕಪ್ಪ ಎಂದು ತಿಳಿದುಬಂದಿದೆ. ನಂತರ ಇಬ್ಬರು ಸೇರಿ ಬಾಲಕನನ್ನು ಗುದ್ದಲಿಯಿಂದ ಕುತ್ತಿಗೆಗೆ ಹೊಡೆದು ಕೊಂದಿದ್ದಾರೆ.
ಇದನ್ನೂ ಓದಿ: Explained: ದೇವರ ನಾಡಿನ ನರಭಕ್ಷಕರು! ಇದು ರಿಯಲ್ ‘ನೀಲಾಂಬರಿ’ ಕಥೆ!
ಮೂವರು ಆರೋಪಿಗಳ ಬಂಧನ
ನರಬಲಿ ಪ್ರಕರಣದಲ್ಲಿ ಮೃತ ಬಾಲಕನ ಚಿಕ್ಕಪ್ಪ ಚಿಂತಾರಾಮ್, ಸೋದರ ಸಂಬಂಧಿ ಅನೂಪ್ ಹಾಗೂ ಮಂತ್ರವಾದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ನಿಧಿ ಆಸೆಗೆ 9 ವರ್ಷದ ಬಾಲಕ ಕೊಲೆ
ಇದೇ ರೀತಿಯ ದಾರುಣ ಘಟನೆ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿ ಜಿಲ್ಲೆಯಲ್ಲಿ ಜನವರಿಯಲ್ಲಿ ನಡೆದಿತ್ತು. ನಿಧಿ ಆಸೆಗೆ 9 ವರ್ಷದ ಬಾಲಕನನ್ನು ಕಿಡ್ನ್ಯಾಪ್ ಮಾಡಿ ನಂತರ ನರಬಲಿ ಕೊಡಲಾಗಿತ್ತು. ಬಾಲಕನ ದೇಹವನ್ನು ಛಿದ್ರ ಛಿದ್ರ ಮಾಡಲಾಗಿತ್ತು. ದೇಹದ ಭಾಗಗಳನ್ನು ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದರು. ಈ ಪ್ರಕರಣ ಸಂಬಂಧ ತನಿಖೆ ನಡೆಸಲು 100 ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಅಪಹರಣ ಪ್ರಕರಣ ದಾಖಲು
ಡಿಸೆಂಬರ್ 29 ರಂದು ಡಿಎನ್‌ಎಚ್ ಜಿಲ್ಲೆಯ ಸೈಲಿ ಗ್ರಾಮದಿಂದ ಒಂಬತ್ತು ವರ್ಷದ ಬಾಲಕ ನಾಪತ್ತೆಯಾಗಿದ್ದನು. ಇದಾದ ನಂತರ ಡಿಸೆಂಬರ್ 30 ರಂದು ಸಿಲ್ವಾಸ್ಸಾ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು. ಬಾಲಕನ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿತ್ತು. ನಂತರ ಬಾಲಕನಿಗೆ ಹೊಂದಿಕೆಯಾಗುವ ತಲೆಯಿಲ್ಲದ ದೇಹವು DNHನ ಜಿಲ್ಲಾ ಕೇಂದ್ರವಾದ ಸಿಲ್ವಾಸಾದಿಂದ 30 ಕಿಮೀ ದೂರದಲ್ಲಿರುವ ವಾಪಿಯಲ್ಲಿ ಕಂಡು ಬಂದಿದೆ.
ಇದನ್ನೂ ಓದಿ: Crime News: ನಿಧಿ ಆಸೆಗೆ 9 ವರ್ಷದ ಬಾಲಕನ ಕಿಡ್ನಾಪ್; ತಲೆ ಕತ್ತರಿಸಿ, ಬಲಿ ಕೊಟ್ಟ ಪಾಪಿಗಳು!
ಆರೋಪಿಗಳ ವಿರುದ್ಧ ಕೊಲೆ ಕೇಸ್
ತನಿಖೆಯ ವೇಳೆ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದ್ದು, 2022ರ ಡಿಸೆಂಬರ್ 29 ರಂದು ಸೈಲಿ ಗ್ರಾಮದಿಂದ ಬಾಲಕನನ್ನು ಕರೆದೊಯ್ದು ಬಳಿಕ, ಆರೋಪಿ ತನ್ನ ಸಹಚರನ ಸಹಾಯದಿಂದ ನರಬಲಿಯಾಗಿ ನೀಡಿರುವುದಾಗಿ ತಪ್ಪೋಪ್ಪಿಕೊಂಡಿದ್ದ. ಆತ ಮತ್ತು ಆತನ ಕಾರು ಚಾಲಕನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ