ಛತ್ತೀಸ್‌ಗಢ: ಛತ್ತೀಸ್ಗಢದಲ್ಲಿ (Chhattisgarh) ಮತ್ತೆ ನಕ್ಸಲರ ಅಟ್ಟಹಾಸ (Naxal Attack) ಮುಂದುವರಿದಿದ್ದು, ಪೊಲೀಸರು (Police) ಸೇರಿದಂತೆ 11 ಜನರು ಹುತಾತ್ಮರಾಗಿರುವ ಘಟನೆ ಬುಧವಾರ ನಡೆದಿದೆ. ದುರ್ಘಟನೆಯಲ್ಲಿ 10 ಜನ ಭದ್ರತಾ ಸಿಬ್ಬಂದಿ ಹಾಗೂ ಒಬ್ಬರು ಚಾಲಕ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಐಇಡಿ (Improvised Explosive Device) ಸ್ಫೋಟ ನಡೆಸಿ ನಕ್ಸಲರು 11ರ ಮಂದಿಯ ಸಾವಿಗೆ ಕಾರಣರಾಗಿದ್ದಾರೆ ಎಂದು ತಿಳಿದುಬಂದಿದೆ.
ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಮಾವೋವಾದಿಗಳು ಇಟ್ಟಿದ್ದ ನೆಲಬಾಂಬ್ ಸ್ಫೋಟಗೊಂಡ ಪರಿಣಾಮ 11 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರೆಲ್ಲರೂ ಡಿಆರ್‌ಜಿ ವಿಭಾಗಕ್ಕೆ ಸೇರಿದ ಪೊಲೀಸರು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: Pakistan: ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: 2 ಸ್ಫೋಟ 12 ಸಾವು!
ದಾಂತೇವಾಡ ಜಿಲ್ಲೆಯ ಅರನ್‌ಪುರ ಬಳಿ ಡಿಆರ್‌ಜಿ (ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್) ಸಿಬ್ಬಂದಿಯನ್ನು ಸಾಗಿಸುತ್ತಿದ್ದ ವಾಹನದ ಮೇಲೆ ನಕ್ಸಲರು ಐಇಡಿ ಬಳಸಿ ಸ್ಪೋಟಿಸಿದ್ದಾರೆ. ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಪೊಲೀಸರು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆದಿದೆ ಎಂದು ವರದಿಯಾಗಿದೆ. ಇದಲ್ಲದೇ ಮಾವೋವಾದಿಗಳು ಜವಾನರ ಪಿಕ್ ಅಪ್ ವಾಹನವನ್ನು ಸ್ಫೋಟಿಸಿದ್ದಾರೆ. ಇದರಿಂದ ಕೆಲವು ಯೋಧರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸದ್ಯಕ್ಕೆ ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ 11 ಪೊಲೀಸರು ಹುತಾತ್ಮರಾಗಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಪ್ರದೇಶ ದಂತೇವಾಡ ಜಿಲ್ಲೆಯ ಅರನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ.
ನಕ್ಸಲರನ್ನು ಸುಮ್ಮನೆ ಬಿಡುವ ಪ್ರಶ್ನೆ ಇಲ್ಲ
11 ಮಂದಿ ಜೀವ ತೆಗೆದಿರುವ ನಕ್ಸಲೀಯರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಮತ್ತು ನಕ್ಸಲಿಸಂ ನಿರ್ಮೂಲನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ಹುತಾತ್ಮರಾಗಿರುವ ಸುದ್ದಿ ನನಗೆ ಅಪಾರ ದುಃಖ ತಂದಿದೆ. ಹುತಾತ್ಮ ಯೋಧರ ಕುಟುಂಬಗಳಿಗೆ ತಮ್ಮ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.
ನಕ್ಸಲರ ವಿರುದ್ಧದ ಈ ಹೋರಾಟ ಕೊನೆಯ ಹಂತದಲ್ಲಿದೆ. ಯಾವುದೇ ಸಂದರ್ಭದಲ್ಲೂ ನಕ್ಸಲರನ್ನು ಬಿಡುವುದಿಲ್ಲ ಎಂದರು. ಯೋಜನಾಬದ್ಧವಾಗಿ ನಕ್ಸಲಿಸಂ ನಿರ್ಮೂಲನೆ ಮಾಡಲಾಗುವುದು ಎಂದಿದ್ದಾರೆ.
ಕೇಂದ್ರ ಸರ್ಕಾರ ಸಂಪೂರ್ಣ ನೆರವು
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸಗಡ ಸಿಎಂ ಬಾಘೇಲ್ ಜೊತೆ ಮಾತನಾಡಿದ್ದು, ದಾಳಿಯ ವಿವರ ಕೇಳಿದ್ದಾರೆ. ಈ ವಿಚಾರದಲ್ಲಿ ಛತ್ತೀಸಗಢ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡುವ ಭರವಸೆ ಕೊಟ್ಟಿದ್ದಾರೆ. ಛತ್ತೀಸಗಢ ಐಜಿ ಸುಂದರರಾಜ್ ಅವರು ದಾಳಿ ಕುರಿತಂತೆ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Union Home Minister Amit Shah speaks with Chhattisgarh CM Bhupesh Baghel over the naxal attack that claimed lives of 10 DRG (District Reserve Guard) personnel and one driver, in Dantewada.
(file pics) pic.twitter.com/tP55CSj5qu
— ANI (@ANI) April 26, 2023
ಸ್ಥಳೀಯ ಬುಡಕಟ್ಟು ಜನರಿರುವ ಡಿಆರ್‌ಜಿ
ಜಿಲ್ಲಾ ಮೀಸಲು ಕಾವಲು (ಡಿಆರ್‌ಜಿ) ಮಾವೋವಾದಿಗಳನ್ನು ಹತ್ತಿಕ್ಕುವ ಸಲುವಾಗಿಯೇ ಛತ್ತೀಸಗಡ ಪೊಲೀಸ್ ಇಲಾಖೆ ರೂಪಿಸಿರುವ ವಿಶೇಷ ತಂಡವಾಗಿದೆ. ಇದರಲ್ಲಿ ಬಹುತೇಕ ಸ್ಥಳೀಯ ಬುಡಕಟ್ಟು ಜನರೇ ಇದ್ದಾರೆ. ನಕ್ಸಲರು ಅಡಗಿರುವ ಅರಣ್ಯ ಪ್ರದೇಶಗಳ ಭೌಗೋಳಿಕ ಸನ್ನಿವೇಶಗಳ ಬಗ್ಗೆ ತಿಳಿವಳಿಕೆ ಇರುವ ಬುಡಕಟ್ಟು ಜನರಿಗೆ ತರಬೇತಿ ನೀಡಿ ಡಿಆರ್‌ಜಿ ಪಡೆಗಳಿಗೆ ಸೇರಿಸಿಕೊಳ್ಳಲಾಗುತ್ತದೆ. ಎಡಪಂಥೀಯ ಉಗ್ರವಾದದ ಪ್ರಮುಖ ನೆಲೆಯಾಗಿರುವ ಬಸ್ಟಾರ್‌ನಲ್ಲಿ ಬಂಡುಕೋರರ ವಿರುದ್ಧ ಡಿಆರ್‌ಜಿ ಅನೇಕ ಬಾರಿ ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ