ಮಹಾರಾಷ್ಟ್ರದಲ್ಲಿ ಮಕ್ಕಳ ಸಾವು ಪ್ರಕರಣ; ತನಿಖೆಗೆ ಆದೇಶಿಸಿದ ಸಿಎಂ; ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಅಮಿತ್ ಶಾ, ರಾಹುಲ್ ಗಾಂಧಿ

ಸಿಎಂ ಉದ್ದವ್​ ಠಾಕ್ರೆ ಮೃತಪಟ್ಟ ನವಜಾತ ಶಿಶುಗಳ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಪರಿಹಾರವನ್ನು ಘೋಷಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ಅವರು ಭಂಡಾರಾ ಜಿಲ್ಲಾಸ್ಪತ್ರೆಗೆ ಭೇಟಿ ನೀಡಲಿದ್ದಾರೆ.

ಭಂಡಾರಾ ಆಸ್ಪತ್ರೆಯ ದೃಶ್ಯ

ಭಂಡಾರಾ ಆಸ್ಪತ್ರೆಯ ದೃಶ್ಯ

 • Share this:
  ಮಹಾರಾಷ್ಟ್ರ(ಜ.09): ಮಹಾರಾಷ್ಟ್ರದ ಭಂಡಾರಾ ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಇಂದು 10 ಹಸುಗೂಸುಗಳು ಸಾವನ್ನಪ್ಪಿರುವ ಘಟನೆಗೆ ಮಹಾ ಸಿಎಂ ಉದ್ಧವ್​ ಠಾಕ್ರೆ ವಿಷಾದ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಘಟನೆ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ. ಸಂಪೂರ್ಣ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿ ತನಿಖೆ ನಡೆಸುವಂತೆ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ತೋಪ್ ಅವರಿಗೆ ಸಿಎಂ ಸೂಚಿಸಿದ್ದಾರೆ. ಇಷ್ಟೇ ಅಲ್ಲದೇ, ಜಿಲ್ಲಾಧಿಕಾರಿ ಮತ್ತು ಎಸ್​ಪಿಗೆ ಈ ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಿಎಂ ಉದ್ಧವ್ ಠಾಕ್ರೆ ಸೂಚಿಸಿದ್ದಾರೆ.

  ಇನ್ನು, ಸಿಎಂ ಉದ್ದವ್​ ಠಾಕ್ರೆ ಮೃತಪಟ್ಟ ನವಜಾತ ಶಿಶುಗಳ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಪರಿಹಾರವನ್ನು ಘೋಷಿಸಿದ್ದಾರೆ. ಇಂದು ಸಂಜೆ 5 ಗಂಟೆಗೆ ಅವರು ಭಂಡಾರಾ ಜಿಲ್ಲಾಸ್ಪತ್ರೆಗೆ ಭೇಟಿ ನೀಡಲಿದ್ದಾರೆ.

  ನವಜಾತ ಶಿಶುಗಳ ದುರ್ಮರಣ ಘಟನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ಮಹಾರಾಷ್ಟ್ರದ ಭಂಡಾರಾ ಜಿಲ್ಲಾಸ್ಪತ್ರೆಯಲ್ಲಿ ನಡೆದ ಘಟನೆ ಅತ್ಯಂತ ದುರಂತ ಮತ್ತು ದುರದೃಷ್ಟಕರ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತಿದ್ದೇನೆ. ಕಂದಮ್ಮಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಸೂಕ್ತ ಮತ್ತು ಅಗತ್ಯ ಪರಿಹಾರ ನೀಡುವಂತೆ ನಾನು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಕೂಡ ಭಂಡಾರಾ ಜಿಲ್ಲಾಸ್ಪತ್ರೆಯ ದುರಂತಕ್ಕೆ ಕಂಬನಿ ಮಿಡಿದಿದ್ದಾರೆ. ನಾವು ನವಜಾತ ಶಿಶುಗಳನ್ನು ಕಳೆದುಕೊಂಡಿದ್ದೇವೆ. ಘಟನೆಯಲ್ಲಿ ಸಾವನ್ನಪ್ಪಿದ ಮಕ್ಕಳ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಇನ್ನು ದುರಂತದಲ್ಲಿ ಗಾಯಗೊಂಡಿರುವ ಮಕ್ಕಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಂಡಾರಾ ಜಿಲ್ಲಾಸ್ಪತ್ರೆಯ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. ಇದು ಅತ್ಯಂತ ದುರದೃಷ್ಟಪರ ಘಟನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.  ಮಹಾರಾಷ್ಟ್ರದ ಭಂಡಾರಾ ಜಿಲ್ಲಾಸ್ಪತ್ರೆಯಲ್ಲಿ ಇಂದು ಬೆಂಕಿ ಅವಘಡ ಸಂಭವಿಸಿ ಸುಮಾರು 10 ನವಜಾತ ಶಿಶುಗಳು ಸಾವನ್ನಪ್ಪಿವೆ. ಆಸ್ಪತ್ರೆಯ ವಿಶೇಷ ನವಜಾತ ಶಿಶುಗಳ ಶುಶ್ರೂಷ ಘಟಕದಲ್ಲಿ ಈ ದುರಂತ ಸಂಭವಿಸಿದೆ. ಅವಘಡದಲ್ಲಿ ಮೃತಪಟ್ಟ ಎಲ್ಲಾ ಮಕ್ಕಳೂ ಸಹ 1-3 ತಿಂಗಳೊಳಗಿನವು ಎಂದು ವೈದ್ಯರು ತಿಳಿಸಿದ್ದಾರೆ.

  ಇಂದು ಭಂಡಾರಾ ಜಿಲ್ಲಾಸ್ಪತ್ರೆಯಲ್ಲಿ ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ದುರಂತ ನಡೆದ ನವಜಾತ ಶಿಶುಗಳ ಶುಶ್ರೂಷ ಘಟಕದಲ್ಲಿ ಒಟ್ಟು 17 ಹಸುಗೂಸುಗಳನ್ನು ಇಡಲಾಗಿತ್ತು. ಅವುಗಳಲ್ಲಿ ಬೆಂಕಿ ಅವಘಡದಲ್ಲಿ 10 ಮಕ್ಕಳು ಅಸುನೀಗಿದರೆ, ಇನ್ನು 7 ಹಸುಗೂಸುಗಳನ್ನು ರಕ್ಷಿಸಲಾಗಿದೆ.
  Published by:Latha CG
  First published: