ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಜಿ 20 (G 20) ಕಾರ್ಯಕ್ರಮಕ್ಕಾಗಿ ಅಳವಡಿಸಲಾಗಿದ್ದ ಐಷಾರಾಮಿ ಹೂ ಕುಂಡಗಳನ್ನು (Flower Pots) ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು (Delhi Police) ಪೊಲೀಸರು ಬಂಧಿಸಿದ್ದಾರೆ. ಐಷಾರಾಮಿ ಕಾರ್‌ನಲ್ಲಿ ಬಂದಿದ್ದ ಇಬ್ಬರು ಕಳ್ಳರು ರಸ್ತೆ ಬದಿಯಲ್ಲಿ ಇರಿಸಲಾಗಿದ್ದ ಬಣ್ಣ ಬಣ್ಣದ ದುಬಾರಿ ಬೆಲೆಯುಳ್ಳ ಹೂ ಕುಂಡಗಳನ್ನು ಕಳ್ಳತನ (Theft Case) ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಘಟನೆ ಸೋಮವಾರ ಹಾಡಹಗಲೇ ನಡೆದಿದ್ದು, ದೆಹಲಿ- ಗುರುಗ್ರಾಮ್ ಎಕ್ಸ್‌ಪ್ರೆಸ್‌ವೇನಲ್ಲಿ ಇರುವ ಆಂಬಿಯೆನ್ಸ್ ಮಾಲ್‌ನ ಮುಂಭಾಗದಲ್ಲಿ ಇರಿಸಲಾಗಿದ್ದ ಹೂವಿನ ಕುಂಡಗಳನ್ನು ಕಾರ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ತಮ್ಮ ಕಾರ್‌ನಲ್ಲಿ ತುಂಬಿಸಿಕೊಂಡು ಹೋಗಿದ್ದರು. ಯಾರೋ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋವನ್ನು ಗಮನಿಸಿದ ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಯಾದವ್ ಅವರು ದೂರು ದಾಖಲಿಸಿ ತನಿಖೆ ನಡೆಸುವಂತೆ ಗುರುಗ್ರಾಮ್ ಪೊಲೀಸರಿಗೆ ಸೂಚನೆ ನೀಡಿದ್ದರು.
ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಗುರುಗ್ರಾಮ್ ಪೊಲೀಸರು ಗಾಂಧಿ ನಗರ ನಿವಾಸಿ ಮನಮೋಹನ್ ಎಂಬಾನನ್ನು ವಿಚಾರಣೆ ನಡೆಸಿದ ಬಳಿಕ ಆತನನ್ನು ಬಂಧಿಸಿದ್ದಾರೆ. ಆದರೆ ಆತನ ಜೊತೆಗಿದ್ದ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಶೋಧ ನಡೆಯುತ್ತಿದೆ. ಬಂಧಿತ ಆರೋಪಿ ಮನಮೋಹನ್‌ನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೂರ್ವನಿರ್ಧರಿತ ಕಳ್ಳತನ?
ಅಂದ ಹಾಗೆ ಈ ಮೊದಲೇ ಹೂವಿನ ಕುಂಡಗಳನ್ನು ಆರೋಪಿಗಳು ನೋಡಿರಲಿಲ್ಲ. ಹಾಗಾಗಿ ಅವರು ಮುಂಚಿತವಾಗಿ ಪ್ಲಾನ್ ಕಳ್ಳತನಕ್ಕೆ ಸ್ಕೆಚ್ ಹಾಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ತಮ್ಮ ಕಾರ್‌ನಲ್ಲಿ ದಿಢೀರನೇ ಬಂದಿದ್ದ ಆರೋಪಿಗಳು ಒಟ್ಟು 10 ಐಷಾರಾಮಿ ಹೂವಿನ ಕುಂಡಗಳನ್ನು ಕಳ್ಳತನ ಮಾಡಿದ್ದಾರೆ. ಸದ್ಯ ಕಳ್ಳತನ ಆಗಿರುವ ಸೊತ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಆರೋಪಿಗಳು ಬಳಸಿದ ಕಾರ್ ಹರ್ಯಾಣದ ಹಿಸಾರ್‌ನ ನಂಬರ್ ಪ್ಲೇಟ್ ಹೊಂದಿದ್ದು, ಮನಮೋಹನ್‌ನ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನಮೋಹನ್ ಮತ್ತು ಆತನ ಜತೆಗಾರ ದಿಲ್ಲಿಯಿಂದ ಗುರುಗ್ರಾಮಕ್ಕೆ ಮರಳುತ್ತಿದ್ದರು. ಆಗ ರಸ್ತೆ ಬದಿಯಲ್ಲಿ ಯಾವ ರಕ್ಷಣೆಯೂ ಇಲ್ಲದೆ ಇರಿಸಲಾಗಿದ್ದ ಹೂವಿನ ಕುಂಡಗಳನ್ನು ಕಂಡು, ಕಾರು ನಿಲ್ಲಿಸಿದ್ದರು. ಬಳಿಕ ತಮಗೆ ಬೇಕಾದ ಕುಂಡಗಳನ್ನು ಆಯ್ದುಕೊಂಡು ಕಾರಿನಲ್ಲಿ ಇರಿಸಿ ಕೊಂಡೊಯ್ದಿದ್ದಾರೆ ಎಂದು ಪ್ರಕರಣದ ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ.
ಇದೇ ಮಾರ್ಚ್ 1 ರಿಂದ 4ರವರೆಗೂ ಜಿ20ಗೆ ಸಂಬಂಧಿಸಿದ ಸರಣಿ ಸಭೆಗಳು ನಡೆಯುತ್ತಿದ್ದು, ಅದಕ್ಕಾಗಿ ದೆಹಲಿಯ ಅನೇಕ ಸ್ಥಳಗಳಲ್ಲಿ ವರ್ಣರಂಜಿತ ಹೂವುಗಳ ಕುಂಡಗಳನ್ನು ಇರಿಸಿ ಅಲಂಕರಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಎಂಡಿಎ ನಗರ ಪರಿಸರ ವಿಭಾಗದ ಮೆಟ್ರೋಪಾಲಿಟಲ್ ಗ್ರೀನ್ ಪ್ಲಾನರ್, ರಸ್ತೆ ಬದಿಯಲ್ಲಿ ಇರಿಸಲಾಗಿರುವ ಹೂಕುಂಡಗಳನ್ನು ಕೆಲವು ದಾರಿಹೋಕರು ಮತ್ತು ಕಳ್ಳರು ಕದಿಯುತ್ತಿರುವುದು ಗಮನಕ್ಕೆ ಬಂದಿದೆ. ಹೂ ಕುಂಡಗಳನ್ನು ಕದಿಯುವ ವಿಡಿಯೋವೊಂದು ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. ಎಚ್‌ಆರ್ 20 ಎವೈ 0006 ನೋಂದಣಿ ಸಂಖ್ಯೆಯ ಕಾರ್ ಅನ್ನು ಕಳ್ಳತನಕ್ಕೆ ಬಳಸಲಾಗಿದೆ ಎಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ