COVID ಸೋಂಕಿತರಿಗೆ ಗುಡ್​ನ್ಯೂಸ್, ದೇಶದಲ್ಲಿ 200 ಜನರಲ್ಲಿ ಒಬ್ಬರಿಗೆ ಮಾತ್ರ ಆಕ್ಸಿಜನ್​ ನೆರವು ಬೇಕಿದೆ..!

ಎರಡನೇ ಅಲೆಗೆ ಹೋಲಿಸಿದರೆ ಈಗ ಆಸ್ಪತ್ರೆಗೆ ದಾಖಲಾಗುವ ಕೋವಿಡ್-19 ಸೋಂಕಿತರ ಪೈಕಿ ಶೇ. 0.5ಕ್ಕಿಂತ ಕಡಿಮೆ ಪ್ರಮಾಣದ ಕೋವಿಡ್-19 ಸೋಂಕಿತರಿಗೆ ಮಾತ್ರ ಆಮ್ಲಜನಕ ನೆರವಿನ ಚಿಕಿತ್ಸೆಯ ಅಗತ್ಯ ಬೀಳುತ್ತಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದಲ್ಲಿ ಇನ್ನೂರಕ್ಕೆ ಓರ್ವ ಸೋಂಕಿತರಿಗೆ ಮಾತ್ರ ಆಮ್ಲಜನಕದ (Oxygen Assistance)ನೆರವು ಬೇಕಾಗುತ್ತಿದೆ. ಭಾರತದ ಖಾಸಗಿ ಆಸ್ಪತ್ರೆಗಳಲ್ಲಿ 200 ಕೋವಿಡ್ ಸೋಂಕಿತರ (Covid Infected) ಪೈಕಿ ಓರ್ವ ಸೋಂಕಿತ ವ್ಯಕ್ತಿಗೆ ಮಾತ್ರ ಆಮ್ಲಜನಕದ ನೆರವು ಬೇಕಾಗುತ್ತಿದೆ ಎಂದು ದತ್ತಾಂಶಗಳಿಂದ ಬಹಿರಂಗವಾಗಿದೆ. ಮಹಾರಾಷ್ಟ್ರ (Maharashtra) ಹಾಗೂ ದೆಹಲಿಯಲ್ಲಿನ ಖಾಸಗಿ ಆಸ್ಪತ್ರೆಗಳು (Hospitals ) ಸಲ್ಲಿಸಿರುವ ದತ್ತಾಂಶಗಳನ್ನು ವಿಶ್ಲೇಷಿಸಿರುವ ಭಾರತೀಯ ಆರೋಗ್ಯ ಸೇವಾದಾತರ ಒಕ್ಕೂಟ (ಎಎಚ್‌ಪಿಐ)( Association of Indian Health Service Providers ), ಕೋವಿಡ್ ಸೋಂಕಿತರು ಸರಾಸರಿ 3 ದಿನಗಳ ಕಾಲ ಮಾತ್ರ ಆಸ್ಪತ್ರೆಯಲ್ಲಿ ಉಳಿಯುತ್ತಿದ್ದು, ಆಸ್ಪತ್ರೆಗಳಲ್ಲಿನ ಶೇ. 10ರಷ್ಟು ಹಾಸಿಗೆಗಳು ಮಾತ್ರ ಭರ್ತಿಯಾಗುತ್ತಿವೆ ಎಂದು ಹೇಳಿದೆ.

ಭಾರತೀಯ ಅರೋಗ್ಯ ಸೇವಾದಾತರ ಒಕ್ಕೂಟದ ಪ್ರಕಾರ
ಭಾರತದಾದ್ಯಂತ ಇರುವ 2500 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಹಾಗೂ 8000 ಸಣ್ಣ ಆಸ್ಪತ್ರೆಗಳನ್ನು ಪ್ರತಿನಿಧಿಸುತ್ತಿರುವ ಭಾರತೀಯ ಅರೋಗ್ಯ ಸೇವಾದಾತರ ಒಕ್ಕೂಟವು, ಖಾಸಗಿ ಆಸ್ಪತ್ರೆಗಳಿಂದ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ, ಎರಡನೇ ಅಲೆಗೆ ಹೋಲಿಸಿದರೆ ಈಗ ಆಸ್ಪತ್ರೆಗೆ ದಾಖಲಾಗುವ ಕೋವಿಡ್-19 ಸೋಂಕಿತರ ಪೈಕಿ ಶೇ. 0.5ಕ್ಕಿಂತ ಕಡಿಮೆ ಪ್ರಮಾಣದ ಕೋವಿಡ್-19 ಸೋಂಕಿತರಿಗೆ ಮಾತ್ರ ಆಮ್ಲಜನಕ ನೆರವಿನ ಚಿಕಿತ್ಸೆಯ ಅಗತ್ಯ ಬೀಳುತ್ತಿದೆ ಎಂದು ಹೇಳಿದೆ. ಭಾರತೀಯ ಆರೋಗ್ಯ ಸೇವಾದಾತರ ಒಕ್ಕೂಟವು ಪ್ರತಿನಿಧಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಪೈಕಿ ಭಾರತದಾದ್ಯಂತ ಇರುವ ಫೋರ್ಟಿಸ್, ಮ್ಯಾಕ್ಸ್, ಅಪೋಲೋ ಹಾಗೂ ಮೆದಾಂತ ಆಸ್ಪತ್ರೆಗಳು ಸೇರಿವೆ.

ಇದನ್ನೂ ಓದಿ: Flurona: ಕೋವಿಡ್ ಆಂತಕದ ಮಧ್ಯೆ ಫ್ಲೋರೋನಾ ಭೀತಿ, ಏನಿದರ ಲಕ್ಷಣ?

ದೇಶಗಳಿಗೆ ರಫ್ತು
ಎರಡನೇ ಅಲೆಯಲ್ಲಿ ಕೆಲವು ರಾಜ್ಯಗಳು ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆ ಎದುರಿಸಿದ್ದರಿಂದ ಸಾವಿರಾರು ಕೋವಿಡ್-19 ಸೋಂಕಿತರು ತೀವ್ರ ಉಸಿರಾಟದ ಸಮಸ್ಯೆ ಎದುರಿಸಬೇಕಾಯಿತು. 2020ರ ಆರ್ಥಿಕ ವರ್ಷದಲ್ಲಿ 4502 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕವನ್ನು ಜಗತ್ತಿನ ಹಲವು ದೇಶಗಳಿಗೆ ರಫ್ತು ಮಾಡಿದ್ದ ಭಾರತ, ಏಪ್ರಿಲ್ 2020ರಿಂದ ಜನವರಿ 2021ರವರೆಗೆ 9301 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕವನ್ನು ರಫ್ತು ಮಾಡಿತ್ತು. ಈ ಅವಧಿಯಲ್ಲಿ ವೈದ್ಯಕೀಯ ಆಮ್ಲಜನಕಕ್ಕೆ ಭಾರತದಲ್ಲಿ ಅಂತಹ ಬೇಡಿಕೆಯೇನೂ ಇರಲಿಲ್ಲ.

ಆದರೆ, ಕೋವಿಡ್-19 ಮೊದಲ ಅಲೆ ಶುರುವಾದಾಗ ಆಮ್ಲಜನಕದ ಬೇಡಿಕೆಯು ನಿತ್ಯ 700 ಮೆಟ್ರಿಕ್ ಟನ್ ಇದ್ದದ್ದು ದಿಢೀರನೆ 2,800 ಮೆಟ್ರಿಕ್ ಟನ್‌ಗೆ ಏರಿಕೆಯಾಗಿತ್ತು. ಎರಡನೆ ಅಲೆಯಲ್ಲಿ ಈ ಬೇಡಿಕೆ ಗಗನಮುಖಿಯಾಗಿ ನಿತ್ಯ 5,000 ಮೆಟ್ರಿಕ್ ಟನ್ ತಲುಪಿತು. ಕ್ರಿಸಿಲ್ ಪ್ರಕಾರ ಏಪ್ರಿಲ್ ಎರಡನೇ ವಾರದಲ್ಲಿ ಮಾತ್ರ ವೈದ್ಯಕೀಯ ಆಮ್ಲಜನಕ ಬೇಡಿಕೆಯು 5 ಪಟ್ಟು ಹೆಚ್ಚಾಗಿತ್ತು.

ಆಮ್ಲಜನಕ ಕೊರತೆಗೆ ಬೇರೆ ಕಾರಣ
ಹಲವಾರು ಮಂದಿ ಆಮ್ಲಜನಕ ಕೊರತೆಗೆ 2021ರ ಆರ್ಥಿಕ ವರ್ಷದಲ್ಲಿ ಆಮ್ಲಜನಕವನ್ನು ರಫ್ತು ಮಾಡಿದ್ದೇ ಕಾರಣ ಎಂದು ಸರ್ಕಾರವನ್ನು ದೂಷಿಸಿದ್ದರು. ಆದರೆ, ದೇಶದಲ್ಲಿ ಪ್ರತಿ ನಿತ್ಯ 7000 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ ಉತ್ಪಾದನೆಯಾಗುತ್ತಿದ್ದು, ಆಮ್ಲಜನಕ ಕೊರತೆಗೆ ಬೇರೆಯದೇ ಕಾರಣವಿರುವ ಸಾಧ್ಯತೆ ಇದೆ ಎಂದು ತಜ್ಞರು ಶಂಕೆ ವ್ಯಕ್ತಪಡಿಸಿದ್ದರು.

ಕೋವಿಡ್-19 ಪ್ರಕರಣಗಳು ತೀವ್ರ ಏರಿಕೆ ಕಂಡಿರುವ ಮಹಾರಾಷ್ಟ್ರ ಮತ್ತು ದೆಹಲಿ ರಾಜ್ಯಗಳಲ್ಲಿ ಹಾಸಿಗೆಯ ಲಭ್ಯತೆ ತೃಪ್ತಿದಾಯಕವಾಗಿದ್ದು, ಶೇ. 90ಕ್ಕೂ ಹೆಚ್ಚು ಹಾಸಿಗೆಗಳು ಖಾಲಿ ಉಳಿದಿವೆ. "ಮಹಾರಾಷ್ಟ್ರದಲ್ಲಿ ಹಾಸಿಗೆ ಅಗತ್ಯವಿರುವ ಸೋಂಕಿತರ ಪ್ರಮಾಣ ಶೇ. 9-10ರಷ್ಟಿದ್ದರೆ, ದೆಹಲಿಯಲ್ಲಿ ಈ ಪ್ರಮಾಣ ಶೇ. 10ಕ್ಕಿಂತಲೂ ಕಡಿಮೆ ಇದೆ" ಎನ್ನುತ್ತಾರೆ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಪ್ರಧಾನ ನಿರ್ದೇಶಕ ಗಿರಿಧರ್ ಜೆ. ಗ್ಯಾನಿ. "ದೆಹಲಿಯ ಪ್ರತಿಷ್ಠಿತ ಆಸ್ಪತ್ರೆಗಳು ಶೇ. 8-9ರಷ್ಟು ಮಾತ್ರ ಹಾಸಿಗೆಗಳ ಅಗತ್ಯ ಬೀಳುತ್ತಿದೆ ಎಂದು ಮಾಹಿತಿ ನೀಡಿವೆ" ಎಂದೂ ಅವರು ಹೇಳಿದ್ದಾರೆ.

ಆಮ್ಲಜನಕ ಉತ್ಪಾದನಾ ಘಟಕ
ಈ ಹಿಂದಿನ ಅಲೆಯಲ್ಲಿ ಭಾರತವು ಆಮ್ಲಜನಕ ಲಭ್ಯತೆಯ ತೀವ್ರ ಕೊರತೆ ಎದುರಿಸಿತು. "ಈ ಕಾರಣದಿಂದಾಗಿಯೇ ನಾವು ಆಸ್ಪತ್ರೆಗಳಲ್ಲಿ ಬಳಕೆಯಾಗುವ ಆಮ್ಲಜನಕದ ಮೇಲೆ ನಿಗಾ ವಹಿಸಿದೆವು ಹಾಗೂ ಬಹುತೇಕ ಆಸ್ಪತ್ರೆಗಳು ತಮ್ಮದೇ ಆದ ಆಮ್ಲಜನಕ ಉತ್ಪಾದನಾ ಘಟಕಗಳನ್ನು ನಿರ್ಮಾಣ ಮಾಡಿಕೊಂಡಿವೆ" ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Covid Crisis: ಕೇಸುಗಳ ಸಂಖ್ಯೆಯಲ್ಲಿ ಹೆಚ್ಚಳ: ದೆಹಲಿಯಲ್ಲಿ ರೆಡ್ ಅಲರ್ಟ್ ಘೋಷಣೆ ಸಾಧ್ಯತೆ

ಒಕ್ಕೂಟವು ಆಸ್ಪತ್ರೆಗಳಿಗೆ ಅಗತ್ಯವಿರುವ ಆಮ್ಲಜನಕ ಅಗತ್ಯತೆಯ ಕುರಿತು ಮೇಲುಸ್ತುವಾರಿ ನಡೆಸಲಿದ್ದು, ಈ ಪ್ರಮಾಣವು ಶೇ. 5ರಷ್ಟನ್ನು ಮೀರಿದ ಕೂಡಲೇ ಸರ್ಕಾರಕ್ಕೆ ಮಾಹಿತಿ ನೀಡಲಿದೆ. "ಇದುವರೆಗೆ ಕೋವಿಡ್-19 ರೋಗಿಗಳ ಪೈಕಿ ಶೇ. 0.5ರಷ್ಟು ರೋಗಿಗಳಿಗೆ ಮಾತ್ರ ಆಮ್ಲಜನಕದ ನೆರವಿನ ಅಗತ್ಯ ಕಂಡು ಬಂದಿದೆ. ಆಮ್ಲಜನಕ ಅಗತ್ಯತೆಯು ಶೇ. 5ರಷ್ಟು ಮೀರಿದಾಗ ಹಾಗೂ ಹಾಸಿಗೆಯ ಅಗತ್ಯತೆ ಶೇ. 30ರಷ್ಟನ್ನು ಮೀರಿದಾಗ ನಾವು ಸರ್ಕಾರವನ್ನು ಎಚ್ಚರಿಸುತ್ತೇವೆ" ಎಂದು ಹೇಳಿದ್ದಾರೆ.
Published by:vanithasanjevani vanithasanjevani
First published: