ದಕ್ಷಿಣ ಕನ್ನಡ: ಅಗಲವಾದ ಬಾವಿಯೊಳಗೆ ಇಳಿಯುತ್ತಿರೋ ಪಂಜರ, ‘‘ನಿಧಾನ.. ನಿಧಾನ.." ಎಂದು ಎಚ್ಚರಿಕೆಯಿಂದ ಪಂಜರ ಕಟ್ಟಿದ ಹಗ್ಗ ಇಳಿಬಿಡುತ್ತಿರೋ (Rescue Operation In Mangaluru) ಸ್ಥಳೀಯರು. ಹೀಗೆ ಈ ಬಾವಿಯೊಳಗೆ ಪಂಜರ ಇಳಿಸ್ತಿರೋದೇಕೆ? ಈ ಪಂಜರದೊಳಗೆ ಇರೋದಾದ್ರೂ ಯಾರು? ಏನಿವರ ಸಾಹಸ? ಈ ರೋಚಕ ಕಥೆಯನ್ನ (Leopard Rescue Operation) ನಾವ್ ಹೇಳ್ತೀವಿ ಕೇಳಿ.
ಚೀತಾ ಆಪರೇಷನ್
ದಕ್ಷಿಣ ಕನ್ನಡದ ಮೂಡುಬಿದಿರೆಯ ನಿಡ್ಡೋಡಿ ಎಂಬಲ್ಲಿ ಚಿರತೆ ಮರಿಯೊಂದು ಬಾವಿಗೆ ಬಿದ್ದಿತ್ತು. ಎರಡು ದಿನಗಳಿಂದ ಅರಣ್ಯ ಇಲಾಖೆ ಎಷ್ಟೇ ಹರಸಾಹಸ ಮಾಡಿದ್ರೂ ಚಿರತೆ ಮರಿಯನ್ನು ಬಾವಿಯನ್ನ ಮೇಲೆತ್ತೋಕೆ ಆಗಿರ್ಲೇ ಇಲ್ಲ. ಆದ್ರೆ ಪಶುವೈದ್ಯೆಯೊಬ್ಬರ ಸಾಹಸ ಈ ಚಿರತೆಗೆ ಮರುಜೀವ ನೀಡಿತು.
‘ಚಿಟ್ಟೆಪಿಲಿ' ಟೀಂನಿಂದ ಚಿರತೆ ಸೇಫ್
30 ಅಡಿಗಿಂತ ಆಳದ ಈ ಬಾವಿಯ ಒಳಗೆ ಗುಹೆಯಂತಹ ಜಾಗದಲ್ಲಿ ಈ ಚಿರತೆ ಮರಿ ಅಡಗಿಕೊಳ್ಳುತ್ತಿತ್ತು. ಇಳಿಸಿದ ಬೋನಿನೊಳಗೂ ಬರಲು ಹಿಂದೇಟು ಹಾಕುತ್ತಿತ್ತು. ಆಗ ಅರಣ್ಯ ಇಲಾಖೆಯೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಸ್ವಯಂಸೇವಾ ಸಂಸ್ಥೆ ‘ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್ಕ್ಯೂ ಸೆಂಟರ್'ನ ತಜ್ಞ ವೈದ್ಯರು ಸ್ಥಳಕ್ಕಾಗಮಿಸಿದರು.
ಬೋನಿನೊಳಗೆ ಕೂತು ಕಾರ್ಯಾಚರಣೆ!
ಸಂರಕ್ಷಣ ತಂಡದ ಡಾ. ಮೇಘನಾ ಪೆಮ್ಮಯ್ಯ ಅವರು ಅರಿವಳಿಕೆ ಮದ್ದು ತುಂಬಿದ ಡಾರ್ಟ್ ಗನ್ ಹಿಡಿದುಕೊಂಡು ಬೋನಿನೊಳಗೆ ಕುಳಿತರು. ಅರಣ್ಯ ಇಲಾಖೆಯ ಸಿಬಂದಿಗಳು, ಊರವರು ಸೇರಿಕೊಂಡು ಅವರನ್ನು ಬಾವಿಗಿಳಿಸಿದ್ರು. ಹೀಗೆ ಬಾವಿಯೊಳಗೆ ಇಳಿದ ಡಾ. ಮೇಘನಾ ಅವರು ಗುಹೆಯೊಳಗೆ ಕುಳಿತ ಚಿರತೆ ಮರಿಯತ್ತ ಗುರಿಯಿಟ್ಟು ಅರಿವಳಿಕೆ ಚುಚ್ಚುಮದ್ದನ್ನು ಪ್ರಯೋಗಿಸಿದರು. ಚಿರತೆ ಪ್ರಜ್ಞೆ ತಪ್ಪಿದ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಹಗ್ಗದ ಮೂಲಕ ಕೆಳಗಿಳಿದು ಹೆಣ್ಣು ಚಿರತೆ ಮರಿಯೊಂದಿಗೆ ಹೆಣ್ಣು ಜೀವ ಡಾ. ಮೇಘನಾ ಬಾವಿಯಿಂದ ಮೇಲಕ್ಕೆ ಬಂದರು.
ಇದನ್ನೂ ಓದಿ: Koti Raj: 1,700 ಅಡಿ ಎತ್ತರದ ಗಡಾಯಿಕಲ್ಲು ಏರಿದ ಕೋತಿರಾಜ್!
ಕೊನೆಗೂ ಕಾಡಿಗೆ ಸೇರಿದ ಚೀತಾ
ಬಳಿಕ ಚಿರತೆಯನ್ನು ಸೂಕ್ತವಾಗಿ ಬಂಧಿಸಿ ಪ್ರಜ್ಞೆ ಬರುವ ಚುಚ್ಚುಮದ್ದು ನೀಡಿದರು. ಚಿರತೆ ಚೇತರಿಸುತ್ತಿದ್ದಂತೆ ಅರಣ್ಯ ಇಲಾಖೆಯವರು ದಟ್ಟ ಕಾಡಿಗೆ ಒಯ್ದು ಬಂಧಮುಕ್ತಗೊಳಿಸಿದರು. ಹೀಗೆ ಹೆಣ್ಣು ಜೀವವೊಂದು ಹೆಣ್ಣು ಚಿರತೆ ಮರಿಯನ್ನು ಸೆರೆಹಿಡಿಯಲು ಬಾವಿಗಿಳಿದು ರೋಮಾಂಚಕವಾಗಿ ಜೀವ ರಕ್ಷಣೆ ಮಾಡಿದ ಅಪರೂಪದ ಘಟನೆಗೆ ಮಂಗಳೂರು ಸಾಕ್ಷಿಯಾಯಿತು.
ಇದನ್ನೂ ಓದಿ: Success Story: ದೃಷ್ಟಿ ಸಮಸ್ಯೆ ಇದ್ರೂ CA ಪರೀಕ್ಷೆಯಲ್ಲಿ ಸಾಧನೆ!
ಸಕ್ಸಸ್ ‘ಚಿಟ್ಟೆ ಪಿಲಿ' ಟೀಂ
ಡಾ. ಯಶಸ್ವಿ ಅವರ ಹಿರಿತನದಲ್ಲಿ ಕಾರ್ಯಾಚರಿಸಿದ ‘ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್ಕ್ಯೂ' ತಂಡದಲ್ಲಿ ಡಾ. ಮೇಘನಾ ಜತೆಗೆ ಡಾ. ಪೃಥ್ವೀ, ಡಾ. ನಫೀಸಾ ಇವರಿದ್ದರು. ಅರಣ್ಯ ಸಂರಕ್ಷಣಾಕಾರಿ ಸತೀಶ್ ಎನ್, ವಲಯ ಅರಣ್ಯಾಕಾರಿ ಹೇಮಗಿರಿ ಅಂಗಡಿ, ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಲು ಕಾರಣರಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ