ಮಂಗಳೂರು: ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ಶ್ರಾದ್ಧದ ಮನೆ ಹೇಗಿರುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಒಂದಿಷ್ಟು ವಿಶೇಷ ಪೂಜೆ, ಬಳಿಕ ಪಾಯಸ, ವಡೆ, ಬಗೆ ಬಗೆಯ ಖಾದ್ಯಗಳ ಜೊತೆಗೆ ಅನ್ನ ಪ್ರಸಾದ. ಈ ಮೂಲಕ ಅಗಲಿದ ತಮ್ಮ ಕುಟುಂಬಿಕರನ್ನು ಸಾವಿನ ನಂತರವೂ ತಮ್ಮ ಮಧ್ಯೆ ಸದಾ ಇರುವಂತೆ ಮಾಡುವ ಕ್ರಮವೂ ಇದೆ. ಆದರೆ, ದಕ್ಷಿಣ ಕನ್ನಡದ (Dakshina Kannada News) ಮೂಡುಬಿದಿರೆಯ ಖ್ಯಾತ ಸಾಹಿತಿಯೋರ್ವರು ವಿಭಿನ್ನವಾಗಿ ತಮ್ಮ ತಂದೆಯ ಶ್ರಾದ್ಧ ಕ್ರಮವನ್ನು ಮಾಡಿ ಮುಗಿಸಿದ್ದಾರೆ. ಒಂದಿಷ್ಟು ಹೊತ್ತು ತಂದೆಯ ನೆನಪಿನ ಜೊತೆ ಜೊತೆಗೆ ಕನ್ನಡದ (Kannada) ಕಂಪನ್ನು ಬೀರುವಲ್ಲಿ ಅವರು ಯಶಸ್ವಿಯಾದರು.
ಶ್ರಾದ್ಧದ ಮನೆಯಲ್ಲಿ ಕವಿಗೋಷ್ಠಿ
ಹೌದು, ಈ ರೀತಿ ಶ್ರಾದ್ಧ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಚರಿಸಿಕೊಂಡವರು ಬೇರೆ ಯಾರೂ ಅಲ್ಲ ಶಿಕ್ಷಕರೂ, ಸಾಹಿತಿ ಹಾಗೂ ಅಂಕಣಕಾರರೂ ಆಗಿರುವ ಅರವಿಂದ ಚೊಕ್ಕಾಡಿ ಅವರು. ತಮ್ಮ ತಂದೆಯ ಅಗಲುವಿಕೆ ನಂತರ ಶ್ರಾದ್ಧದ ಕಾರ್ಯಕ್ರಮವನ್ನು ಕವಿಗೋಷ್ಠಿ ಮೂಲಕ ಆಚರಿಸಿಕೊಂಡ ಇವರು, ಕವಿಗಳಿಂದ ಕವನ ವಾಚಿಸಿ, ದಕ್ಷಿಣೆ ಕೊಟ್ಟು ಬೀಳ್ಕೊಟ್ಟರು.
ಇದನ್ನೂ ಓದಿ: Birthday: ಗೋಶಾಲೆಯಲ್ಲಿ ಮಗುವಿನ ಮೊದಲ ಬರ್ತ್ ಡೇ ಆಚರಿಸಿಕೊಂಡ ದಂಪತಿ
ನಲ್ವತ್ತಕ್ಕೂ ಅಧಿಕ ಕವಿಗಳು ಭಾಗಿ
ಶ್ರಾದ್ಧ ಕಾರ್ಯಕ್ರಮದಲ್ಲಿ ನಡೆದ ಕವಿಗೋಷ್ಟಿಯಲ್ಲಿ ನಾಡಿನ ನಲ್ವತ್ತಕ್ಕೂ ಹೆಚ್ಚು ಕವಿಗಳು ಭಾಗಿಯಾದರು. ಆಗಮಿಸಿ ಕಾವ್ಯವಾಚಿಸಿದ ಕವಿಗಳಿಗೆ 101 ರೂಪಾಯಿ ದಕ್ಷಿಣೆ ಕೊಟ್ಟು, ಗುಲಾಬಿ ಗಿಡಗಳನ್ನೂ ಕೊಟ್ಟು ಕವಿಗಳ ಪ್ರೀತಿ ಸಂಪಾದಿಸಿದರು ಸಾಹಿತಿ ಚೊಕ್ಕಾಡಿ.
ಇದನ್ನೂ ಓದಿ: Dakshina Kannada: ಬೀದಿನಾಯಿಗಳ ಊಟಕ್ಕೆ ಸೀಮೆಎಣ್ಣೆ, ಇದು ಮಹಾತಾಯಿಯ ಸಂಕಷ್ಟ
ಸಹಪಂಕ್ತಿ ಭೋಜನ
ಇನ್ನು ಕವಿಗೋಷ್ಠಿ ಬಳಿಕ ನಡೆದ ಭೋಜನ ಕೂಟದಲ್ಲಿ ಸಹಪಂಕ್ತಿ ಅನುಸರಿಸಲಾಯಿತು. ಯಾವುದೇ ಜಾತಿ, ಮತ ಬೇಧವಿಲ್ಲದೇ ನೆರೆದವರೆಲ್ಲರೂ ಭೋಜನ ಸವಿದರು. ಒಟ್ಟಿನಲ್ಲಿ ಗೌಜಿ ಗದ್ದಲದ ನಡುವೆ ನಡೆಯುವ ಶ್ರಾದ್ಧ ಇಲ್ಲಿ ಮಾತ್ರ ವಿಭಿನ್ನವಾಗಿ ಆಚರಿಸಲ್ಪಟ್ಟಿತು. ಕವಿಗಳಿಂದ ಕವನ ವಾಚಿಸಿ ಕನ್ನಡ ಪ್ರೇಮದ ಜೊತೆಗೆ ತಂದೆಯ ನೆನಪು ಸದಾ ಹಸಿರಾಗಿರುವಂತೆ ಮಾಡಿದ ಚೊಕ್ಕಾಡಿ ಅವರಿಗೊಂದು ಮೆಚ್ಚುಗೆ ನೀಡಲೇಬೇಕು.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ