ಮಂಗಳೂರು: ಕೇಸರಿ, ಬಿಳಿ, ಹಸಿರು. ಬಾನಂಗಳದಲ್ಲಿ ಅರಳಿ ನಿಂತಿತು (Tallest National Flag) ನೋಡಿ ನಮ್ಮ ರಾಷ್ಟ್ರಧ್ವಜ. ಮುಗಿಲೆತ್ತರಕ್ಕೆ ಏರಿ ಊರಿಗೆಲ್ಲ ದರುಶನ ನೀಡುತ್ತಿದೆ ತ್ರಿವರ್ಣ ರಂಗು. ಹೌದು, ಕರಾವಳಿ ಕರ್ನಾಟಕದಲ್ಲೇ ಅತೀ ಎತ್ತರದ ರಾಷ್ಟ್ರಧ್ವಜವೊಂದು (National Flag) ಆರೋಹಣಗೊಂಡಿದೆ. ನೋಡುಗರ ಕಣ್ಮನ ಸೆಳೆಯುವ ಮೂಲಕ ದೇಶಭಕ್ತಿಯನ್ನ ಹೆಚ್ಚಿಸುತ್ತಿದೆ.
ಮೊಳಗಿದ ವಂದೇ ಮಾತರಂ
ಹೌದು, ಸಡಗರ ಸಂಭ್ರಮದೊಂದಿಗೆ ಅತೀ ಎತ್ತರದ ಧ್ವಜಸ್ತಂಭವನ್ನು ಮಂಗಳೂರಿನ ದೇರಳಕಟ್ಟೆಯಲ್ಲಿರುವ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಆಸ್ಪತ್ರೆಯ ಆವರಣದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಜೊತೆಗೆ ರಾಷ್ಟ್ರಗೀತೆ, ವಂದೇ ಮಾತರಂ ಹಾಡಿನ ಮೂಲಕ ರಾಷ್ಟ್ರಧ್ವಜವನ್ನು ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ ಅವರು ಆರೋಹರಣ ಮಾಡಿದ್ರು. ನೆರೆದವರೆಲ್ಲ ಗಗನದತ್ತ ಮುಖ ಮಾಡುತ್ತಿದ್ದರೆ, ರಾಷ್ಟ್ರಧ್ವಜವು ಮೇಲೇರುತ್ತಾ ಮುಗಿಲಿನತ್ತ ಮುಖ ಮಾಡಿ ನೋಡುಗರ ದೇಶಪ್ರೇಮವನ್ನ ಇಮ್ಮಡಿಗೊಳಿಸಿತು.
ನಿಟ್ಟೆ ವಿವಿ ವಿಭಿನ್ನ ಪ್ರಯತ್ನ
ಮೆಡಿಕಲ್ ಕಾಲೇಜ್ ಆವರಣದಲ್ಲಿ ಇಂತಹ ವಿಭಿನ್ನ ಪ್ರಯತ್ನ ಮಾಡಿರುವ ನಿಟ್ಟೆ ವಿವಿಯ ಕುಲಾಧಿಪತಿ ವಿನಯ್ ಹೆಗ್ಡೆ, ಪ್ರತಿದಿನ ವಿದ್ಯಾರ್ಥಿಗಳು ಕ್ಯಾಂಪಸ್ಗೆ ಬರುತ್ತಲೇ ರಾಷ್ಟ್ರಧ್ವಜಕ್ಕೊಂದು ಸೆಲ್ಯೂಟ್ ಮಾಡಿ ಬರುವಂತೆ ಮನವಿ ಮಾಡಿಕೊಂಡರು. ಜೊತೆಗೆ ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಯುಕ್ತ ಲೋಕಾರ್ಪಣೆಗೊಳಿಸಲಾಗಿದೆ ಎಂದರು.
ಉಳ್ಳಾಲ ವ್ಯಾಪ್ತಿಯಲ್ಲಿ ತ್ರಿವರ್ಣ ರಂಗು
ಕಳೆದ ವರುಷವಷ್ಟೇ ಉಳ್ಳಾಲದ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ 110 ಅಡಿ ಧ್ವಜಸ್ತಂಭದ ಮೂಲಕ ತ್ರಿವರ್ಣ ಧ್ವಜಾರೋಹ ಮಾಡಲಾಗಿತ್ತು. ಇದೀಗ ಅದೇ ಉಳ್ಳಾಲ ಪರಿಸರದ ದೇರಳಕಟ್ಟೆಯಲ್ಲಿ 164 ಅಡಿ ಎತ್ತರದ ಧ್ವಜಸ್ತಂಭದ ಮೂಲಕ ರಾಷ್ಟ್ರ ಧ್ವಜ ಹಾರಾಟ ಮಾಡಿಸಿದ್ದು ಕರಾವಳಿ ಕರ್ನಾಟಕದಲ್ಲೇ ಅತೀ ಎತ್ತರದ ಧ್ವಜಸ್ತಂಭ ಎಂಬ ಹಿರಿಮೆಗೂ ಪಾತ್ರವಾಗಿದೆ. ಸದ್ಯ ಈ ಸ್ತಂಭದಲ್ಲಿ 51 ಮೀಟರ್ ಗಾತ್ರದ ರಾಷ್ಟ್ರಧ್ವಜ ಹಾರಾಡುತ್ತಿದೆ.
ಇದನ್ನೂ ಓದಿ: Koti Raj: 1,700 ಅಡಿ ಎತ್ತರದ ಗಡಾಯಿಕಲ್ಲು ಏರಿದ ಕೋತಿರಾಜ್!
ಒಟ್ಟಿನಲ್ಲಿ ಹೀಗೆ ಸದಾ ತ್ರಿವರ್ಣ ಧ್ವಜ ಹಾರಾಡುತ್ತಾ, ರಾಷ್ಟ್ರಭಕ್ತಿ ಇಮ್ಮಡಿಗೊಳಿಸುತ್ತಿರಲಿ ಅನ್ನೋದೆ ನಮ್ಮ ಆಶಯ ಕೂಡಾ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ