ದಕ್ಷಿಣ ಕನ್ನಡ: ವಿಶಿಷ್ಟ ಶೈಲಿಯ ಕಲ್ಲಿನ ಜೋಡಣೆ. ಕೆಂಪುಗಲ್ಲಿನಲ್ಲೇ ಜೋಡಿಸಲಾದ ಪಿರಾಮಿಡ್ ಆಕೃತಿಯ ಗೋಡೆ. ಹೀಗೆ ಇಡೀ ಆವರಣವೇ ಕೆಂಪು ಕಲ್ಲಿನ ಕೆತ್ತನೆಯ ಆಗರ. ಇದ್ಯಾವುದೋ ಕಟ್ಟಡದ ಅವಶೇಷ ಅಂದ್ಕೊಂಡ್ರಾ? ಖಂಡಿತಾ, ಇಲ್ಲ. ನಿಜಕ್ಕೂ ಇದೇನು ಎಂದು ತಿಳಿದರೆ, ಇತಿಹಾಸದ ಕೌತುಕದ ಜೊತೆಗೆ ಅಚ್ಚರಿ ಪಡೋದು ಗ್ಯಾರಂಟಿ. ಹೌದು, ಸಂಪೂರ್ಣ ಕೆಂಪುಗಲ್ಲಿನಲ್ಲಿ ಕೆತ್ತಲಾದ ವಿಶಿಷ್ಟವಾದ ಈ ಕೆತ್ತನೆಗಳು ಜೈನ ಸಮಾಧಿಗಳು ಅಂದ್ರೆ ನೀವು ನಂಬ್ಲೇಬೇಕು.
ನಿಜ, ಆ ಕಾಲದ ಜೈನರ ಸಮಾಧಿಗಳು ಹೀಗಿದ್ದವು ಅನ್ನೋದನ್ನ ಇತಿಹಾಸ ತಿಳಿಸಿಕೊಡುತ್ತದೆ. ಅದರಲ್ಲೂ ಜೈನ ಕಾಶಿ ಎಂದೇ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಇಂತಹ ಹತ್ತು ಹಲವು ವಿಶೇಷತೆಗಳನ್ನ ಹೊಂದಿದೆ. ಪ್ರಮುಖವಾಗಿ ಜಿನರ ಇತಿಹಾಸವನ್ನು ಹೇಳುವುದರಲ್ಲಿಯೂ ಮೂಡುಬಿದಿರೆ ಮುಂದಿದೆ. ಅದರಲ್ಲೊಂದು ಜೈನರ ಈ ಸಮಾಧಿ.
ಪಿರಮಿಡ್ ಹೋಲುವ ಸಮಾಧಿ!
ಥೇಟ್ ಪಿರಾಮಿಡ್ ಹೋಲುವ ಈ ಆಕೃತಿಗಳು ಕಂಡು ಬರೋದು ಮೂಡುಬಿದಿರೆ ಸಮೀಪದ ಬೆಟ್ಕೇರಿಯಲ್ಲಿ. ಕೋಟೆಕೆರೆ ಮೂಡುಬಿದಿರೆ ರಸ್ತೆ ಪಕ್ಕದಲ್ಲೇ ಕಾಣ ಸಿಗುವ ಜಿನ ಸಮಾಧಿಗಳಿಗೆ ನೂರಾರು ವರ್ಷಗಳ ಇತಿಹಾಸವೂ ಇದೆ. ಆದರೆ, ಐವತ್ತಕ್ಕೂ ಹೆಚ್ಚು ಸಮಾಧಿಗಳ ಪೈಕಿ ಉಳಿದುಕೊಂಡದ್ದು ಮಾತ್ರ ಬೆರಳಣಿಕೆಯಷ್ಟು ಅಂತಾರೆ ಸ್ಥಳೀಯರು.
ಪುರಾತತ್ವ ಇಲಾಖೆಯಿಂದ ಮರುಜೀವ
ನಗರೀಕರಣ, ಪ್ರಕೃತಿ ವಿಕೋಪಕ್ಕೆ ಸಿಲುಕಿ ನಲುಗಿ ಅಳಿವಿನಂಚಿನಲ್ಲಿದ್ದ ಸಮಾಧಿಗಳಿಗೆ ಇದೀಗ ಪುರಾತತ್ವ ಇಲಾಖೆ ಮರುಜೀವ ಕೊಡಲು ಮುಂದಾಗಿದೆ. ಸೂಕ್ತ ನಿರ್ವಹಣೆಯಿಲ್ಲದೆ ಕಡೆಗಣಿಸಲ್ಪಟ್ಟ ಸಮಾಧಿಗಳಿಗೆ ಇದೀಗ ಮರುಜೀವ ಬರುತ್ತಿರುವುದು ಇತಿಹಾಸ ಪ್ರಿಯರಿಗೆ ಸಂತಸ ತಂದಿದೆ. ವಿಶೇಷವಾಗಿ ಜೈನರು ನೆಲೆಸಿದ್ದರು ಎನ್ನಲಾದ ಮೂಡುಬಿದಿರೆ, ಹಳದಂಗಡಿ, ಪುತ್ತೂರಿನ ಸವಣೂರು ಭಾಗದಲ್ಲಿ ಕಾಣಿಸೋ ಈ ಆಕೃತಿಗಳನ್ನ ಜೈನ ಪ್ರಮುಖರ ಸಮಾಧಿ ಎಂದು ಪರಿಗಣಿಸಲಾಗಿದ್ದು ಈ ಆಕೃತಿಗಳ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲವಂತೆ.
ಸಮಾಧಿ ಅಡಿಯಲ್ಲೇ ಇದೆ ಶಾಸನ
ಕೆಂಪು ಕಲ್ಲಿನಲ್ಲಿ ಕಟ್ಟಲಾದ ಪ್ರತಿ ಸಮಾಧಿಯ ಕೆಳಗೆ ಶಾಸನಗಳನ್ನ ಹೋಲುವ ಕೆತ್ತನೆಗಳು ದೊರಕಿದ್ದು ಇವುಗಳು ಸಮಾಧಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತೆರೆದಿಟ್ಟಿಲ್ಲ ಎನ್ನುತ್ತಾರೆ ಇತಿಹಾಸ ತಜ್ಞರು. ಆದರೆ ಪಾಳು ಬಿದ್ದಂತಿದ್ದ ಈ ಸಮಾಧಿ ಕಟ್ಟಡಗಳು ಮತ್ತೆ ಪುನರುಜ್ಜೀವನಗೊಳ್ಳುತ್ತಿದ್ದು ಇತಿಹಾಸ ಅಧ್ಯಯನಕಾರರಲ್ಲಿ ಹೊಸ ಬಗೆಯ ಆಸಕ್ತಿಯೂ ಮೂಡಿಸಿದೆ.
ಒಟ್ಟಿನಲ್ಲಿ ವಿಭಿನ್ನ ಸಂಸ್ಕೃತಿ, ಕಲೆಗೆ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆ ಜೈನರ ಪ್ರಮುಖ ವಾಸ ತಾಣವೂ ಹೌದು. ಆದರೆ, ಅವರಿಗೆ ಸಂಬಂಧಿಸಿದ ಕೆಲವು ಸ್ಥಳಗಳ ಅಧ್ಯಯನ ಇನ್ನಷ್ಟು ಆಗಬೇಕಿರುವುದು ಸತ್ಯ. ಈ ನಿಟ್ಟಿನಲ್ಲಿ ಮೂಡುಬಿದಿರೆಯ ಜೈನರ ಸಮಾಧಿಗಳ ಪುನರುಜ್ಜೀವನ ನಡೆಸುತ್ತಿರುವ ಪುರಾತತ್ವ ಇಲಾಖೆಯ ನಡೆ ಶ್ಲಾಘನೀಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ