ಚಿಲಿಪಿಲಿ ಗುಟ್ಟುತ್ತಿರೋ ಗಿಣಿಗಳು. ಸ್ವಚ್ಛಂದವಾಗಿ ಹಾರಾಡ್ತಿರೋ ಬುಲ್ಬುಲ್, ಗುಬ್ಬಚ್ಚಿಗಳು. ಹೀಗೆ ಕಣ್ಣು ಹಾಯಿಸಿದಲ್ಲೆಲ್ಲ ಪುಟ್ಟ ಪುಟ್ಟ ಹಕ್ಕಿಗಳ ಅಂದ ಚೆಂದದ ಸ್ವರಗಳು. ಜನಸಾಮಾನ್ಯರ ನಡುವೆ ಇಷ್ಟೊಂದು ಹಕ್ಕಿ ಜೀವಿಸುತ್ತಿರೋದಾದ್ರೂ ಎಲ್ಲಿ ಅಂತೀರಾ? ಹೇಳ್ತೀವಿ ನೋಡಿ. ಪುಟ್ಟ ಹಕ್ಕಿಗಳ ಆರೈಕೆ, ಮಕ್ಕಳಿಗೆ ಗುಬ್ಬಚ್ಚಿಗಳ ಪಾಠ, ಪರಿಸರದ ಜೊತೆಗೆ ಬೆರೆಯಲು ಬೇಕಾದ ವ್ಯವಸ್ಥೆ. ಈ ಪರಿಸರವೇ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ಬಂಟ್ವಾಳ (Bantwal) ತಾಲೂಕಿನ ಎಲಿಯ ನಡುಗೋಡು ಗ್ರಾಮದ ಗುಬ್ಬಚ್ಚಿ ಗೂಡು.
ಹೀಗೆ ಇಡೀ ಪರಿಸರವೇ ಕುಹುಕುಹು ನಾದ ಮೊಳಗಿಸೋ, ಚಿಲಿಪಿಲಿ ಎಂದು ಸಂಭ್ರಮಿಸೋ ಮುದ್ದು ಮುದ್ದಾದ ಹಕ್ಕಿಗಳ (Birds) ಲೋಕವಿದು. ಯೆಸ್, ಎಲಿಯ ನಡುಗೂಡಿ ಗ್ರಾಮದ ನಿತ್ಯಾನಂದ ಶೆಟ್ಟಿ ತಮ್ಮ ಎರಡು ಎಕರೆ ಪ್ರದೇಶವನ್ನ ಹಕ್ಕಿಗಳಿಗಾಗೇ ಮೀಸಲಿಟ್ಟಿದ್ದಾರೆ. ದಿನನಿತ್ಯ ಹಕ್ಕಿಗಳಿಗಾಗಿ ಕಾಳು, ನೀರು ಇರಿಸುವ ನಿತ್ಯಾನಂದ ಶೆಟ್ಟಿ, ಪಕ್ಷಿಗಳಿಗಾಗಿ ಕೃತಕ ಗೂಡುಗಳನ್ನ ನಿರ್ಮಿಸಿ ಆಶ್ರಯ ನೀಡ್ತಿದ್ದಾರೆ.
ಇದನ್ನೂ ಓದಿ: Dakshina Kannada: ಅಷ್ಟಮಂಗಲದ ಪ್ರಕಾರವೇ ಪತ್ತೆಯಾಯ್ತು ಶಿವಲಿಂಗ!
ಪಾಲಕರ ಅಂತ್ಯಕ್ರಿಯೆಗೂ ಗಿಡಗಳ ದಾನ!
ಅಷ್ಟೆ ಅಲ್ಲ ಕಣ್ರೀ, ಈ ಶೆಟ್ರು ತಮ್ಮ ತಂದೆ - ತಾಯಿಯ ಅಂತ್ಯಕ್ರಿಯೆಯಲ್ಲಿ ಬದನೆ ಗಿಡಗಳನ್ನ ದಾನ ಮಾಡಿದ್ರು. ಹೆಂಡತಿಯ ಸೀಮಂತಕ್ಕೂ ಹಲವು ವಿಧದ ಹಸಿರು ಗಿಡಗಳನ್ನ ದಾನ ಕೊಟ್ಟಿದ್ರು. ಜೊತೆಗೆ ಈ ದಂಪತಿ ಇನ್ನೂರಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಪಕ್ಷಿಗಳ ಬಗ್ಗೆ ತಿಳಿವಳಿಕೆ ಮೂಡಿಸ್ತಿದ್ದಾರೆ. ಮೃತಪಟ್ಟ ಪಕ್ಷಿಗಳ ಅಂತ್ಯಕ್ರಿಯೆ ಮಾಡುವ ನಿತ್ಯಾನಂದ ದಂಪತಿ ಪರಿಸರ ಪ್ರಜ್ಞೆ ಮೆರೆಯುತ್ತಿದ್ದಾರೆ.
120ಕ್ಕೂ ಹೆಚ್ಚು ಪಕ್ಷಿಗಳು ಇಲ್ಲಿವೆ!
ನಿತ್ಯಾನಂದ ಶೆಟ್ಟಿ ದಂಪತಿ ಈ ಪರಿಸರ ಕಾಳಜಿಗೆ ಹಕ್ಕಿಗಳೂ ಶರಣಾಗಿವೆ. ಹಾಗಾಗಿ ಇಲ್ಲಿಗೆ ಆಗಮಿಸೋ ಯಾವೊಂದು ಹಕ್ಕಿಗಳು ಹಿಂದಿರುಗಿ ಹೋಗಲ್ವಂತೆ. ಸದ್ಯ ನೂರಿಪ್ಪತ್ತಕ್ಕೂ ಹೆಚ್ಚು ಜಾತಿಯ ಪಕ್ಷಿಗಳು, ತೊಂಭತ್ತೈದಕ್ಕೂ ಹೆಚ್ಚು ಬಗೆಯ ಪಾತರಗಿತ್ತಿಗಳು ಇಲ್ಲಿ ನೆಲೆಸಿವೆ.
ಇದನ್ನೂ ಓದಿ: Jodukare Kambala: ರಣ ರೋಚಕ ಜೋಡುಕರೆ ಕಂಬಳ, ಕುದುರೆಗಳೂ ನಾಚುವಂತೆ ಓಡಿದ ಕೋಣಗಳು!
ಒಮ್ಮೆ ಶೆಟ್ರ ತೋಟಕ್ಕೆ ಭೇಟಿಕೊಟ್ರೆ ಸಾಕು, ಮೈಮನ ಪುಳಕಿತವಾಗುತ್ತೆ. ಒಟ್ಟಿನಲ್ಲಿ, ಕಾಂಕ್ರೀಟ್ ಕಾಡುಗಳಲ್ಲಿ ಕಳೆದು ಹೋದ ಪಕ್ಷಿಗಳನ್ನ ಮತ್ತೆ ಉಳಿಸಿ ಬೆಳೆಸುವ ಇವರ ನಿತ್ಯಾನಂದ ಶೆಟ್ಟಿ ದಂಪತಿಯ ಪ್ರಯತ್ನಕ್ಕೆ ಹ್ಯಾಟ್ಸಾಪ್ ಹೇಳಲೇಬೇಕು.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ