ದಕ್ಷಿಣ ಕನ್ನಡ: ಸಾಲು ಸಾಲು ಮೆಡಲ್ಗಳು (Medal), ಪಕ್ಕದಲ್ಲಿ ಕಾಣ ಸಿಗೋ ಸರ್ಟಿಫಿಕೇಟ್, ಸ್ಮರಣಿಕೆಗಳು. ಅಲ್ಲೇ ಕೂತು ವಿವಿಧ ಗೇಮ್ ನಲ್ಲಿ (Game) ತೊಡಗಿರೋ ವಿಶೇಷ ಮಕ್ಕಳು (Special Kids). ಹೌದು, ಈ ಎಲ್ಲ ಮೆಡಲ್, ಪ್ರೈಝ್ ಗಳೆಲ್ಲವೂ ಇದೇ ಮಕ್ಕಳದ್ದು ಅಂದ್ರೆ ನೀವ್ ನಂಬ್ಲೇಬೇಕು. ಅಷ್ಟಕ್ಕೂ ಇಷ್ಟೊಂದು ಬಹುಮಾನ ಗಳಿಸಿದ್ದು ಕೇವಲ ಕೆಲವೇ ವರ್ಷದಲ್ಲಿ ಅನ್ನೋದು ಈ ಸಂಸ್ಥೆಯ ಹೆಗ್ಗಳಿಕೆ. ಹಾಗಿದ್ರೆ ಆ ಸಂಸ್ಥೆ ಯಾವುದು? ಇಲ್ಲಿನ ವಿಶೇಷತೆ ಏನು? ಎಲ್ಲವನ್ನೂ ಹೇಳ್ತೀವಿ ನೋಡಿ
ಸ್ಫೂರ್ತಿದಾಯಕ ಶಾಲೆ
ಯೆಸ್, ಇದು ದಕ್ಷಿಣ ಕನ್ನಡದ ಮೂಡುಬಿದಿರೆಯ ಅರಮನೆ ಬಾಗಿಲ ಬಳಿ ಇರುವ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆ. ಹೇಳೋದಕ್ಕೆ ಇದೇನೋ ವಿಶೇಷ ಮಕ್ಕಳ ಶಾಲೆ. ಆದ್ರೆ ಇಲ್ಲಿರೋ ಮಕ್ಕಳ ಸಾಧನೆ ನೋಡಿದ್ರೆ ನಿಜಕ್ಕೂ ಭೇಷ್ ಎನಿಸುವಂತಿದೆ. ಎಲ್ಲೇ ವಿಶೇಷ ಚೇತನ ಮಕ್ಕಳ ಸ್ಪರ್ಧೆ ಇತ್ತು ಅಂದ್ರೆ ಅದ್ರಲ್ಲಿ ಈ ಮೂಡುಬಿದಿರೆಯ ಸ್ಫೂರ್ತಿ ಶಾಲೆಯ ವಿಶೇಷ ಮಕ್ಕಳ ಸಾಧನೆ ಮುಂಚೂಣಿಯಲ್ಲಿ ಕಾಣಬಹುದಾಗಿದೆ.
ಹೀಗೆ ಈ ಶಾಲೆ ನಿರ್ಮಾಣವಾಗಿ ಕಳೆದ ಆರು ವರ್ಷದಲ್ಲಿ ಬರೋಬ್ಬರಿ ನಾಲ್ಕು ನೂರು ಮೆಡಲ್ ಬಾಚಿಕೊಂಡಿದೆ. ಇನ್ನೊಂದು ವಿಶೇಷ ಅಂದ್ರೆ, ವಿಶೇಷ ಚೇತನರ ಒಲಂಪಿಕ್‌ಗೆ ರಾಷ್ಟ್ರಮಟ್ಟದಲ್ಲಿ ಕರ್ನಾಟಕದಿಂದ ಏಕೈಕ ಪ್ರತಿಭೆಯನ್ನ ಕೊಂಡೊಯ್ದ ಕೀರ್ತಿ ಈ ಶಾಲೆಯದ್ದು. ಇಲ್ಲಿ ಮಕ್ಕಳಿಗಾಗಿ ಸೈನ್ ಲಾಂಗ್ವೇಜ್ , ಜಿಮ್ ತರಬೇತಿ, ಸ್ಪೀಚ್ ಟ್ರೈನಿಂಗ್ ಜೊತೆಗೆ ಬದುಕಲು ಬೇಕಾಗುವ ಎಲ್ಲ ರೀತಿಯ ಕರಕುಶಲ ಕಲೆಯನ್ನ ಕಲಿಸಿಕೊಡಲಾಗುತ್ತದೆ.
ಉಚಿತ ಶುಲ್ಕ, ಉತ್ತಮ ತರಬೇತಿ
ಜೊತೆಗೆ ಈ ಶಾಲೆಯಲ್ಲಿ ಮಕ್ಕಳಿಗೆ ಯಾವುದೇ ಶುಲ್ಕ ವಿಧಿಸಲಾಗಲ್ಲ. ಹಾಗಾಗಿ 33 ಮಕ್ಕಳಿಂದ ಶುರುವಾದ ಶಾಲೆಯಲ್ಲಿದೀಗ ಬರೋಬ್ಬರಿ ಅರವತ್ತಾರು ಮಕ್ಕಳಿದ್ದಾರೆ. ಹದಿನಾಲ್ಕು ಮಂದಿ ಸಿಬ್ಬಂದಿಗಳಿದ್ದಾರೆ. ದಾನಿಗಳು ನೀಡಿದ ನೆರವಿನಿಂದ ಇದುವರೆಗೂ ಈ ಶಾಲೆಯನ್ನ ಇದರ ನಿರ್ಮಾತೃ ಪ್ರಕಾಶ್ ಶೆಟ್ಟಿಗಾರ್ ನಡೆಸಿಕೊಂಡು ಬಂದಿದ್ದಾರೆ. ಇಲ್ಲಿನ ಮಕ್ಕಳು ಮಾಡಿದ ಕರಕುಶಲ ವಸ್ತುಗಳನ್ನು ಬೇರೆ ಬೇರೆ ಕಾರ್ಯಕ್ರಮದಲ್ಲಿ ಮಾರಾಟ ಮಾಡುವ ಮೂಲಕ ಆದಾಯ ಗಳಿಸುವ ಪ್ರಯತ್ನವನ್ನೂ ಮಾಡಿದ್ದಾರೆ.
ಪ್ರಕಾಶ ಎಂಬ ಪ್ರೇರಕ ಶಕ್ತಿ
ಏಳನೇ ತರಗತಿಯಲ್ಲಿ ಅಂಗವೈಕಲ್ಯಕ್ಕೊಳಗಾದ ಪ್ರಕಾಶ್ ಶೆಟ್ಟಿಗಾರ್ ತೀವ್ರ ಅವಮಾನಕ್ಕೀಡಾಗಿದ್ದರು. ಮುಂದೆ ಅವರ ಇಬ್ಬರು ಮಕ್ಕಳಲ್ಲಿ ಒಂದು ಮಗು ವಿಶೇಷ ಚೇತನರಾಗಿದ್ದರಿಂದ ವಿಶೇಷ ಚೇತನರಿಗಾಗಿ ಏನಾದರೂ ಮಾಡಬೇಕೆಂಬ ಆಸೆ ಹೊಂದಿದ್ದರು.
ಇದರ ಫಲವಾಗಿ ಸ್ಫೂರ್ತಿ ಹೆಸರಿನ ಈ ಶಾಲೆ ತಲೆ ಎತ್ತಿದೆ. ಈ ಶಾಲೆ ನಿರ್ವಹಣೆಗೆ ಏನಿಲ್ಲ ಅಂದ್ರೂ ತಿಂಗಳಿಗೆ ಎರಡು ಲಕ್ಷ ರೂಪಾಯಿ ಖರ್ಚು ತಗಲುತ್ತವೆ. ಒಟ್ಟಿನಲ್ಲಿ ಸ್ಪೂರ್ತಿ ಶಾಲೆ ಹಾಗೂ ಪ್ರಕಾಶ್ ಶೆಟ್ಟಿಗಾರರ ಪ್ರಯತ್ನಕ್ಕೆ ಒಳ್ಳೆಯ ಫಲಿತಾಂಶ ಸಿಕ್ಕಿದ್ದು ವಿಶೇಷ ಚೇತನ ಮಕ್ಕಳ ಪ್ರತಿಭೆಗಳಿಗೆ ಜನ ಭೇಷ್ ಅನ್ನುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ