ದಕ್ಷಿಣ ಕನ್ನಡ: ಎಲ್ನೋಡಿದ್ರೂ ವೆರೈಟಿ, ವೆರೈಟಿ ಗಿಡಗಳು. ಕಣ್ಣು ಹಾಯಿಸಿದಲೆಲ್ಲಾ ಹಸಿರೋ ಹಸಿರು. ಸೊಂಪಾಗಿ ಬೆಳೆದ ಬಿದಿರು, ಹಲಸು, ಮಾವು, ಪೈನಾಪಲ್, ಪೇರಳೆ, ಮಾವು ಹೀಗೆ ಲೆಕ್ಕವಿಲ್ಲದಷ್ಟು ಮರಗಿಡಗಳು. ಇಲ್ಲಿನ ವೆರೈಟಿಯನ್ನ ಕಣ್ತುಂಬಿಕೊಳ್ಳುತ್ತಾ ಹೋದ್ರೆ ಸಮಯ ಹೋಗಿದ್ದೇ ತಿಳಿಯದು. ಇಷ್ಟೊಂದು ದೊಡ್ಡ ಈ ಹಚ್ಚ ಹಸಿರ ಕಾಡಿಗೆ (Forest) ಒಂದು ಸುದೀರ್ಘ ಇತಿಹಾಸವೇ ಇದೆ. ಅಂದಹಾಗೆ ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ (Dakshina Kannada News) ಸೋನ್ಸ್ ಫಾರ್ಮ್.
ಹೌದು, ಇದು ಅಂತಿಂತಾ ಫಾರ್ಮ್ ಅಲ್ಲ ಅದೆಷ್ಟೋ ದಶಕಗಳ ಇತಿಹಾಸವಿದೆ. ಇಲ್ಲಿ ಸಣ್ಣ ಸಣ್ಣ ಗಿಡಗಳಿಂದ ಹಿಡಿದು ದೊಡ್ಡ ದೊಡ್ಡ ಮರಗಳಿವೆ. ಎಲ್ಲವೂ ವಿಸ್ತಾರವಾದ ಈ ಫಾರ್ಮ್ ನಲ್ಲಿ ಹರಡಿಕೊಂಡಿದ್ದು, ಒಂದೊಂದು ಬೆಳೆಯ ಪಾರುಪತ್ಯ ಕಣ್ಣಿಗೆ ಸೋಜಿಗವೆನಿಸುತ್ತದೆ. ಗೇರು ಗಿಡದಿಂದ ಹಿಡಿದು ಬಟ್ಟರ್ ಪ್ರೂಟ್ ವರೆಗೆ ವಿವಿಧ ಬಗೆ ಗಿಡಗಳು ಇಲ್ಲಿವೆ.
ಎಲ್ಲಿದೆ ಈ ಫಾರ್ಮ್?
ದಕ್ಷಿಣ ಕನ್ನಡದ ಮೂಡುಬಿದ್ರಿಯ ಬೆಳುವಾಯಿ ಸಮೀಪ ಈ ಫಾರ್ಮ್ ಇದೆ. ಬರೋಬ್ಬರಿ ನೂರು ಎಕರೆ ವಿಸ್ತೀರ್ಣದ ಈ ಫಾರ್ಮ್ ನೋಡೋಕೆ ಅದೆಷ್ಟೋ ಕೃಷಿ ಆಸಕ್ತರು ಇಲ್ಲಿಗೆ ಆಗಮಿಸುವುದು ಇದೆ. ಅವರೆಲ್ಲರಿಗೂ ಇಲ್ಲಿನ ಸೋನ್ಸ್ ಫಾರ್ಮ್ ತೆರೆದ ಪುಸ್ತಕದಂತೆ ಮಾರ್ಗದರ್ಶನ ನೀಡುತ್ತಿದೆ.
ಇದನ್ನೂ ಓದಿ: Birthday: ಗೋಶಾಲೆಯಲ್ಲಿ ಮಗುವಿನ ಮೊದಲ ಬರ್ತ್ ಡೇ ಆಚರಿಸಿಕೊಂಡ ದಂಪತಿ
ವಿಶೇಷ ಅಂದ್ರೆ ಈ ನೂರು ಎಕ್ರೆ ಜಮೀನನ್ನ ಬ್ರಿಟಷ್ ಆಡಳಿತದಲ್ಲಿ ಜರ್ಮನ್ ಹಾಗೂ ಸ್ವೀಡಿಷ್ ಮಿಶನರಿಗಳು ಕೃಷಿಗಾಗಿ ಬಳಸಿದ್ದರಂತೆ. ನಂತರದಲ್ಲಿ ಸೋನ್ಸ್ ಅವರಿಗೆ ದೊರಕಿದ ಈ ಫಾರ್ಮ್ ಸೋನ್ಸ್ ಫಾರ್ಮ್ ಎಂದೇ ಹೆಸರು ಪಡೆದು ಆ ಮೂಲಕ ಇನ್ನಷ್ಟು ಸಂಪದ್ಭರಿತ ಭೂಮಿಯಾಗಿ ಬದಲಾಯಿತು. ಅಷ್ಟೇ ಅಲ್ಲ, ಈ ಫಾರ್ಮ್ ನೋಡೋದಕ್ಕೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಕೂಡ ಬಂದಿದ್ದರಂತೆ. ಅಷ್ಟರ ಮಟ್ಟಿಗೆ ದಶಕಗಳಿಂದ ಈ ಸೋನ್ಸ್ ಫಾರ್ಮ್ ಹೆಸರು ಪಡೆದಿದೆ. ಇನ್ನು ಉತ್ತರ ಕನ್ನಡದ ಬನವಾಸಿಯ ಬಹುಭಾಗ ಆವರಿಸಿದ್ದ ಅನಾನಸ್ ಕೂಡ ಇದೆ ಸೋನ್ಸ್ ಫಾರ್ಮ್ ಹೋಗಿರುವುದು ಇನ್ನೊಂದು ವಿಶೇಷ.
ಇದನ್ನೂ ಓದಿ: Arecanut Farmers: ಅಡಿಕೆ ತೋಟದಲ್ಲಿ ಡ್ರೋನ್ ಸದ್ದು! ಎಲೆಚುಕ್ಕಿ ರೋಗಕ್ಕೆ ಹೊಸ ಪರಿಹಾರ!
ಸೋನ್ಸ್ ಫಾರ್ಮ್ಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಸೋನ್ಸ್ ಫಾರ್ಮ್ ನಲ್ಲಿ ಯುಎಸ್, ಇಸ್ರೇಲ್ ಸೇರಿದಂತೆ ವಿವಿಧ ದೇಶಗಳ ಕೃಷಿ ಮಾದರಿಯನ್ನು ಅನುಸರಿಸಿ ಅಧಿಕ ಇಳುವರಿ ಪಡೆಯುತ್ತಿದ್ದಾರೆ. ಯುಎಸ್ ನಿಂದ ಕಲಿತು ಬಂದಿದ್ದ ಹೆಚ್.ಎಲ್ ಸೋನ್ಸ್ ತಮ್ಮ ಭೂಮಿಯಲ್ಲಿ ಯಶಸ್ವಿ ಕೃಷಿ ಮಾಡಿದ್ದಲ್ಲದೆ, ಆಸಕ್ತ ಕೃಷಿಕರಿಗೂ ತಮ್ಮ ಕೃಷಿ ಭೂಮಿಯನ್ನ ನೋಡಿ, ಕಲಿಯುವಂತಹ ಅವಕಾಶ ನೀಡಿದ್ದಾರೆ. ಹೀಗೆ ಸೋನ್ಸ್ ಫಾರ್ಮ್ ಒಂದು ಅಧ್ಯಯನಶೀಲ ಫಾರ್ಮ್ ಕೂಡಾ ಆಗಿದ್ದು, ನೂರು ಎಕರೆಯಲ್ಲಿ ಒಂದು ಅದ್ಭುತವನ್ನೇ ಸೃಷ್ಟಿಸಿದಂತಿದೆ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ