ದಕ್ಷಿಣ ಕನ್ನಡ: ಒಂದು ಕಡೆ ಚೆಂಡೆ, ವಾದ್ಯಗಳ ಸದ್ದಿನ ನಡುವೆ ನಡೆಯುತ್ತಿರುವ ಪೂಜೆ, ಇನ್ನೊಂದೆಡೆ ಭಕ್ತಿಯಿಂದ ಕೈ ಮುಗಿದು ದೇವರನ್ನ ಪ್ರಾರ್ಥಿಸುತ್ತಿರೋ ಭಕ್ತರು. ಹೀಗೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಗ್ರಾಮಕ್ಕೆ ಗ್ರಾಮವೇ ಒಂದಾಗಿ ಸಂಕಷ್ಟದಿಂದ ಪಾರು ಮಾಡುವಂತೆ ಬೇಡಿಕೊಳ್ಳುತ್ತಿದೆ. ಅಪಾಯದಿಂದ ಮುಕ್ತಿ ಕೊಡು ಎಂದು ಕೇಳುತ್ತಿದೆ. ಹಾಗಿದ್ರೆ ಅಂತಹ ಸಂಕಷ್ಟ ಈ ಊರಿಗೆ ಏನಾಗಿತ್ತು ಅಂತೀರ? ಕೇಳಿದ್ರೆ ಅರೆ ಕ್ಷಣ ನೀವೇ ಶಾಕ್ ಆಗ್ತೀರ.
ಅಚ್ಚರಿಯ ಸಾವುಗಳು!
ಹೇಳಿಕೇಳಿ ಇದು ದೇವರ ಸ್ವಂತ ನಾಡು ಎಂದು ಕರೆಸಿಕೊಂಡ, ಕರ್ನಾಟಕ ಗಡಿಭಾಗದ ಕೇರಳದ ಉಪ್ಪಳ ಸಮೀಪದ ಬೇಕೂರು ಗ್ರಾಮದ ಬೊಳ್ಳಾರು ಎಂಬ ಕುಗ್ರಾಮ. ಆ ಗ್ರಾಮದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 35 ಕ್ಕೂ ಮಿಕ್ಕ ಸಾವುಗಳಾಗಿವೆ. ಅದ್ಯಾವುದೂ ಸಹಜ ಸಾವು ಅನ್ನೋದಕ್ಕಿಂತಲೂ ಏಕಾಏಕಿಯಾಗಿ ಅಕಾಲಿಕವಾಗಿ ನಡೆದ ಸಾವೇ ಹೆಚ್ಚು.
ಸಾವಿನಿಂದ ಕಂಗೆಟ್ಟ ಗ್ರಾಮ
ಹದಿಹರೆಯದವರಿಂದ ಹಿಡಿದು ಎಲ್ಲಾ ವಯೋಮಾನದವರು ಇಲ್ಲಿ ಸಾವನ್ನಪ್ಪಿದ್ದರು. ಈ ಸಾವಿಗೆ ಕಾರಣವೇನು ಅನ್ನೋದನ್ನ ಹುಡುಕಲು ಹೊರಟಾಗ ಅಲ್ಲಿ ಸಾನಿಧ್ಯವೊಂದು ಪೂಜೆ-ಪುನಸ್ಕಾರವಿಲ್ಲದೆ ಪಾಳುಬಿದ್ದಿರುವ ವಿಚಾರ ಬೆಳಕಿಗೆ ಬಂದಿದೆ. ಹೀಗೆ ಗೊತ್ತಾಗುತ್ತಲೇ ಇದೀಗ ದೈವಜ್ಞರ ಪ್ರಶ್ನೆ ಚಿಂತನೆಯಂತೆ ಪಾಳುಬಿದ್ದ ನಾಗನ ಸನ್ನಿದಿ, ರಕ್ತೇಶ್ವರಿ ಮತ್ತು ಗುಳಿಗ ದೈವದ ಕಟ್ಟೆ ಮಾಡಿ ಪ್ರತಿಷ್ಠಾಪನೆ ನಡೆದಿದೆ. ಹೀಗಾಗಿ ನಾಗ ದೇವರು, ಕಾರಣಿಕ ದೈವಗಳ ಮುಂದೆ ನಿಂತು ಜನ ಅನಿಷ್ಟವನ್ನೆಲ್ಲ ದೂರ ಮಾಡುವಂತೆ ಬೇಡಿಕೊಂಡರು.
ಪತ್ತೆಯಾಗಿತ್ತು ಶಿವಲಿಂಗ!
ಹಾಗಂತ ಈ ತೊಂದರೆಗೆ ಹಿನ್ನೆಲೆಯೂ ಇದೆ. ಹಲವು ವರ್ಷಗಳ ಹಿಂದೆ ಇಲ್ಲಿ ಆರಾಧಿಸಲ್ಪಡುತ್ತಿದ್ದ ನಾಗನ ಕಟ್ಟೆ ಹತ್ತಿಪ್ಪತ್ತು ವರ್ಷಗಳಿಂದ ಪಾಳುಬಿದ್ದಿತ್ತು. ಈ ನಡುವೆ ಇಲ್ಲಿ ಬೇಸಾಯ ಮಾಡುತ್ತಿದ್ದ ಗದ್ದೆಯೊಂದರಲ್ಲಿ ರಾತ್ರಿ ವೇಳೆಯಲ್ಲಿ ಪ್ರಕಾಶಮಾನವಾದ ಬೆಳಕೊಂದು ಊರಿನ ಜನರ ಗೋಚರಕ್ಕೆ ಬಂದಿತ್ತು. ಇಂಥ ಪ್ರಕಾಶಮಾನವಾದ ಬೆಳಕು ಯಾವುದೆಂದು ಆಶ್ಚರ್ಯಗೊಂಡ ಗ್ರಾಮದ ಜನ ಅಷ್ಟಮಂಗಲ ಪ್ರಶ್ನೆಯಲ್ಲಿ ಹೇಳಿದಂತೆ ಗದ್ದೆಯನ್ನು ಅಗೆದ ಸಮಯದಲ್ಲಿ ಗದ್ದೆಯಲ್ಲಿ ಶಿವಲಿಂಗವೊಂದು ಪತ್ತೆಯಾಗಿದೆ.
ಪೂಜೆ ಸ್ಥಗಿತದ ಎಫೆಕ್ಟ್!
ಪತ್ತೆಯಾದ ಶಿವಲಿಂಗವನ್ನು ಸ್ಥಳೀಯ ವ್ಯಕ್ತಿಯೊಬ್ಬರು ತನ್ನ ಬಾವಿಗೆ ಹಾಕಿದ್ದರಂತೆ. ಆದರೆ ಬಾವಿಯ ಕಟ್ಟೆಯಲ್ಲಿ ಶಿವಲಿಂಗಕ್ಕೆ ದೀಪವನ್ನು ಇಡುವ ಆರಾಧಿಸಿಕೊಂಡು ಬರುತ್ತಿದ್ದರು. ಬಾವಿಯಲ್ಲಿದ್ದ ಶಿವಲಿಂಗಕ್ಕೆ ನಂತರದ ದಿನಗಳಲ್ಲಿ ದೀಪ ಇಡುವ ಪ್ರಕ್ರಿಯೆ ನಿಂತು ಹೋಗಿತ್ತು. ಆ ಬಳಿಕ ಗ್ರಾಮದಲ್ಲಿ ಅಕಾಲಿಕ ಮರಣಗಳ ಸಂಖ್ಯೆ ಹೆಚ್ಚಾಗಿತ್ತು ಎಂದು ಹೇಳಲಾಗಿದೆ. ಹೀಗೆ ಮತ್ತೆ ಅಷ್ಟಮಂಗಲವಿಟ್ಟಾಗ ಅಕಾಲಿಕ ಮರಣಕ್ಕೆ ಕಾರಣ ಬಯಲಾಗಿದೆ.
ದೇಗುಲ ನಿರ್ಮಾಣಕ್ಕೆ ನಿರ್ಧಾರ
ಗ್ರಾಮದಲ್ಲಿ ಹಿಂದೆ ಚಂದ್ರಮೌಳೀಶ್ವರ ದೇವರಿಗೆ ಆರಾಧನೆ ನಡೆದುಕೊಂಡು ಬರುತ್ತಿದ್ದು, ಆ ದೇವಸ್ಥಾನಕ್ಕೆ ಸಂಬಂಧಪಟ್ಟ ಶಿವಲಿಂಗ ಇದೀಗ ಬಾವಿಯಲ್ಲಿದೆ ಎಂದು ತಿಳಿದುಬಂದಿತ್ತು. ಚಂದ್ರಮೌಳೀಶ್ವರ ದೇವಸ್ಥಾನದ ನಿರ್ಮಾಣ ಜೊತೆಗೆ ಅದಕ್ಕೆ ಮೊದಲು ಕ್ಷೇತ್ರಕ್ಕೆ ಸಂಬಂಧಪಟ್ಟ ನಾಗನಬನ,ರಕ್ತೇಶ್ವರಿ ಕಟ್ಟೆ ಮತ್ತು ಗುಳಿಗ ದೈವದ ಕಟ್ಟೆ ಜೀರ್ಣೋದ್ಧಾರ ನಡೆಯಬೇಕು ಎಂದು ದೈವಜ್ಞರು ತಿಳಿಸಿದ್ದರು.
ಇದನ್ನೂ ಓದಿ: Tree Bike In Dakshina Kannada: ಅಡಿಕೆ, ತೆಂಗು ಮಾತ್ರವಲ್ಲ, ಈ ಯಂತ್ರದಿಂದ ಸಲೀಸಾಗಿ ಎಲ್ಲಾ ಮರ ಏರಬಹುದು!
ದೂರವಾದ ಆತಂಕ
ಈ ಹಿನ್ನಲೆಯಲ್ಲಿ ಗ್ರಾಮದ ಜನರೆಲ್ಲಾ ಒಟ್ಟು ಸೇರಿ ಇಂದು ನಾಗನಕಟ್ಟೆ ಪ್ರತಿಷ್ಠಾಪನೆ, ರಕ್ತೇಶ್ವರಿ ದೈವದ ಕಟ್ಟೆ ಮತ್ತು ಗುಳಿಗನ ಕಟ್ಟೆಯನ್ನು ಹೊಸದಾಗಿ ನಿರ್ಮಿಸುವ ಮೂಲಕ ಚಂದ್ರಮೌಳೀಶ್ವರ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: Dakshina Kannada: ಒಂದೇ ಎಕರೆಯಲ್ಲಿ 30 ವಿಧದ 60 ಹಲಸಿನ ಮರಗಳನ್ನು ಬೆಳೆದ ವಿಟ್ಲದ ಕೃಷಿಕ!
ಒಟ್ಟಿನಲ್ಲಿ ತುಳುನಾಡಿನ ಭಾಗವೇ ಆಗಿರುವ ಉಪ್ಪಳದಲ್ಲಿ ಇಂತಹ ವಿಚಿತ್ರ ಘಟನೆ ನಡೆದಿದ್ದು ಕುತೂಹಲ ಕೆರಳಿಸುವಂತೆ ಮಾಡಿದೆ. ಇದೀಗ ನೂತನ ದೇಗುಲದ ನಿರ್ಮಾಣ, ದೈವ, ದೇವರುಗಳ ಪ್ರತಿಷ್ಠಾಪನೆ ನಡೆಯುತ್ತಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ