ಕಂಬದೊಳಗೊಂದು ಕಂಬ, ಎಣಿಸುತ್ತಾ ಹೋದ್ರೆ ಮುಗಿಯೋದೇ ಇಲ್ಲ, ನಂಬರ್ಗಳೇ ಸಾಲಲ್ಲ! ಇಲ್ಲಿಗೆ ಪ್ರವೇಶಿಸುತ್ತಲೇ ಸ್ವಾಗತಿಸೋ ನವನಾರಿ ಕುಂಜರ, ಅಷ್ಟೇ ಅಲ್ಲ ಅಷ್ಟನಾರಿ ತುರಗ, ವಾಲ್ಯ, ಒಳಗಡೆ ಸ್ಥಿರವಾಗಿ ನಿಂತಿರುವ ಚಂದ್ರನಾಥ. ಹಾಗಿದ್ರೆ ಲೆಕ್ಕಕ್ಕೂ ಸಿಗದ ಈ ಕಂಬಗಳ ವಾಸ್ತು ಶಿಲ್ಪ ಇರೋದು ಎಲ್ಲಿ ಅಂತೀರಾ? ಹೇಳ್ತೀವಿ ನೋಡಿ. ಯೆಸ್, ಕಂಬಗಳ ಲೆಕ್ಕ ಹಾಕ್ತಾ ಹೋದ್ರೆ ಹೊಸ ಕಂಬಗಳು (Saavira Kambada Basadi) ಹುಟ್ಟಿಕೊಳ್ಳುತ್ವೆ ಅನ್ನೋ ಪ್ರತೀತಿಯಿದೆ. ಮಂಗಳೂರಿನ ಮೂಡುಬಿದಿರೆಯ (Thousand Pillar Temple Moodbidri) ತ್ರಿಭುವನ ತಿಲಕ ಚೂಡಾಮಣಿ ಬಸದಿಯೇ ಸಾವಿರ ಕಂಬಗಳ ಬಸದಿ ಎಂದು ಫೇಮಸ್ ಆಗಿರೋದು.
ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಪ್ರವಾಸಿಗರು ಈ ಸಾವಿರ ಕಂಬದ ಬಸದಿ ನೋಡೋಕೆ ಮಿಸ್ ಮಾಡಲ್ಲ. ಮೂಡುಬಿದಿರೆ ಪೇಟೆಯಿಂದ ಕೂಗಳತೆ ದೂರದಲ್ಲಿದ್ದರೂ ಶಾಂತವಾಗಿ ತಲೆ ಎತ್ತಿ ನಿಂತಿರೋ ಈ ಬಸದಿ ಪ್ರವೇಶ ದ್ವಾರ, ಸುತ್ತಮುತ್ತಲ ಪರಿಸರ ಹಳೇಕಾಲಕ್ಕೆ ನಮ್ಮನ್ನು ಕೊಂಡೊಯ್ಯುತ್ತವೆ.
ಜೈನ ಬಸದಿಗಳ ಇತಿಹಾಸದಲ್ಲೇ ಅದ್ವಿತೀಯ!
15ನೇ ಶತಮಾನದಲ್ಲಿ ಸ್ಥಳೀಯ ಆಡಳಿತಗಾರನಾಗಿದ್ದ ದೇವರಾಯ ಒಡೆಯರ್ ಈ ಸಾವಿರ ಕಂಬದ ಬಸದಿ ನಿರ್ಮಾತೃ ಎಂದು ಇತಿಹಾಸ ಹೇಳುತ್ತೆ. ಫ್ರಾನ್ಸ್ ದೇಶದಿಂದ ತರಲಾದ ಟೈಲ್ಸ್, ಅಷ್ಟನಾರಿ ತುರಗ, ನವನಾರಿ ತುರಗಗಳು ಇಲ್ಲಿನ ವಿಶೇಷತೆ. ಕಂಬಗಳ ಶೈಲಿ, ಪ್ರಾಚೀನ ಶಿಲೆಗಳು ಜೈನ ಬಸದಿಗಳ ಇತಿಹಾಸದಲ್ಲೇ ಅದ್ವಿತೀಯ ಎನಿಸಿಕೊಳ್ಳುತ್ತವೆ. ಈ ಬಸದಿ ನಿರ್ಮಾಣಕ್ಕೆ 31 ವರ್ಷಗಳ ಕಾಲ ತಗುಲಿತ್ತು ಅನ್ನೋದೇ ಈ ಬಸದಿಯ ವಾಸ್ತುಶಿಲ್ಪದ ಸೌಂದರ್ಯವನ್ನ ಜಗಜ್ಜಾಹೀರು ಮಾಡುತ್ತೆ.
ಚೀನಾ, ನೇಪಾಳ ಶೈಲಿಯೂ ಇಲ್ಲಿದೆ
ಎಂಟು ಅಡಿಯ ಚಂದ್ರನಾಥ ಸ್ವಾಮಿ ಇಲ್ಲಿನ ಪ್ರಧಾನ ದೇವತೆ. ಬಸದಿಯ ವಾಸ್ತುಶಿಲ್ಪದಲ್ಲಿ ಚೀನಾದ ಪ್ರಭಾವವೂ ಇದೆಯಂತೆ. ಯಾವ ಬಸದಿಯಲ್ಲೂ ಕಾಣಸಿಗದ ಡ್ರಾಗನ್ಗಳು, ಜಿರಾಫೆ ಕೆತ್ತನೆಗಳು ಇಲ್ಲಿರೋ ಕೆತ್ತನೆಗಳಲ್ಲಿವೆ. ಜೊತೆಗೆ ನೇಪಾಳದ ಶೈಲಿಯೂ ಈ ಬಸದಿಯ ವಿಶೇಷ.
ಸಾವಿರ ಕಂಬದ ಬಸದಿಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಹೇಗೆ ಬರೋದು ನೋಡಿ
ಮಂಗಳೂರಿನಿಂದ 35 ಕಿಲೋ ಮೀಟರ್ ದೂರದಲ್ಲಿರೋ ಇಲ್ಲಿಗೆ ಬರಬೇಕೆಂದರೆ ಬೇಕಾದಷ್ಟು ಬಸ್ಗಳಿವೆ. ಮೂಡುಬಿದಿರೆ ಪೇಟೆ ತಲುಪಿದರೆ ಕೆಲವೇ ಮೀಟರ್ಗಳ ಅಂತರದಲ್ಲಿ ಈ ಸಾವಿರ ಕಂಬಗಳ ಬಸದಿ ಕಾಣಬಹುದು. ಹಾಗಿದ್ರೆ ಮೂಡುಬಿದಿರೆಗೆ ಆಗಮಿಸೋ ಯಾತ್ರಿಕರು ಈ ಬಸದಿ ನೋಡುವುದನ್ನು ಮರೆಯದಿರಿ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ