ಮಂಗಳೂರು: ಮಳೆಗಾಲ ಆರಂಭವಾಗ್ತಿದ್ದಂತೆ ಮಲೆನಾಡು, ಕರಾವಳಿಯಲ್ಲಿ ಬಗೆಬಗೆಯ ತಿಂಡಿ ತಿನಿಸುಗಳು ಹೊರಗೆ ಬರಲು ಆರಂಭವಾಗುತ್ತವೆ. ಅದರಲ್ಲೂ ಆಟಿ ತಿಂಗಳು ಬಂತಂದ್ರೆ ಸಾಕು, ಜೋರಾಗಿ ಬೀಸುವ ಗಾಳಿ ಮಳೆ ಮಧ್ಯೆ ಆರೋಗ್ಯವನ್ನು ಕಾಪಾಡುವ ಹಾಗೂ ಹಸಿವು ನೀಗಿಸುವ ಹಳ್ಳಿಯ ಹತ್ತಾರು ಅಡುಗೆಗಳು ಇಂದಿಗೂ ತುಳುನಾಡಿನ (Tulunadu) ಪಾಕಶಾಲೆಯಲ್ಲಿದೆ. ಅಂತಹ ತಿಂಡಿಗಳಲ್ಲಿ ʼಕೆಸುವಿನ ಪತ್ರೊಡೆʼಯೂ (Patrode) ಒಂದು. ಹಾಗಿದ್ರೆ ರುಚಿಕರವಾದ ಈ ಕೆಸುವಿನ ಪತ್ರೊಡೆ ಮಾಡುವ ರೀತಿ (Patrode Recipe) ಹೇಗೆ ಅಂತೀರ? ಅದರ ರೆಸಿಪಿ ಬಗ್ಗೆ ಮಾಹಿತಿ ಕೊಡ್ತೀವಿ ನೋಡಿ.
ಪತ್ರೊಡೆ ಮಾಡುವ ವಿಧಾನ
ಕೆಸುವು ಸಾಮಾನ್ಯವಾಗಿ ಮಳೆಗಾಲದಲ್ಲಿ ಸೊಂಪಾಗಿ ಬೆಳೆಯುತ್ತದೆ. ಹೀಗೆ ಬೆಳೆದ ಕೆಸುವಿನ ಎಲೆಯನ್ನು ತಂದು ತುಳುನಾಡಿನ ಮಂದಿ ಅಡುಗೆ ಮಾಡ್ತಾರೆ. ವಿಶೇಷವಾಗಿ ʼಕೆಸುವಿನ ಪತ್ರೊಡೆʼ ಭಾರೀ ಫೇಮಸ್. ಹಾಗಿದ್ರೆ ಕೆಸುವಿನ ಪತ್ರೊಡೆ ಮಾಡುವುದು ಹೇಗೆ ಅನ್ನೋದನ್ನ ನೋಡ್ಕೊಂಡು ಬರೋಣ.
ಮೊದಲಿಗೆ 2 ಕಪ್ ಬೆಳ್ತಿಗೆ (ದೋಸೆ) ಅಕ್ಕಿ, 1 ಕಪ್ ಕಡಲೆಬೇಳೆ, 1 ಕಪ್ ಮೆಂತೆ ಬೀಜಗಳನ್ನು 4 ಗಂಟೆಗಳ ಕಾಲ ನೆನೆಸಿಡಬೇಕು. ನಾಲ್ಕು ಗಂಟೆ ನಂತರ ಅದಕ್ಕೆ ಅರ್ಧ ಕಪ್ ತೆಂಗಿನಕಾಯಿ ತುರಿ, ಲಿಂಬೆ ಗಾತ್ರದಷ್ಟು ಬೆಲ್ಲ, ಸ್ವಲ್ಪ ಹುಣಸೆ ಹಣ್ಣು, 5 ಕೆಂಪು ಮೆಣಸಿನಕಾಯಿ, ಅರ್ಧ ಚಮಚ ಕೊತ್ತಂಬರಿ ಬೀಜ, 1 ಚಮಚ ಜೀರಿಗೆ, 1 ಚಮಚ ಅರಶಿನ, ¼ ಚಮಚ ಇಂಗಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಬೇಕು. ನಂತರ ಅದಕ್ಕೆ ಸ್ವಲ್ಪ ನೀರು ಹಾಕಿ ಮಿಕ್ಸಿಗೆ ಹಾಕಬೇಕು. ಹೀಗೆ ಹಾಕಿದ ಸಾಮಗ್ರಿಗಳನ್ನು ನುಣ್ಣಗೆ ಆಗುವಂತೆ ರುಬ್ಬಬೇಕು. ಹೆಚ್ಚು ತೆಳುವಾಗದಂತೆ ನೋಡಿಕೊಂಡು ರುಬ್ಬಬೇಕು.
ಇದನ್ನೂ ಓದಿ: Matsyagandha Express: ಕರಾವಳಿಯ ಕಣ್ಮಣಿ ಮತ್ಸ್ಯಗಂಧ ಎಕ್ಸ್ಪ್ರೆಸ್ಗೆ 25 ವರ್ಷ, ಇದು ಕೇವಲ ರೈಲಲ್ಲ, ಬದುಕು!
ನಂತರ ಹೀಗೆ ಮಾಡಿ
ಹೀಗೆ ರೆಡಿಯಾದ ಹಿಟ್ಟನ್ನು ಚೆನ್ನಾಗಿ ಸ್ವಚ್ಛ ಮಾಡಿರುವ ಕೆಸುವಿನ ಎಲೆಗಳ ಮೇಲೆ ಸವರಬೇಕು. ವಿಶೇಷವಾಗಿ ಕೆಸುವಿನ ಎಲೆಯನ್ನು ಅಂಗಾತ ಮಾಡಿ ಅದರ ಮೇಲೆ ಹಿಟ್ಟನ್ನು ಸವರಬೇಕು. ಬಳಿಕ ಅದರ ಮೇಲೆ ಮತ್ತೊಂದು ಎಲೆಯನ್ನಿಟ್ಟು ಹಿಟ್ಟು ಸವರಬೇಕು. ಹೀಗೆ ಐದರಿಂದ ಆರು ಎಲೆಗಳನ್ನು ಮೇಲಿಂದ ಮೇಲೆ ಇರಿಸಿ ಹಿಟ್ಟು ಸವರುತ್ತಾ ಹೋಗಬೇಕು. ಕೊನೆಯದಾಗಿ ರೋಲ್ ಮಾಡುವ ಮುನ್ನ ಕೆಸುವಿನ ಮೇಲೆ ಮತ್ತೆ ಹಿಟ್ಟು ಸವರಬೇಕು. ಹೀಗೆ ಸವರಿದ ಮೇಲೆ ಅದನ್ನು ನಿಧಾನವಾಗಿ ರೋಲ್ ಮಾಡಬೇಕು.
ಇಡ್ಲಿ ಪಾತ್ರೆಯಲ್ಲಿ ಇಡಿ
ಹೀಗೆ ರೋಲ್ ಮಾಡಲಾದ ಕೆಸುವಿನ ಪತ್ರೊಡೆಯನ್ನು ಇಡ್ಲಿ ಪಾತ್ರೆಯಲ್ಲಿ ಬೇಯಿಸಬೇಕು. ಸುಮಾರು ಅರ್ದ ಗಂಟೆಗಳ ಕಾಲ ಬೇಯಿಸಿ ಒಲೆ ಆರಿಸಬೇಕು. ಬಳಿಕ ಅದು ತಣ್ಣಗೆ ಆಗುವ ತನಕ ಅದನ್ನಿರಿಸಿ ಚೆನ್ನಾಗಿ ಚಾಕುವಿನಿಂದ ಚಿಕ್ಕ ಚಿಕ್ಕ ಗಾತ್ರದಲ್ಲಿ ಕತ್ತರಿಸಬೇಕು. ಹೀಗೆ ಕೆಸುವಿನ ಪತ್ರೊಡೆ ತಿನ್ನಲು ರೆಡಿಯಾಗುತ್ತೆ.
ಇದನ್ನೂ ಓದಿ: Kappa Rotti Recipe: ಬೆಳಗಿನ ತಿಂಡಿಗೆ ಮಣ್ಣಿನ ಹಂಚಿನ ಕಪ್ಪರೊಟ್ಟಿ ಮಾಡಿ, ರೆಸಿಪಿ ಇಲ್ಲಿದೆ
ಇನ್ನಷ್ಟು ರುಚಿಗೆ ಹೀಗೆ ಮಾಡಿ
ಕೆಸುವಿನ ಪತ್ರೊಡೆ ಇನ್ನಷ್ಟು ರುಚಿ ರುಚಿಯಾಗಲು ಹೀಗೆ ತುಂಡರಿಸಿದ ಪತ್ರೊಡೆಯನ್ನು ಎಣ್ಣೆ ಅಥವಾ ತುಪ್ಪದಲ್ಲಿರಿಸಿ ಸ್ವಲ್ಪ ಹುರಿಯಬೇಕು. ಹೀಗೆ ಮಾಡಿದ್ರಂತೂ ಪತ್ರೊಡೆ ತಿನ್ನಲು ಇನ್ನಷ್ಟು ಟೇಸ್ಟಿಯಾಗುತ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ