ಪುತ್ತೂರು: ಸುತ್ತಲೂ ಹಚ್ಚ ಹಸಿರ ಕಾಡು, ಪ್ರಶಾಂತವಾದ ವಾತಾವರಣದಲ್ಲಿ ಹಕ್ಕಿಗಳ ಚಿಲಿಪಿಲಿ. ಎಷ್ಟೇ ಬಿಸಿಲು ನೆತ್ತಿ ಸುಡುತ್ತಿದ್ದರೂ ಈ ಪರಿಸರದಲ್ಲಿ (World Environment Day 2023) ಮಾತ್ರ ಸೂರ್ಯನ ಪ್ರಖರತೆ ಮೆರೆಯದು. ಅಲ್ಲಲ್ಲಿ ನೀರಿನ ಹೊಂಡಗಳು, ತೋಟದ ಜೊತೆಗೆ ಕಾಡು ಮರಗಳ ಸಮೃದ್ಧ ಬೆಳೆ. ಇದೆಲ್ಲದರ ಹಿಂದಿರುವ ಮಾಂತ್ರಿಕ ಶಕ್ತಿಯೇ ಈ ಪರಿಸರ ಪ್ರೇಮಿ ಸದಾಶಿವ ಮರಿಕೆ. ನಿಜ, ಈ ಕಾಡಿನ ಹಿಂದಿನ ಕಥೆಯನ್ನ (Forest Story) ವಿಶ್ವ ಪರಿಸರದ ದಿನದಂದು ನೀವೆಲ್ಲ ಕೇಳಲೇಬೇಕು.
ಯೆಸ್, ಪ್ರಕೃತಿ ಕಲಿಸುವ ಪಾಠ, ಅದರ ಜೊತೆಗೆ ಮನುಷ್ಯ ಹೇಗೆ ಬದುಕಬೇಕು ಅನ್ನೋದನ್ನ ಕಲಿಸಿಕೊಡುತ್ತೆ. ಅದಕ್ಕೆ ಒಂದೊಳ್ಳೆ ಉದಾಹರಣೆಯೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ ಸದಾಶಿವ ಮರಿಕೆ. ವರ್ಷದ 365 ದಿನಗಳೂ ಪರಿಸರದ ಬಗ್ಗೆಯೇ ಚಿಂತನೆ ಮಾಡುವ, ಪರಿಸರವನ್ನೇ ಬದುಕಿನ ಅಂಗವಾಗಿ ಸ್ವೀಕರಿಸಿಕೊಂಡಿರುವ ಸದಾಶಿವ ಮರಿಕೆ ಈ ಹಚ್ಚ ಹಸಿರ ಪರಿಸರದ ಹಿಂದಿನ ಮಾಂತ್ರಿಕ. ಅಷ್ಟಕ್ಕೂ ಈ ಮಟ್ಟಿಗೆ ತನ್ನ ಮನೆ ಸುತ್ತಮುತ್ತಲಿನ ಪರಿಸರವನ್ನು ಕಾಡನ್ನಾಗಿ ಪರಿವರ್ತಸೋದರ ಹಿಂದೆ ಒಂದು ಕಥೆಯೂ ಇದೆ. ಅದಂತೂ ಸಖತ್ ಇಂಟರೆಸ್ಟಿಂಗ್ ಅನ್ಲೇಬೇಕು.
ಪುತ್ತೂರಲ್ಲಿ ಬಂದಿತ್ತು ಬರಗಾಲ
ಕೃಷಿ ಕುಟುಂಬದಿಂದ ಬಂದಿರುವ ಸದಾಶಿವ ಮರಿಕೆ ಕೃಷಿಯಲ್ಲೇ ತಮ್ಮ ಬದುಕು ಕಟ್ಟಿಕೊಂಡವರು. ಪರಿಸರದ ಬಗ್ಗೆ ಪ್ರೇಮವಿದ್ದರೂ, ಪರಿಸರವನ್ನು ಉಳಿಸಬೇಕು ಎಂದು ಅವರ ಯೋಚನೆ ಕಾರ್ಯರೂಪಕ್ಕೆ ಬರಲು ಅವರು ಅನುಭವಿಸಿದ ಒಂದು ಘಟನೆಯೂ ಕಾರಣವಾಯಿತು. 1983 ರಲ್ಲಿ ಪುತ್ತೂರು ಭಾಗದಲ್ಲಿ ನೀರಿನ ಬರ ಬಂದಾಗ ನೀರಿಗಾಗಿ ಬಹಳಷ್ಟು ಸಮಸ್ಯೆ ಎದುರಿಸಬೇಕಾಗಿತ್ತು.
5 ಎಕರೆ ತತುಂಬಾ ಗಿಡ ಮರ ಕೃಷಿ!
ಅದೇ ಸಮಯದಲ್ಲಿ ಪ್ರಕೃತಿ ಮತ್ತು ಜಲದ ಕುರಿತ ಹಲವು ಲೇಖನಗಳನ್ನು ಗಮನಿಸಿದ್ದ ಸದಾಶಿವ ಮರಿಕೆ ಮರ-ಗಿಡಗಳನ್ನು ಬೆಳೆಸಲು ಆರಂಭಿಸಿದರು. ಕೃಷಿ ಮಾಡದೆ ಉಳಿಸಿಕೊಂಡಿದ್ದ ಸುಮಾರು 5 ಎಕರೆ ಜಾಗದ ತುಂಬಾ ಇಂಗು ಗುಂಡಿಗಳನ್ನು ತೋಡಿದ ಬಳಿಕ ಹೋದ ಕಡೆಗಳಿಂದೆಲ್ಲಾ ತಂದ ಗಿಡಗಳನ್ನು ಆ ಜಾಗದಲ್ಲಿ ನೆಟ್ಟು ಬೆಳೆಸಲು ಆರಂಭಿಸಿದರು. ಅಲ್ಲದೆ ಸಿಕ್ಕ ಸಿಕ್ಕ ಬೀಜಗಳನ್ನು ತಂದು ಆ ಜಾಗದ ತುಂಬಾ ಎಸೆಯಲಾರಂಭಿಸಿದರು.
ಇದನ್ನೂ ಓದಿ: Mangaluru Police: ಕರೆ ಮಾಡಿ ಕಮಿಷನರ್ಗೆ ದೂರು ನೀಡಿ; ಮತ್ತೆ ಫೋನ್ ಇನ್ ಕಾರ್ಯಕ್ರಮ
ತುಂಬಾ ವರ್ಷದ ಬಳಿಕ ಬೀಜದಿಂದ ಗಿಡಗಳು ಮೊಳಕೆಯೊಡಯಲಾರಂಭಿಸಿತು. ನೆಟ್ಟ ಗಿಡಗಳು ಚಿಗುರೊಡೆದು ಹರಡಲಾರಂಭಿಸಿತು. 10 ವರ್ಷಗಳ ಬಳಿಕ ಸದಾಶಿವರು ಪಟ್ಟ ಶ್ರಮಕ್ಕೆ ಪ್ರತಿಫಲವೂ ಸಿಕ್ಕಿತು.
ಕೊಳವೆಬಾವಿಯಲ್ಲಿ 25 ಅಡಿಗೆ ನೀರು!
ಅಷ್ಟೇ ಅಲ್ಲದೇ, ಇದೇ ಜಾಗದಲ್ಲಿ ಹಕ್ಕಿಗಳು ತಂದು ಹಾಕಿದ ಸಾಕಷ್ಟು ಬೀಜಗಳು ಕೂಡ ಗಿಡವಾಗಿ, ಮರವಾಗಿ ಬೃಹತ್ ಆಗಿ ಬೆಳೆದಿದೆ. ತೋಟದಲ್ಲಿರುವ ನಾಲ್ಕು ಕೆರೆಗಳಲ್ಲಿ ಮೇ ಕೊನೆಯ ತನಕ ನೀರು ತುಂಬಿರುತ್ತವೆ.
ಇದಲ್ಲದೇ, ಕೊಳವೆಬಾವಿಯಲ್ಲಿ ಕೇವಲ 25 ಅಡಿಯಲ್ಲೇ ನೀರು ಸಿಗುವಂತೆ ಮಾಡಿರೋದರ ಹಿಂದೆ ಸದಾಶಿವ ಅವ್ರ ಪರಿಶ್ರಮ ಅಂತಿಂತದ್ದಲ್ಲ. ಇದೆಲ್ಲವೂ ಈ ಕಾಡಿನಿಂದ ಸಾಧ್ಯವಾಗಿದ್ದು, ಕಾಡಿನ ಸುತ್ತ ಬೇಲಿ ಹಾಕಿ ಸಂರಕ್ಷಿಸಿಡಲಾಗಿದೆ. ಜೊತೆಗೆ ಕಾಡಿನ ತುಂಬಾ ತರತರಹದ ಪಕ್ಷಿಗಳು, ಪ್ರಾಣಿ, ಹಾವು ಹೀಗೆ ಎಲ್ಲವೂ ಬೀಡುಬಿಟ್ಟಿದ್ದು, ದಟ್ಟ ಅರಣ್ಯದಂತೆ ಬೆಳೆದು ನಿಂತಿವೆ.
ಇದನ್ನೂ ಓದಿ: Bagalkote News: ಅಗಲಿದ ನಿವೃತ್ತ ಸೈನಿಕನ ಪುತ್ಥಳಿ ಲೋಕಾರ್ಪಣೆ, ಇಡೀ ಊರಿಗೆ ಹೋಳಿಗೆ ಊಟ
ಒಟ್ಟಿನಲ್ಲಿ ಪರಿಸರ ದಿನದಂದು ನಾಲ್ಕು ಗಿಡ ನೆಟ್ಟು ಪೋಸು ಕೊಡುವವರ ನಡುವೆ ಸದಾಶಿವ ಮರಿಕೆ ಅಂತಹವರು ಇಡೀ ಕಾಡನ್ನೇ ಬೆಳೆದು ತೋರಿಸಿರುವುದು ಆಶ್ಚರ್ಯವೇ ಸರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ