ಮಂಗಳೂರು: ಪುಂಡಿ ಗಸಿ ಅಂದ್ರೆ ಕರಾವಳಿಗರ (Coastal Karnataka Food) ಬಾಯಲ್ಲಿ ನೀರೂರುತ್ತೆ. ಸಾಮಾನ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಅಕ್ಕಿ ಪುಂಡಿ ಅನ್ನೋದು ಕಾಮನ್. ಇನ್ನು ನಗರದಲ್ಲೂ ಪುಂಡಿ ಗಸಿ (Pundi Gasi Recipe) ಮಿಸ್ ಮಾಡಿಕೊಳ್ಳಲು ಯಾರೂ ಇಷ್ಟಪಡಲಾರರು. ಪುಂಡಿ ವಿಶೇಷ ಅಂದ್ರೆ ಯಾವುದೇ ಸಾಂಬಾರಿಗೂ ಇದು ಒಗ್ಗಿಕೊಳ್ಳುತ್ತೆ.
ಈ ಹೆಸರುಗಳೂ ಇವೆ ಕಣ್ರೀ!
ಕರಾವಳಿ ಕರ್ನಾಟಕ, ಮಲೆನಾಡು ಹಾಗೂ ನೆರೆಯ ಕೇರಳದ ಹಲವೆಡೆ ಈ ಪುಂಡಿ ತಯಾರಿಸುತ್ತಾರೆ. ಪುಂಡಿಯನ್ನು ಸಾಮಾನ್ಯವಾಗಿ ಕನ್ನಡದಲ್ಲಿ ಕಡುಬು ಅಂತಾ ಕರೆದ್ರೆ, ಮಿಕ್ಕಂತೆ ಇದಕ್ಕೆ ಮಂಗಳೂರು ಭಾಗದಲ್ಲಿ ಪುಂಡಿ, ಪಿಂಡೆ ಹಾಗೂ ಪಿಂಡಿ ಅಂತಾನೂ ಕರೆಯುತ್ತಾರೆ. ಕರ್ನಾಟಕ ಮಾತ್ರವಲ್ಲದೇ ಈ ಪುಂಡಿ ಗಸಿ ಕೇರಳದಲ್ಲೂ ಭಾರೀ ಫೇಮಸ್.
ಗ್ರಾಮೀಣ ಭಾಗದ ತಿಂಡಿ
ಕರ್ನಾಟಕದ ಕರಾವಳಿ ಭಾಗದಲ್ಲಿ ಪುಂಡಿ ಅನ್ನೋದು ಭಾರೀ ಫೇಮಸ್. ಹಿಂದೆಲ್ಲ ಗ್ರಾಮೀಣ ಭಾಗದ ರೈತರ ಮನೆಯಲ್ಲಿ ಬೆಳಗಿನ ತಿಂಡಿಗೆ ಬಹುತೇಕ ಪುಂಡಿಯೇ ಉಪಹಾರ.
ಇವುಗಳ ಜೊತೆ ಸಖತ್ ಕಾಂಬಿನೇಷನ್!
ಪುಂಡಿಗೊಂದು ಚಟ್ನಿ, ಮೀನು ಸಾರು, ಕೋಳಿ ಸಾರು ಅಥವಾ ತರಕಾರಿ ಸಾರು ಹೀಗೆ ಯಾವುದೇ ಇದ್ರೂ ಈ ಪುಂಡಿ ಸಖತ್ ಕಾಂಬಿನೇಶನ್ ಕೊಡುತ್ತೆ. ಹಾಗಾಗಿಯೇ ಏನೋ ಹಳ್ಳಿ ಕಡೆಗಳಲ್ಲಿ ರೈತರ ಮನೆಗಳಲ್ಲಿ ಪುಂಡಿಯೇ ಬೆಳಗಿನ ತಿಂಡಿಯಾಗಿರುತ್ತೆ. ಜೊತೆಗೆ ತಮ್ಮದೇ ಗದ್ದೆಯಲ್ಲಿ ಬೆಳೆದ ಕುಚಲಕ್ಕಿಯಿಂದಲೇ ಇದನ್ನ ತಯಾರಿಸೋದ್ರಿಂದ, ಇದು ಹೆಚ್ಚು ಆರೋಗ್ಯಕರ ಕೂಡಾ.
ಪುಂಡಿ ಮಾಡುವುದು ಹೇಗೆ? ರೆಸಿಪಿ
ಪುಂಡಿಯನ್ನು ಕುಚಲಕ್ಕಿ, ಬೆಳ್ತಿಗೆ ಹಾಗೂ ಇತ್ತೀಚೆಗೆ ರೆಡಿಮೇಡ್ ಆಗಿ ಸಿಗುವ ಅಕ್ಕಿ ಹುಡಿ, ರವಾ ಹುಡಿಗಳಿಂದಲೂ ತಯಾರು ಮಾಡುತ್ತಾರೆ. ಕುಚಲಕ್ಕಿಯಿಂದ ತಯಾರಿಸುವವರು ಮೊದಲು ಅಕ್ಕಿಯನ್ನು ನೆನೆಯಲು ಹಾಕುತ್ತಾರೆ. ನಂತರ ಅದನ್ನ ಗ್ರೈಂಡರ್ಗೆ ಹಾಕಿ ಗ್ರೈಂಡ್ ಮಾಡ್ತಾರೆ. ಹೀಗೆ ಮಾಡ್ಬೇಕಾದರೆ ಪದೇ ಪದೇ ನೀರು ಹಾಕುತ್ತಾ ಹೆಚ್ಚು ಅಂಟು ಅಂಟು ಆಗಿರುವಂತೆ ನೋಡಿಕೊಳ್ಳುತ್ತಾರೆ.
ಮುಂದೆ ಮಾಡಬೇಕಿರುವುದು ಇಷ್ಟೇ!
ಹೆಚ್ಚು ಸಣ್ಣಗೆ ಗ್ರೈಂಡ್ ಮಾಡದೇ, ಒಂದು ಹಂತಕ್ಕೆ ಹುಡಿಯಾದ ಬಳಿಕ ಅದನ್ನು ಗ್ರೈಂಡರ್ ನಿಂದ ತೆಗೆದು ತಕ್ಕಮಟ್ಟಿಗೆ ಅಂಟು ಹೋಗುವ ತನಕ ಬಿಸಿ ಮಾಡ್ತಾರೆ. ಈ ಸಮಯದಲ್ಲೇ ರುಚಿ ಬೇಕಿದ್ದರೆ ತೆಂಗಿನಕಾಯಿ ತುರಿ ಹಾಕಿಕೊಳ್ಳುತ್ತಾರೆ. ನಂತರ ಬಿಸಿಯಾದ ಹಿಟ್ಟನ್ನು ಚೆಂಡಿನಂತೆ ಅಥವಾ ಉದ್ದವಾಗಿ ತಟ್ಟಿ ಅದನ್ನು ತೊಂದೂರು ಅನ್ನೋ ಪಾತ್ರೆಯಲ್ಲಿಟ್ಟು (ಅದರ ಅಡಿ ಭಾಗದಲ್ಲಿ ನೀರು, ಮೇಲಿನ ಕವಚದಲ್ಲಿ ಪುಂಡಿಯನ್ನು ಇಡುತ್ತಾರೆ) ಬಿಸಿ ಮಾಡುತ್ತಾರೆ. ಬೆಂದ ಈ ಪುಂಡಿಯನ್ನು ನಂತರ ಪಾತ್ರೆಯಿಂದ ತೆಗೆದು ತಮ್ಮಿಷ್ಟದ ಸಾರಿನೊಂದಿಗೆ ತಿನ್ನುತ್ತಾರೆ. ಇನ್ನು ಅಕ್ಕಿ ಹುಡಿಯಿಂದ ಪುಂಡಿ ಮಾಡುವವರು ನೇರವಾಗಿ ಕೊಂಚ ಬಿಸಿ ಮಾಡಿ ಪುಂಡಿ ತಟ್ಟುತ್ತಾರೆ.
ಸಿಹಿ ಪುಂಡಿ, ಮರುವಾಯಿ ಪುಂಡಿ, ಶಾವಿಗೆ
ವಿಶೇಷ ಅಂದ್ರೆ ಈ ಪುಂಡಿಗೆ ಬೆಲ್ಲ, ಎಳ್ಳು, ತೆಂಗಿನಕಾಯಿ ಮಿಶ್ರಣವನ್ನು ಸೇರಿಸಿದ್ರೆ ಇದು ಸಿಹಿಪುಂಡಿ ಅಥವಾ ನೇವರಿ ಪುಂಡಿ ಆಗುತ್ತೆ. ಸಿಹಿ ಪ್ರಿಯರು ಇದನ್ನ ಹೆಚ್ಚಾಗಿ ಇಷ್ಟಪಡುತ್ತಾರೆ. ಇನ್ನು ಮರುವಾಯಿ (ಕಪ್ಪೆ ಚಿಪ್ಪು) ಸಾಂಬಾರಿಗೆ ಪುಟ್ಟ ಗಾತ್ರದ ಪುಂಡಿ ಹಾಕಿ ಬೇಯಿಸಿ ಅದರಿಂದ ತಯಾರಾಗೋ ಮರುವಾಯಿ ಪುಂಡಿ ಸುಕ್ಕ ಅಂತೂ ಸೂಪರ್ ಆಗಿರುತ್ತೆ.
ಇದನ್ನೂ ಓದಿ: Mangaluru Viral News: ಬೇಸಿಗೆ ರಜೆಯಲ್ಲಿ ಬಾವಿ ತೋಡಿದ PUC ವಿದ್ಯಾರ್ಥಿ!
ಅಕ್ಕಿ ಶಾವಿಗೆ ಸಹ ರೆಡಿ!
ಇನ್ನು ಕರಾವಳಿ ಭಾಗದಲ್ಲಿ ಅಕ್ಕಿ ಶಾವಿಗೆಯನ್ನು ಇದೇ ಪುಂಡಿಯಿಂದ ತಯಾರಿಸುತ್ತಾರೆ. ಬಿಸಿಯಾದ ಪುಂಡಿಯನ್ನು ಶಾವಿಗೆ ಮಣೆಯಲ್ಲಿಟ್ಟು ಒತ್ತಿದರೆ ಅಕ್ಕಿ ಶಾವಿಗೆ ರೆಡಿಯಾಗುತ್ತೆ. ಈ ಶಾವಿಗೆನೂ ಅಷ್ಟೇ ತೆಂಗಿನಕಾಯಿ ಹಾಲು, ಕೋಳಿ ಅಥವಾ ಮೀನು ಸಾರಿನೊಂದಿಗೆ ಟೇಸ್ಟ್ ಮಾಡಬಹುದಾಗಿದೆ. ಒಂದರ್ಥದಲ್ಲಿ ಕರಾವಳಿಗರ ಶಾವಿಗೆ ಬಹುತೇಕ ಪುಂಡಿಯ ಬೈ ಪ್ರಾಡಕ್ಟ್ ಎನ್ನಬಹುದು.
ಇದನ್ನೂ ಓದಿ: Heat Wave Alert: ಕರ್ನಾಟಕದ ಈ ಜಿಲ್ಲೆಗಳಿಗೆ ಶುರುವಾಯ್ತು ಹೊಸ ಸಮಸ್ಯೆ!
ಕರಾವಳಿಗೆ ಬಂದ್ರಂತೂ ಈ ಪುಂಡಿ ತಿನ್ನೋದನ್ನು ಮರೆಯಬೇಡಿ. ಅದ್ರಲ್ಲೂ ಮೀನು ಗಸಿ, ಕೋಳಿ ಸಾರು ಕಾಂಬಿನೇಶನ್ನಲ್ಲಿ ತಿಂದ್ರಂತೂ ಐದಾರು ಪುಂಡಿ ತಿಂದ್ರು ನಿಮ್ಮ ನಾಲಗೆ ರುಚಿ ಕಡಿಮೆಯಾಗದು.
ವರದಿ: ಇರ್ಷಾದ್ ಕಿನ್ನಿಗೋಳಿ, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ