Dakshina Kannada: ತುಳುನಾಡಲ್ಲಿ ನಡೆಯುತ್ತೆ ಪ್ರೇತಾತ್ಮಗಳ ಮದುವೆ! ಅಚ್ಚರಿ ಆದರೂ ಸತ್ಯವಿದು!

ತುಳುವ ಸಂಪ್ರದಾಯದಲ್ಲಿ ವಿಭಿನ್ನ ಆಚರಣೆಗಳು ಕಾಣಬಹುದಾಗಿದೆ. ಅಂತಹ ಸಂಪ್ರದಾಯದಲ್ಲೊಂದು ‘ಕುಲೆ ಮದಿಮೆ‘.. ಹಾಗಿದ್ರೆ ಈ ಸಂಪ್ರದಾಯ ಹೇಗಿರುತ್ತೆ? ಇಲ್ಲಿ ನಡೆಯುವ ವಿವಾಹ ಕಾರ್ಯಕ್ರಮ ಎಂತದ್ದು? ಅನ್ನೋದರ ಕುರಿತ ಡಿಟೇಲ್ಸ್ ಇಲ್ಲಿದೆ..

ಈ ಗಂಡು ಹೆಣ್ಣು ಮೃತಪಟ್ಟು 30 ವರ್ಷ

"ಈ ಗಂಡು ಹೆಣ್ಣು ಮೃತಪಟ್ಟು 30 ವರ್ಷ"

  • Share this:
    ಅಲ್ಲಿ ಹೆಣ್ಣಾಗಲೀ, ಗಂಡಾಗಲೀ ಇರಲ್ಲ.. ಆದ್ರೂ ನಡೆಯುತ್ತೆ ಮದುವೆ.. ಎರಡೂ ಕುಟುಂಬಿಕರು ಸೇರಿ ಸಂಭ್ರಮಿಸುತ್ತಾರೆ.. ಮದುವೆ ಊಟ ಮಾಡಿ ಸಂತೃಪ್ತರಾಗುತ್ತಾರೆ. ಅರೆ, ಇದೇನಿದು ವಿಚಿತ್ರ ಅನ್ಬೇಡಿ, ಇಂತಹದ್ದೊಂದು ಸಂಪ್ರದಾಯ (Tradition) ತುಳುನಾಡಿನಲ್ಲಿ (Tulu Nadu) ಕಾಣಬಹುದಾಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳ ಗಡಿ ಭಾಗಗಳಲ್ಲಿರುವ ತುಳುವರಲ್ಲಿ ಇಂತಹ ಸಂಪ್ರದಾಯವೊಂದಿದೆ. ಅಷ್ಟಕ್ಕೂ ಇಲ್ಲಿ ನಡೆಯುತ್ತಿರುವುದು ಅಕ್ಷರಶಃ ಮದುವೆಯೇ.. ಆದರೆ ಈ ಮದುವೆ (Marriage) ಅಂತಿಂತ ಮದುವೆಯಲ್ಲ, ಇದು ಪ್ರೇತಾತ್ಮಗಳ ಮದುವೆ.. ಇದನ್ನು ತುಳುವರು ಕುಲೆ ಮದಿಮೆ ಅಥವಾ ಸೈತಿನಕುಲ್ನ ಮದಿಮೆ ಅಂತಾಲೂ ಕರೆಯುತ್ತಾರೆ.

    ಗಂಡಿನ ಮನೆಯಲ್ಲಿ ಮದುವೆ
    ತುಳುನಾಡಿನ ಆಚರಣೆಗಳು ದೇಶದ ಯಾವುದೇ ಭಾಗದಲ್ಲಿ ಕಾಣಸಿಗದಂತಹ ಆಚರಣೆಗಳಾಗಿವೆ. ತುಳುನಾಡಿನ ಈ ಸಂಪ್ರದಾಯಗಳು ತುಸು ಅಚ್ಚರಿ ಎನಿಸಿದರೂ ಇದರ ಹಿಂದೆ ಹಲವು ಕಾರಣಗಳೂ ಇರುತ್ತವೆ. ಇತ್ತೀಚೆಗೆ ಆಟಿ ಅಮಾವಾಸ್ಯೆ ದಿನ ಮಂಗಳೂರಿನಲ್ಲಿ ಇದೇ ರೀತಿಯ ಮದುವೆಯೊಂದು ಜರುಗಿತು. ಆ ಜೋಡಿ ಮೃತಪಟ್ಟು 30 ವರ್ಷಗಳ ಬಳಿಕ ಮದುವೆ ಏರ್ಪಟ್ಟಿದ್ದು, ಎರಡೂ ಕುಟುಂಬಿಕರು ಪರಸ್ಪರ ಹಾಜರಿದ್ದು ಗಂಡಿನ ಮನೆಯಲ್ಲಿ ಮದುವೆ ಕಾರ್ಯಕ್ರಮ ನೆರವೇರಿತು.

    ಏನಿದು ‘ಕುಲೆ ಮದಿಮೆ?'
    ಹೌದು, ಈ ರೀತಿಯ ಮದುವೆಗೂ ಒಂದು ಕಾರಣವಿದೆ. ಯಾರಾದರೂ ಮದುವೆ ವಯಸ್ಸಿಗೆ ಬಂದು ಮೃತಪಟ್ಟಿದ್ದರೆ ಅಂತವರ ಆತ್ಮ ಸದ್ಗತಿ ಕಾಣದೇ ಪ್ರೇತಾತ್ಮಗಳಾಗಿ ಅಲೆದಾಡುತ್ತಾ ಕುಟುಂಬಿಕರಿಗೆ ತೊಂದರೆ ನೀಡುತ್ತದೆ ಅನ್ನೋ ನಂಬಿಕೆಯಿದೆ. ಹಾಗಾಗಿ ಅಂತಹ ಆತ್ಮಗಳಿಗೆ ಸದ್ಗತಿ ಕಲ್ಪಿಸಬೇಕಾದರೆ ಸಾವನ್ನಪ್ಪಿರೋ ಮದುವೆ ವಯಸ್ಸಿಗೆ ಬಂದ ಹೆಣ್ಣು ಪ್ರೇತವನ್ನು ಹುಡುಕಬೇಕಾಗುತ್ತದೆ.

    ಇದನ್ನೂ ಓದಿ: Sri Ramalingeshwara Temple: ಶಿವನ ಎದುರೇ ಶ್ರೀಮನ್ನಾರಾಯಣ! ನೀವೂ ದರ್ಶನ ಪಡೆಯಿರಿ

    ಅಂತಹ ಕುಟುಂಬಿಕರನ್ನ ಸಂಪರ್ಕಿಸಿ ಪರಸ್ಪರ ಮಾತುಕತೆ ನಡೆದು ಮದುವೆ ಏರ್ಪಾಡು ಮಾಡಬೇಕು. ಹೀಗಾದ್ದಲ್ಲಿ ಮಾತ್ರ ಮೃತಪಟ್ಟ ಆ ಹೆಣ್ಣು ಮತ್ತು ಗಂಡು ಇಹಲೋಕದಲ್ಲಿ ಕಾಣಲಾಗದ ಸುಖವನ್ನು ಪರಲೋಕದಲ್ಲಿ ಕಾಣುತ್ತಾರೆ ಅನ್ನೋದು ತುಳುವರ ನಂಬಿಕೆ.

    ಹೀಗೆ ನಡೆಯುತ್ತೆ ಮದುವೆ
    ಒಂದು ಮಣೆಯಲ್ಲಿ ವರನ ಉಡುಗೆ, ಇನ್ನೊಂದು ಮಣೆಯಲ್ಲಿ ವಧುವಿನ ಉಡುಗೆಯನ್ನಿಡಲಾಗುತ್ತದೆ. ಕೆಲವು ಕಡೆಗಳಲ್ಲಿ ಬೆಳ್ಳಿ ಅಥವಾ ಅಕ್ಕಿಯಿಂದ ತಯಾರಿಸಿದ ವಧು, ವರನ ಬಿಂಬಗಳನ್ನು ಇಡಲಾಗುತ್ತದೆ. ಇಲ್ಲಿ ವಧುವಿಗೆ ಮುತ್ತೈದೆಯ ಅಲಂಕಾರವೂ ಮಾಡಲಾಗುತ್ತದೆ. ಮಣೆಯಲ್ಲಿ ಹೂ ಹಾರಗಳನ್ನು ಇಡಲಾಗುತ್ತದೆ. ಬಳಿಕ ತಾಳಿ ಕಟ್ಟುವ ಸಂಪ್ರದಾಯ, ಧಾರೆ ಎರೆದು ಕೊಡುವುದು ಇದೆಲ್ಲವೂ ಸಂಪ್ರದಾಯದಂತೆ ನಡೆದು ಕೊನೆಗೆ, ಮದುವೆ ಊಟದ ಜೊತೆಗೆ ಸಮಾಪ್ತಿಗೊಳ್ಳುತ್ತದೆ.

    ಇದನ್ನೂ ಓದಿ: Uttara Kannada: ಅಬ್ಬಬ್ಬಾ! ಆಕಾಶಕ್ಕೇ ಸ್ಪರ್ಧೆ ನೀಡುವ ಆಲದಮರ! ನೋಡಿದ್ರೆ ಅಚ್ಚರಿ ಪಡೋದು ಗ್ಯಾರಂಟಿ

    ತುಳುವರ ನಂಬಿಕೆ ಪ್ರಕಾರ ಸತ್ತವರು ನಮ್ಮನ್ನ ನಡುವೆಯೇ ಇರುತ್ತಾರೆ ಅನ್ನೋ ನಂಬಿಕೆಯೂ ಕರಾವಳಿ ಭಾಗದಲ್ಲಿದೆ. ಒಟ್ಟಿನಲ್ಲಿ ತುಳುವ ಸಂಪ್ರದಾಯ ಮಿಕ್ಕೆಲ್ಲ ಸಂಪ್ರದಾಯಗಳಿಗಿಂತಲೂ ವಿಭಿನ್ನವಾಗಿದ್ದು, ಅದೆಷ್ಟೋ ಬಾರಿ ಸ್ವಾರಸ್ಯಕರ ಎನಿಸೋದು ಇದೆ.

    ವರದಿ: ಇರ್ಷಾದ್ ಕಿನ್ನಿಗೋಳಿ
    Published by:guruganesh bhat
    First published: