ಮಂಗಳೂರು: ಘರ್ಜಿಸುವ ಸಿಂಹ, ಅಲ್ಲೆಲ್ಲೋ ನೀರಿನಲ್ಲಿ ಈಜುತ್ತಿರೋ ಹುಲಿ, ಮರದ ರೆಂಬೆ ಮೇಲೆ ಮಲಗಿ ಬಿಸಿಲು ಕಾಯಿಸ್ಕೊಳ್ತಿರೋ ಚಿರತೆ, ನೀರಲ್ಲಿ ಸಖತ್ತಾಗಿ ಎಂಜಾಯ್ ಮಾಡ್ತಿರೋ ನೀರಾನೆ. ಹೌದು, ಇಷ್ಟೆಲ್ಲಾ ಪ್ರಾಣಿ ಪಕ್ಷಿಗಳು ಒಂದು ಕಡೆ ಇದ್ರೆ ಅದು ಮೃಗಾಲಯ ಅನ್ನೋದನ್ನ ಮತ್ತೆ ಬಿಡಿಸಿ ಹೇಳಬೇಕಿಲ್ಲ. ಅದರಲ್ಲೂ ಕಡಲನಗರಿಯಲ್ಲಿ ಇರೋ ಈ ಝೂ (Zoo) ಗೆ ಒಂದು ಸುತ್ತು ಹಾಕಿಕೊಂಡು ಬರುವುದೇ ಚೆಂದ.
ಪ್ರಾಣಿ, ಪಕ್ಷಿಗಳ ಆಗರ
ಕಾಳಿಂಗ, ಹೆಬ್ಬಾವು, ನಾಗರ, ಕನ್ನಡಿ ಹಾವು ಹೀಗೆ ನಾನಾ ಜಾತಿಯ ಉರಗಗಳು, ಹುಲಿರಾಯ, ವೇಗದೂತ ಚಿರತೆ, ಘರ್ಜಿಸೋ ಸಿಂಹಿಣಿ, ಜಿಂಕೆ ಹಿಂಡು, ನೀರಿನಿಂದ ದಡಕ್ಕೆ, ದಡದಿಂದ ನೀರಿಗೆ ಹೋಗೋ ಮೊಸಳೆಗಳು, ಕಾಡುಕೋಣಗಳ ಕೂಟ ಹೀಗೆ ಒಂದೋ ಎರಡೋ ಐವತ್ತಕ್ಕೂ ಹೆಚ್ಚು ಪ್ರಾಣಿಗಳು ಇಲ್ಲಿವೆ.
ಝೂ ಇರೋದು ಎಲ್ಲಿ
ಅಷ್ಟಕ್ಕೂ ಈ ಝೂ ಇರೋದು ಎಲ್ಲಿ ಅಂತೀರಾ? ಅದುವೇ ಮಂಗಳೂರು ನಗರದ ಪಿಲಿಕುಳದ ಜೈವಿಕ ಉದ್ಯಾನವನದಲ್ಲಿ. ಮಂಗಳೂರು ನಗರದಿಂದ ಕೇವಲ 8.5 ಕಿಲೋ ಮೀಟರ್ ದೂರದಲ್ಲಿರುವ ಈ ಮೃಗಾಲಯಕ್ಕೆ ಬಸ್, ಆಟೋ ಸೇವೆಗಳೂ ಲಭ್ಯವಿದೆ.ಇಲ್ಲಿ ಪ್ರಾಣಿಗಳು ಮಾತ್ರವಲ್ಲ, ಅವುಗಳ ಜೊತೆಗೆ ಸಸ್ತನಿಗಳು ಕೂಡ ಇದಾವೆ. ಎಲ್ಲೂ ಕಾಣದ ಇಗ್ವಾನದಿಂದ ಹಿಡಿದು ಅಪರೂಪದ ಹುಲಿಬೆಕ್ಕು ಕೂಡ ಇಲ್ಲಿದೆ.
ಟಿಕೆಟ್ ದರ
ಇಲ್ಲಿಗೆ ಪ್ರವೇಶ ಪಡೆಯಬೇಕೆಂದರೆ ಎಂಬತ್ತು ರೂಪಾಯಿ ಟಿಕೆಟ್ ತೆಗೆದುಕೊಂಡು ಒಳಹೋಗಬೇಕು. ಹೀಗೆ ಒಳಹೊಕ್ಕುತ್ತಿದ್ದಂತೆ ಇಡೀ ಪ್ರಾಣಿ ಪ್ರಪಂಚವೇ ತೆರೆದುಕೊಳ್ಳುತ್ತದೆ. ಕೋವಿಡ್ ಸಮಯದಲ್ಲಿ ಸಂಕಷ್ಟದಲ್ಲಿದ್ದ ಪಿಲಿಕುಳ ಮೃಗಾಲಯಕ್ಕೆ ಇದೀಗ ಮತ್ತೆ ಪ್ರವಾಸಿಗರ ಆಗಮನ ಜಾಸ್ತಿಯಾಗಿದೆ. ಅದರಲ್ಲೂ ಈ ಬಾರಿ ಶೈಕ್ಷಣಿಕ ಪ್ರವಾಸದ ಸದುಪಯೋಗಪಡಿಸಿಕೊಂಡ ಹಲವು ವಿದ್ಯಾರ್ಥಿಗಳು ಪಿಲಿಕುಳಕ್ಕೆ ಆಗಮಿಸಿ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: Mangaluru To Bengaluru: ವಿಮಾನದ ಮೂಲಕ ಪಾರ್ಸೆಲ್, ಮಂಗಳೂರು-ಬೆಂಗಳೂರು ರೂಟ್ಗೆ ಭಾರೀ ಬೇಡಿಕೆ
ಸುತ್ತಾಡೋಕೆ ಇದೆ ಇ-ವೆಹಿಕಲ್
375 ಎಕರೆ ವಿಸ್ತೀರ್ಣ ಹಬ್ಬಿಕೊಂಡಿರುವ ಈ ಪಾರ್ಕ್ ನಲ್ಲಿ ಪ್ರಾಣಿಗಳ ಪ್ರಜನನಕ್ಕೆ ಬೇಕಾದ ಎಲ್ಲ ಸೌಲಭ್ಯವೂ ಇದೆ. ಪ್ರವಾಸಿಗರಿಗಾಗಿ ಸುತ್ತಾಡೋದಕ್ಕೆ ಇ ವೆಹಿಕಲ್ ಗಳಿದ್ದು, ಹಸಿವಾದಾಗ ತಿನ್ನೋದಕ್ಕೆ ತಿಂಡಿತಿನಿಸು ಕೂಡ ಇಲ್ಲಿ ಸಿಗುತ್ತೆ. ಒಟ್ಟಿನಲ್ಲಿ, ಸಖತ್ ಡಿಫರೆಂಟ್ ಆಗಿರೋ ಈ ಬಯಲಾಜಿಕಲ್ ಪಾರ್ಕ್ ಮಂಗಳೂರು ನಗರದಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿದ್ದು ಪ್ರವಾಸಿಗರಿಗಂತೂ ಹೆಚ್ಚು ಅನುಕೂಲಕರವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ