ಉಡುಪಿ: ಭರದಿಂದ ನಡೆಯುತ್ತಿರೋ ಕೆಲಸ ಕಾರ್ಯ. ಹಚ್ಚ ಹಸಿರ ಭೂಮಿಯ ನಡುವೆ ಅದೇನೋ ಕಣ್ಮನ ಸೆಳೆಯೋ ಪ್ರಯತ್ನ. ಕರಿ ಬಂಡೆಯ ಬೆಟ್ಟದ ಮೇಲೆ ತಲೆ ಎತ್ತಲು ಮುಂದಾಗಿರೋ ನೂತನ ಕಟ್ಟಡ. ಹೌದು, ಇದುವೇ ಕಾರ್ಕಳದ (Karkala) ಪರಶುರಾಮ ಥೀಮ್ ಪಾರ್ಕ್ನ (Parshurama Theme Park) ಪಕ್ಷಿನೋಟ.
ಕಾರ್ಕಳ ಅಂದಾಗಲೆಲ್ಲ ತಟ್ಟನೆ ನೆನಪಾಗೋದು ಕಲ್ಲುಗಳು, ಕಲ್ಲುಗಳನ್ನ ಕೆತ್ತಿ ಶಿಲ್ಪವಾಗಿಸುವ ಶಿಲ್ಪಿಗಳು, ಅಲ್ಲಲ್ಲಿ ಕಾಣಸಿಗೋ ಬಸದಿಗಳು. ಅದಕ್ಕೂ ಮೀರಿ ಕಾಣ ಸಿಗೋ ಗೊಮ್ಮಟೇಶ್ವರನ ಮೂರ್ತಿ. ಆದರೆ ಇನ್ನು ಮುಂದೆ ಪರಶುರಾಮನೂ ನೆನಪಾಗುತ್ತಾನೆ.
ಪಾಳುಬಿದ್ದಿದ್ದ ಕಲ್ಲುಗುಡ್ಡದ ಮೇಲೆ ಪರಶುರಾಮ!
ನಿಜ, ಕಾರ್ಕಳದಲ್ಲಿ ಪಾಳು ಬಿದ್ದು ಹೋಗಿದ್ದ ಕಲ್ಲುಗುಡ್ಡ ಒಂದಕ್ಕೆ ಇದೀಗ ಹೊಸ ಮೆರುಗು ಬಂದಿದೆ. ಉಡುಪಿಯ ಕಾರ್ಕಳದ ಬೈಲೂರಿನ ಯರ್ಲಪಾಡಿ ಉಮಿಕಲ್ ಕುಂಜದ ಕಲ್ಲುಬಂಡೆಗಳೇ ತುಂಬಿದ್ದ ಗುಡ್ಡವೊಂದು ಇದೀಗ ಪ್ರವಾಸಿಗರ ಹಾಟ್ ಸ್ಪಾಟ್ ಆಗೋದಕ್ಕೆ ತಯಾರಾಗಿದೆ. ತುಳುನಾಡಿನ ಸೃಷ್ಟಿಕರ್ತ ಎನ್ನಲಾದ ನಾಥ ಪರಂಪರೆಯನ್ನ ಎಲ್ಲೆಡೆ ಪಸರಿಸಿದ ಶ್ರೀ ಪರಶುರಾಮನ ಮೂರ್ತಿ ಇಲ್ಲಿ ತಲೆ ಎತ್ತಲಿದೆ.
ಕಂಚಿನ ಪ್ರತಿಮೆ ಅನಾವರಣ
ಕೈಯ್ಯಲ್ಲಿ ಬಿಲ್ಲು, ಕೊಡಲಿ ಹಿಡಿದುಕೊಂಡ ಸಂಪೂರ್ಣ ಕಂಚಿನಲ್ಲೇ ತಯಾರಿಸಲಾದ ಪರಶುರಾಮನ ಮೂರ್ತಿಯನ್ನು ಇಲ್ಲಿ ನೀವು ಕಾಣಬಹುದು. ಇದೇ ಜನವರಿ 27ನೇ ತಾರೀಖಿನಂದು ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆಗೊಳ್ಳಲಿದೆ.
ಇದನ್ನೂ ಓದಿ: Kumble Gopalakrishna Temple: ಸಿಡಿಮದ್ದು ಸಿಡಿಯೋದು ನೋಡೋಕೆ ದೇವರೇ ಬರ್ತಾರೆ! ಇದು ಗೋಪಾಲಕೃಷ್ಣ ದೇಗುಲದ 'ಕುಂಬ್ಳೆ ಬೆಡಿ'
ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಕರಿ ಕಲ್ಲಿನ ಮೇಲೊಂದು ಮುಕುಟದಂತೆ ಈ ಥೀಮ್ ಪಾರ್ಕ್ ಕಂಗೊಳಿಸಲಿದೆ. ಜೊತೆಗೆ ಈ ಬೆಟ್ಟ ಹತ್ತಿದರೆ ಕಾರ್ಕಳ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳ ಸಖತ್ ಬ್ಯೂಟಿಫುಲ್ ವೀವ್ ಕೂಡಾ ನೋಡಬಹುದು.
ಇದನ್ನೂ ಓದಿ: Dakshina Kannada: ಊರಿಗೇ ನೀರು ಹರಿಸಿದ ಆಧುನಿಕ ಭಗೀರಥ!
ಇನ್ನು ಬೆಟ್ಟವೇರಲು ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದ್ದು, ಸುಂದರ ಪಾರ್ಕ್ ಕೂಡ ಇಲ್ಲಿ ನಿರ್ಮಾಣವಾಗಲಿದೆ. ಒಟ್ಟಿನಲ್ಲಿ ಟ್ರೆಕ್ಕಿಂಗ್ ಪ್ರಿಯರಿಗೂ ಸಾಹಸಮಯವೆನಿಸುತ್ತಿದ್ದ ಬೆಟ್ಟದಲ್ಲೀಗ ಥೀಮ್ ಪಾರ್ಕ್ ತಲೆ ಎತ್ತುತ್ತಿದ್ದು ಎಲ್ಲರೂ ಕಾತರದಿಂದ ಕಾಯುವಂತಾಗಿದೆ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ