ದಕ್ಷಿಣ ಕನ್ನಡ: ಕಾಂತಾರ ಸಿನೆಮಾದಲ್ಲಿ (Kantara Movie) ಪಂಜರ್ಲಿ ದೈವದ ನರ್ತನ ಕಂಡು ಮೈ ಮರೆಯದವರಿಲ್ಲ. ಅದೇ ಪಂಜುರ್ಲಿ ದೈವದ (Panjurli Daiva) ನರ್ತನ, ಆವೇಶ ಇಲ್ಲಿ ನೋಡುವಿರಂತೆ. ದೈವದ ಮುಂದೆ ಕೂತ ಗಡಿ ಪ್ರಧಾನರಿಬ್ಬರು ದೈವದ ಆದೇಶವಾಗ್ತಿದ್ದಂತೆ ಪ್ರಜ್ಞೆ ತಪ್ಪುತ್ತಾರೆ. ಬಳಿಕ ದೈವದ ಮರು ಆದೇಶವಾಗ್ತಲೇ (Panjurli Daiva Video) ಮರು ಪ್ರಜ್ಞೆ ಪಡೆಯುತ್ತಾರೆ. ಹೌದು, ಇದು ತುಳುನಾಡಿನ (Tulunadu) ದೈವಗಳ ಕಾರಣಿಕಕ್ಕೆ ಮತ್ತೊಂದು ಸಾಕ್ಷಿ ಎನ್ನುವಂತಿದೆ.
ಪ್ರಜ್ಞೆ ತಪ್ಪಿಸುತ್ತೆ ದೈವ!
ಯೆಸ್, ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಅತ್ತೂರು ಬೈಲು ಮಹಾಗಣಪತಿ ಮೂಲ್ಕಿ ಒಂಬತ್ತು ಮಾಗಣೆಗೆ ಸಂಬಂಧಿಸಿದ ಪ್ರಮುಖ ದೇಗುಲವೂ ಹೌದು. ಅತ್ಯಂತ ಕಾರಣಿಕದ ಕ್ಷೇತ್ರವಾದ ಇಲ್ಲಿ ಬೈಲ ಪಂಜುರ್ಲಿ ದೈವ ನೆಲೆ ನಿಂತಿದ್ದು ಕಾರಣಿಕ ತೋರಿಸುತ್ತದೆ. ವರ್ಷಂಪ್ರತಿ ನಡೆಯುವ ನೇಮದಲ್ಲಿ ಮಹಾಗಣಪತಿ ಮಂದಿರದ ಗಡಿ ಪ್ರಧಾನರಾದ ಬೈಲು ಉಡುಪ ಮತ್ತು ಬೊಟ್ಟು ಉಡುಪರನ್ನು ತನ್ನ ಕಾರಣಿಕ ಶಕ್ತಿಯಿಂದ ಪ್ರಜ್ಞೆ ತಪ್ಪುವಂತೆ ಮಾಡುವುದು ಇಲ್ಲಿನ ವಿಶೇಷ.
ಬ್ರಾಹ್ಮಣ ಸಮುದಾಯದಿಂದ ಆರಾಧನೆ
ಮೂಲ್ಕಿ ಒಂಬತ್ತು ಮಾಗಣೆಯ ಬ್ರಾಹ್ಮಣ ಸಮುದಾಯದಲ್ಲಿ ಬೈಲು ಮತ್ತು ಬೊಟ್ಟು ಉಡುಪ ಗಡಿಗಳಿವೆ. ನೇಮದ ಸಂದರ್ಭ ಅತ್ತೂರು ಬೈಲು ಚಾವಡಿಯಲ್ಲಿ ಬೈಲು ಉಡುಪರು ಮತ್ತು ಬೊಟ್ಟು ಉಡುಪರು ಕುಳಿತುಕೊಂಡಿರುತ್ತಾರೆ. ಸಂಪ್ರದಾಯದಂತೆ ಪಂಜುರ್ಲಿ ದೈವದ ನೇಮ ಪ್ರಾರಂಭವಾಗಿ, ಮೊದಲ ಹಂತದಲ್ಲಿ ಪಂಜುರ್ಲಿ ದೈವ ಮೊಗ ಧರಿಸಿ ಕೂತು, ನಿಂತು ಒಂದಿಷ್ಟು ಹೊತ್ತು ನರ್ತನ ನಡೆಯುತ್ತದೆ. ಅನಂತರ ದೈವ ಕಲಾವಿದ ತಾಸೆ ವಾದ್ಯಗಳಿಗೆ ಕುಣಿಯುತ್ತಾ ಹೋದಂತೆ ದೈವ ಆವೇಶ ಹೆಚ್ಚಾಗುತ್ತದೆ.
ಆ ಕ್ಷಣಕ್ಕಾಗಿ ಭಕ್ತರ ಕಾತರ
ಈ ಸಂದರ್ಭ ಚಾವಡಿಯಲ್ಲಿ ಕೂತು ಗಡಿ ಪ್ರಧಾನರು ಭಕ್ತಿ ಭಾವದಿಂದ ಮಂತ್ರ ಉಚ್ಛರಿಸುತ್ತಿದ್ದರೆ, ಅವರ ಮುಂದಕ್ಕೆ ಹೋಗುವ ಪಂಜುರ್ಲಿಯು ಬೈಲು ಮತ್ತು ಬೊಟ್ಟು ಉಡುಪರ ಮುಂದೆ ತನ್ನ ಕೈಯಲ್ಲಿರುವ ಕಡ್ಸಲೆ ಎಂಬ ಆಯುಧ ಬೀಸುತ್ತದೆ. ಆಗ ಬೈಲು ಉಡುಪರು ಹಿಮ್ಮುಖವಾಗಿ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ದೈವವು ಇನ್ನೊಂದು ಬಾರಿ ಇದೇ ರೀತಿ ಪುನರಾವರ್ತಿಸುವಾಗ ಬೊಟ್ಟು ಉಡುಪರು ಇದೇ ರೀತಿ ಪ್ರಜ್ಞೆ ತಪ್ಪಿ ಬೀಳುತ್ತಾರೆ.
ಐದು ನಿಮಿಷ ಪ್ರಜ್ಞಾಹೀನರಾಗ್ತಾರೆ
ಹೀಗೆ ಸುಮಾರು 5 ನಿಮಿಷ ಪ್ರಜ್ಞೆ ತಪ್ಪಿದ ಸ್ಥಿತಿ ಈ ಇಬ್ಬರು ಗಡಿ ಪ್ರಧಾನರಿರುತ್ತಾರೆ. ಬಳಿಕ ನೇಮದ ಮಧ್ಯಸ್ಥಿಕೆ ವಹಿಸುವ ʼಮುಕ್ಕಾಲ್ದಿʼಯವರ ಕೋರಿಕೆಯಂತೆ ಪಂಜುರ್ಲಿ ದೈವವು ಗಡಿ ಪ್ರಧಾನರಾದ ಉಡುಪರಿಬ್ಬರನ್ನು ಯಥಾಸ್ಥಿತಿಗೆ ಬರುವಂತೆ ಮಾಡುತ್ತದೆ.
ಇದನ್ನೂ ಓದಿ: Ujire Ajji Hotel: ಧರ್ಮಸ್ಥಳ ಮಂಜುನಾಥನ ದರ್ಶನ ಆದ್ಮೇಲೆ ಭಕ್ತರು ವಿಸಿಟ್ ಹಾಕುವ ಅಜ್ಜಿ ಹೋಟೆಲ್!
ದೈವದ ಕಾರಣಿಕ
ಹೀಗೆ ಪಂಜುರ್ಲಿ ದೈವವು ತನ್ನ ನೇಮದ ಸಮಯದಲ್ಲಿ ಅತ್ತೂರು ಬೈಲಿನಲ್ಲಿ ತನ್ನ ಕಾರಣಿಕವನ್ನ ತೋರುತ್ತವೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದರೂ ಈ ಇಬ್ಬರು ಗಡಿ ಪ್ರಧಾನರು ದೈವವನ್ನು ಅಷ್ಟೇ ಭಯ ಭಕ್ತಿಯಿಂದ ಆರಾಧಿಸಿಕೊಂಡು ಬಂದಿದ್ದಾರೆ.
ಇದನ್ನೂ ಓದಿ: Dharmasthala: 1,15,000 ಜನರಿಗೆ ಹೊಸ ಜೀವನ ನೀಡಿದ ಮಂಜುನಾಥ! ಇದು ಧರ್ಮಸ್ಥಳ ಮಹಿಮೆ!
ಒಟ್ಟಿನಲ್ಲಿ ತುಳುನಾಡಿನ ಕಾರಣಿಕ ದೈವ ಪಂಜುರ್ಲಿ ಇಲ್ಲಿ ಪ್ರತೀ ವರ್ಷ ತನ್ನ ಕಾರಣಿಕ ತೋರುವ ಮೂಲಕ ಆಶ್ಚರ್ಯಚಕಿತರನ್ನಾಗಿಸುತ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ