ದಕ್ಷಿಣ ಕನ್ನಡ: ಕೇರಳ ಮತ್ತು ಕರಾವಳಿ ಭಾಗದಲ್ಲಿ ದೈವಾರಾಧನೆಗೆ ಅತ್ಯಂತ ಮಹತ್ವವಿದೆ. ಯಾವ ರೀತಿ ತುಳುನಾಡಿನಲ್ಲಿ ದೈವಾರಾಧನೆಯು ಚಾಲ್ತಿಯಲ್ಲಿದೆಯೋ, ಅದೇ ರೀತಿಯ ಆರಾಧನೆ ಕೇರಳದಲ್ಲೂ (Kerala) ಇದೆ. ಅಲಂಕಾರ, ಆಚರಣೆಯ ಪದ್ಧತಿಯಲ್ಲಿ ಭಿನ್ನತೆಯಿದ್ದರೂ, ಎಲ್ಲವೂ ಶಕ್ತಿಯ ಆರಾಧನೆಯಾಗಿದ್ದು, ಇಂತಹುದೇ ಒಂದು ಶಕ್ತಿಯನ್ನು ಕೇರಳದ ದಕ್ಷಿಣ ಭಾಗದಲ್ಲಿ ಆರಾಧಿಸಿಕೊಂಡು ಬರಲಾಗುತ್ತಿದೆ. ದೇವಿಯ ಪ್ರತಿರೂಪವಾದ ಈ ಶಕ್ತಿಯನ್ನು ಪಾಡಾಂಗರ ಭಗವತಿ (Padangara Bhagavthi)ಎಂದು ಕರೆಯಲಾಗುತ್ತಿದ್ದು ಈ ಭಗವತಿಯ ಪೂಮುಡಿ ಉತ್ಸವಕ್ಕೆ ತನ್ನದೇ ಮಹತ್ವವಿದೆ.
ಹೆಣ್ಣನ್ನು ದೇವರಾಗಿ, ದೈವವಾಗಿ ಶ್ರದ್ಧಾಭಕ್ತಿಪೂರ್ವಕವಾಗಿ ಆರಾಧಿಸಿಕೊಂಡು ಬರಲಾಗುತ್ತಿದೆ. ತುಳುನಾಡಿನಲ್ಲಿರುವಂತೆ ಕರ್ನಾಟಕದ ಗಡಿರಾಜ್ಯವಾದ ಕೇರಳದಲ್ಲೂ ದೈವಾರಾಧನೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅಲ್ಲಿನ ಆಚರಣಾ ಪದ್ಧತಿಗೂ, ತುಳುನಾಡಿನ ಆಚರಣಾ ಪದ್ಧತಿಗೂ ಕೊಂಚ ಭಿನ್ನತೆಯಿದೆ. ಆದರೆ ಎರಡೂ ಕಡೆಯಲ್ಲಿ ಶಕ್ತಿಯ ಆರಾಧನೆಯನ್ನೇ ಮಾಡಲಾಗುತ್ತಿದೆ. ಇಂತಹ ಒಂದು ಶಕ್ತಿಯ ಆಚರಣೆ ದಕ್ಷಿಣ ಕೇರಳ ಭಾಗದಲ್ಲಿದ್ದು, ಪಾಡಾಂಗರ ಭಗವತಿ ಎನ್ನುವ ಹೆಸರಿನಲ್ಲಿ ಈ ಶಕ್ತಿಯನ್ನು ಕರೆಯಲಾಗುತ್ತಿದೆ.
ಕೇರಳದಲ್ಲಿ ಸುಮಾರು 500 ಕ್ಕೂ ಹೆಚ್ಚು ರೀತಿಯಲ್ಲಿ ಭಗವತಿ ಆರಾಧನೆಯನ್ನು ಮಾಡಲಾಗುತ್ತದೆ. ಪಾಡಾಂಗರ ಭಗವತಿಯೂ ಇದರಲ್ಲಿ ಸೇರುತ್ತಾಳೆ. ಕಳಿಯಾಟ, ನಡಾವಳಿ, ಕೂವಳಂ ಎನ್ನುವ ಹೆಸರಿನಲ್ಲಿ ಈ ದೇವಿಗೆ ಉತ್ಸವಗಳು ನಡೆಯುತ್ತವೆ. ಪಾಡಾಂಗರ ಭಗವತಿಗೆ ಕಳಿಯಾಟ ಉತ್ಸವವನ್ನು ಆಯೋಜಿಸುವ ಮೂಲಕ ಆರಾಧನೆ ಮಾಡಲಾಗುತ್ತದೆ. ತನ್ನ ವಿಶಿಷ್ಟ ರೂಪಾಲಂಕಾರದ ಮೂಲಕ ಈ ಭಗವತಿ ಭಕ್ತರನ್ನು ಸೆಳೆಯುತ್ತಿದ್ದು, ಸಾವಿರಾರು ಸಂಖ್ಯೆಯ ಭಕ್ತಾದಿಗಳು ಈ ದೇವಿಯ ಉತ್ಸವದಂದು ಸೇರುತ್ತಾರೆ.
ಆಚರಣೆಯಲ್ಲಿರುವ ಇತರೆ ಭಗವತಿಗಿಂತ ಭಿನ್ನವಾಗಿ ಕಾಣಬೇಕು ಎನ್ನುವ ಉದ್ಧೇಶಕ್ಕಾಗಿ ಈ ಭಗವತಿಗೆ ಅತೀ ಎತ್ತರದ ಅಣಿಯನ್ನು ಸಿದ್ಧಪಡಿಸಲಾಗುತ್ತದೆ. ಭಗವತಿ ಉತ್ಸವ ನಡೆಯುವ ಕ್ಷೇತ್ರದಲ್ಲಿ ಹಾಕಲಾಗುವ ಆನೆ ಚಪ್ಪರಕ್ಕೆ ತಾಗುವಷ್ಟು ಎತ್ತರಕ್ಕೆ ಈ ಅಣಿಯನ್ನು ನಿರ್ಮಿಸಲಾಗುತ್ತದೆ. ಇದಕ್ಕೆ ಪೂಮುಡಿ ಅಥವಾ ಹೂಮುಡಿ ಎಂದು ಕರೆಯಲಾಗುತ್ತದೆ. ಮನುಷ್ಯನಿಗೆ ಹೊರಲಾಗದ ಎತ್ತರದ ಈ ಅಣಿಯನ್ನು ದೈವದ ಆವೇಶದ ಸಂದರ್ಭದಲ್ಲಿ ದೈವನರ್ತಕ ಎತ್ತಿ ದೈವಸ್ಥಾನದ ಹೊರಾಂಗಣದಲ್ಲಿ ಬಲಿಸೇವೆ ಮಾಡುತ್ತಾರೆ.
ಇದನ್ನೂ ಓದಿ: Dharmasthala Darshan Timings: ಧರ್ಮಸ್ಥಳ ಮಂಜುನಾಥೇಶ್ವರ ದರ್ಶನ ಸಮಯದಲ್ಲಿ ಬದಲಾವಣೆ
ಮನುಷ್ಯನ ಇತಿನಿಮಿತಿಗೆ ಮೀರಿದ ಶಕ್ತಿ ಆರಾಧನೆಯನ್ಬು ದೊಡ್ಡದಾಗಿ ಬಿಂಬಿಸಲು ದೈವಗಳಿಗೆ ಈ ರೀತಿಯ ಅಣಿಯನ್ನು ಸಿದ್ಧಪಡಿಸಲಾಗುತ್ತೆ. ಧಾರ್ಮಿಕ ನಂಬಿಕೆಯ ಪ್ರಕಾರ ಲೋಕಕ್ಕೆ ಕಂಟಕಪ್ರಾಯನಾಗಿದ್ದ ಧಾರಕಾಸುರ ತನ್ನ ವಧೆ ಮಾಡುವ ಸಮಯ ರಾತ್ರಿಯೂ ಆಗಿರಬಾರದು, ಹಗಲೂ ಆಗಿರವಾರದು ಎನ್ನುವ ವರವನ್ನು ಪಡೆದಿದ್ದ. ಧಾರಕಾಸುರನ ಸಂಹಾರಕ್ಕಾಗಿ ದೇವಿಯು ಸೂರ್ಯನಿಗೆ ಅಡ್ಡವಾಗುವಂತೆ ಎತ್ತರದ ಅಣಿಯನ್ನು ಧರಿಸಿ ರಾಕ್ಷಸನ ವಧೆ ನಡೆಸಿದಳು ಎನ್ನುವ ಕಥೆಯೂ ಚಾಲ್ತಿಯಲ್ಲಿದೆ.
ಇದನ್ನೂ ಓದಿ: Special Fan: ಈ ಒಂದು ಫ್ಯಾನ್ ಬೆಲೆ ಬರೋಬ್ಬರಿ 8 ಲಕ್ಷ! ಇದ್ರ ಗಾಳಿಗೆ ಸೆಕೆ ಮಂಗಮಾಯ!
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಹೊಸಂಗಡಿ ಸಮೀಪದ ಬಲ್ಲಂಗುಡೇಲು ಎಂಬಲ್ಲಿ ಈ ಪೂಮುಡಿಯ ಆಚರಣೆಯಿದೆ. ಹಗಲು ಮತ್ತು ರಾತ್ರಿಯ ನಡು ವೇಳೆಯಲ್ಲಿ ಜರಗುವ ಈ ಉತ್ಸವದಲ್ಲಿ ಸಾವಿರಾರು ಸಂಖ್ಯೆಯ ಭಾಗಿಯಾಗಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
ವರದಿ: ನ್ಯೂಸ್ 18,ಪುತ್ತೂರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ