ಪುತ್ತೂರು: ಆನೆ ಬಂತೊಂದಾನೆ! ಈ ಮಾತು ಕೇಳಿದ್ರೆ ಸಾಕು, ಬೆಚ್ಚಿ ಬೀಳುವಂತಹ ಸ್ಥಿತಿ! ಜೀವವನ್ನೇ ಜೇಬಲ್ಲಿಟ್ಟುಕೊಂಡು ಸುರಕ್ಷಿತ ಸ್ಥಳಕ್ಕೆ ಓಡುವ ವಾತಾವರಣ! ಪಕ್ಕದೂರಲ್ಲಿ ಕಾಡಾನೆ ದಾಳಿಗೆ (Wild Elephant Attack) ಒಬ್ರು ಜೀವ ಬಿಟ್ರಂತೆ! ಮತ್ತೆಲ್ಲೋ ಹಾಗಾಯ್ತಂತೆ, ನಮ್ಮೂರಲ್ಲಿ ಏನಾಗುತ್ತೋ! ಏನೂ ಆಗದಿದ್ದರೆ ಸಾಕಪ್ಪಾ ಅನ್ನೋ ಬೇಡಿಕೆಗಳು ಈಗ ನನಸಾಗಿವೆ. ಆದರೂ ಇಲ್ಲಿನ ಗ್ರಾಮಸ್ಥರ (Wild Elephant Attack In Puttur) ಭಯ ಇನ್ನೂ ಇದೆ!
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರೆಂಜಲಾಡಿ ಗ್ರಾಮದ ಮೀನಾಡಿ ಎಂಬಲ್ಲಿ ಹಾಲಿನ ಡಿಪೋದಲ್ಲಿ ಕೆಲಸ ಮಾಡಲು ಮನೆಯಿಂದ ಡಿಪೋಗೆ ತೆರಳುತ್ತಿದ್ದ ರಂಜಿತಾ ಎಂಬ ಯುವತಿ ಕಾಡಾನೆಯಿಂದ ಮೃತಪಟ್ಟಿದ್ದಳು. ಯುವತಿಯನ್ನು ರಕ್ಷಿಸಲು ಧಾವಿಸಿದ್ದ ಸ್ಥಳೀಯ ನಿವಾಸಿ ರಮೇಶ್ ರೈ ಎಂಬವವರೂ ನಿಧನರಾಗಿದ್ದರು. ಘಟನೆಯಿಂದ ಆಕ್ರೋಶಿತರಾದ ಸಾರ್ವಜನಿಕರು ಕಾಡಾನೆಗಳನ್ನು ನಿಯಂತ್ರಣ ಮಾಡಲು ವಿಫಲವಾದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಮೂರನೇ ದಿನ ಸಿಕ್ತು ಒಂದು ಕಾಡಾನೆ
ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಅರಣ್ಯ ಇಲಾಖೆ ಕಾಡಾನೆಗಳನ್ನು ಸೆರೆಹಿಡಿಯಲು ಅಪರೇಷನ್ ಕಾಡಾನೆ ಕಾರ್ಯಾಚರಣೆ ಆರಂಭಿಸಿತ್ತು. ಮೂರನೇ ದಿನದ ಕಾರ್ಯಾಚರಣೆಯಲ್ಲಿ ಒಂದು ಕಾಡಾನೆಯನ್ನು ಪತ್ತೆಹಚ್ಚಿ ಸೆರೆಹಿಡಿಯಲಾಗಿದೆ.
ಐದು ಸಾಕಾನೆಗಳ ಕಾರ್ಯಾಚರಣೆ
ಸುಬ್ರಹ್ಮಣ್ಯ ಅರಣ್ಯ ವಲಯ ವ್ಯಾಪ್ತಿಯ ಕೊಂಬಾರಿನ ಮಂಡೆಕರ ಎಂಬ ಪ್ರದೇಶದಲ್ಲಿ ಒಂದು ಕಾಡಾನೆ ಪತ್ತೆಯಾಗಿದೆ. ಕಾರ್ಯಾಚರಣೆ ಭಾಗಿಯಾಗಿದ್ದ ಐದು ಸಾಕಾನೆಗಳಿಂದ ಕಾಡಾನೆಯನ್ನು ಸುತ್ತುವರಿದು ಸೆರೆಹಿಡಿಯಲಾಗಿದೆ. ಸೆರೆ ಹಿಡಿದ ತಕ್ಷಣವೇ ಕಾಡಿನಲ್ಲಿ ತಾತ್ಕಾಲಿಕ ರಸ್ತೆಯ ವ್ಯವಸ್ಥೆ ಮಾಡಿ ಆನೆಯನ್ನು ಮೈಸೂರಿಗೆ ಸಾಗಿಸಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ
ಈ ಭಾಗದಲ್ಲಿ ಹಲವಾರು ಕಾಡಾನೆಗಳು ವಾಸವಿದ್ದು ಆನೆಗಳು ಈ ಭಾಗದ ಕೃಷಿಭೂಮಿಗಯನ್ನು ಸಾಕಷ್ಟು ನಾಶಮಾಡಿವೆ. ಒಂದೇ ಆನೆಯನ್ನು ಹಿಡಿದು ಅರಣ್ಯ ಇಲಾಖೆ ಕಾರ್ಯಾಚರಣೆ ನಿಲ್ಲಿಸಲಿದೆ ಎನ್ನುವ ಸಂಶಯದ ಕಾರಣ ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: Panjurli Daiva Video: ಪ್ರಜ್ಞೆ ತಪ್ಪಿಸುವ ತುಳುನಾಡಿನ ಪಂಜುರ್ಲಿ ದೈವ! ಆದೇಶ ಕೊಟ್ರೆ ತಕ್ಷಣ ಎಚ್ಚರವಾಗುತ್ತೆ!
ಜೀಪಿಗೆ ಕಲ್ಲುತೂರಾಟ, ಪೊಲೀಸರಿಗೆ ಗಾಯ!
ಒಂದು ಹಂತಕ್ಕೆ ಜನರ ಆಕ್ರೋಶ ಅರಣ್ಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧವೂ ತಿರುಗಿಬಿದ್ದಿದೆ. ಆಕ್ರೋಶಿತ ಗುಂಪೊಂದು ಅರಣ್ಯ ಇಲಾಖೆಗೆ ಸೇರಿದ ಜೀಪಿಗೆ ಕಲ್ಲು ತೂರಾಟವನ್ನೂ ನಡೆಸಿದ್ದು, ಪೋಲೀಸರಿಗೂ ಘರ್ಷಣೆಯಲ್ಲಿ ಗಾಯಗಳಾಗಿವೆ. ಪರಿಸ್ಥಿತಿ ನಿಯಂತ್ರಿಸಲು ಪೋಲೀಸರು ಲಘು ಲಾಠಿ ಪ್ರಹಾರವನ್ನೂ ನಡೆಸುವ ಮೂಲಕ ಜನರನ್ನು ನಿಯಂತ್ರಿಸಿದ್ದಾರೆ.
ಇದನ್ನೂ ಓದಿ: Ujire Ajji Hotel: ಧರ್ಮಸ್ಥಳ ಮಂಜುನಾಥನ ದರ್ಶನ ಆದ್ಮೇಲೆ ಭಕ್ತರು ವಿಸಿಟ್ ಹಾಕುವ ಅಜ್ಜಿ ಹೋಟೆಲ್!
ಜನರ ಆಕ್ರೋಶದ ನಡುವೆ ಅರಣ್ಯ ಇಲಾಖೆ ಈ ಭಾಗದಲ್ಲಿ ಮತ್ತೆ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯನ್ನು ಮುಂದುವರಿಸಲು ನಿರ್ಧರಿಸಿದೆ. ಒಟ್ಟಾರೆ ಕಾಡಾನೆ ಸಮಸ್ಯೆ ನಿಂತ್ರೆ ಸಾಕಪ್ಪಾ ಎಂಬ ಇಲ್ಲಿನ ಜನರ ಪ್ರಾರ್ಥನೆ ಫಲಿಸಲಿ ಎನ್ನೋಣ ಅಲ್ವಾ?
ನ್ಯೂಸ್ 18 ,ಪುತ್ತೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ