ಮಂಗಳೂರು: ಅಬ್ಬಬ್ಬ! ಅದೇನು ರೋಷಾವೇಷ, ಅದೇನು ಅಬ್ಬರ. ಹೌದು, ಹೀಗೆ ಒಂದೇ ಸಮಯಕ್ಕೆ ಒಂಬತ್ತು ದೈವದ (Nava Guliga Daivaradhane) ನರ್ತನ ನಡೆದ್ರೆ ಹೇಗಿರ್ಬೇಡ? ನೋಡುಗರಿಗಂತೂ ಭಯ ಭಕ್ತಿಯ ಜೊತೆಗೆ ದೈವದ ಆವೇಶ ನೋಡುವುದೇ (Karavali Daivaradhane) ರೋಮಾಂಚನಕಾರಿ. ಅಷ್ಟಕ್ಕೂ ಮೈನವಿರೇಳಿಸುವ ಈ ಭೂತ ಕೋಲ ನಡೆದಿದ್ದಾರೂ ಎಲ್ಲಿ ಅಂತೀರಾ? ಅದೆಲ್ಲವನ್ನೂ ಹೇಳ್ತೀವಿ ನೋಡಿ.
ಯೆಸ್, ಒಂದಲ್ಲ, ಎರಡಲ್ಲ ಬರೋಬ್ಬರಿ ಒಂಬತ್ತು ದೈವಗಳ ಈ ನರ್ತನ ನೋಡೋದೇ ಅಚ್ಚರಿ. ಯಾಕೆಂದ್ರೆ ತುಳುನಾಡಿನಲ್ಲಿ ಗುಳಿಗ ದೈವ ಅಂದ್ರೇನೆ ಅಬ್ಬರ, ಆವೇಶಗಳಿಗೆ ಹೆಸರುವಾಸಿ.
ಒಂಭತ್ತು ಗುಳಿಗಗಳ ಅಬ್ಬರ!
ಸಾಮಾನ್ಯವಾಗಿ ಗುಳಿಗ ದೈವದ ನೇಮ ನಡೆಯುವ ಹೊತ್ತಿಗೆ ಅದನ್ನ ನಿಯಂತ್ರಿಸಲೆಂದೇ ತುಸು ಜಾಸ್ತಿಯೇ ಜನ ನಿಂತಿರ್ತಾರೆ. ಅಂತದ್ರಲ್ಲಿ ಒಂದೇ ಸಮಯಕ್ಕೆ ಒಂಭತ್ತು ಗುಳಿಗ ದೈವದ ಕೋಲ ನಡೆದು ಅಲ್ಲಿದ್ದವರೆಲ್ಲರನ್ನ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು.
ಶ್ರೀ ದುರ್ಗಾಪರಮೇಶ್ವರಿ ಹಾಗೂ ನವಗುಳಿಗ ಕ್ಷೇತ್ರದ ವಿಶೇಷ
ಅಷ್ಟಕ್ಕೂ ಈ ನವಗುಳಿಗಗಳ ಗಗ್ಗರ ಸೇವೆ ನಡೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವೇಣೂರಿನ ಬರ್ಕಜೆ ಗ್ರಾಮದಲ್ಲಿ. ಇಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಹಾಗೂ ನವಗುಳಿಗ ಕ್ಷೇತ್ರವು ಇಂತಹ ವೈಭವದ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಗ್ರಾಮದಲ್ಲಿ ಏಕಕಾಲದಲ್ಲಿ ಒಂಬತ್ತು ಗುಳಿಗಗಳು ನರ್ತನ ಮಾಡುವುದು ಇಲ್ಲಿನ ವಿಶೇಷ. ಒಂಬತ್ತು ಗುಳಿಗ ಒಂದೇ ಸಲ ಆವೇಶದಲ್ಲಿ ಕುಣಿಯುವುದು, ಅಭಯ ನೀಡುವುದು ತುಳುನಾಡಿನ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.
ಇದನ್ನೂ ಓದಿ: Mangaluru Special Talent: ಮಂಗಳೂರಿನ ವಿಶೇಷ ಪ್ರತಿಭೆ! ಕಣ್ಣಿಗೆ ಬಟ್ಟೆ ಕಟ್ಟಿ ಎರಡೂ ಕೈಯಲ್ಲಿ ಬರೆಯುವ ಬಾಲಕಿ
ವಿಶೇಷ ನರ್ತನ ನೋಡಲು ಭಕ್ತರ ದಂಡು
ಗುಳಿಗ ದೈವಕ್ಕೆ ಸಾಮಾನ್ಯವಾಗಿ ಏಕಕಾಲದಲ್ಲಿ ಒಂದೆರಡು ದೈವಗಳು ನರ್ತನ ಸೇವೆ ಮಾಡೋದು ಸಹಜ, ಆದ್ರೆ ಇಲ್ಲಿ ಹೀಗೇ ಒಂಬತ್ತು ಗುಳಿಗ ದೈವಗಳಿಗೆ ವಿಶೇಷವಾಗಿ ನರ್ತನ ಸೇವೆ ನೀಡಲಾಗುತ್ತೆ. ಹಾಗಾಗಿ ನವ ಗುಳಿಗರ ಅಬ್ಬರ ನೋಡೋದಕ್ಕೆ ಭಕ್ತಾದಿಗಳ ದಂಡೇ ಇಲ್ಲಿ ಬರುತ್ತೆ.
ಇದನ್ನೂ ಓದಿ: Puttur: ಕಾರ್ ಬಂಪರ್ನಲ್ಲಿ 70 ಕಿಲೋ ಮೀಟರ್ ಸಂಚರಿಸಿದ ನಾಯಿಯ ಮಡಿಲು ಸೇರಿದ ಮರಿಗಳು!
ನವ ದುರ್ಗೆಯರ ಕ್ಷೇತ್ರಪಾಲಕರಾಗಿ ಒಂಬತ್ತು ಗುಳಿಗ ದೈವಗಳು ಇಲ್ಲಿ ನೆಲೆಯಾಗಿರೋದು ಈ ನವಗುಳಿಗಗಳ ಗಗ್ಗರ ಸೇವೆಗೆ ಕಾರಣವಾಗಿದೆ. ಒಟ್ಟಿನಲ್ಲಿ ಕರಾವಳಿಯಲ್ಲಿ ತನ್ನ ರೋಷಾವೇಷಕ್ಕೆ ಹೆಸರುವಾಸಿಯಾದ ಗುಳಿಗನನ್ನು ಒಂದೇ ಸಮಯಕ್ಕೆ ಒಂಬತ್ತು ರೂಪದಲ್ಲಿ ಕಂಡು ದೈವ ಭಕ್ತರು ಧನ್ಯರಾದರು.
ವರದಿ: ನಾಗರಾಜ್ ಭಟ್, ನ್ಯೂಸ್ 18 ಕನ್ನಡ ಡಿಜಿಟಲ್ ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ