ದಕ್ಷಿಣ ಕನ್ನಡ: ಈ ಊರಿಗೂ ಹದಿನೆಂಟಕ್ಕೂ (18) ಅದೇನೋ ನಂಟು. ನಿಜ, ನೀವು ನೋಡ್ತಿರೋ ಕೆರೆ, ದೇಗುಲ, ಬಸದಿ ಹೀಗೆ ಏನೇ ಕಂಡ್ರೂ ಅದೆಲ್ಲವೂ ಇಲ್ಲಿ ಹದಿನೆಂಟು. ಹೌದು, ತುಸು ಅಚ್ಚರಿಯಾದ್ರೂ ಇದು ನಿಜಾನೇ! ಹಾಗಿದ್ರೆ ಹದಿನೆಂಟರ ಜೊತೆ ನಂಟು ಹೊಂದಿರೋ ಈ ಊರು ಆದ್ರೂ ಯಾವ್ದು (Dakshina Kannada News) ಅಂತೀರ? ಹೇಳ್ತೀವಿ ನೋಡಿ.
ಹದಿನೆಂಟರ ನಂಟು ಹೀಗಿದೆ
ಹೌದು, ಹೀಗೆ ಬಸದಿ, ದೇಗುಲ, ಕೆರೆ ಯಾವುದೇ ಇರ್ಲಿ ಅದೆಲ್ಲವೂ ಹದಿನೆಂಟರ ಜೊತೆಗೆ ಗಂಟು ಹಾಕಿಕೊಂಡಿದೆ. ಅಂದಹಾಗೆ ಈ ಊರು ಬೇರೆ ಯಾವುದು ಅಲ್ಲ, ಸಾವಿರ ಕಂಬದ ಬಸದಿ, ಜೈನಕಾಶಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ.
ಯೆಸ್, ಮೂಡುಬಿದಿರೆಗೂ ಈ ಹದಿನೆಂಟಕ್ಕೂ ಅದೆಂತಹ ನಂಟು ಅಂತೀರಾ? ಇಲ್ಲಿನ ಸುತ್ತಮುತ್ತಲು 18 ಹಿಂದೂ ದೇಗುಲ, ಅಷ್ಟೇ ಸಂಖ್ಯೆಯ ಬಸದಿ ಹಾಗೂ ಅದರ ಮುಂಭಾಗದಲ್ಲಿ ಹದಿನೆಂಟು ಕೆರೆಗಳು. ಹೀಗೆ 18ರ ಜೊತೆ ಬೆಸೆದುಕೊಂಡಿರುವ ಮೂಡುಬಿದಿರೆ ಇತಿಹಾಸ ಪ್ರಸಿದ್ಧ ಪ್ರದೇಶವೂ ಹೌದು.
ಇಂದಿಗೂ ಇವೆ ಕೆರೆಗಳು
ಈ ಹಿಂದೆ ಇಲ್ಲಿರೋ ಕೆರೆಗಳನ್ನ ಕುಡಿಯೋದಕ್ಕೆ, ಕೃಷಿ ಹಾಗೂ ಬಸದಿ ಮತ್ತು ದೇಗುಲದ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿತ್ತು. ಒಂದೊಂದು ಕೆರೆಗಳು ಒಂದು ಎಕರೆಗಳಷ್ಟು ಪುಟ್ಟದಾದರೆ ಕೆಲವೊಂದು ಕೆರೆಗಳು 15 ಎಕರೆಗಳಷ್ಟು ದೊಡ್ಡದಿದೆ. ಕೆಲ ಕೆರೆಗಳು ಪ್ರವಾಸಿ ತಾಣಗಳಾಗಿ ಮಾರ್ಪಟ್ಟರೆ ಕೆಲ ಕೆರೆಗಳು ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದೆ.
ದೇಗುಲ, ಬಸದಿಗಳೂ ಹದಿನೆಂಟು
ಇನ್ನು ದೇಗುಲಗಳ ಬಗ್ಗೆ ಬಂದರೆ ವೀರಭದ್ರ, ಗೌರಿ, ಗೋಪಾಲಕೃಷ್ಣ, ಬಡಗು ಮಹಾಲಿಂಗೇಶ್ವರ ದೇಗುಲ, ಭಾರತದಲ್ಲೇ ಅಪರೂಪದ ಬ್ರಹ್ಮದೇಗುಲ, ಮಾರುತಿ ಹಾಗೂ ವೆಂಕಟೇಶ್ವರ ದೇಗುಲ ಹೀಗೆ ಹದಿನೆಂಟು ದೇಗುಲಗಳಿದ್ದು 18 ರೀತಿಯ ಶೈಲಿಗಳಲ್ಲಿ ನಿರ್ಮಿಸಲಾಗಿದೆ.
ಅಷ್ಟೇ ಅಲ್ದೇ ಚಂದ್ರನಾಥ ಬಸದಿ, ಕೆರೆ ಬಸದಿ, ಸಾವಿರ ಕಂಬಗಳ ಬಸದಿ, ಲೆಪ್ಪದ ಬಸದಿ ಸೇರಿದಂತೆ ಒಟ್ಟು ಹದಿನೆಂಟು ಬಸದಿಗಳಿದ್ದು ಒಂದು ಜೈನ ಮಠ ಹಾಗೂ ಪುರಾತನ ಮನೆಗಳೂ ಇಲ್ಲಿವೆ.
ಇದನ್ನೂ ಓದಿ: Puttur Girl: ಪುಲ್ವಾಮಾ ವೀರ ಯೋಧರ ಗೌರವಾರ್ಥ ಬರ್ತ್ಡೇಗೆ ಬ್ರೇಕ್, ಶಾಲೆಗೆ ಹಣ ದೇಣಿಗೆ ನೀಡುವ ಪುತ್ತೂರಿನ ಬಾಲಕಿ
ಹೀಗೆ ಮೂಡುಬಿದಿರೆ ಬಿದಿರಿನಿಂದಾಗಿ ಅದ್ಹೇಗೆ ಹೆಸರು ಪಡೆದಿದೆಯೋ ಅದೇ ರೀತಿ ಹದಿನೆಂಟರ ನಂಟಿನ ಮೂಲಕ ಗುರುತಿಸಲ್ಪಡುತ್ತಿರುವುದು ವಿಶೇಷ.
ವರದಿ: ನಾಗರಾಜ್ ಭಟ್, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ