ಮಂಗಳೂರು: ಸುತ್ತಲೂ ಹಚ್ಚಹಸಿರ ಭೂಮಿ. ನಡುವೆ ಹಳೆಯದಾದ ದೇಗುಲ-ದೈವಸ್ಥಾನ. ತುಳುನಾಡ (Tulu Nadu) ಪ್ರತೀಕವಾದ ಸೂರ್ಯ ಚಂದ್ರನನ್ನ ಹೊಂದಿರೋ ಕೊಡಿಮರ. ಹಳೆಯ ಕೆತ್ತನೆ, ಪುರಾತನ ಗರ್ಭಗುಡಿ ಎಲ್ಲವೂ ಜೀರ್ಣೋದ್ಧಾರಕ್ಕೆ ಬಂದಂತಿರೋ ಕಟ್ಟಡ. ಹೌದು, ಇಂತಹದ್ದೊಂದು ಸಾವಿರಾರು ವರ್ಷದ ಇತಿಹಾಸವಿರುವ ಅಪರೂಪದ ಈ ದೇಗುಲದ (Temple-Daivasthana) ವಿಶೇಷತೆ ಕೇಳಿದ್ರೆ ಮೈ ರೋಮಾಂಚನಗೊಳ್ಳುತ್ತೆ. ಭಕ್ತಿ ಭಾವ ಇಮ್ಮಡಿಯಾಗುತ್ತೆ. ಹಾಗಿದ್ರೆ ಯಾವುದು ಈ ದೇಗುಲ? ಏನಿದರ ವಿಶೇಷತೆ ಅಂತೀರಾ? ಹೇಳ್ತೀವಿ ನೋಡಿ.
ದೇವರು, ದೈವ ನೆಲೆಸಿದ ತಾಣ
ಯೆಸ್, ಇದು ದೇವಸ್ಥಾನ ಹಾಗೂ ದೈವಸ್ಥಾನ ಹೊಂದಿರೋ ತಾಣ. ಅದ್ಯಾಕೆ ಅಂತೀರ? ಇಲ್ಲಿ ದೇವರೂ ಇದ್ದಾನೆ, ತುಳುನಾಡ ಕಾರಣಿಕ ದೈವನೂ ಇದ್ದಾನೆ. ಇದುವೇ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕಟ್ಟ ಕಡೆಯ ಗ್ರಾಮವಾದ ಮಾರೂರು-ಹೊಸಂಗಡಿ ಗೋಪಾಲಕೃಷ್ಣ ದೇವಸ್ಥಾನ. ಆದ್ರಿಲ್ಲಿ ಗೋಪಿಲೋಲ ಶ್ರೀಕೃಷ್ಣನಿರುವಂತೆ, ಕ್ಷೇತ್ರಪಾಲನಾಗಿ ತುಳುನಾಡ ಕಾರಣಿಕ ದೈವ ಕೊಡಮಣಿತ್ತಾಯನೂ ಇದ್ದಾನೆ.
ಕೊಡಮಣಿತ್ತಾಯ ಗೋಪಾಲಕೃಷ್ಣ ದೇಗುಲ!
ಗೋಪಾಲಕೃಷ್ಣ ದೇವಸ್ಥಾನಕ್ಕೆ ಸ್ಥಳೀಯವಾಗಿ ‘‘ಕೊಡಮಣಿತ್ತಾಯ ಗೋಪಾಲಕೃಷ್ಣ ದೇಗುಲ‘‘ ಎಂದೇ ಪ್ರಸಿದ್ಧಿ ಪಡೆದಿದೆ. ಹಾಗಾಗಿ ಇಲ್ಲಿ ದೈವ, ದೇವರ ಎರಡು ವಿಧಿ ವಿಧಾನಗಳು ಸಮಾನವಾಗಿ ನಡೆಯುತ್ತವೆ. ಸದ್ಯ ಈ ದೇಗುಲವು ಜೀರ್ಣಾವಸ್ಥೆಗೆ ತಲುಪಿದ್ದು, ಕೊಡಮಣಿತ್ತಾಯ, ಕೃಷ್ಣನ ಭಕ್ತರು ಜೀರ್ಣೋದ್ಧಾರಕ್ಕೆ ಮುಂದಾಗಿದ್ಧಾರೆ. ಹೀಗಾಗಿ ಮತ್ತೆ ಐತಿಹಾಸಿಕ ದೇಗುಲದ ನೆಲದಲ್ಲಿ ಜೀವಕಳೆ ಬಂದಂತಾಗಿದೆ.
ಸಾವಿರ ವರ್ಷಗಳ ಹಿನ್ನೆಲೆ!
ವಿಶೇಷ ಅಂದ್ರೆ ಈ ದೇಗುಲಕ್ಕೆ ಒಂದು ಸಾವಿರದ ಇನ್ನೂರು ವರ್ಷಗಳ ಇತಿಹಾಸವಿದೆ ಅನ್ನೋ ಉಲ್ಲೇಖವಿದೆ. ಸಾವಿರ ವರ್ಷಗಳಿಂದಲೂ ಇಲ್ಲಿ ಹೆಚ್ಚಿನ ಜೀರ್ಣೋದ್ಧಾರ ಕಾರ್ಯಗಳು ನಡೆದಿದ್ದೂ ಇಲ್ಲ. ಈಗ ಜೀರ್ಣೋದ್ಧಾರಕ್ಕೆ ಮುಂದಾಗಿದ್ದು ಗ್ರಾಮಸ್ಥರಲ್ಲಿ ಹರ್ಷ ಭಾವನೆ ಮೂಡಿಸಿದೆ.
ಕೃಷ್ಣನ ಜೊತೆ ಹರಸುವ ಕೊಡಮಣಿತ್ತಾಯ
ದೈವ ಹಾಗೂ ದೇವರು ಒಂದೇ ಸ್ಥಳದಲ್ಲಿ ನೆಲೆಸಿರುವುದು ಈ ಗೋಪಾಲಕೃಷ್ಣ ದೇವಸ್ಥಾನದ ವಿಶೇಷತೆ. ತುಳುನಾಡಿನ ರಾಜನ್ ದೈವವಾದ ಶ್ರೀ ಕೊಡಮಣಿತ್ತಾಯ ದೈವ ಕ್ಷೇತ್ರಪಾಲಕನಾಗಿದ್ದು, ಕೃಷ್ಣನ ಜೊತೆ ಜೊತೆಗೆ ಬಂದ ಭಕ್ತರಿಗೆ ಇಂಬು ಕೊಡುತ್ತಾನೆ ಅನ್ನೋ ನಂಬಿಕೆ ಭಕ್ತರದ್ದು.
ಇದನ್ನೂ ಓದಿ:Elephant Training: ಆನೆಗಳಿಗೆ ಪಾಠ ಹೇಳೋ ಶಾಲೆಯಿದು! ಊಟ, ಪಾಠ, ತುಂಟಾಟ ಎಲ್ಲ ಇಲ್ಲೇ
ಪೂಜಾ ಸಮಯದಲ್ಲಿ ಗರುಡ ಎಂಟ್ರಿ!
ಸಾವಿರ ವರ್ಷಗಳ ಇತಿಹಾಸ ಹೊಂದಿರೋ ಈ ದೇಗುಲದ ಜೀರ್ಣೋದ್ಧಾರಕ್ಕಿಂತ ಮುಂಚೆ ಮಾಡುವ ಸಂಕೋಚ ಬಾಲಾಲಯ ಪೂಜೆ ಕಾರ್ಯಕ್ರಮದ ಸಂದರ್ಭದಲ್ಲಿ ಇನ್ನೊಂದು ಅಚ್ಚರಿಯೂ ನಡೆಯಿತು. ಪೂಜಾ ಸಮಯಕ್ಕೆ ವಿಷ್ಣುವಿನ ವಾಹನ ಗರುಡನ ದರ್ಶನವಾಗಿದ್ದು, ಆಗಸದಲ್ಲಿಯೇ ಮೂರು ಬಾರಿ ದೇಗುಲಕ್ಕೆ ಪ್ರದಕ್ಷಿಣೆ ಹಾಕಿ ಅದೃಶ್ಯವಾಗಿದೆ. ಇದಂತೂ ಭಕ್ತರಲ್ಲಿ ಹೊಸ ಪುಳಕ ಮೂಡಿಸಿತು. ಜೊತೆಗೆ ಜೀರ್ಣೋದ್ಧಾರ ಕಾಮಗಾರಿಗೆ ಹುರುಪು ತುಂಬಿತು.
ಒಟ್ಟಿನಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ದೇಗುಲವೊಂದು ಜೀರ್ಣೋದ್ಧಾರವಾಗುತ್ತಿರುವ ಸಂತಸದಲ್ಲಿ ಗ್ರಾಮಸ್ಥರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ