Mangaluru Solo Protest: ನನ್ನ ಗೆಳೆಯನಂತೆ ಮತ್ಯಾರೂ ಸಾಯ್ಬಾರ್ದು; ಒಳ್ಳೆ ರಸ್ತೆಗಾಗಿ ಮಂಗಳೂರಲ್ಲಿ ಯುವಕನ ಒಂಟಿ ಪ್ರತಿಭಟನೆ

Mangaluru Youth solo protest: ಹೊಂಡ ಗುಂಡಿ ತುಂಬಿದ ರಸ್ತೆಯಿಂದಾಗಿ ಮಂಗಳೂರಿನಲ್ಲಿ ಇತ್ತೀಚೆಗೆ ಯುವಕನೋರ್ವ ಮೃತಪಟ್ಟಿದ್ದ. ಸಾಮಾನ್ಯವಾಗಿ ಕರಾವಳಿ ಮಂದಿ ನೆಲ, ಜಲದ ವಿಚಾರದಲ್ಲಿ ಮೌನವಹಿಸುವವರೇ ಜಾಸ್ತಿ. ಆದರೆ, ಈ ಯುವಕನ ಸಾವು ಆತನ ಸ್ನೇಹಿತರನ್ನು ಮೈಕೊಡವಿ ನಿಲ್ಲುವಂತೆ ಮಾಡಿದೆ.

ಲಿಖಿತ್ ರೈ ಸೋಲೋ ಪ್ರೊಟೆಸ್ಟ್

"ಲಿಖಿತ್ ರೈ ಸೋಲೋ ಪ್ರೊಟೆಸ್ಟ್"

  • Share this:
    ಮಂಗಳೂರು: ಇಡೀ ಕರಾವಳಿಯೇ 75 ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದ್ರೆ, ಇತ್ತ ವಿದ್ಯಾರ್ಥಿಯೊಬ್ಬ ಹೊಂಡ ಗುಂಡಿ ತುಂಬಿದ ರಸ್ತೆಯಿಂದ ಆಝಾದಿ ಕೇಳುತ್ತಿದ್ದಾನೆ‌. ಒಬ್ಬಂಟಿಗನಾಗಿ ಪೋಸ್ಟರ್ ಹಿಡಿದು ರಸ್ತೆಯ 'ಸುರಕ್ಷಾ ಬಂಧನ್' ಗಾಗಿ (Suraksha Bandhan)  ಆಗ್ರಹಿಸುತ್ತಿದ್ದಾನೆ.. ಅತ್ತ ಮಂಗಳೂರು (Mangaluru) ಪಾಲಿಕೆ ಕಚೇರಿ ಅಮೃತ ಮಹೋತ್ಸವ ಸಂಭ್ರಮಕ್ಕೆ ಸಿಂಗರಿಸಿ ನಿಂತಿದ್ದರೆ, ಇತ್ತ ಈ ವಿದ್ಯಾರ್ಥಿ ನಮಗೆಲ್ಲಿದೆ ಸ್ವಾತಂತ್ರ್ಯ ಎಂದು ಪ್ರಶ್ನಿಸುವಂತೆ ಭಾಸವಾಗ್ತಿದ್ದಾನೆ.‌. ಅಷ್ಟಕ್ಕೂ ಈ ಹುಡುಗ ಏಕಾಂಗಿಯಾಗಿ, (Mangaluru Youth Solo Strike) ಮೌನ ಪ್ರತಿಭಟನೆ ನಡೆಸ್ತಿರೋದು ಯಾವುದೋ ಪ್ರಚಾರಕ್ಕಾಗಿಯಲ್ಲ, ಬದಲಿಗೆ ತನ್ನ ಸ್ನೇಹಿತನಿಗಾಗಿ. ನೀವೇ ಈ ವಿಡಿಯೋ ನೋಡಿ..

    ಜಸ್ಟಿಸ್ ಫಾರ್ ಆತಿಶ್
    ಮಂಗಳೂರು ಮಹಾನಗರ ಪಾಲಿಕೆ ಮುಂದೆ ಪೋಸ್ಟರ್ ಹಿಡಿದು ನ್ಯಾಯ ಕೇಳುತ್ತಿರುವ ಈ ಹುಡುಗನ‌ ಹೆಸರು ಲಿಖಿತ್ ರೈ. ಇತ್ತೀಚೆಗಷ್ಟೇ ಈತನ ಸ್ನೇಹಿತ ಆತಿಶ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಆತಿಶ್ ದ್ವಿಚಕ್ರ ವಾಹನದಿಂದ ರಸ್ತೆಗೆ ಎಸೆಯಲ್ಪಟ್ಟು ಸಾವನ್ನಪ್ಪಲು ರಸ್ತೆಯಲ್ಲಿದ್ದ ಹೊಂಡವೇ ಕಾರಣ ಎಂದು ಆತಿಶ್ ಸ್ನೇಹಿತರು ಅಂದಾಜಿಸಿದ್ದಾರೆ.

    justice for Atish ಅಭಿಯಾನ ಶುರು!
    ಹೀಗಾಗಿ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಇವರೆಲ್ಲರೂ ತಮ್ಮ ಸಹಪಾಠಿಯ ಪರವಾಗಿ justice for Atish ಹೆಸರಲ್ಲಿ ಜಾಲತಾಣದಲ್ಲಿ ಹೋರಾಟ ಆರಂಭಿಸಿದ್ದಾರೆ.‌ ಅದರ ಮುಂದುವರಿದ ಭಾಗವಾಗಿ ವಿದ್ಯಾರ್ಥಿಗಳು ಪೋಸ್ಟರ್ ಹಿಡಿದು ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಹೀಗೆ ಲಿಖಿತ್ ರೈ ಕೂಡಾ ಗಮನಸೆಳೆಯುವ ಪೋಸ್ಟರ್ ಗಳ ಮೂಲಕ ತಮ್ಮ ಸ್ನೇಹಿತನ ಸಾವಿಗೆ ನ್ಯಾಯ ಕೇಳುತ್ತಿದ್ದಾರೆ.

    ಇದನ್ನೂ ಓದಿ: Dakshina Kannada: ತುಳುನಾಡಲ್ಲಿ ನಡೆಯುತ್ತೆ ಪ್ರೇತಾತ್ಮಗಳ ಮದುವೆ! ಅಚ್ಚರಿ ಆದರೂ ಸತ್ಯವಿದು!

    ಸೋಲೋ ಪ್ರೊಟೆಸ್ಟ್
    ಲಿಖಿತ್ ರೈ ಸೋಲೋ ಪ್ರೊಟೆಸ್ಟ್ ಗೆ ನಾಗರಿಕರಿಂದಲೂ ಬೆಂಬಲ ವ್ಯಕ್ತವಾಗಿದೆ. ಬಂಟ್ವಾಳದಿಂದ ಸುರತ್ಕಲ್ ವರೆಗಿನ ಟೋಲ್ ರಸ್ತೆಗಳಿಗೆ ಕಾಯಕಲ್ಪ ಕಲ್ಪಿಸುವಂತೆ ಲಿಖಿತ್ ರೈ ಆಗ್ರಹಿಸುತ್ತಿದ್ದಾನೆ. ಈ ಮೂಲಕ ಆತಿಶ್ ಸಾವಿಗೆ ನ್ಯಾಯ ಸಿಗಬೇಕು. ಇನ್ಯಾರೋ ಅಮಾಯಕ ದ್ವಿಚಕ್ರ ವಾಹನ ಸವಾರರು ಬಲಿಯಾಗುವುದನ್ನು ತಡೆಯಬೇಕೆನ್ನುವುದೇ ಲಿಖಿತ್ ರೈ ಬೇಡಿಕೆ.

    ಇದನ್ನೂ ಓದಿ: Uttara Kannada: ಗೋಕರ್ಣದಲ್ಲಿ ಹೆಣ್ಣು ಹೆಣ್ಣಿಗೆ ಮದುವೆ! ಅದ್ದೂರಿ ವಿಡಿಯೋ ನೋಡಿ

    ಪ್ರತಿಭಾವಂತ ಆತಿಶ್
    ಈ ಮಧ್ಯೆ ಮೃತ ಆತಿಶ್ ರಿಸಲ್ಟ್ ಬುಧವಾರ ಪ್ರಕಟಗೊಂಡಿದ್ದು ಉತ್ತಮ ಅಂಕ ಪಡೆದಿದ್ದಾನೆ. ಆದರೆ, ಅದನ್ನ ನೋಡಲು ಆತಿಶ್ ಉಳಿದಿಲ್ಲ ಅನ್ನೋದು ಆತಿಶ್ ಸ್ನೇಹಿತರ ನೋವು. ಹೀಗಾಗಿ ಜಿಡ್ಡು ಕಟ್ಟಿದ ಆಡಳಿತದ ವಿರುದ್ಧ ಯುವ ಜನತೆ ಧ್ವನಿ ಎತ್ತಲು ಮುಂದಾಗಿರುವುದು ಕರಾವಳಿಯ ಸೋಮಾರಿ ಜನಪ್ರತಿನಿಧಿಗಳ ನಿದ್ದೆಗೆಡಿಸಿದ್ರೆ ಅಚ್ಚರಿಯಿಲ್ಲ.

    ವರದಿ: ಇರ್ಷಾದ್ ಕಿನ್ನಿಗೋಳಿ
    Published by:guruganesh bhat
    First published: