Dakshina Kannada Rain: ಮಳೆಯಿಂದ ಸಮಸ್ಯೆಯಾದರೆ ಈ ಸಹಾಯವಾಣಿ ಸಂಪರ್ಕಿಸಿ; ದಕ್ಷಿಣ ಕನ್ನಡ ಜನರಿಗೆ ಸೂಚನೆ
Dakshina Kannada Rains: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತವು ಸರ್ವ ಸನ್ನದ್ಧವಾಗಿದೆ. ಯಾವುದೇ ಸಂದರ್ಭದಲ್ಲಿ ಸಹಾಯವಾಣಿ ಸಂಪರ್ಕಿಸುವ ಮೂಲಕ ಜನರು ಜಿಲ್ಲಾಡಳಿತದ ನೆರವನ್ನು ಪಡೆಯಬಹುದಾಗಿದೆ.
ಮಂಗಳೂರು: ಕರಾವಳಿಯಾದ್ಯಂತ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ತಗ್ಗು ಪ್ರದೇಶಗಳು ಮುಳುಗಡೆಯಾಗಿದೆ. ಮಂಗಳೂರು ನಗರದಲ್ಲೂ (Mangaluru News) ನೆರೆ ಭೀತಿ ಉಂಟಾಗಿದೆ. ಜನ ಜೀವನ, ರಸ್ತೆ ಸಂಚಾರ ದುಸ್ತರವಾಗಿದೆ. ಜಿಲ್ಲೆಯಾದ್ಯಂತ ‘ಆರೆಂಜ್ ಅಲರ್ಟ್‘ (Orange Alert) ಘೋಷಿಸಲಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ (Dakshina Kannada Rain Updates) ಹಲವು ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಕಡಬ, ಮುಲ್ಕಿ, ಮೂಡಬಿದ್ರಿ, ಪುತ್ತೂರು ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಮತ್ತೆ ನೆರೆ, ಪ್ರವಾಹ ಹಾಗೂ ಭೂಕುಸಿತದಂತಹ ಆತಂಕವೂ ಮನೆ ಮಾಡಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಚಾರ್ಮಾಡಿ ಭಾಗದಲ್ಲೂ ಧಾರಾಕಾರ ಮಳೆ ಮುಂದುವರೆದಿದೆ. ಈಗಾಗಲೇ ಹಲವು ಅಂಗಡಿ, ಮುಂಗಟ್ಟುಗಳು ಭಾರೀ ಮಳೆಯಿಂದಾಗಿ ಜಲಾವೃತವಾಗಿದೆ.
ಸಹಾಯವಾಣಿ ಸಂಖ್ಯೆ
ಯಾವುದೇ ಸಂದರ್ಭದಲ್ಲೂ ಜಿಲ್ಲೆಯ ಜನರು ನೆರೆ ಭೀತಿ, ಅಪಾಯದ ಸ್ಥಿತಿಯಲ್ಲಿ ಸಿಲುಕಿಕೊಳ್ಳುವ ಆತಂಕ ಎದುರಾದಲ್ಲಿ ಈ ಕೆಳಗಿನ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ತುರ್ತು ಸಹಾಯವಾಣಿ ಸಂಖ್ಯೆ - 1077 ಮೆಸ್ಕಾಂ – 1912 (ವಿದ್ಯುತ್ ಸಂಬಂಧಿತ ದೂರು) ಪೊಲೀಸ್ – 100 ಜಿಲ್ಲಾಡಳಿತ ಸಹಾಯವಾಣಿ ಸಂಖ್ಯೆ: 0824-2442590, 2220319, 9483908000
ಎಡೆಬಿಡದೇ ಸುರಿಯುತ್ತಿದೆ ಮಳೆ
ಬುಧವಾರ ತಡರಾತ್ರಿಯಿಂದ ಆರಂಭವಾಗಿರುವ ಮಳೆ ಇದುವರೆಗೂ ಎಡೆಬಿಡದೇ ಸುರಿಯುತ್ತಿದೆ. ಮಂಗಳೂರು ನಗರದ ಕೊಟ್ಟಾರ ಚೌಕಿ, ಪಡೀಲ್ ಅಂಡರ್ ಪಾಸ್, ಜ್ಯೋತಿ, ಪಂಪ್ ವೆಲ್ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ನಗರದ ಹೊರವಲಯದ ಹಲವು ಪ್ರದೇಶಗಳು ನೆರೆ ಭೀತಿ ಎದುರಿಸುತ್ತಿದೆ.
ಆರೆಂಜ್ ಅಲರ್ಟ್ ಘೋಷಣೆ
ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಜೂನ್ 30 ಹಾಗೂ ಜುಲೈ 1 ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಪಿಯು, ಡಿಗ್ರಿಗಳಿಗೆ ರಜೆ
ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಶಾಲೆಗೆ ತಲುಪಲು ಸಾಧ್ಯವಾಗದಿರುವ ಮಕ್ಕಳಿಗೆ ರಜೆ ಪಡೆಯುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಸೂಚಿಸಿದ್ದಾರೆ. ಅಲ್ಲದೇ, ಪಿಯುಸಿ ಹಾಗೂ ಪದವಿ ತರಗತಿಗಳಿಗೆ ರಜೆ ಘೋಷಿಸಿದ್ದಾರೆ. ಶಾಲೆಗೆ ಹಾಜರಾಗಿರುವ ಮಕ್ಕಳ ಬಗ್ಗೆ ಜಾಗರೂಕತೆ ವಹಿಸುವಂತೆ ಶಿಕ್ಷಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಅಲ್ಲದೇ, ಆಯಾಯ ತಾಲೂಕುಗಳ ಮಳೆ ಪರಿಸ್ಥಿತಿಯನ್ನು ಅವಲೋಕಿಸಿ ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನು ಬಿಇಓ ಗಳಿಗೆ ನೀಡಲಾಗಿದೆ.
ನದಿ ತಟದಲ್ಲಿ ಮುಳುಗಡೆ ಭೀತಿ
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜೀವನದಿಗಳಾದ ಫಲ್ಗುಣಿ, ಶಾಂಭವಿ, ಕುಮಾರಧಾರ ಹಾಗೂ ನೇತ್ರಾವತಿ ನದಿಗಳು ತುಂಬಿ ಹರಿಯುತ್ತಿದೆ. ನದಿ ತಟದಲ್ಲಿರುವ ಪ್ರದೇಶಗಳಲ್ಲಿ ನೆರೆ ಭೀತಿ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ನದಿ ಪ್ರದೇಶಗಳಿಗೆ ತೆರಳದಂತೆ ಈಗಾಗಲೇ ಜಿಲ್ಲಾಡಳಿತವು ಆದೇಶಿಸಿದೆ.
ಜಿಲ್ಲಾಡಳಿತ ಸನ್ನದ್ಧ
ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತವು ಸನ್ನದ್ಧವಾಗಿದೆ. ಈಗಾಗಲೇ ಜಿಲ್ಲೆಗೆ 20 ಮಂದಿ ಸದಸ್ಯರು ಇರುವ NDRF, 36 ಸದಸ್ಯರ SDRF ತಂಡಗಳು ಆಗಮಿಸಿವೆ. ಜೊತೆಗೆ ಜಿಲ್ಲೆಯ ಗೃಹ ರಕ್ಷಕ ಹಾಗೂ ಅಗ್ನಿಶಾಮಕದಳವೂ ಸನ್ನದ್ಧವಾಗಿವೆ. 23 ಬೋಟ್ ಗಳು, 72 ಲೈಫ್ ಬೋಟ್, 341 ಲೈಫ್ ಜಾಕೆಟ್, 89 ಸರ್ಚ್ ಲೈಟ್, 27 ಅಸ್ಕಾ ಲೈಟ್, 14 ಪೋರ್ಟೆಬಲ್ ಜನರೇಟರ್, 29 ಪೋರ್ಟೆಬಲ್ ಪಂಪ್, 3 ಸ್ಕೂಬಾ ಡೈವಿಂಗ್ ಸೆಟ್ ಸೇರಿದಂತೆ ನೆರೆ, ಭೂಕುಸಿತ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತವು ಸಜ್ಜಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತವು ಸರ್ವ ಸನ್ನದ್ಧವಾಗಿದೆ. ಯಾವುದೇ ಸಂದರ್ಭದಲ್ಲಿ ಸಹಾಯವಾಣಿ ಸಂಪರ್ಕಿಸುವ ಮೂಲಕ ಜನರು ಜಿಲ್ಲಾಡಳಿತದ ನೆರವನ್ನು ಪಡೆಯಬಹುದಾಗಿದೆ.