ದಕ್ಷಿಣ ಕನ್ನಡ: ಎಬಾ! ಎಂತ ಭಯಂಕರ ಮಾರ್ರೆ ಈ ಹುಡುಗ. ಅದೆಂತಹದ್ದೋ ಕುಸಾಲ್ ಮಾಡ್ಲಿಕ್ಕೆ ಹೋಗಿ ಈ ಜನ ಬಾವಿನೇ ತೋಡಿಬಿಟ್ಟ ನೋಡ್ರಿ. ನಿಜಾರೀ. ಇಲ್ಲಿ ಕಾಣ್ತಿರೋ ಈ ನೀರಿರೋ ಬಾವಿಯನ್ನ (Well) ತೋಡಿದ್ದೇ ಈ ಹುಡುಗ. ಅದಕ್ಕೆ ನೋಡಿ ಇವನನ್ನ ಈಗ ಕಂಡವರೆಲ್ಲ, “ನೀನು ಆಗ್ಬಹುದು ಮಾರ್ರೆ ದೊಡ್ಡ ಬಾವಿಯೇ ತೋಡಿದ್ದಿ”ಅಂತಾ ಬೆನ್ನು (Mangaluru Viral News) ತಟ್ಟುತ್ತಿದ್ದಾರೆ.
ಬಾವಿ ಕನಸು ನನಸು!
ಹೌದು, ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ನಾಯಿಲದ ಪ್ರಥಮ ಪಿಯುಸಿ ವಿದ್ಯಾರ್ಥಿ. ಅದಾಗ್ಲೇ ಪಿಯುಸಿ ಪರೀಕ್ಷೆ ಮುಗಿದು ರಜೆ ಸಿಕ್ಕಿದೆ. ಹೀಗೆ ರಜೆ ಸಿಕ್ಕ ನಂತರ ಈ ಹಿಂದೆ ಅರ್ಧ ಕೊರೆದಿದ್ದ ಬಾವಿಯ ಕನಸು ನನಸು ಮಾಡಲು ನಾಯಿಲ ನಿವಾಸಿ ಲೋಕನಾಥ್ ಅವರ ಪುತ್ರ ಸೃಜನ್ ಮುಂದಾಗಿದ್ದಾರೆ.
ಹೀಗೆ ಬಿಡದ ಛಲ, ಭಗೀರಥ ಪ್ರಯತ್ನದಿಂದ ಕೊನೆಗೂ 24 ಅಡಿಯ ಬಾವಿ ನಿರ್ಮಾಣ ಆಗುತ್ತಲೇ ನೀರು ಚಿಮ್ಮಿದೆ. ಈ ಬಿರು ಬೇಸಿಗೆಯಲ್ಲೂ 3 ಅಡಿಯಷ್ಟು ನೀರಿದ್ದು, 30 ಅಡಿಯಷ್ಟು ಬಾವಿ ಕೊರೆದು ತಮ್ಮ ಮನೆ ಮಂದಿ ಅನುಭವಿಸುತ್ತಿದ್ದ ನೀರಿನ ತತ್ವಾರಕ್ಕೆ ಈ ಸೃಜನ್ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಎನ್‌ಎಸ್‌ಎಸ್ ಸ್ಪೂರ್ತಿ
ಬಿ. ಮೂಡ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿರುವ ಸೃಜನ್ ರಾಷ್ಟ್ರೀಯ ಸೇವಾ ಯೋಜನೆಯ ಕ್ರಿಯಾಶೀಲ ಸದಸ್ಯನೂ ಆಗಿದ್ದಾರೆ. ಇದೇ ಧೈರ್ಯದಿಂದಲೇ ಸೃಜನ್ ತಾನೋರ್ವನೇ ಏಕಾಂಗಿಯಾಗಿ ಹಾರೆ ಹಾಗೂ ಇನ್ನಿತರ ಪರಿಕರಗಳನ್ನು ಹಿಡಿದು ನೆಲ ಅಗೆಯಲು ಆರಂಭಿಸಿದ್ದಾರೆ.
ಸೃಜನ್ ಹೀಗೆ ಭೂಮಿ ಅಗೆದು ಬಾವಿ ನಿರ್ಮಾಣ ಮಾಡೋದಕ್ಕೂ ಕಾರಣವಿತ್ತು. ಇದ್ಯಾವುದೂ ಮೋಜು ಮಸ್ತಿಗಾಗಿಯೋ, ಅದ್ಯಾವುದೋ ಚಾಲೆಂಜ್ ಗಾಗಿಯೋ ಮಾಡದೇ ತಮ್ಮ ಮನೆಗೆ ಎದುರಾಗಿದ್ದ ನೀರಿನ ಸಮಸ್ಯೆಗೆ ಮುಕ್ತಿ ಹಾಡಬೇಕೆನ್ನುವುದೇ ಸೃಜನ್ ಉದ್ದೇಶವಿತ್ತು.
ಇದನ್ನೂ ಓದಿ: Dakshina Kannada: ಪೊಳಲಿ ಜಾತ್ರೆಯಲ್ಲಿ ಫುಟ್ಬಾಲ್ ಆಟ, ಎರಡು ಗ್ರಾಮಗಳ ಜಿದ್ದಾಜಿದ್ದು!
ಹೇಗಿತ್ತು ಗೊತ್ತಾ ಕಾರ್ಯಾಚರಣೆ!?
ಆರಂಭದಲ್ಲಿ ಸೃಜನ್ ಬಾವಿ ತೋಡುವುದನ್ನು ಕಂಡು ಸ್ವತಃ ತಂದೆ ಲೋಕನಾಥ್ ಹಾಗೂ ತಾಯಿ ಮೋಹಿನಿ ಅಷ್ಟಾಗಿ ಗಮನ ನೀಡಿರಲಿಲ್ಲ. ಆದ್ರೆ ಸೃಜನ್ ತನ್ನ ಹಠ ಬಿಡಲಿಲ್ಲ. ತಾನೊಬ್ಬನೇ ಆಳವಾದ ಬಾವಿ ಕೊರೆಯುತ್ತಾ, ಅಗೆದ ಮಣ್ಣನ್ನು ಮತ್ತೆ ಮೇಲೇರಿ ಬಂದು ಖಾಲಿ ಮಾಡುತ್ತಿದ್ದನು. ಇಷ್ಟೆಲ್ಲ ಆಗುತ್ತಲೂ ನೀರು ಸಿಗುತ್ತೆ ಅನ್ನೋ ಭರವಸೆ ಇರಲಿಲ್ಲ. ಆದ್ರೆ ಕೊನೆಗೂ ನೀರು ಉಕ್ಕಿದ್ದು ಮನೆ ಮಂದಿ ಸಂತಸಗೊಂಡಿದ್ದಾರೆ.
ಇದನ್ನೂ ಓದಿ: Dakshina Kannada: ಗೋಡೆ ತುಂಬಾ ಗಡಿಯಾರಗಳ ಗತ್ತು, ಇವ್ರ ಮನೆಯೇ ಮ್ಯೂಸಿಯಂ!
ನೀರಿನ ಸಮಸ್ಯೆ ಗುಡ್ ಬೈ!
ಗ್ರಾಮ ಪಂಚಾಯತ್ ನಿಂದ ನಳ್ಳಿ ನೀರಿನ ಸಂಪರ್ಕವಿದ್ದರೂ ನೀರಿನ ಸಮರ್ಪಕ ಪೂರೈಕೆ ಇರಲಿಲ್ಲ. ಹೀಗಾಗಿ ತಾನೇ ಮನೆ ಹಿಂಬದಿಯಲ್ಲಿ ಏಕಾಂಗಿಯಾಗಿ ಬಾವಿ ತೋಡಿ ಸೃಜನ್ ತಮ್ಮ ಜಮೀನಿನಲ್ಲೇ ನೀರಿನ ಸೆಳೆ ಇರುವುದನ್ನು ತೋರಿಸಿಕೊಟ್ಟಿದ್ದಾರೆ. ಸೃಜನ್ ಸಾಧನೆಯಿಂದ ಮನೆ ಮಂದಿ ಅಷ್ಟೆ ಅಲ್ದೇ, ಈಗ ಇಡೀ ಗ್ರಾಮವೇ “ಭಲೇ ಭೇಷ್ ಮಾರ್ರೆ ನೀನು..” ಅಂತಾ ಅಭಿನಂದಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ