ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ವಿಶೇಷ ಚೇತನ ಬಾಲಕಿಯೋರ್ವಳು ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLC Success Story) ಅತ್ಯುತ್ತಮ ಸಾಧನೆ ಮಾಡಿದ್ದಾರೆ. ತನ್ನ ಸ್ವಂತ ಕಾಲುಗಳ ಸಹಾಯದಿಂದ ಎದ್ದು ನಡೆಯಲಾಗದ ಈಕೆಯು ಶೇಕಡಾ 91ರಷ್ಟು ಅಂಕ ಪಡೆದು ಟಾಪರ್ ಆಗಿದ್ದಾಳೆ. ವಿಶೇಷ ಅಂದ್ರೆ ಈಕೆಯ ಈ ಸಾಧನೆಯ ಹಿಂದೆ ಸದಾ ಈಕೆಯ ಜೊತೆಗಿರುವ ಈಕೆಯ ಸಹಪಾಠಿಗಳನ್ನು ಮರೆಯುವಂತಿಲ್ಲ.
ಅದ್ಭುತ ಸಾಧನೆ!
ಹೌದು, ಈಕೆಯ ಹೆಸರು ಫಾತಿಮತ್ ನಿಶಾ. ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆ ಪದವು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ. ಹುಟ್ಟು ಅಂಗವೈಕಲ್ಯತೆ ಹೊಂದಿರುವ ಈಕೆ ತರಗತಿಗೆ ಟಾಪರ್ ಆಗುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ಇಂದಿಗೂ ಬಡತನದ ಬೇಗೆಯಲ್ಲಿರುವ ಫಾತಿಮತ್ ನಿಶಾ ಯಾವುದೇ ಹೆಚ್ಚುವರಿ ಟ್ಯೂಶನ್ ಪಡೆಯದೇ ಈ ಸಾಧನೆ ಮಾಡಿ ತೋರಿಸಿದ್ದಾರೆ. 625 ರಲ್ಲಿ 569 ಅಂಕ ಪಡೆದು ತನ್ನ ಅಂಗವೈಕಲ್ಯತೆಗೆ ಚಾಲೆಂಜ್ ಮಾಡಿದ್ದಾಳೆ.
ಇವರ ಸಕ್ಸಸ್ ಹಿಂದಿನ ಗುಟ್ಟು ಇವ್ರು!
ಫಾತಿಮತ್ ನಿಶಾ ತನ್ನ ಅಂಗವೈಕ್ಯಲ್ಯತೆಗಾಗಿ ಅದ್ಯಾವತ್ತೋ ಶಾಲೆ ಬಿಡಬೇಕಿತ್ತು. ಆದ್ರೆ ಈಕೆಯ ಜೊತೆ ಸದಾವಿದ್ದು ಆಕೆಯ ಎಲ್ಲ ಚಟುವಟಿಕೆಗೆ, ಆಕೆಯನ್ನು ಗಾಲಿಕುರ್ಚಿಯಲ್ಲಿ ಕೂರಿಸಿ ಊಟ, ವಾಶ್ ರೂಂ ಗಳಿಗೆ ಕರೆದೊಯ್ಯುತ್ತಿದ್ದ ಆಕೆಯ ಸಹಪಾಠಿಗಳಾದ ಸಬ್ರಿಯಾ, ಸೌಜನ್ಯ ಮತ್ತು ಸಫಿಯಾ ಇವ್ರೇ ನಿಶಾ ಸಕ್ಸಸ್ ಹಿಂದಿನ ಸೀಕ್ರೆಟ್ ಎನ್ನಬಹುದು. ಕಾರಣ, ಈ ಮೂವರಿಲ್ಲದಿದ್ದರೆ ನಿಶಾಗೆ ಎಸ್‌ಎಸ್‌ಎಲ್‌ಸಿ ಪೂರೈಸಲು ಸಾಧ್ಯವಾಗುತ್ತಿರಲಿಲ್ಲವೋ ಏನೋ!
ಹಿಂದೆಯೇ ಶಾಲೆ ತೊರೆಯಬೇಕಿತ್ತು!
ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡಿರುವ ಫಾತಿಮತ್ ನಿಶಾ, ತಾಯಿ ಮತ್ತು ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದಾರೆ. ಹಿಂದೊಮ್ಮೆ ನಾಲ್ಕನೇ ಕ್ಲಾಸ್ ತನಕ ಓದಿಸಿದ್ದ ತಾಯಿ ಮತ್ತೆ ಮಗುವನ್ನು ಪ್ರತಿದಿನ ಶಾಲೆಗೆ ಎತ್ತಿಕೊಂಡು ಬರಲಾಗದೇ ಶಾಲೆ ಬಿಡಿಸುವುದಾಗಿ ಹೇಳಿದ್ದರು. ಆದ್ರೆ ಕಲಿಕೆಯಲ್ಲಿ ಮುಂದಿದ್ದ ಈಕೆಯನ್ನು ಬಿಟ್ಟುಕೊಡಲು ಶಿಕ್ಷಕರು ಒಪ್ಪಲಿಲ್ಲ.
ಇದನ್ನೂ ಓದಿ: Karnataka SSLC Results 2023: ಬುದ್ಧಿವಂತ ಜಿಲ್ಲೆಗಳು ಟಾಪರ್ ಆಗಿಲ್ಲವೇಕೆ? ಇಲ್ಲಿದೆ ಕಾರಣ!
ಪ್ರಾಥಮಿಕ ಶಿಕ್ಷಣ ಪೂರೈಸಿದ್ದ ಫಾತಿಮತ್ ನಿಶಾಗೆ ಹೈಸ್ಕೂಲ್ ಮೆಟ್ಟಿಲು ಹತ್ತಬೇಕಾದ್ರೆ ಮತ್ತದೇ ಸಮಸ್ಯೆ ಎದುರಾಯಿತು. ಅಂತೂ ಇಂತು ಎಸ್‌ಎಸ್‌ಎಲ್‌ಸಿಗೆ ನಿಶಾಗೆ ಆಕೆಯ ಮೂವರು ಸಹಪಾಠಿಗಳು ನೆರವಾದರು.
ಯಾವುದರಲ್ಲಿ ಎಷ್ಟು ಮಾರ್ಕ್ಸು?
ಸರಕಾರಿ ಶಾಲೆಯಲ್ಲಿ ಕಲಿತು, ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಫಾತಿಮತ್ ನಿಶಾ ಅತ್ಯುತ್ತಮ ಸಾಧನೆ ತೋರಿದ್ದಾರೆ. ಕನ್ನಡ – 121, ಇಂಗ್ಲೀಷ್ – 99, ಹಿಂದಿ – 95, ಗಣಿತ – 78, ವಿಜ್ಞಾನ – 84 ಹಾಗೂ ಸಮಾಜ ವಿಜ್ಞಾನ – 92 ಅಂಕಗಳನ್ನು ಗಳಿಸಿದ್ದಾಳೆ.
ಇದನ್ನೂ ಓದಿ: Mangaluru News: ಮಂಗಳೂರಿನಲ್ಲಿ ರಕ್ತದ ಅಭಾವ, ದಾನಿಗಳೇ ಮುಂದೆ ಬನ್ನಿ!
ವೈದ್ಯೆ ಆಗುವ ಕನಸು
ಇಂದಿಗೂ ಬಾಡಿಗೆ ನಿವಾಸದಲ್ಲಿ ವಾಸಿಸುತ್ತಿರುವ ಫಾತಿಮತ್ ನಿಶಾ ಕುಟುಂಬವು ಮನೆ ಮಗಳ ಸಾಧನೆಯಿಂದ ಸಂತಸಗೊಂಡಿದೆ. ಫಾತಿಮತ್ ನಿಶಾಗೂ ಅಷ್ಟೇ ಮುಂದೆ ಯಾರಾದ್ರೂ ಉನ್ನತ ಶಿಕ್ಷಣಕ್ಕೆ ಸಹಕಾರ ನೀಡಿದರೆ ವೈದ್ಯೆಯಾಗಬೇಕೆನ್ನುವ ಗುರಿ ಹೊಂದಿದ್ದಾರೆ. ಈ ಸಾಧಕಿಗೆ ನೀವು ಆಲ್ ದಿ ಬೆಸ್ಟ್ ಹೇಳ್ಬೇಕಂದ್ರೆ ಈ ಸಂಖ್ಯೆಯನ್ನು ಸಂಪರ್ಕಿಸಬಹುದು: 9480420122
ವರದಿ: ಇರ್ಷಾದ್ ಕಿನ್ನಿಗೋಳಿ, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ